ಈ ಇಬ್ಬರು ಸರ್ಕಾರಿ ನೌಕರರಿಗೆ ಅವರ ದಕ್ಷತೆ-ಪ್ರಾಮಾಣಿಕತೆಯೇ ಮುಳುವಾಯ್ತಾ?..ಕೋರಿಕೆಗೆ ಸರ್ಕಾರ ಕಿವುಡಾಯ್ತ.. ನ್ಯಾಯಕ್ಕೆ ಆಗ್ರಹಿಸಿ ರಸ್ತೆಗಿಳಿಯಲು ನಿರ್ಧಾರ

0

ಬೆಂಗಳೂರು:ಬಹುತೇಕ ಎಲ್ಲಾ ರಂಗಗಳು ಅಕ್ರಮ-ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಸಂದರ್ಭದಲ್ಲಿ ದಕ್ಷತೆ ಹಾಗೂ  ಪ್ರಾಮಾಣಿಕತೆಯನ್ನು ದುರ್ಬೀನ್ ಹಾಕ್ಕೊಂಡ್ ಹುಡುಕಬೇಕಾದ ಸ್ಥಿತಿಯಿದೆ.ಅವರ ಸ್ಥಿತಿ ಬೆತ್ತಲ ಪ್ರಪಂಚದಲ್ಲಿ ಬಟ್ಟೆ ಉಟ್ಟವರೇ ಮೂರ್ಖರು ಎನ್ನುವಂತಾಗಿದೆ.ಪರಿಸ್ತಿತಿ ಹಾಗೂ ವ್ಯವಸ್ಥೆಯೊಂದಿಗೆ ರಾಜಿ ಮಾಡ್ಕಂಡು ಹೋದ್ರೆ ಅವರು ಬಚಾವ್..ನ್ಯಾಯ-ನಿಷ್ಠೆ-ತತ್ವಸಿದ್ಧಾಂತ ಎಂದುಕೊಂಡು ವ್ಯವಸ್ಥೆ ವಿರುದ್ದ ಸೆಟೆದುನಿಂತ್ರೆ ಅವರನ್ನು ಹೊಸಕಿ ಹಾಕೊಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಹದ್ದಿ ನಂತೆ ಹೊಂಚಾಕುತ್ತಲೇ ಇರುತ್ತವೆ.

….ಆದ್ರೂ ಪ್ರಾಣ ಬಿಟ್ರೂ ಪರ್ವಾಗಿಲ್ಲ,ತತ್ವಸಿದ್ದಾಂತವನ್ನು ಮಾತ್ರ ಬಲಿಕೊಡೊಲ್ಲ.. ಅಡವಿ ಡೊಲ್ಲ ಎಂದು ಭ್ರಷ್ಟರ ವಿರುದ್ಧ ಹೋರಾಡುತ್ತಲೇ ಇರುತ್ತಾರೆ.ನೋಡಿದವರಿಗೆ ಇವರದು ಗಾಳಿಯಲ್ಲಿ ಗುದ್ದಾಡುವ ವ್ಯರ್ಥ ಪ್ರಯತ್ನ ಎನಿಸ್ಬೋದು,ಆದ್ರೆ ತಡವಾದ್ರೂ ಪರ್ವಾಗಿಲ್ಲ,ಸತ್ಯ ಒಂದಲ್ಲಾ ಒಂದು ದಿನ ಗೆದ್ದೇ ಗೆಲ್ಲುತ್ತೆನ್ನುವ ಆತ್ಮವಿಶ್ವಾಸ ಜಾಗೃತವಾಗಿರುತ್ತೆ.

ಇಷ್ಟೆಲ್ಲಾ ಹೇಳೊಕ್ಕೆ ಕಾರಣವೂ ಇದೆ.ಅಕ್ರಮ-ಭ್ರಷ್ಟಾಚಾರದಿಂದ ಸಂಪೂರ್ಣ ಕಲುಷಿತವಾಗಿರುವ ವ್ಯವಸ್ಥೆಯಲ್ಲಿ ಅದರ ವಿರುದ್ಧ ತೊಡೆತಟ್ಟಿ ಅದಕ್ಕಾಗಿ ಇಡೀ ಆಡಳಿತ-ಅಧಿಕಾರಿಶಾಹಿಯ ವಿರೋಧ ಕಟ್ಟಿಕೊಂಡು ನ್ಯಾಯಕ್ಕಾಗಿ ಹೋರಾಡುತ್ತಿರುವ ಇಬ್ಬರು ನಿಷ್ಠ-ದಕ್ಷ-ಪ್ರಾಮಾಣಿಕ ಸರ್ಕಾರಿ ನೌಕರರು ಆದರ್ಶಪ್ರಾಯವಾಗಿ ಕಾಣುತ್ತಾರೆ.ತಮ್ಮ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮ-ಹಗರಣಗಳು ಹಾಗೂ ಅವನ್ನು ಜೀವಂತವಾಗಿಟ್ಟಿರುವ ಅಲ್ಲಿನ ಆಡಳಿತವ್ಯವಸ್ಥೆ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾ ಡುತ್ತಿದ್ದಾರೆ.ಇದಕ್ಕಾಗಿ ಅವರಿಗೆ ಸಿಕ್ಕ ಬೆಲೆ-ಪ್ರತಿಫಲ ಏನು ಗೊತ್ತಾ..? ಜೀವಬೆದರಿಕೆ-ಮೇಲಾಧಿಕಾರಿಗಳಿಂದ ಶಿಕ್ಷೆಯ ಎಚ್ಚರಿಕೆ. ಅದಕ್ಕೂ ಅಂಜದೆ ತಮ್ಮ ಧ್ಯೇಯನಿಷ್ಠೆಯಲ್ಲೇ ಮುಂದುವರೆದಿದ್ದಾರೆ.

ಪಾಪೇಗೌಡ: ಹುದ್ದೆ ಕಿರಿದಾಗಿದ್ದರೂ ಇವರು ಮಾಡುತ್ತಿರುವ ಹೋರಾಟ ಯಾವುದೇ ದೊಡ್ಡ ಚಳುವಳಿಗಿಂತ ಕಡ್ಮೆಯೇನಿಲ್ಲ.ಅರಣ್ಯ ಅಭಿವೃದ್ದಿ ನಿಗಮದಲ್ಲಿ ಸುಮಾರು 30 ವರ್ಷಗಳಿಂದ ಕೆಲಸ ಮಾಡುತ್ತಿರುವ ಪಾಪೇಗೌಡ ನಿಗಮದಲ್ಲಿ ಯಾವುದೇ ಭ್ರಷ್ಟಾಚಾರ ನಡುದ್ರೂ ಅದನ್ನು ವಿರೋಧಿಸುತ್ತಾ ಬಂದ ಪ್ರಾಮಾಣಿಕ ನೌಕರ.ಕಾಂಪ್ರಮೈಸ್ ಮಾಡ್ಕೊಂಡಿದಿದ್ದರೆ ಇವತ್ತು ಕೋಟಿ ಕುಳ ಬಿಡಿ.ಭೂ ಬಾಕರಿಗೆ ಅನುಕೂಲ ಮಾಡಿಕೊಡ್ಲಿಕ್ಕೆ ನಿಗಮದಲ್ಲಿರುವ ಕೆಲವು ಭ್ರಷ್ಟರು ಮಾಡಿದ ಉಪಾಯಕ್ಕೆ ಬ್ರೇಕ್ ಹಾಕಿ ಅವರ ಕೆಂಗಣ್ಣಿಗೆ  ಗುರಿಯಾದ್ರು.ಅರಣ್ಯ ಇಲಾಖೆಯಿಂದ 87 ಸಾವಿರ ಎಕರೆ ಪ್ರದೇಶವನ್ನು ನಿಗಮಕ್ಕೆ ಹಸ್ತಾಂತರ ಮಾಡುವ ಹಿಂದಿನ ಬೃಹತ್ ಷಡ್ಯಂತ್ರವನ್ನು ಬಟಾಬಯಲುಗೊಳಿಸುವ ಪ್ರಯತ್ನಕ್ಕೆ ಮುಂದಾದ್ರು.ರಾಜ್ಯದ 30 ಜಿಲ್ಲೆಗಳಲ್ಲಿ ಒತ್ತುವರಿಯಾದ ಅರಣ್ಯ

2 ಲಕ್ಷ 04 ಸಾವಿರದ  229 ಎಕರೆ ಅರಣ್ಯವನ್ನು ಒತ್ತುವರಿ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿರುವುದರ ವಿರುದ್ಧ ಮೇಲಾಧಿಕಾರಿಗಳು ಹಾಗೂ ಸರ್ಕಾರದ ಇಲಾಖೆಗಳಿಗೆ ದೂರು ಸಲ್ಲಿಸುತ್ತಾ ಬಂದಿರುವುದು ಪಾಪೇಗೌಡ ಅವರ ಹೆಗ್ಗಳಿಕೆ.ಅಮೂಲ್ಯವಾದ ಅರಣ್ಯ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವವರ ಜೊತೆ ಶಾಮೀಲಾಗಿ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ಲೂಟಿಕೋರತನದ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ದಮನ ಮಾಡುವ ಕೆಲಸವನ್ನು ಇಲಾಖೆಯವ್ರೇ ಮಾಡುತ್ತಿದ್ದಾರೆ.ಇದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಕೈ ಜೋಡಿಸಿವೆ ಎನ್ನೋದು ಪಾಪೇಗೌಡ ಅವರ ಅಳಲು.

ಆದ್ರೂ ಇದ್ಯಾವುದಕ್ಕೂ ಕೇರ್ ಮಾಡದೆ ತಮ್ಮ ಸ್ವಂತ ಬಲವನ್ನೇ ನೆಚ್ಚಿಕೊಂಡು ಹೋರಾಟ ಮಾಡುತ್ತಿರುವ ಪಾಪೇಗೌಡರ ಹೋರಾಟಕ್ಕೆ ನೈಜ ಹೋರಾಟಗಾರರ ವೇದಿಕೆ ಸಾಥ್ ನೀಡುತ್ತಿದೆ.ಪಾಪೇಗೌಡರಿಗೆ ಇರುವ ಕೊಲೆಬೆದರಿಕೆಗೆ ಕಾರಣವಾದ ಮಾಫಿಯಾ ವಿರುದ್ಧ  ಕ್ರಮ ಕೈಗೊಳ್ಳುವಂತೆ ದೊಡ್ಡ ಧ್ವನಿ ತೆಗೆದಿದೆ.ನಾಳೆ ಈ ಹಿನ್ನಲೆಯಲ್ಲಿ ಪಾಪೇಗೌಡ ಅವರು ನಡೆಸಲಿರುವ ಹೋರಾಟವನ್ನು ಸಾಮಾಜಿಕ ಕಾರ್ಯಕರ್ತರು ಬೆಂಬಲಿಸಲಿದ್ದಾರೆ.ಇದು ಪಾಪೇಗೌಡರ ಆತ್ಮಬಲ ಹಾಗೂ ನೈತಿಕ ಸ್ಥೈರ್ಯ ಹೆಚ್ಚಿಸಲಿದೆ ಎನ್ನೋದರಲ್ಲಿ ಎರಡು ಮಾತಿಲ್ಲ.

ಕುಮಾರಿ ಮಂಗಳಾ ಕಾಂಬ್ಳೆ:ಕುಮಾರಿ ಮಂಗಳಾ ಕಾಂಬ್ಳೆ ದಿಟ್ಟ ಹೆಣ್ಣುಮಗಳು.ಸಣ್ಣವಳಿದ್ದಾಗಲೇ ಸಮಾಜಕ್ಕೆ ತನ್ನಿಂದ ಏನಾದ್ರೊಂದು ಪ್ರಯೋಜನವಾಗಬೇಕೆನ್ನುವ ಹಿರಿದಾಸೆ ಬೆಳೆಸಿಕೊಂಡಾಕೆ.ಸಮಾಜವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿದ ಈ ಮನಸ್ಥಿತಿ ಸಮಾಜದಲ್ಲಿ ಏನೇ ಅನ್ಯಾಯಗಳಾದ್ರೂ ಅದನ್ನು ಖಂಡಾತುಂಡವಾಗಿ ಖಂಡಿಸುವ ದಿಟ್ದತೆಯನ್ನು ಮೂಡಿಸಿಬಿಡ್ತು.ಆದ್ರೆ ದುರಂತ ನೋಡಿ,ಪಿಡಿಓ ಆಗಿ ಸರ್ಕಾರಿ ಅಧಿಕಾರಿಯ ಹುದ್ದೆ ಅಲಂಕರಿಸಿದ ಮೇಲೆ ಅಕ್ರಮ-ಅನ್ಯಾಯ-ಹಗರಣ-ಫಲಾನುಭವಿಗಳ ಹಣ ಲೂಟಿ ಮಾಡುವ ದಂಧೆಕೋರರನ್ನು ಹತ್ತಿರದಿಂದ ನೋಡುವ,ಅವರನ್ನು ಎದುರಿಸುವಂಥ ಸನ್ನಿವೇಶ ಖುದ್ದು ಕಾಂಬ್ಳೆ ಅವರಿಗೆ ಬಂದೊದಗಿತು.

ಎಲ್ಲರಿಗೂ ಗೊತ್ತಿರುವಂತೆ ಅತ್ಯಂತ ಕಡುಭ್ರಷ್ಟರಾಗುತ್ತಿರುವ ಇವತ್ತಿನ ಪಿಡಿಓ ಗಳಿಗೆ ಅಪವಾದ ಎನ್ನುವಂತಿದ್ದಾರೆ ಮಂಗಳಾ ಕಾಂಬ್ಳೆ.ಪ್ರಸ್ತುತ ಬೀದರ್ ಜಿಲ್ಲೆ ಚಾಂಬೋಳದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ(PDO)ಯಾಗಿ ಕೆಲಸ ಮಾಡುತ್ತಿರುವ ಈ ದಕ್ಷ-ಪ್ರಾಮಾಣಿಕ ಅಧಿಕಾರಿಣಿ ಕಾಂಬ್ಳೆ ಯಾವುದೇ ಸನ್ನಿವೇಶದಲ್ಲೂ ತಾನು ನಂಬಿದ ಸಿದ್ಧಾಂತ-ಆದರ್ಶಗಳನ್ನು ಮರೆತವರಲ್ಲ.ಅದನ್ನು ಕೇವಲ ವ್ಯಕ್ತಿತ್ವದಲ್ಲಷ್ಟೇ ಅಲ್ಲ,ಕೆಲಸ ಮಾಡುವ ಹುದ್ದೆಯಲ್ಲೂ ಅನುಷ್ಠಾನಕ್ಕೆ ತಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ರು.ಆದ್ರೆ ಆಕೆಯನ್ನು ಉಪ್ಪರಿಗೆಯಲ್ಲಿ ಕೂರಿಸಿ ಮೆರೆಸಬೇಕಿದ್ದ ನಮ್ಮ ಸಮಾಜ ನಗೆಪಾಟಲಿನ ವ್ಯಕ್ತಿತ್ವವಾಗಿ ಟ್ರೀಟ್ ಮಾಡಲು ಶುರುಮಾಡಿದ್ದು ವಿಪರ್ಯಾಸ.

ಜನ ಮೆಚ್ಚುವಂತೆ ಬದುಕಿದ್ರೇನು ಪ್ರಯೋಜನ,ದೇವ್ರು ಮೆಚ್ಚುವಂತೆ ಬದುಕಬೇಕು.ಕೆಲಸ ಮಾಡಬೇಕು.ಗ್ರಾಮೀಣ ಮಟ್ಟದಲ್ಲಿ ನೊಂದವರಿಗೆ-ತುಳಿತಕ್ಕೊಳಗಾದವರಿಗೆ-ಸೌಲಭ್ಯ ವಂಚಿತರಿಗೆ ಉತ್ತಮ ಸೇವೆ ಮಾಡಲು ಅವಕಾಶವಿರುವ ಪಿಡಿಓ ಹುದ್ದೆಗೆ ಶೇಕಡಾ 100ರಷ್ಟು ನ್ಯಾಯ ಸಲ್ಲಿಸಿದ ದಿಟ್ಟೆ ಕಾಂಬ್ಳೆ. ಆದ್ರೆ ಇದಕ್ಕಾಗಿ ಕಾಂಬ್ಳೆ ಅನುಭವಿಸಬೇಕಾಗಿ ಬಂದ ನೋವು,ಎದುರಿಸಿದ ಸಂಕಷ್ಟ ಅಷ್ಟಿಷ್ಟಲ್ಲ.ಒಂದೆಡೆ ಚುನಾಯಿತರರು,ಇನ್ನೊಂದೆಡೆ  ಮೇಲಾಧಿಕಾರಿಗಳು ಕೊಟ್ಟ ಕಿರುಕುಳ ಬದುಕನ್ನೇ ಕೊನೆಗಾಣಿಸಿಕೊಳ್ಳಬೇಕೆನ್ನುವಷ್ಟರ ಮಟ್ಟಿಗಿದ್ವು.ಆದ್ರೆ ಅದ್ಯಾವುದಕ್ಕೂ ಅಂಜದೆ ತತ್ವಸಿದ್ದಾಂತದಲ್ಲಿ ರಾಜಿ ಮಾಡಿಕೊಳ್ಳದೇ ಎಲ್ಲವನ್ನು ದಿಟ್ಟವಾಗಿ ಎದುರಿಸಿದ್ಲು.ಆದ್ರೆ ಇವತ್ತು ನೈತಿಕತೆ-ಪ್ರಾಮಾಣಿಕತೆ ಬಗ್ಗೆ ಮಾತನಾಡುವ ಸಾಕಷ್ಟು ಮಂದಿಯೇ ಕಾಂಬ್ಳೆಯ ಬೆನ್ನಿಗೆ ನಿಲ್ಲಲಿಲ್ಲ..ತನಗೆ ನ್ಯಾಯ ದೊರಕಿಸಿಕೊಡಿ ಎಂದು ವಿಧಾನಸೌಧದಲ್ಲಿ ಅಲೆದಾಡಿದ್ರೂ ಯಾರೊಬ್ಬರೂ ಸ್ಪಂದಿಸಿಲ್ಲ.

ಇತರೆ ಪಿಡಿಓಗಳಿಗೆ ಫಿಕ್ಸ್ ಆಗಿರುವ  ಪರ್ಸಂಟೇಜ್  ತಗಂಡು ಕೆಲಸ ಮಾಡ್ಕೊಡಿ ಎಂದು ಒತ್ತಡ ಹೇರುತ್ತಿರುವವರಿಂದ ಜೀವ ಬೆದರಿಕೆ ಇದೆ..ನನಗೆ ರಕ್ಷಣೆ ಕೊಡಿ,ಗನ್ ಮ್ಯಾನ್ ಒದಗಿಸಬೇಕೆನ್ನುವುದು ಕಾಂಬ್ಳೆಯವರ ಮನವಿ..ಇಷ್ಟಾದ್ರೂ ದಿಟ್ಟ ಹೆಣ್ಣುಮಗಳನ್ನು ರಕ್ಷಿಸುವ,ಆಕೆಯ ಪ್ರಾಮಾಣಿಕತೆಯನ್ನು ಬೆಂಬಲಿಸುವ,ಆಕೆಗೆ ಅಗತ್ಯವಿರುವ ನೆರವು ಕಲ್ಪಿಸುವ ಕೆಲಸವನ್ನು ನಮ್ಮ ಸರ್ಕಾರವಾಗಲಿ,ರಾಜಕಾರಣಿಗಳಾಗಲಿ ಮಾಡುತ್ತಿಲ್ಲ ಎಂದರೆ ನಮ್ಮ ಆಡಳಿತ ವ್ಯವಸ್ಥೆ ಎಲ್ಲಿಗೆ ಹೋಗಿ ತಲುಪಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು..ಎಲ್ಲಿಯೂ ನ್ಯಾಯ ಸಿಗದಕ್ಕೆ ಬೇಸತ್ತು ಇದೀಗ ನಾಳೆ ಕಾಂಬ್ಳೆ ಕೂಡ ನ್ಯಾಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆಂದು ಕನ್ನಡ ಫ್ಲಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

ದಕ್ಷರು-ಪ್ರಾಮಾಣಿಕರು ಕಡ್ಮೆಯಾಗಿರುವ ಸನ್ನಿವೇಶದಲ್ಲಿ ಅದರ ಪಳಯುಳಿಕೆಯಂತಿರುವ ಕಾಂಬ್ಳೆ ಹಾಗು ಪಾಪೇಗೌಡ ಅವರ ಬೆನ್ನಿಗೆ ಎಚ್.ಎಂ.ವೆಂಕಟೇಶ್..ಕೆ ಮಥಾಯಿ,ಆಂಜನೇಯ ರೆಡ್ಡಿ,ಸಾಯಿದತ್ತಾ,ರವಿ ಕೃಷ್ಣಾ ರೆಡ್ಡಿ ಅವರಂಥ ಹೋರಾಟಗಾರರು ಕೈ ಜೋಡಿಸಿ ಸರ್ಕಾರದ ಮಟ್ಟದಲ್ಲಿ ನ್ಯಾಯ ದೊರಕಿಸಿಕೊಡುವುದಕ್ಕೆ ಮುಂದಾಗಿದ್ದಾರೆ.ಈ ಇಬ್ಬರು ದಕ್ಷ ನೌಕರರ ಹೋರಾಟವನ್ನು ಕನ್ನಡ ಪ್ಲಾಶ್ ನ್ಯೂಸ್ ಕೂಡ ಬೆಂಬಲಿಸುತ್ತದೆ. 

ಈ ಇಬ್ಬರು ಸರ್ಕಾರಿ ನೌಕರರಿಗೆ ಅವರ ದಕ್ಷತೆ-ಪ್ರಾಮಾಣಿಕತೆಯೇ ಮುಳುವಾಯ್ತಾ?..ಕೋರಿಕೆಗೆ ಸರ್ಕಾರ ಕಿವುಡಾಯ್ತ.. ನ್ಯಾಯಕ್ಕೆ ಆಗ್ರಹಿಸಿ ರಸ್ತೆಗಿಳಿಯಲು ನಿರ್ಧಾರ

Spread the love
Leave A Reply

Your email address will not be published.

Flash News