ಬಗೆದಷ್ಟೆಲ್ಲಾ “ಬ್ರಹ್ಮಾಂಢ”ವಾಗುತ್ತಿದೆ ಅಂಬೇಡ್ಕರ್ ನಿಗಮದ “ಸಬ್ಸಿಡಿ”ಹಗರಣ:ನಕಲಿ ಖಾತೆ ಸೃಷ್ಟಿಸಿ ಬ್ರೋಕರ್ಸ್-ಬ್ಯಾಂಕ್ ಗಳಿಂದ ಹಣ ಲೂಟಿ.. 

0

ಬೆಂಗಳೂರು: ಪ್ಲೀಸ್..ಪ್ಲೀಸ್..ಪ್ಲೀಸ್… ಸಚಿವ ಶ್ರೀರಾಮಲು ಅವ್ರೇ ನೀವು ಮಿಸ್ ಮಾಡ್ದೇ ಓದಲೇಬೇಕಾದ ಸ್ಟೋರಿ ಇದು.ನಿಮ್ಮದೇ ಇಲಾಖೆಯಲ್ಲಿ ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ಸೇರಬೇಕಾದ ಹಣವನ್ನು ನಿಮ್ಮ ಇಲಾಖೆಯ ಕೆಲ ಭ್ರಷ್ಟ ಹಾಗೂ ನಾಲಾಯಕ್ ಅಧಿಕಾರಿಗಳು  ಬ್ರೋಕರ್ಸ್ ಹಾಗೂ ಬ್ಯಾಂಕ್ ಮ್ಯಾನೇಜರ್ಸ್ ಗಳ ಜತೆ ಸೇರಿಕೊಂಡು ಬೇನಾಮಿ ಅಕೌಂಟ್ ಕ್ರಿಯೇಟ್ ಮಾಡಿ ಹಂಚಿ ತಿನ್ನುತ್ತಿದ್ದಾರೆನ್ನುವುದನ್ನು ನೀವು ಕೇಳಿದ್ರೆ ಗಾಬರಿ ಹಾಗೂ ಹೇಸಿಗೆಯಾಗುತ್ತೆ.ಅಂತದ್ದೊಂದು ಬೃಹತ್ ಹಗರಣವನ್ನು ಕನ್ನಡ ಫ್ಲಾಶ್ ನ್ಯೂಸ್ ಬಟಾಬಯಲುಗೊಳಿಸುತ್ತಿದೆ.

ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಕೆಲಸ ಮಾಡುವ ಡಾ.ಅಂಬೇಡ್ಕರ್ ನಿಗಮದಲ್ಲಿ ಸ್ವ ಉದ್ಯೋಗಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ತಲುಪಬೇಕಿದ್ದ ಅನುದಾನವನ್ನು ಕೆಲ ಬ್ರೋಕರ್ಸ್-ಬ್ಯಾಂಕ್ ಅಧಿಕಾರಿಗಳು ಹಾಗೂ ನಿಗಮದ ಅಧಿಕಾರಿಗಳು ಸೇರಿ ನುಂಗಿ ನೊಣೆದದ್ದು ಎಲ್ಲರಿಗೂ ಗೊತ್ತಿರೋದೇ.ಈ ಪ್ರಕರಣದಲ್ಲಿ ಶಾಮೀಲಾಗಿದ್ದ ಆರೋಪದಲ್ಲಿ ನಿಗಮದ ಅಧಿಕಾರಿ ಸಿಬ್ಬಂದಿಯಾದ ಅರುಣ್ ಕುಮಾರ್,ಪದ್ಮನಾಭ,ಮಲ್ಲೇಶ್,ಮುಕುಂದ,ಕಲ್ಪನಾ,ಪುಟ್ಟೀರಯ್ಯ,ಲಿಂಗಣ್ಣ ಅಮಾನತ್ತು ಮಾಡಲಾಗಿತ್ತು.

2016-17,2017-18 ಸಾಲಿನ ಸ್ವ ಉದ್ಯೋಗದ ಸ್ಕೀಂನಲ್ಲಿ ಸಾಕಷ್ಟು ಫಲಾನುಭವಿಗಳಿಗೆ ತಲುಪಬೇಕಿದ್ದ ಕೋಟ್ಯಾಂತರ ಅನುದಾನ ಫಲಾನುಭವಿಗಳಿಗೆ ತಲುಪಿರದ ಆರೋಪದಲ್ಲಿ ತನಿಖೆ ನಡೆಸಿದ್ದಾಗ ಹಗರಣ ಹೊರಬಿದ್ದಿತ್ತು.ಅಧಿಕಾರಿಗಳನ್ನು ಬೆಂಡೆತ್ತಿದಾಗ ಸತ್ಯ ಬಾಯ್ಬಿಟ್ಟಿದ್ದರು.ಇಷ್ಟೊಂದು ಕೋಟಿ ಹಣ ಎಲ್ಲೋಯ್ತು ಎಂದಾಗ ಸೀನ್ ಗೆ ಬಂದವರೇ ಕೆಲ ಬ್ರೋಕರ್ಸ್.

ತನ್ನನ್ನು ಅಂಬೇಡ್ಕರ್ ಸೇನೆಯ ಮುಖಂಡ, ಪತ್ರಕರ್ತ, ತನಗೆ ದೊಡ್ಡ ದೊಡ್ಡ ಚಾನೆಲ್ ಗಳ ಮುಖ್ಯಸ್ಥರು ಆತ್ಮೀಯರೆಂದು ತೋರಿಸಿ ಬಿಲ್ಡಪ್ ಕೊಡ್ತಿದ್ದ ಕೋದಂಡರಾಮ ಎಂಬ ಸಾಮಾಜಿಕ ಕಾರ್ಯಕರ್ತ ಬಯಲಿಗೆ ತಂದ ಹಗರಣ ಇದು.ಆದರೆ ಕಾಲಾಂತರದಲ್ಲಿ ಈತನೂ ಬ್ರೋಕರ್ಸ್ ಗಳೊಂದಿಗೆ ಶಾಮೀಲಾಗಿ ಲಕ್ಷ ಲಕ್ಷ ಪೀಕಿ ಬ್ಯಾಂಕ್ ಮ್ಯಾನೇಜರ್ಸ್ ಗಳನ್ನೇ ಬ್ಲ್ಯಾಕ್ ಮೇಲ್ ಮಾಡಿ ಅವರಿಂದಲೂ ಹಣ ಲೂಟಿ ಮಾಡಿದನೆಂಬ ಆರೋಪವಿದೆ.

ಇಷ್ಟಾದರೂ ಕಳ್ಳ ಒಂದ್ ದಿನ ಸಿಕ್ಕಿ ಬೀಳಲೇಬೇಕೆನ್ನುವ ಹಾಗೇ,ದಂಧೆ ಬಯಲಾಗಿ ಕೋದಂಡ ಸಮೇತ ಗೋವಿಂದರಾಜು,ಮುರುಳಿ,ಸೈಯ್ಯದ್ ಸಾದಿಕ್,ಜೆಮರ್ ಪಾಷಾ,ಅಮರ್,ಸತ್ಯನಾರಾಯಣ,ಜೆ.ಶ್ರೀಧರ್,ಕೆ. ಮಂಜುನಾಥ್,ಭುವನೇಶ್ ಅವರ ವಿರುದ್ಧ ಪ್ರಕರಣ ಕೂಡ ದಾಖಲಾಯ್ತು.ಕಿಂಗ್ ಪಿನ್ ಕೋದಂಡರಾಮ ಹೃದಯಾಘಾತದಿಂದ ನಿಧನವಾದ ಮೇಲೆ ಅವನ ಬ್ರೋಕರ್ ಪಟಾಲಂಗೆ ಏನ್ ಮಾಡ್ಬೇಕೆಂದು ಗೊತ್ತಾಗದೆ ಒದ್ದಾಡುತ್ತಿದೆ.ದುರಂತ ಎಂದ್ರೆ ನಂಬಿಕೆಗೆ ಹೇಳಿ ಮಾಡಿಸಿದ್ದಂತ ಕೆನರಾ ಬ್ಯಾಂಕ್ ಹಾಗೂ ಇನ್ನೂ ಅನೇಕ ಬ್ಯಾಂಕ್ ಮ್ಯಾನೇಜರ್ಸ್ ಗಳೂ ಈ ದಂಧೆಯಲ್ಲಿ ಶಾಮೀಲಾಗಿ ಪೊಲೀಸ್ ಠಾಣೆಯಲ್ಲಿ ಕೇಸ್ ಜಡಿಸಿಕೊಂಡ್ರು.ಪ್ರಕರಣದ ಸಧ್ಯದ ಬೆಳವಣಿಗೆ ಶಾಕ್ ಮೂಡಿಸುತ್ತದೆ.ಪ್ರಕರಣದ ತನಿಖೆಯನ್ನು ಸರ್ಕಾರ, ಪೊಲೀಸ್ ಇಲಾಖೆಗೆ ಒಪ್ಪಿಸಿದ ಮೇಲೆ ಇನ್ವೆಸ್ಟಿಗೇಷನ್ ನ್ನು ಮಾಗಡಿ ರಸ್ತೆ ಪೊಲೀಸ್ ವಹಿಸಿಕೊಂಡು ತನಿಖೆ ಶುರುಮಾಡಿದೆ.

ಬ್ರೋಕರ್ಸ್ ಗಳಿಂದ ಮೋಸ ಹೋದ ಉದಯಟಿವಿ ಕಾಮಿಡಿ ನೈಟ್ಸ್ ಖ್ಯಾತಿಯ ಕೃಷ್ಣ
ಮೋಸ ಹೋದ ಉದಯಟಿವಿ ಕಾಮಿಡಿ ನೈಟ್ಸ್ ಖ್ಯಾತಿಯ ಕೃಷ್ಣ

ನಕಲಿ ಫಲಾನುಭವಿಗಳ ಹೆಸ್ರಲ್ಲಿ ಲಕ್ಷ ಲಕ್ಷ ಡ್ರಾ: ನಾವ್ ಕೊಡುವ ಒಂದೆರೆಡು ಸ್ಯಾಂಪಲ್ಸೇ ಬ್ರೋಕರ್ಸ್ ಗಳ ಮಹಾವಂಚನೆ ಎಂತದ್ದೆನ್ನುವುದು ಗೊತ್ತಾಗುತ್ತೆ.

ಸ್ಯಾಂಪಲ್.1:ಆಕೆ 58 ವರ್ಷದ ಮಹಿಳೆ.ಪೊಲೀಸ್ರು ಕರೆದರೂ ಅಂಥಾ ಸ್ಟೇಷನ್ ಗೆ ಬಂದಿದ್ದಾಳೆ.ನಿಮ್ಮ ಖಾತೆಗೆ 15 ಲಕ್ಷ ಬಂದಿದೆಯೇನಮ್ಮ..ಬಂದಿದ್ರೆ ಎಲ್ಲೋಯ್ತು ಎಂದು ಕೇಳಿದ್ದಾರೆ.ಒಂದ್ ಕ್ಷಣ ಆ ಮಾತನ್ನು ಕೇಳಿ ಆಕೆ ತಬ್ಬಿಬ್ಬಾಗಿದ್ದಾಳೆ.ನನ್ನ ಲೈಫ್ನಲ್ಲೇ ಅಷ್ಟೊಂದು ಹಣವನ್ನು ನೋಡಿಲ್ಲ ಸಾರ್..ಲೋನ್ ಕೊಡಿಸುವುದಾಗಿ ನನ್ನಿಂದ 10-15 ಸಾವಿರ ಹಣ ಇಸ್ಕೊಂಡ್ ಹೀಗೆ ಮಾಡಿದ್ದಾರೆ ಎಂದಿದ್ದನ್ನು ಕೇಳಿ ಪೊಲೀಸ್ರೇ ತಬ್ಬಿಬ್ಬಾಗಿದ್ದಾರೆ.

ಸ್ಯಾಂಪಲ್.2:ಆತ ಉದಯ ಟಿವಿಯಲ್ಲಿ ಬರೋ ಕಾಮಿಡಿ ಪ್ರೋಗ್ರಾಮ್ ನ ಫೇಮಸ್ ಆಂಕರ್,ಹೆಸ್ರು ಕಾಮಿಡಿ ಕೃಷ್ಣ,ಆತನ ಹೆಸರಲ್ಲೂ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಲಕ್ಷಾಂತರ ಹಣ ಪೀಕಿದ್ದಾರೆ ಬ್ರೋಕರ್ಸ್ ಹಾಗು ಮ್ಯಾನೇಜರ್ಸ್..ವಿಚಾರಣೆಗೆ ಕರೆದಿರುವ ವಿಚಾರ ಗೊತ್ತಾಗಿ,ಸತ್ಯ ಬಾಯ್ಬಿಟ್ರೆ ಸರಿ ಇರೊಲ್ಲ ಎಂದು ಕೃಷ್ಣರಿಗೆ ಅವಾಜ್ ಬೇರೆ ಹಾಕಿದ್ದಾರೆ ಖತರ್ನಾಕ್ ಬ್ರೋಕರ್ಸ್.ಇದು ಕೇವಲ ಎರಡು ಸ್ಯಾಂಪಲ್ಸ್ ಅಷ್ಟೇ..ಇಂಥಾ ವಂಚನೆಯನ್ನು  ನೂರಾರು ಅಮಾಯಕರಿಗೆ ಮಾಡಿದ್ದಾರೆ ನಯವಂಚಕರು.

ಮಾಗಡಿ ರಸ್ತೆ ಪೊಲೀಸ್ ಠಾಣೆಯ “ಖಡಕ್” ಇನ್ಸ್ ಪೆಕ್ಟರ್ ಶ್ರೀನಿವಾಸ್
ಮಾಗಡಿ ರಸ್ತೆ ಪೊಲೀಸ್ ಠಾಣೆಯ “ಖಡಕ್” ಇನ್ಸ್ ಪೆಕ್ಟರ್ ಶ್ರೀನಿವಾಸ್

ಪೊಲೀಸ್ರ ಕಾರ್ಯವೈಖರಿಗೆ ಹ್ಯಾಟ್ಸಾಫ್: ಪ್ರಕರಣವನ್ನು ಸರ್ಕಾರ ತಮ್ಮ ಸುಪರ್ದಿಗೆ ಒಪ್ಪಿಸಿದ ಮೇಲೆ ಫುಲ್ ಅಲರ್ಟ್ ಆದ ಪೊಲೀಸ್ರು ಏಜೆಂಟ್ ಗಳ ಹೆಡೆಮುರಿ ಕಟ್ಟೋ ಕೆಲಸ ಮಾಡುತ್ತಿದ್ದಾರೆ.ಮಾಗಡಿ ರಸ್ತೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶ್ರೀನಿವಾಸ್ ಅವರಂತೂ ಏಜೆಂಟ್ ಗಳನ್ನು ಠಾಣೆಗೆ ಕರೆಯಿಸಿ ಅವರ ಬಾಯಿ ಬಿಡಿಸುವ ಕೆಲಸವನ್ನು ಸ್ಟ್ರಿಕ್ಟ್ ಆಗಿ ಮಾಡುತ್ತಿದ್ದಾರೆ.ಆರಂಭದಲ್ಲಿ ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಮಾತನಾಡುತ್ತಿದ್ದ ಖತರ್ನಾಕ್ ಏಜೆಂಟ್ಸ್ ಪೊಲೀಸ್ರ ಟ್ರೀಟ್ಮೆಂಟ್ ನಿಂದ ಬಾಯಿ ಬಿಡುತ್ತಿದ್ದಾರೆ.ಒಬ್ಬರು ಮತ್ತೊಬ್ಬರ ಹೆಸರನ್ನು ಹೇಳುತ್ತಿದ್ದಾರೆ.

ಒಂದ್ ಕ್ಷಣ ಶ್ರೀನಿವಾಸ್ ಅವರೇ ಈ ಮಾಫಿಯಾದ ಕಂಡು ಬೆಚ್ಚಿಉಬಿದ್ದಿದ್ದಾರೆ.ಹಗರಣ ಮೂರ್ನಾಲ್ಕು ಕೋಟಿಯದ್ದಾಗಿರಬಹುದೆಂದುಕೊಂಡಿದ್ದ ಅವರು ತನಿಖೆಯಾಳಕ್ಕೆ ಇಳಿದು ಒಬ್ಬೊಬ್ಬ ಏಜೆಂಟ್ ನ ಬಾಯಿ ಬಿಡಿಸುತ್ತಾ ಹೋದಂತೆಲ್ಲಾ ಅವರು ಹೊರಹಾಕುತ್ತಿರುವ ಸಂಗತಿ ಕೇಳಿ ಶಾಕ್ ಆಗಿದ್ದಾರೆ.ಸ್ಟೇಷನ್ ನಲ್ಲಿ ಹಾಕ್ಕೊಂಡು ತಮ್ಮದೇ ಸ್ಟೈಲ್ ನಲ್ಲಿ ಟ್ರೀಟ್ಮೆಂಟ್ ಕೊಡ್ತಿರೋದನ್ನು ನೋಡಿ ಇನ್ನುಳಿದವರು ತಾವಾಗೇ ಬಾಯ್ಬಿಡಲಾರಂಭಿಸಿದ್ದಾರೆ.ಬ್ರೋಕರ್ ಗಳ ಹೇಳಿಕೆ ಗಮನಿಸಿದ್ರೆ ಹಗರಣ ಹತ್ತಿರತ್ತಿರ 50 ಕೋಟಿ ಗಡಿ ಮೀರಬಹುದೆನ್ನುವ ಲೆಕ್ಕಾಚಾರವಿದೆ.ಮೇಲ್ನೋಟಕ್ಕೆ ತನಿಖೆ ಮಾಡಿ ಬಿಟ್ಟಿದ್ದರೆ ಒಂದಷ್ಟು ಬ್ರೋಕರ್ಸ್ ಅಂದರ್ ಆಗಿ ಅವರು ಹೇಳೋ ಲೆಕ್ಕಕ್ಕಷ್ಟೇ ಹಗರಣ ಸೀಮಿತವಾಗೋಗುತ್ತಿತ್ತೇನೋ..ಆದ್ರೆ ಶ್ರೀನಿವಾಸ್ ಅವರ ಕಾರ್ಯದಕ್ಷತೆ ಹಾಗೂ ಮುತುವರ್ಜಿಯಿಂದಾಗಿ ಪ್ರಕರಣದ ಸಂಪೂರ್ಣ ಬಂಡವಾಳ ಬಯಲಾಗುತ್ತಿದೆ.ಮೇಲ್ಕಂಡ ಪ್ರಕರಣದಲ್ಲಿ ಶ್ರೀನಿವಾಸ್ ಅಂಡ್ ಹಿಸ್ ಟೀಮ್ ನ ಸಮಯಪ್ರಜ್ಞೆ ಹಾಗೂ ಬ್ರಿಲಿಯೆಂಟ್ ನೆಸ್ ನ್ನು ಮೆಚ್ಚಲೇಬೇಕು.

ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ದೇವಿ
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ದೇವಿ
ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರವಿಕುಮಾರ್ ಸುರಪುರ
ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರವಿಕುಮಾರ್ ಸುರಪುರ

ಹಗರಣದಲ್ಲಿ ಎಮ್ಮೆಲ್ಲೆ ಚೇಲಾಗಳ ಶಾಮೀಲು ಶಂಕೆ :ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿವಿಧ ಯೋಜನೆಗಳ ಪ್ರಯೋಜನ ಪಡೆಯುವ ಫಲಾನುಭವಿಗಳು ಆಯಾ ಭಾಗದ ಶಾಸಕರ ಶಿಫಾರಸ್ಸು ಅಥವಾ ಪರಿಚಯ ಪತ್ರವನ್ನು ಪಡೆದು ಸಲ್ಲಿಸುವುದು ವಾಡಿಕೆ.ಆದರೆ ಮೇಲ್ಕಂಡ ಹಗರಣದಲ್ಲಿ ಎಮ್ಮೆಲ್ಲೆ ಪಿಎಗಳು ಅವರ ಚೇಲಾಬಾಲಗಳ್ನು ಬುಕ್ ಮಾಡ್ಕೊಂಡು ಬ್ರೋಕರ್ ಗಳು ಎಮ್ಮೆಲ್ಲೆಗಳ ಶಿಫಾರಸ್ಸು ಪತ್ರಗಳನ್ನು ಪಡೆದಿರುವ ಸಾಧ್ಯತೆ ದಟ್ಟವಾಗಿವೆ.ತಮ್ಮದೇ ಕೆಲಸಗಳಲ್ಲಿ ಬ್ಯುಸಿ ಇರುವ ಶಾಸಕರು ತಮ್ಮ ಬೆಂಬಲಿಗರು-ಹಿಂಬಾಲಕರ ಮುಖ ನೋಡ್ಕೊಂಡು ಶಿಫಾರಸ್ಸು ಪತ್ರಗಳನ್ನು ಕೊಡ್ತಾರೆ.ಆದ್ರೆ ಇದನ್ನೇ ದಂಧೆ ಮಾಡಿಕೊಂಡಿರುವ ಚೇಲಾಬಾಲಗಳು ಬ್ರೋಕರ್ ಗಳ ಜೊತೆ ಪರ್ಸಂಟೇಜ್ ಫಿಕ್ಸ್ ಮಾಡ್ಕೊಂಡು ದಂಧೆ ನಡೆಸುತ್ತಿರುವ ಸಾಧ್ಯತೆಗಳಿವೆ.

ಬ್ರೋಕರ್ ಗಳು ಕೊಂಡೊಯ್ಯುವ ಶಿಫಾರಸ್ಸು ಪತ್ರಗಳನ್ನೇ ಮಾನದಂಡವಾಗಿಟ್ಟುಕೊಂಡು ಕೆಲ ಭ್ರಷ್ಟ ಹಾಗೂ ನಾಲಾಯಕ್ ಬ್ಯಾಂಕ್ ಗಳ ಮ್ಯಾನೇಜರ್ಸ್ ನಕಲಿ ಫಲಾನುಭವಿಗಳ ಹೆಸರಲ್ಲಿ ಖಾತೆ ತೆರೆದು ಅದಕ್ಕೆ ಅಮೌಂಟ್ ರಿಲೀಸ್ ಮಾಡ್ತಾರೆ.ಆದ್ರೆ ದುರಂತ ಎಂದ್ರೆ ಬ್ಯಾಂಕ್ ನ ಅಕೌಂಟ್ ಗೆ ಹಣ ಬೀಳ್ತಿದ್ದಂಗೆ ಆ ಹಣವನ್ನು ಬ್ರೋಕರ್ ಗಳು ಹಾಗು ಬ್ಯಾಂಕ್ ಮ್ಯಾನೇಜರ್ಸ್ ಹಂಚಿಕೊಳ್ತಾರೆ.

ನಮ್ಮ ಅಕೌಂಟ್ ಗೆ ಲಕ್ಷಾಂತರ ಬಂದು ಡ್ರಾನೂ ಆಗಿದೆ ಎನ್ನೋದು ಗೊತ್ತಾಗಿರೋದು ಪ್ರಕರಣ ಪೊಲೀಸ್ ಠಾಣೆ ಹತ್ತಿ, ಪೊಲೀಸ್ರು ವಿಚಾರಣೆಗೆ ಕರೆದಾಗ..ಹೇಗಿದೆ ನೋಡಿ ಬ್ರೋಕರ್ಸ್ ಹಾಗೂ ಬ್ಯಾಂಕ್ ಮ್ಯಾನೇಜರ್ಸ್ ಗಳ ಅಡ್ಜೆಸ್ಟ್ಮೆಂಟ್ ದಂಧೆ.ಹೀಗೆ ಪ್ರಕರಣ ಮಾಗಡಿ ರಸ್ತೆ ಪೊಲೀಸ್ರ ಕೈಗೆ ಬಂದ್ಮೇಲೆ ಪ್ರಕರಣ ಮತ್ತೊಂದು ಸ್ಪೋಟಕ ತಿರುವು ಪಡೆದಿದೆ.ಮತ್ತಷ್ಟು ಅಕ್ರಮಗಳು ಹೊರಬಿದ್ದಿದೆ.ಇನ್ನಷ್ಟು ತೀವ್ರಗೊಂಡ್ರೆ ಹಗರಣದೊಂದಿಗೆ ಥಳಕು ಹಾಕ್ಕೊಂಡಿರುವ ಭ್ರಷ್ಟ ಕೂಟದ ಮುಖವಾಡ ಕಳಚಬಹುದೇನೋ..

Spread the love
Leave A Reply

Your email address will not be published.

Flash News