ಶಿವಮೊಗ್ಗ ಪೊಲೀಸ್ರ ಮಿಂಚಿನ “ಆಪರೇಷನ್ ರೇಪಿಸ್ಟ್” ಸಕ್ಸೆಸ್- ಅಪ್ರಾಪ್ರೆಯನ್ನು ಹುರಿದು ಮುಕ್ಕಿದ್ದವರ ಹೆಡೆಮುರಿಕಟ್ಟಿದ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ..

0

ಶಿವಮೊಗ್ಗ:ಎಲ್ಲಾ ಬೇಸರ-ನೋವಿನ ನಡುವೆಯೂ  ಒಂದು ಸಮಾಧಾನ.ಅಪ್ರಾಪ್ತೆ ಮೇಲೆ ಪೈಶಾಚಿಕ ವಾಗಿ ಅತ್ಯಾಚಾರ ಎಸಗಿದ್ದ ಕಾಮಾಂಧರ ಬಂಧನವಾಗಿದೆ.

ಇಡೀ ಜಿಲ್ಲೆ ಕೋಮು ದಳ್ಳುರಿಯ ಕಾರಣಕ್ಕೆ 144 ಸೆಕ್ಷನ್‌ನಲ್ಲಿ ಬಂಧಿಯಾಗಿದ್ದರೆ, ಆ ನಿಶಾಚರ ರಾತ್ರಿ ಯಲ್ಲಿ ಅಪ್ರಾಪ್ತೆಯನ್ನು ಕರೆದೊಯ್ದು ಅತ್ಯಾಚಾರ ವೆಸಗಿದ ಕಾಮಾಂಧರ ಕೃತ್ಯಕ್ಕೆ ನಾಗರಿಕರು ಹಾಕುತ್ತಿರುವ ಹಿಡಿ ಶಾಪ ಇನ್ನೂ ನಿಂತಿಲ್ಲ. ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಆದಂತಹ ಗಲ್ಲು ಶಿಕ್ಷೆಯೇ ಅಪ್ರಾಪ್ರೆಯ ಹುರಿದು ಮುಕ್ಕಿದ ನಾಲ್ವರು ಕಾಮಾಂಧರಿಗೂ ಆಗಬೇಕು. ಅದು ಇತರರಿಗೂ ಪಾಠವಾಗಬೇಕು. ಹೆಣ್ಮಕ್ಕಳ ಮೇಲೆ ಕಾಕದೃಷ್ಟಿ ಬೀರಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಬೇಕು ಎಂಬೆಲ್ಲಾ ಮಾತುಗಳು ಜಿಲ್ಲೆಯಲ್ಲಿ ಪ್ರತಿಧ್ವನಿಸುತ್ತಲೇ ಇವೆ.

ಈ ನಡುವೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪ್ರಕರಣದ ಆರೋಪಿಗಳನ್ನು ಹೆಡೆಮುರಿ ಕಟ್ಟಿ ತಂದಿರುವ ಪೊಲೀಸರ ಕಾರ್‍ಯವೈಖರಿಗೆ ಜನತೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿರುವುದು ಸಮಾಧಾನಕರ.ಸಭ್ಯತೆಗೆ ಹೆಸರಾದ ಶಿವಮೊಗ್ಗ ಜಿಲ್ಲೆಯನ್ನೇ ಕಳಂಕಿತ ದೃಷ್ಟಿಯಲ್ಲಿ ನೋಡುವಂತಹ ಸನ್ನಿವೇಶವನ್ನು ಸೃಷ್ಟಿಸಿದ ಗ್ಯಾಂಗ್‌ರೇಪ್ ಪ್ರಕರಣವನ್ನು ಎಲ್ಲರಿಗಿಂತ ಹೆಚ್ಚು ಗಂಭೀರವಾಗಿ ತೆಗೆದುಕೊಂಡಿದ್ದು ಶಿವಮೊಗ್ಗದ ಪೊಲೀಸರು. ಕರ್ಫ್ಯೂ ಜಾರಿಯಲ್ಲಿರುವಾಗಲೇ ಈ ಘಟನೆ ನಡೆದಂತಹದ್ದು ಪೊಲೀಸರ ಬಗ್ಗೆ ನಾಗರಿಕರಲ್ಲಿ ನಂಬಿಕೆ ಕಳೆದುಹೋಗುವಂತೆ ಮಾಡಿದ್ದು ಅಷ್ಟೇ ಸತ್ಯ.

ಜಿಲ್ಲೆಯ ಇತಿಹಾಸದಲ್ಲಿ ಹಿಂದೆಂದೂ ಆಗದಿದ್ದ ಅಚಾತುರ್ಯವೊಂದು ಕರ್ಫ್ಯೂ ವೇಳೆಯಲ್ಲೇ ನಡೆದಿದ್ದರಿಂದ ಸಹಜವಾಗೇ ಪೊಲೀಸರ ಮೇಲೆ ದೊಡ್ಡ ಮಟ್ಟದ ಒತ್ತಡ ನಿರ್ಮಾಣವಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಘಟನೆ ತಮ್ಮ ಅರಿವಿಗೆ ಬರುತ್ತಿದ್ದಂತೆ ತಕ್ಷಣಕ್ಕೆ ಕಾರ್‍ಯಪ್ರವೃತ್ತರಾಗಿ ಅಧಿಕಾರಿಗಳ ಸಭೆಯನ್ನು ಕರೆದು `ಬೈ ಹುಕ್ ಆರ್ ಕುಕ್’ ಕಾಮಾಂಧರನ್ನು ಹಿಡಿದು ತರಲೇಬೇಕೆನ್ನುವ ಫರ್ಮಾನನ್ನು ಹೊರಡಿಸಿದ್ದರು.

ತಮ್ಮ ಮೇಲಾಧಿಕಾರಿಯ ಸಿಟ್ಟು, ಸೆಡವನ್ನು ಹಾಗೂ ಅವರ ಮೇಲೆ ಸೃಷ್ಟಿಯಾಗಿದ್ದ ಒತ್ತಡವನ್ನು ಅರ್ಥಮಾಡಿಕೊಂಡ ದೊಡ್ಡಪೇಟೆ ಪೊಲೀಸರು ತಮ್ಮ ಬೆಲ್ಟ್ ಬಿಗಿ ಮಾಡಿಕೊಂಡು, ತಕ್ಷಣಕ್ಕೆ ಕಾರ್‍ಯಪ್ರವೃತ್ತರಾದರು. ಈ ಕಾರ್‍ಯಾಚರಣೆಯ ಮುಂದಾಳತ್ವ ವಹಿಸಿದಂತವರೇ ಸೂಪರ್ ಕಾಪ್ ಅಭಯ ಪ್ರಕಾಶ್ ಸೋಮನಾಳ್. ಅಂದ ಹಾಗೆ ಅಭಯಪ್ರಕಾಶ್ ಸೋಮನಾಳ್ ತಮ್ಮ ಕಾರ್‍ಯದಕ್ಷತೆಗೆ ಮುಖ್ಯಮಂತ್ರಿಗಳ ಪದಕವನ್ನು ಪಡೆದ ಖಡಕ್ ಅಧಿಕಾರಿ.

ಸೂಪರ್ ಕಾಪ್ ಅಭಯ ಪ್ರಕಾಶ್ ಸೋಮನಾಳ್.
ಕಾಮಾಂಧರನ್ನು ಬಂಧಿಸಿದ ಸೂಪರ್ ಕಾಪ್ ಅಭಯ ಪ್ರಕಾಶ್ ಸೋಮನಾಳ್.
ಎಸ್.ಪಿ. ಶಾಂತರಾಜ್
ಎಸ್.ಪಿ. ಶಾಂತರಾಜ್

ಘಟನೆಯ ಎಲ್ಲಾ ಮಾಹಿತಿಗಳನ್ನು ಕ್ರೋಢೀಕರಿಸಿ ಬಾಲಕಿ ಕೊಟ್ಟ ಕೆಲವು ಸುಳಿವನ್ನು ಆಧರಿಸಿ ತಮ್ಮ ಕಾರ್‍ಯಾಚರಣೆಯನ್ನು ಆರಂಭಿಸಿಯೇ ಬಿಟ್ಟರು. ಠಾಣೆಯ ಸಿಬ್ಬಂದಿ ಕೂಡ ತಮ್ಮ ಅಧಿಕಾರಿಗೆ ಸಾಥ್ ಕೊಟ್ಟರು. ತಮ್ಮ ತಲೆಯಲ್ಲಿ ಗಿರಕಿ ಹೊಡೆಯಲಾರಂಭಿಸಿದ ಸೂತ್ರ ಹಾಗೂ ಲೆಕ್ಕಾಚಾರಗಳನ್ನು ತೂಗಿ ಅಳೆದು, ಕೆಲವೇ ಗಂಟೆಗಳಲ್ಲಿ ತಲೆಮರೆಸಿಕೊಂಡಿದ್ದ ಮೆಗ್ಗಾನ್ ಆಸ್ಪತ್ರೆಯ ಅರೆಕಾಲಿಕ ಸಿಬ್ಬಂದಿ ಮನೋಜ್ ಹಾಗೂ ಇತರ ಮೂವರನ್ನು ಹೆಡೆಮುರಿ ಕಟ್ಟಿ ಕರೆತರುವಲ್ಲಿ ಅಭಯ್ ಪ್ರಕಾಶ್ ಯಶಸ್ವಿಯಾದರು.

ಪ್ರಕರಣವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ಕಾರ್‍ಯಾಚರಣೆಗಿಳಿದ ಅಭಯ್ ಪ್ರಕಾಶ್ ಸೋಮನಾಳ್ ಅವರ ಮಿಂಚಿನ ಕಾರ್‍ಯಾಚರಣೆಗೆ ಎಸ್.ಪಿ. ಶಾಂತರಾಜ್ ಷಹಬ್ಬಾಸ್‌ಗಿರಿ ನೀಡಿದ್ದಾರೆ. ಎಲ್ಲಕ್ಕಿಂತ ಶಿವಮೊಗ್ಗದ ಜನತೆ ಕಾಮಾಂಧರನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಸೋಮನಾಳ್ ಅವರನ್ನು ಅಭಿನಂದಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಸಂದರ್ಭದಲ್ಲಿ ಸಹಜವಾಗೇ ಜನತೆ ಪೊಲೀಸರ ಮೇಲೆ ನಂಬಿಕೆ ಕಳೆದುಕೊಳ್ಳುವ ಆತಂಕ ಎದುರಾಗುತ್ತಿದೆ.

ಇಂತಹುದ್ದರ ನಡುವೆ ಅಭಯ್ ಪ್ರಕಾಶ್ ಸೋಮನಾಳ್ ಅವರಂತಹ ಖಡಕ್ ಹಾಗೂ ಸೂಪರ್ ಕಾಪ್‌ಗಳು ಭರವಸೆಯಾಗಿ ಕಾಣಿಸುತ್ತಾರೆ ಎಂದು ಶಿವಮೊಗ್ಗದ ಜನತೆ ಮಾತನಾಡಿಕೊಳ್ಳುತ್ತಿದೆ.ಆಕ್ರೋಶದಿಂದ ಕುದಿಯುತ್ತಿರುವ ಶಿವಮೊಗ್ಗದ ಜನತೆ ಈ ರೇಪಿಸ್ಟ್ ಗಳ ಅರೆಸ್ಟ್ ನಿಂದ ಸ್ವಲ್ಪ ನಿಟ್ಟುಸಿರುಬಿಟ್ಟಿದ್ದಾರೆ.ಆದ್ರೆ ನಿರ್ಭಯಾ ಅತ್ಯಾಚಾರಿಗಳಂತೆ ಇವರಿಗೂ ಗಲ್ಲಾಗಲೇಬೇಕೆನ್ನುವ ಬಿಗಿಪಟ್ಟು ಮಾತ್ರ ಸಡಿಲಿಸಿಲ್ಲ.. 

Spread the love
Leave A Reply

Your email address will not be published.

Flash News