ಅರಣ್ಯ ಇಲಾಖೆಯಲ್ಲಿ “ಕಮಿಷನ್” ಮಾಫಿಯಾ “ಕಿಕ್ ಬ್ಯಾಕ್” ಆಸೆಗೆ  1500 ದಿನಗೂಲಿ ನೌಕರರಿಗೆ “ಹೊರಗುತ್ತಿಗೆ” ಶಾಪ..!!

0

ಬೆಂಗಳೂರು:ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳೆನಿಸಿಕೊಂಡವರು ಸರ್ಕಾರ ಕೊಡೋ ಸಂಬಳಕ್ಕೆ ನೀಯತ್ತಾಗಿ ಕೆಲಸ ಮಾಡುತ್ತಿದ್ದಾರೋ ಅಥವಾ ಕಮಿಷನ್ ದಂಧೆಗೆ ಕೈ ಹಾಕಿದ್ದಾರೋ..ಅವರಿಗೆ ದಿನಗೂಲಿ ನೌಕರರು ಅನುಭವಿಸುತ್ತಿರುವ ಸಂಕಷ್ಟ-ಬವಣೆಗಳೇ ಅರ್ಥವಾಗುತ್ತಿಲ್ಲ ಎನ್ನುವುದೇ ನೋವಿನ ಸಂಗತಿ.ಇದಕ್ಕೆ ದಿನಗೂಲಿ ನೌಕರರ ಬದುಕುಗಳ ಜತೆ ಚೆಲ್ಲಾಟವಾಡುತ್ತಿರುವ ಅವರ ಧೋರಣೆಗಳೇ ಸಾಕ್ಷಿಯಂತಿವೆ.ಕಮಿಷನ್ ಆಸೆಗೆ ಸರ್ಕಾರಿ ಸವಲತ್ತು ಪಡೆಯುತ್ತಿದ್ದ ದಿನಗೂಲಿ ನೌಕರರನ್ನು ಹೊರಗುತ್ತಿಗೆ ಎನ್ನುವ ಖೆಡ್ಡಾಕ್ಕೆ ಕೆಡವಿ ಅದರಿಂದ ವಿಕೃತ ಆನಂದ ಪಡೆಯುವ ವಿಕ್ಷಿಪ್ತ ಮನಸ್ಥಿತಿ ಅಧಿಕಾರಿಗಳೇ ಅರಣ್ಯ ಇಲಾಖೆಯಲ್ಲಿ ತುಂಬೋಗಿದ್ದರೇನೋ ಗೊತ್ತಾಗ್ತಿಲ್ಲ.

ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಗೋಳೇ ಅರಣ್ಯ ರೋಧನವಾಗೋಗಿದೆ.ಇಲಾಖೆಯ ವಿವಿಧ ವರ್ಗದ ಕೆಲಸಗಳಲ್ಲಿ   ಕಾರ್ಯನಿರ್ವಹಿಸುತ್ತಿದ್ದ ದಿನಗೂಲಿ ನೌಕರರನ್ನು ಇಲಾಖೆಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೊರಗುತ್ತಿಗೆ ನೌಕರರನ್ನಾಗಿ ಬದಲಾಯಿಸಿರುವುದು ನೌಕರರ ಬದುಕು ಮೂರಾಬಟ್ಟೆ ಯಾಗುವುದಕ್ಕೆ ಕಾರಣವಾಗಿದೆ. ಲಾಭದ ಉದ್ದೇಶಕ್ಕಾಗಿ ಸಾವಿರಾರು ನೌಕರರ ಬದುಕುಗಳ ಮೇಲೆ ಗದಾಪ್ರಹಾರ ಮಾಡಿರುವ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳಿಂದಾಗಿ ಇಲಾಖೆಯಿಂದ ಬರಬೇಕಾದ ನ್ಯಾಯಯುತ ಸೌಲಭ್ಯಗಳು ಸಂಪೂರ್ಣ ವಂಚಿತವಾಗಿವೆ.

ಅರಣ್ಯ ಇಲಾಖೆಯಲ್ಲಿ ರಕ್ಷಣಾ ಶಿಬಿರ, ಆನೆ ಕ್ಯಾಂಪ್, ತನಿಖಾ ಠಾಣೆ, ರಸ್ತೆ ಬದಿ ನೆಡುತೋಪು ನಿರ್ವಹ ಣೆ, ಟಿಂಬರ್ ಡಿಪೋ ಕಾವಲು, ಗಡಿರಕ್ಷಣೆಯಿಂದ ಹಿಡಿದು ವಾಹನ ಚಾಲನೆವರೆಗೆ 1,500ಕ್ಕೂ ಹೆಚ್ಚು ಸಿಬ್ಬಂದಿ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದರು.ನಿಮ್ಗೆ ಗೊತ್ತಿರಲಿ,ಈ ವಿಭಾಗಗಳು ಬಹುತೇಕ ಜೀವವನ್ನೇ ಸಾವಿನ ದವಡೆಯಲ್ಲಿ ಸಿಲುಕಿಸಿಕೊಂಡು ಕೆಲಸ ಮಾಡುವಂಥ ಕ್ಷೇತ್ರಗಳು.ಅನೇಕ ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿರುವ ಇವರಿಗೆ ಜೇಷ್ಠ್ಯತೆ ಹಾಗು ಕಾರ್ಯಾನುಭವದ ಹಿನ್ನಲೆಯಲ್ಲಿ ಉದ್ಯೋಗ ಖಾಯಂ ಆಗುವ ಸಾಧ್ಯತೆಗಳಿತ್ತು. ಆದರೆ ದಿನಗೂಲಿಯಿಂದ ದಿಢೀರ್ ಅವರನ್ನು ಹೊರಗುತ್ತಿಗೆ ನೌಕರ ರನ್ನಾಗಿ ಬದಲಾಯಿಸಿರುವುದು ನೌಕರ ಕುಟುಂಬಗಳನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.ಇದರ ಹಿಂದೆ ಭ್ರಷ್ಟ ಅರಣ್ಯಾಧಿಕಾರಿಗಳ ಕಮಿಷನ್ ದಂಧೆ ಇದೆ ಎನ್ನುವ ಆರೋಪಗಳಿವೆ.

ದಿನಗೂಲಿ ನೌಕರರಿಗೆ ಸರ್ಕಾರವೇ ಇಂತಿಷ್ಟು ಎಂದು ನಿಗಧಿ ಮಾಡಿ ವೇತನ, ಭತ್ಯೆ ನೀಡುತ್ತಿತ್ತು. ಆದರೆ ಹೊರಗುತ್ತಿಗೆ ಎನ್ನುವ `ಕುಲಗೆಟ್ಟ’ ವ್ಯವಸ್ಥೆಗೆ ಈಡಾದ ಕೆಲವು ಭ್ರಷ್ಟ ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಹಾಗೂ ಕಿಕ್‌ಬ್ಯಾಕ್ ಆಸೆಗೆ ಬಲಿಬಿದ್ದು, ದಿನಗೂಲಿ ನೌಕರರನ್ನೆಲ್ಲಾ ಹೊರಗುತ್ತಿಗೆ ನೌಕರರನ್ನಾಗಿಸಿದ್ದಾರೆ. ಯಾವುದೋ ಹೊರಗುತ್ತಿಗೆದಾರನೊಂದಿಗೆ ಕೈಜೋಡಿಸಿ ಆತನಿಂದ ಬರುವ ಕಮೀಷನ್ ಹಣಕ್ಕೋಸ್ಕರ ನೌಕರರ ಬದುಕುಗಳನ್ನು ಬೀದಿಗೆ ತಂದು ನಿಲ್ಲಿಸಿರುವುದು ಯಾವ ನ್ಯಾಯ ಎನ್ನೋದು  ಕರ್ನಾಟಕ ಅರಣ್ಯ ಇಲಾಖೆ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದ ಅಧ್ಯಕ್ಷ ಎ. ಎಂ. ನಾಗರಾಜ್ ಪ್ರಶ್ನೆ.

ಕರ್ನಾಟಕ ಅರಣ್ಯ ಇಲಾಖೆ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದ ಅಧ್ಯಕ್ಷ ಎ. ಎಂ. ನಾಗರಾಜ್
ಕರ್ನಾಟಕ ಅರಣ್ಯ ಇಲಾಖೆ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದ ಅಧ್ಯಕ್ಷ ಎ. ಎಂ. ನಾಗರಾಜ್

ಸೇವಾ ಭದ್ರತೆ ಸಿಗುವ ಭರವಸೆಯೊಂದಿಗೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಿರುವ ನೌಕರರು ಈ ಹೊರಗುತ್ತಿಗೆ ವ್ಯವಸ್ಥೆಯಿಂದಾಗಿ ಎಲ್ಲಾ ಸೌಲಭ್ಯವನ್ನು ಕಳೆದುಕೊಂಡಿದ್ದಾರೆ. ಇಲಾಖೆಯಿಂದ ನೇರವಾಗಿ ಹೊರಗುತ್ತಿಗೆ ಸಂಸ್ಥೆಯ ಮಾಲೀಕನಿಗೆ ಕೋಟ್ಯಾಂತರ ಹಣ ಸಂದಾಯವಾಗುತ್ತಿದೆ. ಆತ ಅದರಲ್ಲಿ ಒಂದಷ್ಟು ಪಾಲನ್ನು ತನ್ನ ವ್ಯವಸ್ಥೆಗೆ ಸಾಥ್ ಕೊಡುತ್ತಿರುವ ಭ್ರಷ್ಟ ಅಧಿಕಾರಿಗಳಿಗೆ ನೀಡಿ, ದೊಡ್ಡ ಪಾಲನ್ನು ತಾನಿಟ್ಟುಕೊಂಡು ಅಳಿದುಳಿದುದನ್ನು ನೌಕರರಿಗೆ ನೀಡುತ್ತಿದ್ದಾನೆ ಎನ್ನುವ ಆರೋಪವಿದೆ.

ಈ ವ್ಯವಸ್ಥೆಯಿಂದಾಗಿ ಕೋಟ್ಯಾಂತರ ಲಾಭ ಗುತ್ತಿಗೆದಾರನ ಪಾಲಾಗುತ್ತಿದೆ. ಹಾಗೆಯೇ ಇದರಿಂದ ಸಾಕಷ್ಟು ಕಿಕ್‌ಬ್ಯಾಕ್ ಅನ್ನು ಆತನೊಂದಿಗೆ ಕೈಜೋಡಿಸಿರುವ ಅಧಿಕಾರಿಗಳಿಗೆ ಸಂದಾಯವಾಗುತ್ತಿದೆ. ಹತ್ತು ವರ್ಷ ಪೂರೈಸಿದ ದಿನಗೂಲಿ ನೌಕರರಿಗೆ ಸೇವಾ ಭದ್ರತೆ ಸಿಗುವ ಅವಕಾಶವೂ ಈ ಹೊರಗುತ್ತಿಗೆ ವ್ಯವಸ್ಥೆಯಿಂದಾಗಿ ಕೈ ತಪ್ಪಿದೆ. ಕಾರ್ಮಿಕ ಕಾಯ್ದೆ ೨೪೦ ದಿನ ಕೆಲಸ ಮಾಡಿದ ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆಯಬಾರದೆನ್ನುತ್ತದೆ. ನ್ಯಾಯಾಲಯದ ತಡಯಾಜ್ಞೆಯೂ ಇದಕ್ಕೆ ಪೂರಕವಾಗಿದೆ. ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದಾಗ, ದಿನಗೂಲಿ ನೌಕರರನ್ನು ಹೊರಗಿಟ್ಟು ಹೊರಗುತ್ತಿಗೆ ವ್ಯವಸ್ಥೆಯನ್ನು ಬೆಂಬಲಿಸುವುದು ಎಷ್ಟು ಸೂಕ್ತ? ಒಟ್ಟಿನಲ್ಲಿ ಕಮೀಷನ್ ಆಸೆಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ದಿನಗೂಲಿ ನೌಕರರ ಬದುಕುಗಳ ಜೊತೆಗೆ ಚೆಲ್ಲಾಟವಾಡುತ್ತಿರುವುದು ಎಷ್ಟು ಸರಿ? ಈ ಹೊರಗುತ್ತಿಗೆ ವ್ಯವಸ್ಥೆಗೆ ಸಿಲುಕಿ ದಿನಗೂಲಿ ನೌಕರರು ಅನುಭವಿಸುತ್ತಿರುವ ಸಮಸ್ಯೆ ಅರಣ್ಯ ಸಚಿವ ಆನಂದಸಿಂಗ್ ಅವರ ಗಮನಕ್ಕೂ ಇದೆ.

ಇರೋದ್ರಲ್ಲೇ ಒಂದಷ್ಟು ಮಾನವೀಯ ಕಳಕಳಿ ಇರುವ ಸಚಿವರು ನಮಗೆ ಸಿಕ್ಕಿದ್ದಾರೆ.ಅವರಿಗೆ ಸಮಸ್ಯೆಯನ್ನು ಮನದಟ್ಟು ಮಾಡಿದ್ದೇವೆ.ನಮ್ಮ ಅಹವಾಲುಗಳನ್ನು ಸಮಾಧಾನದಿಂದ ಕೇಳಿ,ಪರಿಹಾರದ ಭರವಸೆಯನ್ನೂ ನೀಡಿದ್ದಾರೆ.ಅವರ ಬಗ್ಗೆ ನಂಬಿಕೆ ಇದೆ ಎನ್ನುವ ಸಂಘದ ನಾಗರಾಜ್ ಹಾಗೂ ನೌಕರರು ದಿನಗೂಲಿ ನೌಕರರನ್ನೇ ತಮ್ಮನ್ನು ಪರಿಗಣಿಸಿ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತು ದೊರಕಿಸಿಕೊಡಬೇಕೆಂದು ವಿನಂತಿಸಿದ್ದಾರೆ..ಜೀವಗಳನ್ನು ಸಂಕಷ್ಟಕ್ಕೆ ಸಿಲುಕಿಸಿಕೊಂಡು ಕೆಲಸ ಮಾಡುತ್ತಿರುವ ಅರಣ್ಯ ಇಲಾಖೆ ದಿನಗೂಲಿ ನೌಕರರಿಗೆ ಇಷ್ಟು ವರ್ಷಗಳವರೆಗೂ ಸಿಗದ ನ್ಯಾಯ,ಆನಂದ್ ಸಿಂಗ್ ಅವರ ಅವಧಿಯಲ್ಲಿ ಸಿಕ್ಕರೆ ಅವರ ಫೋಟೋವನ್ನು ಸಾಯೋವರೆಗೂ ಮನೆಯಲ್ಲಿಟ್ಟುಕೊಂಡು ನೆಮ್ಮದಿಯ ಜೀವನ ಕಟ್ಟಿಕೊಳ್ಳುತ್ತಾರೆ ನೌಕರರು..ಅದು ಸಾಧ್ಯವಾಗೋದು ಆನಂದ್ ಸಿಂಗ್ ಮನಸು ಮಾಡಿದಾಗ ಮಾತ್ರ..

Spread the love
Leave A Reply

Your email address will not be published.

Flash News