ಮೀಸಲು ನಿಯಮ ಜಾರಿ ತರಲು ಮತ್ತೆ ಪ್ರಯತ್ನ ಆರಂಭಿಸಿದ ಪ್ರಧಾನಿ ಶೇಖ್ ಹಸಿನಾ ರಾಜೀನಾಮೆಗೆ ಆಗ್ರಹಿಸಿ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮರುಕಳಿಸಿದ್ದು, ಸಾವಿನ ಸಂಖ್ಯೆ 100 ದಾಟಿದೆ.
ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ 100 ಮಂದಿ ಮೃತಪಟ್ಟಿದ್ದು, ಗಲಭೆ ಮತ್ತಷ್ಟು ವಿಕೋಪಕ್ಕೆ ತಿರುಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತೀಯರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಸ್ವಾತಂತ್ರ್ಯ ಯೋಧರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿಷಯಕ್ಕೆ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಸರ್ಕಾರ ದೇಶಾದ್ಯಂತ ನಿಷೇಧಾಜ್ಞೆ ವಿಧಿಸಿದ್ದರಿಂದ ಹಿಂಸಾಚಾರ ಹತೋಟಿಗೆ ಬಂದಿತ್ತು.
ದೇಶಾದ್ಯಂತ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಕೆಲವೇ ದಿನಗಳಲ್ಲಿ ಮರುಕಳಿಸಿದ್ದು, ಭಾನುವಾರ ಬೆಳಿಗ್ಗೆ ಅವಾನಿ ಲೀಗ್ ಸಂಘಟನೆ ನಡೆಸುತ್ತಿದ್ದ ಪ್ರತಿಭಟನೆ ದಿಢೀರನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ 91 ಮಂದಿ ಅಸುನೀಗಿದ್ದಾರೆ. ಇದರಲ್ಲಿ 14 ಮಂದಿ ಪೊಲೀಸರು ಸೇರಿದ್ದಾರೆ.
ಆದರೆ ಹಿಂಸಾಚಾರ ಇದೀಗ ಮರುಕಳಿಸಿದ್ದು, ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಆಡಳಿತಾರೂಢ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಿವಾದ ಭುಗಿಲೆದ್ದಿದ್ದು, ಘರ್ಷಣೆಗೆ ಕಾರಣವಾಗಿದೆ. ಘರ್ಷಣೆ ಬೆನ್ನಲ್ಲೇ ಭಾರತ ಬಾಂಗ್ಲಾದೇಶದಲ್ಲಿ ತಂಗಿರುವ ಭಾರತೀಯರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ವಿದ್ಯಾರ್ಥಿಗಳ ಸಂಘರ್ಷದ ವೇಳೆ ಸಾವಿರಾರು ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದರು. ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಭಾರತೀಯರು ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದರು.