ಆಗುಂಬೆಗಿದ್ದ “ದಕ್ಷಿಣ ಚಿರಾಪುಂಜಿ” ಪಟ್ಟ ಕೈ ತಪ್ಪುತ್ತಾ..ಕಳಚಿಕೊಂಡ ಪಟ್ಟ ಆಮಗಾಂವ್- ಹುಲಿಕಲ್ ಪಾಲಾಗುತ್ತಾ..?!

0

ಶಿವಮೊಗ್ಗ:ಇದು ಕೇವಲ ಮಲೆನಾಡಿನ ಶಿವಮೊಗ್ಗ ಜಿಲ್ಲೆಗರಿಗೆ ಮಾತ್ರವೇ ಅಲ್ಲ ಇಡೀ ರಾಜ್ಯಕ್ಕೆ ತೀವ್ರ ನಿರಾಸೆ ಹಾಗೂ ಬೇಸರ ತರಿಸುವ ಸಂಗತಿ.ಆಗುಂಬೆ ಮಳೆ ನೋಡೊಕ್ಕೆ ಚೆನ್ನ ಎಂದು ಹಂಬಲಿಸುತ್ತಿದ್ದವರು,ತುಡಿಯತ್ತಿದ್ದವರಿಗೆ ಇನ್ಮುಂದೆ ಆ ದೃಶ್ಯವೈಭವ ಕಾಣೊಕ್ಕೆ ಸಿಗೋದು ಅಪರೂಪ ಆಗ್ಬೋದು.. ಇಷ್ಟ್ ವರ್ಷಗಳವರೆಗೆ  ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಗಿದ್ದ  “ದಕ್ಷಿಣ ಚಿರಾಪುಂಜಿ” ಪಟ್ಟ ಕಳಚೋಗುವ ಆತಂಕ ಎದುರಾಗಿದೆ.ಅದರಿಂದ ಪಟ್ಟ ಕಳೆದುಕೊಳ್ಳೊಕ್ಕೆ ಮತ್ತಷ್ಟು ಪ್ರದೇಶಗಳು ಪೈಪೋಟಿಯಲ್ಲಿವೆ.

ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದಾದರೂ ಇದೆಯೆಂದರೆ ತಕ್ಷಣ ನೆನಪಾಗುತ್ತಿದ್ದುದು ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಾಡಿಕೆ ಮಳೆಯಲ್ಲಿ ಕಂಡುಬರುತ್ತಿರುವ ತೀವ್ರ ಇಳಿಕೆ ಇನ್ನು ಮುಂದೆ ಆಗುಂಬೆಗೆ ಇದ್ದ “ದಕ್ಷಿಣ ಚಿರಾಪುಂಜಿ” ಕೀರ್ತಿ,ಹೆಗ್ಗಳಿಕೆಯನ್ನು ಕಸಿದುಕೊಳ್ಳುವ ಆತಂಕವೊಂದನ್ನು ಸೃಷ್ಟಿಸಿದೆ ಎನ್ನುತ್ತಾರೆ ಪರಿಸರ ಹಾಗೂ ಹವಾಮಾನ ತಜ್ಞರು.

ಮಳೆಯ ವಿರಾಠ್ ಸ್ವರೂಪದ ಪರಿಚಯವಾಗಬೇಕೆಂದ್ರೆ ಆಗುಂಬೆಗೆ ಹೋಗಬೇಕು ಎನ್ನುವ ಮಾತಿತ್ತು. ಆದರೆ ಇನ್ಮುಂದೆ ಅಂತಹ ಚಿತ್ರಣ ಆಗುಂಬೆಯಲ್ಲಿ ಸಿಗೋದು ಕಷ್ಟ ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಆಗುತ್ತಿದ್ದಂತಹ ವಾಡಿಕೆ ಮಳೆ ತೀವ್ರ ತಗ್ಗಿದೆ ಮಾನವನ ಅತಿಯಾದ ಹಸ್ತಕ್ಷೇಪದಿಂದಾಗಿ ಮಳೆ ತನ್ನ ದೃಶ್ಯ ವೈಭವ ಕಳೆದುಕೊಳ್ಳುತ್ತಿದೆ.ಇಲ್ಲಿನ ಮಳೆ ಜೊತೆಗೆ ಹಸಿರಚ್ಛಾದಿತ ವಾತಾವರಣ,ಕಣ್ಮನ ಸೆಳೆಯುವ ಸೂರ್ಯಾಸ್ತ ಎಲ್ಲವನ್ನೂ ನೋಡಲು ರಾಜ್ಯದ ನಾನಾ ಕಡೆಗಳಿಂದ ಜನ ಬರುತ್ತಿದ್ದರು. ಅದನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದ್ರೆ ಆ ಸೌಂದರ್ಯ ಇನ್ನುಮುಂದೆ ಇತಿಹಾಸದ ಪುಟ ಸೇರಲಿದೆಯೆ ಎನ್ನುವ ಆತಂಕವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ಪೈಪೋಟಿಯಲ್ಲಿರುವ ಪ್ರದೇಶಗಳ್ಯಾವು…

ಆಗುಂಬೆಯಿಂದ ಆ ಪಟ್ಟವನ್ನು ಕಸಿದುಕೊಳ್ಳೊಕ್ಕೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಎರಡು ರಮ್ಯರಮಣೀಯ ಪ್ರದೇಶಗಳು ಸೇರಿದಂತೆ ಇನ್ನಷ್ಟು ಪ್ರದೇಶಗಳು ಪೈಪೋಟಿಗೆ ಬಿದ್ದಿವೆ.ಆ ಪೈಕಿ ಹೊಸನಗರ ತಾಲೂಕಿನ ಹುಲಿಕಲ್, ಮಾಸ್ತಿಕಟ್ಟೆ ಹಾಗೂ ಉತ್ತರ ಕನ್ನಡದ  ಖಾನಾಪುರ ತಾಲ್ಲೂಕಿನ ಅಮಗಾಂವ್ , ಜೋಯಿಡಾ ತಾಲ್ಲೂಕಿನ ಕ್ಯಾಸಲ್ ರಾಕ್ ಪ್ರಮುಖವಾಗಿವೆ. ಇನ್ನುಳಿದಂತೆ ಕಾರ್ಕಳ ತಾಲೂಕಿನ ಅಜೆಕಾರು ಕೂಡ ಆಗುಂಬೆಯ ಪಟ್ಟಿಯನ್ನು ಕಸಿದುಕೊಳ್ಳುವ ಪಟ್ಟಿಯಲ್ಲಿದೆ.ಹುಲಿಕಲ್, ಮಾಸ್ತಿಕಟ್ಟೆ, ಕ್ಯಾಸಲ್ ರಾಕ್ ಪ್ರದೇಶಗಳ ಪೈಕಿ ನೋಡುವುದಾದರೆ ಅತಿ ಹೆಚ್ಚಿನ ಮಳೆ ಬಿದ್ದಿರುವ ವಂತದ್ದು ಖಾನಾಪುರ ತಾಲ್ಲೂಕಿನ ಆಮಗಾಂವ ನಲ್ಲಿ. 2010 ರಲ್ಲಿ1068 ಮಿಮಿ ನಷ್ಟು ಮಳೆ ಈ ಭಾಗದಲ್ಲಿ ಆಗಿರೋದ್ರಿಂದ ಆಗುಂಬೆಯ ಪಟ್ಟವನ್ನು ಬಹುತೇಕ ಅದೇ ಕಸಿದುಕೊಳ್ಳುವ ಸಾಧ್ಯತೆಗಳಿವೆ.ಅಷ್ಟೇ ಅಲ್ಲ, 1990ರಿಂದ 2013ರವರೆಗೆ1995, 1996, 2003, 2005 ಮತ್ತು 2008ರಲ್ಲಿ ಬಿಟ್ಟರೆ ಉಳಿದ 19 ವರ್ಷ ಅತೀ ಹೆಚ್ಚು ಮಳೆಯಾಗಿರುವ ಹುಲಿಕಲ್‌ ಕೂಡ ಪಟ್ಟಕ್ಕೇರುವ ಸನಿಹದಲ್ಲೇ ಇದೆ.

ಈ ದುರಂತಕ್ಕೆ ಕಾರಣಗಳೇನು..

ಅನೇಕ ದಶಕಗಳಿಂದ ಆಗುಂಬೆಗಿದ್ದ ದಕ್ಷಿಣದ ಚಿರಾಪುಂಜಿ ಕೀರ್ತಿ, ಹೆಗ್ಗಳಿಕೆ, ಪ್ರತಿಷ್ಠೆ ಎಲ್ಲವೂ ಕಳಚಿ ಹೋಗಲು ಈ ಭಾಗದಲ್ಲಿ ಆಗುತ್ತಿದ್ದಂತಹ ವ್ಯಾಪಕ ಮಳೆಯಲ್ಲಿನ ಕೊರತೆಯೇ ಕಾರಣ. ಹಾಗೆಯೇ ಈ ಭಾಗದ ಲ್ಲಿದ್ದ ಕಾಡು ವ್ಯಾಪಕವಾಗಿ ನಾಶವಾಗುತ್ತಿದೆ. ಅರಣ್ಯ ಒತ್ತುವರಿ ಹಾಗೂ ಗಿಡಮರಗಳು ಧರಾಶಹಿ ಯಾಗುತ್ತಿವೆ. ಕಾಡಿನಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚುತ್ತಿದೆ. ವಸತಿ ಮತ್ತು ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತಿವೆ. ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್  ಪ್ರಮಾಣ ಹೆಚ್ಚುತ್ತಿದೆ.ಇದರಿಂದಾಗಿ ಕಾಡಿನಲ್ಲಿ ಉಷ್ಣಾಂಶದ ಪ್ರಮಾಣ ಹೆಚ್ಚುತ್ತಿದೆ ಎನ್ನುವುದು ವಿಜ್ಞಾನಿಗಳ ಆತಂಕ.

ತಜ್ಞರು ಹೇಳುವಂತೆ ಆಗುಂಬೆಯ ವ್ಯಾಪ್ತಿಯಲ್ಲಿ ಇದ್ದಂತಹ ದಟ್ಟ ಕಾನನ ನಗರೀಕರಣದ ಕಾರಣಕ್ಕೆ ಸಂಪೂರ್ಣ ಕ್ಷೀಣಿಸುತ್ತಿದೆ. ಇದರಿಂದಾಗಿ ಆಗುಂಬೆಯಲ್ಲಿ ಕೇಂದ್ರೀಕೃತವಾಗುತ್ತಿದೆ ಮೋಡಗಳು ತೀರ್ಥಹಳ್ಳಿ ತಾಲ್ಲೂಕಿನ ಆಚೆಗೆ ಧಾವಿಸಲಾರಂಭಿಸಿದೆ.ಆಗುಂಬೆಯಲ್ಲಿ ಮೋಡ ದಟ್ಟವಾಗಿ ಕಂಡು ಬಂದರೂ ಕೂಡ ಮಳೆಯಾಗುತ್ತಿಲ್ಲ.ಪ್ರತಿ ವರ್ಷ ಜೂನ್ –ಆಗಸ್ಟ್ ನಲ್ಲಿ ಸುರಿಯುತ್ತಿದ್ದ ವಾರ್ಷಿಕ ವಾಡಿಕೆ ಮಳೆಯಲ್ಲಿ ಈ ಬಾರಿ ಅರ್ಧದಷ್ಟು ಮಳೆಯೂ ಆಗುತ್ತಿಲ್ಲ ಎನ್ನುತ್ತಾರೆ ಪರಿಸರ ತಜ್ಞರು.

ಹುಲಿಕಲ್ ಪೈಪೋಟಿಯಲ್ಲಿ: ದೇಶಾದ್ಯಂತ ಸುರಿಯುವ ಮಳೆಯನ್ನು ಅಧಿಕೃತವಾಗಿ ದಾಖಲಿಸುವ ಪೂನಾದ ಭಾರತೀಯ ಹವಾಮಾನ ಇಲಾಖೆ ವರದಿ ಪ್ರಕಾರ, 1941ರಿಂದ 1990ರ ನಡುವಿನ ವಾಡಿಕೆ ಮಳೆ ಆಗುಂಬೆ ಯಲ್ಲಿ 7,724 ಮಿ.ಮೀ. ಇದೆ.ಅದೇ ಹುಲಿಕಲ್‌ನಲ್ಲಿ 8007 ಮಿ.ಮೀ. ಇದೆ. ಆದರೆ, ರಾಜ್ಯದ ಪಠ್ಯಕ್ರಮಗಳಲ್ಲಿ, ಅಧಿಕೃತ ಪ್ರಕಟಣೆಗಳಲ್ಲಿ ಮಾತ್ರ ಹುಲಿಕಲ್ ಅನ್ನು ಬದಿಗಿರಿಸಿ ಆಗುಂಬೆಯನ್ನೇ ದಕ್ಷಿಣದ ಚಿರಾಪುಂಜಿ ಎಂದು ಮುದ್ರಿಸಲಾಗುತ್ತಿದೆ.

ವಾಡಿಕೆ ಮಳೆ ಅಷ್ಟೇ ಅಲ್ಲ, ಹಲವು ವರ್ಷಗಳ ಮಳೆ ಅಂಕಿ ಅಂಶವನ್ನು ಗಮನಿಸಿದಾಗಲೂ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಕೆಲ ವರ್ಷ ಬಿಟ್ಟರೆ ಉಳಿದೆಲ್ಲ ವರ್ಷಗಳಲ್ಲೂ ಹುಲಿಕಲ್‌ನಲ್ಲೇ ಅಧಿಕ ಮಳೆಯಾಗಿದೆ. 1990ರಿಂದ 2013ರವರೆಗೆ1995, 1996, 2003, 2005 ಮತ್ತು 2008ರಲ್ಲಿ ಬಿಟ್ಟರೆ ಉಳಿದ 19 ವರ್ಷ ಹುಲಿಕಲ್‌ನಲ್ಲೇ ಹೆಚ್ಚು ಮಳೆಯಾಗಿದೆ. 2008ರಿಂದ 2013ರವರೆಗಿನ ಮಳೆ ದಿನಗಳು ಸಹ ಹುಲಿಕಲ್‌ನಲ್ಲೇ ಹೆಚ್ಚಾಗಿವೆ. ಈ ವರ್ಷ ಜುಲೈ ಅಂತ್ಯದವರೆಗೂ ಇದೇ ರೀತಿಯಾಗಿದೆ.ಆದ್ರೆ ಮಾಹಿತಿಯನ್ನು ಸರಿಯಾಗಿ ಕೊಡದೇ ದಕ್ಷಿಣದ ಚಿರಾಪುಂಜಿ ಆಗುಂಬೆ ಎಂದೇ ಬಿಂಬಿಸುತ್ತಾ ಬರಲಾಗಿದೆ ಎನ್ನುತ್ತಾರೆ ಪರಿಸರ ತಜ್ಞರಾದ ಪ್ರಮೋದ್ ಹೆಗ್ಡೆ ಮೇಗರವಳ್ಳಿ ಹಾಗು ಹುಲಿಕಲ್ ಅನಂತಮೂರ್ತಿ ಶೆಣೈ

ಅದೇನೇ ಆಗಲಿ,ಆಗುಂಬೆ ಕಾಪಾಡಿಕೊಂಡು ಬಂದಿದ್ದ ಘನತೆಯನ್ನು ಮಾನವನ ಹಸ್ತಕ್ಷೇಪ ಹಾಳು ಮಾಡಿದೆ.ಇದು ಎಚ್ಚರಿಕೆಯ ಕರೆಗಂಟೆ..ಎಚ್ಚೆತ್ತುಕೊಂಡ್ರೆ ಪರಿಸರ ಉಳಿಯೋದಷ್ಟೇ ಅಲ್ಲ ಮಳೆ-ಬೆಳೆ ಕೂಡ ಸರಿಯಾಗಿ ಆಗುತ್ತೆ.ಇಲ್ಲವಾದ್ರೆ ಪ್ರಕೃತಿಯ ಶಾಪಕ್ಕೆ ಮಾನವ ಸಂಕುಲ ತುತ್ತಾಗಬೇಕಾಗ್ತದೆ ಅಷ್ಟೇ..

ಆಗುಂಬೆಯಲ್ಲಿ ವಾಡಿಕೆ ಮಳೆಯಲ್ಲಾದ ಏರುಪೇರಿನ ಗ್ರಾಫ್

2011- 7921 ಮಿ.ಮೀ

2012- 6933 ಮಿ.ಮೀ

2013- 8770 ಮಿ.ಮೀ

2014- 7,917 ಮಿ.ಮೀ

2015- 5518 ಮಿ.ಮೀ

2016- 6449 ಮಿ.ಮೀ

2017- 6311 ಮಿ.ಮೀ

2018- 8208 ಮಿ.ಮೀ

2019- 4963ಮಿ.ಮೀ

2020-3683 ಮಿ.ಮೀ 

Spread the love
Leave A Reply

Your email address will not be published.

Flash News