ಸರ್ವಾಧಿಕಾರಿ ಟ್ರಂಪ್ ನ 15,000 ತಪ್ಪು-ಸುಳ್ಳು ಪಟ್ಟಿ ಮಾಡಿದ್ದವಂತೆ ಅಮೆರಿಕಾದ ಮಾದ್ಯಮಗಳು- ಆದ್ರೆ ಭಾರತದ ಮಾದ್ಯಮಗಳು ಏನಾಗಿವೆ…ಎತ್ತ ತೆವಳುತ್ತಿವೆ…ಭಾರತಕ್ಕೆ ಪಾಠವಾಗ್ಬೇಕಾ ಅಮೆರಿಕಾ ಮಾದ್ಯಮಗಳ ಬದ್ಧತೆ…  

0

ಚುನಾವಣೆ ಸಂದರ್ಭದಲ್ಲಿ ಜನಾಭಿಪ್ರಾಯ ಮೂಡಿಸುವಂಥ ಮಾದ್ಯಮಗಳ ಪಾತ್ರ ಮತದಾರನ ಮತ ಚಲಾವಣೆಯ ಮೂಡ್ ನ್ನು ನಿರ್ಧರಿಸುತ್ತೆ..ಅಷ್ಟು ತೀಕ್ಷ್ಣ ಹಾಗೂ ನಿರ್ಣಾಯಕವಾಗಿದೆ ಮಾದ್ಯಮಗಳ ಹೊಣೆಗಾರಿಕೆ.ಆದ್ರೆ ಭಾರತೀಯ ಮಾದ್ಯಮಗಳು  ಕಳೆದ ಬಾರಿಯ ಚುನಾವಣೆಗಳಲ್ಲಿ ನಡೆದುಕೊಂಡ ರೀತಿಯ ಬಗ್ಗೆ ಸಾಕಷ್ಟು ಶಂಕೆ-ಅನುಮಾನಗಳಿವೆ.ಮಾದ್ಯಮಗಳ ವೃತ್ತಿ ಧರ್ಮ ಹಾಗೂ ನೈತಿಕತೆಯೇ ಸಾರ್ವಜನಿಕವಾಗಿ ಪ್ರಶ್ನಿಸಲ್ಪಟ್ಟಿದ್ದಿದೆ.ಇದೇ ಸನ್ನಿವೇಶದಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಮುಗಿದಿದೆ.ಮಾದ್ಯಮಗಳು ಅಲ್ಲಿ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಈ ಎರಡು ಸನ್ನಿವೇಶಗಳನ್ನು ಕರ್ನಾಟಕ ಸೋಶಿಯಲಿಸ್ಟ್ ಫೋರಂನ ವೀರೇಂದ್ರ ಕುಮಾರ್ ತಮ್ಮ ಲೇಖನದಲ್ಲಿ ತುಲನಾತ್ಮಕವಾಗಿ ವಿಶ್ಲೇಷಿಸುವ ಕೆಲಸ ಮಾಡಿದ್ದಾರೆ..

ಭಾರತದಲ್ಲಿ ಮಾದ್ಯಮಗಳು ಆಳುವ ಪಕ್ಷಗಳ ಅಡಿಯಾಳಂತೆ ಕೆಲಸ ಮಾಡುತ್ತಿರುವಂತೆ ಭಾಸವಾಗುತ್ತಿದೆ.ಅವುಗಳ  ಕಾರ್ಯವೈಖರಿ ಹಾಗೂ ಹೊಗಳುಭಟ್ಟ ..ಬಹುಪರಾಖ್ ಧೋರಣೆ ಇದನ್ನು ಪದೇ ಪದೇ ಸಾಬೀತುಪಡಿಸುತ್ತಲೇ ಇದೆ.ಕಾವಲುನಾಯಿಗಳಂತೆ ಕೆಲಸ ಮಾಡಬೇಕಿದ್ದ ಮಾದ್ಯಮಗಳು ಅಸ್ಥಿತ್ವಕ್ಕಾಗಿಯೋ..ಸ್ವಹಿತಾಸಕ್ತಿಗಾಗೋ..ಇತರೆ ಲಾಭಕ್ಕಾಗೋ ಸ್ವಂತಿಕೆಯನ್ನೇ ಮಾರಿಕೊಂಡು ಬದುಕುತ್ತಿವೆ ಎನಿಸುತ್ತಿದೆ.ಇದು ಮೋದಿ ಈ ದೇಶದ ಪ್ರಧಾನಿಯಾಗಿ ಎರಡನೇ ಬಾರಿ ಆಯ್ಕೆಯಾಗುವ ಸನ್ನಿವೇಶದಲ್ಲಿಯೂ ಪ್ರೂವ್ ಆಗಿತ್ತೆನ್ನುವುದು ಜನಸಾಮಾನ್ಯ ಮಾಡುತ್ತಿರುವ ಆರೋಪ..

 ಅಂದ್ಹಾಗೆ ಇದೆಲ್ಲಾ ನೆನಪಾಗ್ತಿರೋದು ಏಕೆ ಗೊತ್ತಾ..ಅದಕ್ಕೆ ಕಾರಣವೂ ಇದೆ..ಆ ಕಾರಣವೇ ಅಮೆರಿಕಾದ ಮಾದ್ಯಮಗಳು ಹಾಗೂ ಅವು  ಅಧ್ಯಕ್ಷೀಯ ಚುನಾವಣೆಯಲ್ಲಿ ಮೆರೆದ ಹೊಣೆಗಾರಿಕೆ ಹಾಗೂ ಸಾಮಾಜಿಕ ಬದ್ಧತೆ.ಈ ಬಾರಿಯ ಚುನಾವಣೆಯಲ್ಲಿ ಮಾದ್ಯಮಗಳು ಮೆರೆದಷ್ಟು ಪ್ರಜ್ಞಾವಂತಿಕೆಯನ್ನು ಹಿಂದೆಂದೂ ಮಾದ್ಯಮಗಳು ಪ್ರದರ್ಶಿಸಿರಲಿಲ್ಲ ಎಂದು ಅಮೆರಿಕಾದ ನಾಗರಿಕರೇ ಅಭಿಪ್ರಾಯಿಸಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅಮೆರಿಕಾದ 46ನೇ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾಗಿದೆ.  ಡೊನಾಲ್ಡ್ ಟ್ರಂಪ್‌ರೊಂದಿಗೆ ತುರುಸಿನ ಸ್ಪರ್ಧೆ ನಡೆಸಬೇಕಾಯಿತಾದರೂ, ಚಲಾವಣೆಯಾದ ಮತಗಳ ಪೈಕಿ ಶೇ. 50.6ರಷ್ಟು ಮತಗಳನ್ನು (7,50,33,193) ಪಡೆದು ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಅತಿ ಹೆಚ್ಚು ಮತ ಪಡೆದು ಅಧ್ಯಕ್ಷರಾದ ದಾಖಲೆ ಬರೆದಿದ್ದಾರೆ ಬೈಡನ್.

ಅಂದ್ಹಾಗೆ ಹೆಚ್ಚು ಮತ ಪಡೆದು ಆಯ್ಕೆಯಾದ ಈ ದಾಖಲೆ ಇದುವರೆಗೂ 2008ರಲ್ಲಿ 6,94,98,516 ಮತಗಳನ್ನು ಪಡೆದು ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಹೆಸರಿನಲ್ಲಿತ್ತು. ಈ ಬಾರಿಯ ಚುನಾವಣಾ ವೈಶಿಷ್ಟ್ಯವೆಂದರೆ, ಬರಾಕ್ ಒಬಾಮಾರ ದಾಖಲೆಯನ್ನು ಪರಾಜಿತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಕೂಡ ಅಳಿಸಿ ಹಾಕಿರುವುದು!! ಶೇ. 47.7ರಷ್ಟು ಮತ ಪಡೆದಿರುವ ಡೊನಾಲ್ಡ್ ಟ್ರಂಪ್ ಒಟ್ಟು 7,07,08,633 ಮತ ಗಳಿಸಿದ್ದಾರೆ. ಆ ಮೂಲಕ ಪರಾಜಿತ ಅಭ್ಯರ್ಥಿಯೊಬ್ಬ ಪಡೆದ ಅತಿ ಹೆಚ್ಚು ಮತ ಎಂಬ ದಾಖಲೆಗೂ ಟ್ರಂಪ್ ಭಾಜನರಾಗಿದ್ದಾರೆ!!!

ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವುದು ಡೆಮಾಕ್ರಟಿಕ್ ಪಕ್ಷಕ್ಕೆ ಅಸಾಧ್ಯವೇ ಆಗಿತ್ತು. ಅದಕ್ಕೆ ಕಾರಣ ಡೊನಾಲ್ಡ್ ಟ್ರಂಪ್ ಅಮೆರಿಕಾದಲ್ಲಿ ಉಂಟು ಮಾಡಿರುವ ವರ್ಣೀಯ, ಕೋಮು ಧ್ರುವೀಕರಣ.ಮಾದ್ಯಮಗಳು ಈ ವಾಸ್ತವ ಅರಿತು ಕೆಲಸ ಮಾಡಿದ ರೀತಿಯೇ ಬೈಡನ್ ಅಧ್ಯಕ್ಷರಾಗೊಕ್ಕೆ ಸಹಕಾರಿಯಾಯ್ತು.

ಭಾರತದ ಮಾದ್ಯಮಗಳಂತೆ  ಅಮೆರಿಕಾದ ಮಾದ್ಯಮಗಳು ಬಾಲಬಡುಕವಾಗಿದಿದ್ದರೆ ರಾಗಿವೆ  ನಿಶ್ಚಿತವಾಗಿಯೂ ಡೊನಾಲ್ಡ್ ಟ್ರಂಪ್ ಎರಡನೆಯ ಅವಧಿಗೂ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದರು ಮಾತ್ರವಲ್ಲ, ಅತ್ಯಂತ ಜನಪ್ರಿಯ ಅಧ್ಯಕ್ಷ ಎಂಬ ಹಿರಿಮೆಯೊಂದಿಗೇ ಮೆರೆಯುತ್ತಿದ್ದರು. ಆದರೆ, ಅಮೆರಿಕಾ ಮಾಧ್ಯಮಗಳು ಮಾತ್ರ ಅಪ್ಪಟ  ವಿರೋಧ ಪಕ್ಷವಾಗಿಯೇ ಕಾರ್ಯನಿರ್ವಹಿಸಿದವು.ಭಾರತದ ಮಾದ್ಯಮಗಳು ಚುನಾವಣೆ ವೇಳೆ ನಡೆದುಕೊಳ್ಳುವ ರೀತಿಯಲ್ಲೇ ಅವುಗಳ ಹಿತಾಸಕ್ತಿ ಎದ್ದುಕಾಣುತ್ತದೆ.

ನಿಮಗೆ ನೆನಪಿರಲಿ,ಅಮೆರಿಕಾದ ಮಾದ್ಯಮಗಳು ಡೊನಾಲ್ಡ್ ಟ್ರಂಪ್ ತಪ್ಪು-ಸುಳ್ಳುಗಳನ್ನು ಪಟ್ಟಿ ಮಾಡಿ ಸುದ್ದಿ ಮಾಡಿದ್ದವು.  ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಸುಮಾರು 15,000 ಸುಳ್ಳುಗಳನ್ನು ಹೇಳಿದ್ದಾರೆ. ಮಾತ್ರವಲ್ಲ; ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಡೊನಾಲ್ಡ್ ಟ್ರಂಪ್ ಅವರ ಆರೋಪದಲ್ಲಿ ಹಸಿ ಸುಳ್ಳಿದೆ ಎಂಬ ಕಾರಣ ನೀಡಿ ಅವರ ಶ್ವೇತ ಭವನ ಭಾಷಣದ ನೇರ ಪ್ರಸಾರವನ್ನೇ ಸ್ಥಗಿತಗೊಳಿಸುವ ಗೈರತ್ತು ಪ್ರದರ್ಶಿಸಿದವು ಅಮೆರಿಕಾ ಮಾಧ್ಯಮಗಳು.ಭಾರತದ ಮಾದ್ಗಮಗಳಾಗಿದಿದ್ದರೆ ಹಾಗೆ ಮಾಡುತ್ತಿದ್ದವೇ..?

2016ರಲ್ಲಿ ಅಧ್ಯಕ್ಷರಾಗಿ ಚುನಾಯಿತರಾದ ನಂತರ ತಮ್ಮ ವಿರುದ್ಧವಿದ್ದ ಮಾಧ್ಯಮಗಳನ್ನು ಬಗ್ಗುಬಡಿಯಲು ಡೊನಾಲ್ಡ್ ಟ್ರಂಪ್ ಅವರು ನಾನಾ ವಾಮಮಾರ್ಗ ಅನುಸರಿಸಿದ್ದರು. ಆದರೆ, ಅಮೆರಿಕಾ ಮಾಧ್ಯಮಗಳು ಮಾತ್ರ ಅದಕ್ಕೆ ಜಗ್ಗಲಿಲ್ಲ; ಬದಲಿಗೆ ಅವರ ತಪ್ಪು ನಡೆಗಳಿಗೆ ಬೂತಗನ್ನಡಿ ಹಿಡಿಯುವ ತಮ್ಮ ಮಾಧ್ಯಮ ಧರ್ಮವನ್ನು ಮತ್ತಷ್ಟು ತೀಕ್ಷ್ಣಗೊಳಿಸಿದವು.

 ಈ ಪ್ರವೃತ್ತಿ ಸಾಮಾಜಿಕ ಜಾಲತಾಣಗಳಿಗೂ ವಿಸ್ತರಿಸಿದಾಗ ಡೊನಾಲ್ಡ್ ಟ್ರಂಪ್ ಅಧೀರರಾದರು. ಅಮೆರಿಕಾದ ಪ್ರಭಾವಿ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’ಗೆ ಮೂಗುದಾರ ತೊಡಿಸಲು ಮುಂದಾದರು. ಇದರಿಂದ ಡೊನಾಲ್ಡ್ ಟ್ರಂಪ್ ವಿರುದ್ಧದ ಆಕ್ರೋಶ ಮತ್ತಷ್ಟು ಸಾರ್ವತ್ರಿಕವಾಯಿತು. ಡೊನಾಲ್ಡ್ ಟ್ರಂಪ್ ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಲು ಮುಂದಾಗಿರುವ ಸುಳಿವರಿತ ಅಲ್ಲಿನ ಬಲಪಂಥೀಯ ಮಾಧ್ಯಮಗಳೆಂದೇ ಗುರುತಿಸಿಕೊಂಡಿರುವ ಸಿಎನ್‌ಎನ್, ಸಿಎನ್‌ಬಿಸಿ, ಫಾಕ್ಸ್ ನ್ಯೂಸ್ ಕೂಡಾ ಅವರ ವಿರುದ್ಧ ದಾಳಿ ಮಾಡಲು ಶುರು ಮಾಡಿದವು. ಅದೆಲ್ಲದರ ಒಟ್ಟು ಫಲಿತಾಂಶವೇ ಜೋ ಬೈಡನ್ ಗೆಲುವು.

ಇತ್ತ ಭಾರತೀಯ ಮಾಧ್ಯಮಗಳತ್ತ ಒಮ್ಮೆ ನೋಡಿ. ಕಳೆದ ಆರೂವರೆ ವರ್ಷಗಳಿಂದ ವಿರೋಧ ಪಕ್ಷವಾಗುವುದನ್ನೇ ಮರೆತು ಆಡಳಿತಾರೂಢ ಪಕ್ಷವಾದ ಬಿಜೆಪಿಯ ಬಾಲಬಡುಕ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯನ್ನು ಇಂದ್ರ, ಚಂದ್ರ ಎಂದು ದಿನ ನಿತ್ಯ ಹಾಡಿ ಹೊಗಳುವುದರಲ್ಲೇ ಧನ್ಯವಾಗುತ್ತಿವೆ. ನರೇಂದ್ರ ಮೋದಿಯ ಸರ್ವಾಧಿಕಾರಿ ನಿರ್ಧಾರಗಳನ್ನು ‘ಮಾಸ್ಟರ್ ಸ್ಟ್ರೋಕ್’ಗೆ ಹೋಲಿಸಿ ಪಾವನವಾಗುತ್ತಿವೆ. ಅಂತಹ ಕೆಲವು ಮೋದಿ ‘ಮಾಸ್ಟರ್ ಸ್ಟ್ರೋಕ್’ಗಳ ಕೆಳಗಿನಂತಿವೆ:

  1. ನರೇಂದ್ರ ಮೋದಿ 2016ರ ನವೆಂಬರ್ 8ರಂದು ರಾತ್ರೋರಾತ್ರಿ ಪ್ರಕಟಿಸಿದ ನೋಟು ಅಮಾನ್ಯೀಕರಣ ನಿರ್ಧಾರ.
  2. ಜುಲೈ 1, 2017ರಂದು ಮಧ್ಯರಾತ್ರಿಯಲ್ಲಿ ಜಾರಿಗೆ ತಂದ ಅವೈಜ್ಞಾನಿಕ ಜಿಎಸ್‌ಟಿ ಪದ್ಧತಿ
  3. ಮಾರ್ಚ್ 22, 2020ರಂದು ಘೋಷಿಸಿದ ದಿಢೀರ್ ಲಾಕ್‌ಡೌನ್.

ಮೇಲಿನವುಗಳೊಂದಿಗೆ ಚರಂಡಿ ಅನಿಲ ಸಂಶೋಧನೆ, ರಾಡಾರ್ ತಂತ್ರಜ್ಞಾನ, ಗಾಳಿಯಂತ್ರದಿಂದ ಏಕಕಾಲಕ್ಕೆ ವಿದ್ಯುತ್, ನೀರು, ಆಮ್ಲಜನಕ ಉತ್ಪಾದಿಸುವ ಥಿಯರಿಯನ್ನೂ ಸೇರಿಸಿಕೊಳ್ಳಬಹುದು.

ಮೊದಲೇ ಹೇಳಿದಂತೆ ಅಮೆರಿಕಾ ಮಾಧ್ಯಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವ ಸುಮಾರು 15,000 ಸುಳ್ಳುಗಳನ್ನು ಬೆತ್ತಲು ಮಾಡಿವೆ. ಹಾಗೆಯೇ ಅಗಣಿತ ತಿಕ್ಕಲು ನಿರ್ಧಾರ, ಜನವಿರೋಧಿ ಕ್ರಮಗಳನ್ನು ಖಂಡಿಸಿವೆ. ಕನಿಷ್ಠ ಪಕ್ಷ ಭಾರತೀಯ ಮಾಧ್ಯಮಗಳು ನೋಟು ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್‌ಟಿ ಜಾರಿಯನ್ನು ಪ್ರಶ್ನಿಸಿದ್ದರೂ ಸಾಕಿತ್ತು; ನರೇಂದ್ರ ಮೋದಿ ಖಂಡಿತ ಎರಡನೆ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುತ್ತಿರಲಿಲ್ಲ. ಭಾರತ ಸ್ವಾತಂತ್ರ್ಯಾನಂತರ  ಅನುಭವಿಸಿರದ ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿರಲಿಲ್ಲದುರಂತವೇನು ಗೊತ್ತೆ? ಖಾಸಗಿ ದೃಶ್ಯ ಮಾಧ್ಯಮಗಳು ಕಾರ್ಯಾಚರಿಸಲು ಅವಕಾಶ ನೀಡಿ, ಲಕ್ಷಾಂತರ ಪತ್ರಕರ್ತರ ಹೊಟ್ಟೆಪಾಡಿಗೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷವನ್ನೇ ವಿಲನ್ ಆಗಿಸಿದ್ದಾವೆ  ಮಾಧ್ಯಮಗಳು. ಆ ಮೂಲಕ ತಮ್ಮ ಶವ ಪೆಟ್ಟಿಗೆಗೆ ತಾವೇ ಕೊನೆಯ ಮೊಳೆ ಹೊಡೆದುಕೊಂಡಿವೆ.

ಮಾಧ್ಯಮಗಳು ಕನ್ನಡಿಯಂಥ ಗುಣ ಉಳಿಸಿಕೊಳ್ಳದಿದ್ದರೆ ತಾವೇ ತಾವಾಗಿ ಅಪ್ರಸ್ತುತಗೊಳ್ಳುತ್ತವೆ. ಆ ದುರಂತದತ್ತ ಭಾರತೀಯ ಮಾಧ್ಯಮಗಳು ಈಗಾಗಲೇ ದಾಪುಗಾಲಿಟ್ಟಿವೆ. ಎಚ್ಚೆತ್ತುಕೊಳ್ಳದಿದ್ದರೆ ಪತ್ರಕರ್ತರೆಲ್ಲ ವಾರಾನ್ನದ ಮನೆಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯವಾಗಲಿದೆ…  

Spread the love
Leave A Reply

Your email address will not be published.

Flash News