ಸರ್ಕಾರ ಕೊಡೊಲ್ಲ..! ಇವ್ರ್ ಬಿಡೊಲ್ಲ…!ಸ್ಟ್ರೈಕ್  ಮಾಡೋದ್ ತಪ್ಪಲ್ಲಾ..ಡಿಸೆಂಬರ್ 8 ರಂದು ಅರಬೆತ್ತಲೆ ಪ್ರತಿಭಟನೆಗೆ  ಸಾರಿಗೆ ನೌಕರರ ನಿರ್ಧಾರ..

0

ಬೆಂಗಳೂರು:ರಾಜ್ಯ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಜಟಾಪಟಿಯ ಪರಿಸ್ಥಿತಿ ಇದು. ಸರ್ಕಾರಿ ನೌಕರರ ಮಾನ್ಯತೆ ನೀಡಬೇಕೆಂದು ೧.೨೫ ಲಕ್ಷದಷ್ಟು ಸಾರಿಗೆ ನೌಕರರು ತರಹೇವಾರಿ ಹೋರಾಟ ಮಾಡುತ್ತಾ ಬಂದಿದ್ದರೂ ಕೇವಲ ಭರವಸೆಗಳಲ್ಲೇ ಕಾಲ ಕಳೆದ ಸರ್ಕಾರ. ಈಗ ಮಾನ್ಯತೆ ನೀಡಲು ಸಾಧ್ಯವಿಲ್ಲ ಎನ್ನುವ ನಿಲುವನ್ನು ವ್ಯಕ್ತಪಡಿಸಿರುವುದು ಸಾರಿಗೆ ನೌಕರರನ್ನು ಮತ್ತಷ್ಟು ಆಕ್ರೋಶಕ್ಕೆ ಈಡು ಮಾಡಿದೆ. ಇದರ ಭಾಗವಾಗಿಯೇ ಡಿಸೆಂಬರ್ 8 ರಂದು ಸಾರಿಗೆ ನೌಕರರು ಬೆಂಗಳೂರಿನಲ್ಲಿ ಅರೆಬೆತ್ತಲೆ ಮೆರವಣಿಗೆ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಲಿದ್ದಾರೆ.

ಸರ್ಕಾರಿ ನೌಕರರಾದರೆ, ಪಿಂಚಣಿ, ಭತ್ಯೆ, ವೇತನದಲ್ಲಿ ಸಾಕಷ್ಟು ಪ್ರಯೋಜನ ಸಿಗುತ್ತದೆ ಎನ್ನುವ ಅಭಿಪ್ರಾಯ ಸಾರಿಗೆ ನೌಕರ ರದು. ಆದರೆ ಕಾರ್ಪೊರೇಷನ್ ಆಗಿರುವ ೪ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಲು ತಾಂತ್ರಿಕವಾಗಿ ಸಾಧ್ಯವಿಲ್ಲ ಎನ್ನುವುದನ್ನು ಸಾಕಷ್ಟು ಸಂದರ್ಭಗಳಲ್ಲಿ ಮನವರಿಕೆ ಮಾಡಿಕೊಟ್ಟರೂ ರಚ್ಚೆ ಬಿಡದ ಮಕ್ಕಳಂತೆ ಸಾರಿಗೆ ನೌಕರರು ಮಾತ್ರ ನಾವು ಸಾಯೋದರೊಳಗೆ ಸರ್ಕಾರಿ ನೌಕರರಾಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಆದರೆ ತಾಂತ್ರಿಕವಾಗಿ ಇದು ಸಾಧ್ಯವಿಲ್ಲ ಎನ್ನುವ ಮಾತನ್ನು ಸರ್ಕಾರ ಆರಂಭದಲ್ಲಿ ಮನವರಿಕೆ ಮಾಡಿಕೊಡಲು ವಿಫಲವಾದದ್ದೇ ಹೋರಾಟ ನಾನಾ ತಿರುವುಗಳನ್ನು ಪಡೆಯಲು ಕಾರಣವಾಯಿತು. ಸಾರಿಗೆ ನೌಕರರು ಸರ್ಕಾರದ ಮುಂದೆ ಬೇಡಿಕೆ ಇಟ್ಟಾಗಲೇ ಅದು ಸಾಧ್ಯವಿಲ್ಲ ಎನ್ನುವುದನ್ನು ಸರ್ಕಾರ ಹೇಳಬಹುದಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ಸತ್ಯವನ್ನು ಮರೆಮಾಚಿದ್ದಲ್ಲದೆ, ನೌಕರರನ್ನು ಯಾಮಾರಿಸಲು ಒಂದು ಸಮಿತಿಯನ್ನು ಕೂಡ ರಚಿಸಿತು. ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಲು ಸಾಧ್ಯವಿಲ್ಲ.

ಇವತ್ತು ಒಂದು ನಿಗಮದ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಿದರೆ ನಾಳೆ ಇನ್ನಷ್ಟು ಕಾರ್ಪೊರೇಷನ್ ನೌಕರರು ಸಹ ಇದೇ ಬೇಡಿಕೆಯನ್ನು ಮುಂದೊಡ್ಡಬಹುದು. ಎಲ್ಲರನ್ನೂ ಸರ್ಕಾರಿ ನೌಕರರನ್ನಾಗಿಸಿದರೆ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಹೊರೆಯಾಗಬಹುದು ಎನ್ನುವುದು ಸರ್ಕಾರಕ್ಕೆ ಗೊತ್ತಿತ್ತು.ಆದರೂ ನಿಮ್ಮನ್ನು ಸರ್ಕಾರಿ ನೌಕರರನ್ನಾಗಿಸಲು ಸಾಧ್ಯತೆಗಳಿವೆಯೇ ಎನ್ನುವುದನ್ನು ಸಮಾಲೋಚಿಸಿ ಅಂತಿಮ ನಿರ್ಧಾರಕ್ಕೆ ಬರಲು ಸಮಿತಿ ರಚಿಸಲಾಗಿದೆ ಎಂದು ಹೇಳಿತ್ತು.ಇದು ನಿರೀಕ್ಷೆ ಬತ್ತಿದ್ದ ಕಣ್ಣುಗಳಲ್ಲಿ ಸರ್ಕಾರಿ ನೌಕರಿ ಮಾನ್ಯತೆ ಕನಸನ್ನು ಬಿತ್ತಿ ಅವರ ಭಾವನೆಗಳ ಜೊತೆಗೆ ಆಟವಾಡಿದ್ದೂ ಸುಳ್ಳಲ್ಲ.

ಸರ್ಕಾರದಿಂದ ರಚಿತವಾದ ಸಮಿತಿ ಅಂತಿಮವಾದ ವರದಿಯನ್ನು ಇನ್ನೂ ನೀಡದಿದ್ದರೂ ಮಧ್ಯಂತರ ವರದಿಯಲ್ಲಿ ಸರ್ಕಾರಿ ನೌಕರರ ಮಾನ್ಯತೆ ನೀಡುವುದು ಅಸಾಧ್ಯ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎನ್ನಲಾಗಿದೆ. ಇದು ಸರ್ಕಾರಿ ನೌಕರರಿಗೆ ಮರ್ಮಾಘಾತ ವನ್ನುಂಟು ಮಾಡಿದೆ. ಸರ್ಕಾರ ಹೇಳಿದ ಸುಳ್ಳಿನ ವಿರುದ್ಧ ಈ ಕ್ಷಣದವರೆಗೂ ಹೋರಾಟ ಮಾಡುತ್ತಲೇ ಬಂದಿರುವ ಸಾರಿಗೆ ನೌಕರರ ಸಂಘಟನೆಗಳಲ್ಲಿ ಸರ್ಕಾರಿ ನೌಕರ ಮಾನ್ಯತೆಯ ಆಶಾವಾದ ಕುಂದಿಲ್ಲ. ಇದರ ಭಾಗವಾಗಿಯೇ ಡಿಸೆಂಬರ್ 8 ರಂದು ಅರೆಬೆತ್ತಲೆ ಮೆರವಣಿಗೆ ಕೈಗೊಂಡಿದ್ದು ರೈಲ್ವೇ ನಿಲ್ದಾಣದಿಂದ ಸಾವಿರಾರು ಸಂಖ್ಯೆಯಲ್ಲಿ ಅಂದು ಸಾರಿಗೆ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೋರಾಟದ ನೇತೃತ್ವ ವಹಿಸಲಿದ್ದಾರಂತೆ.ಸರ್ಕಾರಿ ನೌಕರರ ಮಾನ್ಯತೆ ನೀಡುವುದಕ್ಕೆ ಸರ್ಕಾರ ಏಕೆ ಮೀನಾಮೇಷ ಎಣಿಸ್ತಿದೆ.ಮಾನ್ಯತೆ ಕೊಡೊಕ್ಕೆ ಸಾಧ್ಯವೇ ಇಲ್ಲ ಎನ್ನುವ ಸತ್ಯವನ್ನು ಸರ್ಕಾರ ಅವತ್ತೇ ಹೇಳಿದ್ದರೆ ಸಮಸ್ಯೆ ಇಷ್ಟು ಗಂಭೀರವಾಗುತ್ತಿರಲಿಲ್ಲ.ಸರ್ಕಾರಕ್ಕೆ ಹಿಡಿಶಾಪ ಹಾಕಿ ನೌಕರರು ಸುಮ್ಮನಾಗುತ್ತಿದ್ದರು.ಆದ್ರೆ ಸತ್ಯ ಮರೆಮಾಚಿ ಇವತ್ತು ಅವರ ಮುಗ್ಧ ಮನಸು ಹಾಗೂ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿರುವುದು ಎಷ್ಟು ಸರಿ..ನೌಕರರು ಕೇಳುತ್ತಿರುವ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲೇಬೇಕು,ನೌಕರರು ಈ ನಿಟ್ಟಿನಲ್ಲಿ ಯಾವುದೇ ರೀತಿಯ ಹೋರಾಟ ಮಾಡಿದರೂ ಅದನ್ನು ರೈತ ಸಂಘ ಬೆಂಬಲಿಸುತ್ತದೆ  ಎಂದಿದ್ದಾರೆ.

ಆದರೆ ಪ್ರಶ್ನೆ ಇರೋದು ಸರ್ಕಾರಿ ನೌಕರರ ಮಾನ್ಯತೆಯನ್ನು ನೀಡಲು ಸುತಾರಾಂ ಒಪ್ಪದ ಸರ್ಕಾರ ಈ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆಗೆ ಸೊಪ್ಪಾಕೀತೆ…?ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಆರಂಭದಿಂದಲೂ ಕನ್ನಡ ಫ್ಲಾಶ್ ನ್ಯೂಸ್ ಬೆಂಬಲಿಸುತ್ತಾ ಬಂದಿದೆ. ಡಿಸೆಂಬರ್ 8 ರ ಪ್ರತಿಭಟನೆಗೂ ನೈತಿಕ ಬೆಂಬಲ ಸೂಚಿಸುತ್ತದೆ.  

ಸರ್ಕಾರ ಕೊಡೊಲ್ಲ..! ಇವ್ರ್ ಬಿಡೊಲ್ಲ…!ಸ್ಟ್ರೈಕ್  ಮಾಡೋದ್ ತಪ್ಪಲ್ಲಾ..ಡಿಸೆಂಬರ್ 8 ರಂದು ಅರಬೆತ್ತಲೆ ಪ್ರತಿಭಟನೆಗೆ  ಸಾರಿಗೆ ನೌಕರರ ನಿರ್ಧಾರ..

Spread the love
Leave A Reply

Your email address will not be published.

Flash News