ಮಾಸ್ಕ್ ಧರಿಸದಿದ್ರೆ ದಂಡ ಪಾವತಿಸುವುದಷ್ಟೇ ಅಲ್ಲ,ಜೈಲೂ ಸೇರಬೇಕಾದೀತಾ..? ಬೆಂಗಳೂರಲ್ಲೂ ದೆಹಲಿ-ಮ.ಪ್ರದೇಶ ಮಾದರಿಯಲ್ಲೇ ಶಿಕ್ಷೆ ಲಾಗೂ ಆಗುತ್ತಾ..?

0

ಬೆಂಗಳೂರು: ಯಾರು ಏನೇ ಅಂದ್ರೂ..ಎಷ್ಟೇ ಸಮಾಧಾನದ ಮಾತುಗಳನ್ನು ಆಡಿದ್ರೂ,ಸತ್ಯ ಒಂದೇ,ಮಹಾಮಾರಿ ಕೊರೊನಾ ಸಧ್ಯಕ್ಕಂತು ತನ್ನ ವಿಧ್ವಂಸಕತೆ ಕಡ್ಮೆ ಮಾಡುವಂಗೆ ಕಾಣ್ತಿಲ್ಲ.ಸಧ್ಯ ಅದರ ಆಟಾಟೋಪವನ್ನು ಗಮನಿಸಿದ್ರೆ ಅದರ ಮೂಲೋತ್ಪಾಟನೆ ಮಾತು ಹಾಳಾಗಿ ಹೋಗ್ಲಿ, ನಿಗ್ರಹವೂ ಕಷ್ಟನೇ.. ದೆಹಲಿ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ ಸೇರಿದಂತೆ ದೇಶದ ಕೆಲ ಭಾಗಗಳಲ್ಲಿ ಕೊರೊನಾದ ಮತ್ತೊಂದು ಅಲೆ ಅಪ್ಪಳಿಸುವ ಆತಂಕದ ವರ್ತಮಾನ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧಾರಣೆಯನ್ನು ಮತ್ತಷ್ಟು ಕಠಿಣಗೊಳಿಸಲಾಗುತ್ತಿದೆ. ಇಷ್ಟು ದಿನ ಕೇವಲ ದಂಡಕ್ಕೆ ಸೀಮಿತವಾಗಿದ್ದ ಶಿಕ್ಷೆಯನ್ನು ಈ ರಾಜ್ಯಗಳಲ್ಲಿ ಜೈಲುವಾಸದ ವರೆಗೂ ವಿಸ್ತರಿಸಲಾಗಿದೆ. ಬೆಂಗಳೂರಿನಲ್ಲಿ ಈ ಒಂದು ನಿಯಮ ಜಾರಿಗೆ ಬರಲಿದೆಯಾ ಎನ್ನುವ ಪ್ರಶ್ನೆ ಕೂಡಾ ಸೃಷ್ಟಿಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿನ ಸದ್ಯದ ಪರಿಸ್ಥಿತಿ ಗಮನಿಸಿದರೆ ಜನ ಕೊರೊನಾ ಸಂಪೂರ್ಣ ನಿವಾರಣೆಯಾಗಿದೆ ಎನ್ನುವ ರೇಂಜಿನಲ್ಲಿ ಅಡ್ಡಾಡುತ್ತಿದ್ದಾರೆ. ಅವರಿಗೆ ಮಾಸ್ಕ್ ಧಾರಣೆಯಾಗಲೀ, ಸಾಮಾಜಿಕ ಅಂತರವಾಗಲೀ ಯಾವುದೂ ಗಂಭೀರ ಎನಿಸುತ್ತಲೇ ಇಲ್ಲ. ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ತನ್ನದೇ ಆದ ರೀತಿಯಲ್ಲಿ ಕಾರ್ಯಪ್ರವೃತ್ತವಾಗಿದ್ದರೂ ಜನ ಮಾತ್ರ ಇದ್ಯಾವುದಕ್ಕೋ ಡೋಂಟ್‌ಕೇರ್ ಎನ್ನದಂತಿದ್ದಾರೆ.

ವಿದೇಶಗಳಲ್ಲಿ ಕೊರೊನಾ ಮತ್ತೆ ತನ್ನ ಮಾರಕತೆಯನ್ನು ಪ್ರದರ್ಶಿಸುತ್ತಿರುವ ಆತಂಕಕಾರಿ ಸಂಗತಿ ಇಡೀ ವಿಶ್ವವನ್ನು ಚಿಂತೆಗೀಡು ಮಾಡಿದೆ. ನಮ್ಮ ದೇಶದ ಸಾಕಷ್ಟು ರಾಜ್ಯಗಳಲ್ಲೂ ಇಂತಹುದ್ದೇ ಬೆಳವಣಿಗೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಗೊಳಿಸುವ ಚಿಂತನೆಗೆ ಅಲ್ಲಿನ ಸರ್ಕಾರಗಳು ಬಂದಿವೆಯೆನ್ನಲಾಗುತ್ತಿದೆ.

ದೆಹಲಿ, ಹರಿಯಾಣ, ಪಂಜಾಬ್‌ನಂತಹ ರಾಜ್ಯಗಳಲ್ಲಿ ಈಗಾಗಲೇ ಸೀಮಿತ ಲಾಕ್‌ಡೌನ್ ಜಾರಿಯ ನಿರ್ಧಾರ ನಿರ್ಣಾಯಕ ಹಂತದಲ್ಲಿದೆ. ಜನರು ಸ್ವಯಂಪ್ರೇರಿತರಾಗಿ ಸುರಕ್ಷತೆ ಪಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದ್ದು, ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಮಾಸ್ಕ್ ಧಾರಣೆಯನ್ನು ತೀವ್ರ ಗಂಭೀರವಾಗಿ ಪರಿಗಣಿಸಲಾಗಿದೆ. ಕೇವಲ ದಂಡ ಪ್ರಯೋಗಕ್ಕೆ ಸೀಮಿತವಾಗಿದ್ದ ಶಿಕ್ಷೆಯನ್ನು ಜೈಲು ವಾಸಕ್ಕೂ ಈಗಾಗಲೇ ವಿಸ್ತರಿಸಲಾಗಿದ್ದು, ಪೊಲೀಸರಿಗೆ ಹೆಚ್ಚಿನ ಪವರ್ ಕೂಡ ನೀಡಲಾಗಿದೆ.

ದೆಹಲಿ ಹಾಗೂ ಮಧ್ಯಪ್ರದೇಶಗಳಂತಹ ರಾಜ್ಯಗಳಲ್ಲಿ ಮಾಸ್ಕ್ ಧರಿಸದೆ ರಸ್ತೆಗಿಳಿದರೆ ನೇರವಾಗಿ ಜೈಲು ಶಿಕ್ಷೆ ವಿಧಿಸುವಂತಹ ಅಧಿಕಾರವನ್ನು ಸ್ಥಳೀಯ ಪೊಲೀಸರಿಗೆ ನೀಡಲಾಗಿದೆ. ದಂಡದಿಂದ ಯಾವುದೇ ಪ್ರಯೋಜನವಾಗದ್ದನ್ನು ಮನಗಂಡು ಮಾಸ್ಕ್ ಧಾರಣೆಯ ಬಗ್ಗೆ ಜಾಗೃತಿಗಿಂತ ಭಯ ಹುಟ್ಟಿಸುವ ಅನಿವಾರ್ಯ ಪರಿಸ್ಥಿತಿಗೆ ಪೊಲೀಸರು ಬಂದಿದ್ದಾರೆ. ಈಗಾಗಲೇ ಮಾಸ್ಕ್ ಧರಿಸದೆ ರಸ್ತೆಗೆ ಬಂದ ಅದೆಷ್ಟೋ ನಾಗರೀಕರು ಹಾಗೂ ವಾಹನ ಸವಾರರಿಗೆ ಸೀಮಿತ ಅವಧಿಯ ಜೈಲು ಶಿಕ್ಷೆಯ ಅನುಭವವೂ ಕೂಡ ಆಗಿದೆ.

ಇದೇ ಪರಿಸ್ಥಿತಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಜಾರಿಯಾಗುತ್ತಾ? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಏಕೆಂದರೆ ಸದ್ಯದ ಪರಿಸ್ಥಿತಿ ಆ ರಾಜ್ಯಗಳ ಪರಿಸ್ಥಿತಿಗಿಂತ ಭಿನ್ನವಾಗಿಲ್ಲ. ಮಾಸ್ಕ್ ಧಾರಣೆಯ ಬಗ್ಗೆ ಜಾಗೃತಿ ಇಲ್ಲದಂತೆ ವರ್ತಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಇಲ್ಲಿಯೂ ದೆಹಲಿ ಹಾಗೂ ಮಧ್ಯಪ್ರದೇಶ ಮಾದರಿಯ ಜೈಲು ಶಿಕ್ಷೆ ವಿಧಿಸುವ ಆಲೋಚನೆ ಏನಾದರೂ ಇದ್ದಿರಬಹುದಾ? ಎನ್ನುವ ಪ್ರಶ್ನೆಗೆ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಜಾಣ ಉತ್ತರ ನೀಡಿದ್ದಾರೆ.

ದೆಹಲಿ ಹಾಗೂ ಮಧ್ಯಪ್ರದೇಶದಷ್ಟು ಬೆಂಗಳೂರಿನ ಪರಿಸ್ಥಿತಿ ಹಾಳಾಗಿಲ್ಲ. ಇಲ್ಲಿ ಎಲ್ಲವೂ ಕಂಟ್ರೋಲ್‌ನಲ್ಲಿದೆ. ಹಾಗಾಗಿ ಜೈಲು ಶಿಕ್ಷೆ ಜಾರಿಗೊಳಿಸುವಂತಹ ಚಿಂತನೆಯೂ ಇಲ್ಲ, ಪ್ರಸ್ತಾವನೆ ಯೂ ಸದ್ಯಕ್ಕಿಲ್ಲ. ಅದಲ್ಲದೆ ಅಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಬಿಬಿಎಂಪಿಗೆ ಇಲ್ಲವೇ ಇಲ್ಲ. ಪರಿಸ್ಥಿತಿ ನಿಯಂತ್ರಣ ಮೀರಿದರೆ ಅಂತಹದ್ದೊಂದು ಗಂಭೀರವಾದ ನಿರ್ಧಾರವ ನ್ನು ತೆಗೆದುಕೊಳ್ಳುವ ಪವರ್ ಸರ್ಕಾರಕ್ಕಿದೆಯೇ ಹೊರತು ಬಿಬಿಎಂಪಿಗೆ ಇಲ್ಲ. ನಮ್ಮದೇನಿದ್ದರೂ ಸರ್ಕಾರ ನೀಡಿದ ಆದೇಶವನ್ನು ಅನುಷ್ಠಾನಗೊಳಿಸುವುದಷ್ಟೇ ಎಂದು  ತಿಳಿಸಿದ್ದಾರೆ.

ಕೊರೊನಾ ಸನ್ನಿವೇಶದಲ್ಲಿ ಲಾಕ್‌ಡೌನ್ ಹೇರಿಕೆ ವಿಷಯವಾಗ್ಯೂ  ಹಿಂದಿನ ಕಮೀಷನರ್ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಜಾರಿ ಮಾಡುವುದಿಲ್ಲ ಎಂದು ಹೇಳಿದ್ರು ನಂತರ ಅದನ್ನು ಅನಿವಾರ್ಯವಾಗಿ ಅನುಷ್ಠಾನಕ್ಕೆ ತರಬೇಕಾಯ್ತು. ಜೈಲು ಶಿಕ್ಷೆ ವಿಷಯದಲ್ಲೂ ಅದೇ ಪರಿಸ್ಥಿತಿ ಮರುಕಳಿಸುತ್ತಾ ಗೊತ್ತಿಲ್ಲ.  

Spread the love
Leave A Reply

Your email address will not be published.

Flash News