ದಾಖಲೆಯ ಬಿಸಿಲಲ್ಲಿಯೂ ಸಂಸ್ಥೆಗೆ ನೀಯತ್ತಾಗಿ ಕೆಲಸ ಮಾಡೋ ಕಾಯಕಯೋಗಿಗಳ ಬಗ್ಗೆ ಆಡಳಿತಕ್ಕಿಲ್ಲವೇ ಕರುಣೆ..! 

ಬೆಂಗಳೂರು:“ನಮ್ ಜನ್ಮದಲ್ಲಿ ಇಷ್ಟೊಂದು ಬಿಸಿಲು ನೋಡಿರ್ಲಿಲ್ಲ..ಇಷ್ಟೊಂದು ಬಿಸಿಲ ಧಗೆಯಲ್ಲಿ ಕೆಲಸ ಮಾಡಿರಲಿಲ್ಲ..ಡ್ರೈವಿಂಗ್ ಮಾಡೋದೆಂದ್ರೆ  ನರಕ ಎನಿಸುವಂತಾಗಿದೆ.ಬೇಡಪ್ಪಾ..ಬೇಡ.. ಈ ಕೆಲಸ..ನಮ್ಮ ಶತೃವಿಗೂ ಈ ಪಡಿಪಾಟಲು ಬೇಡ ಎನಿಸುತ್ತದೆ”..ಯಾವುದೇ ಡ್ರೈವರ್ ಕೇಳಿ ನೋಡಿದ್ರೂ ನಿಟ್ಟುಸಿರಲ್ಲಿ ಹೀಗೊಂದು ಉತ್ತರ ಸಿದ್ದವಾಗಿರುತ್ತದೆ.

ಹೌದು..ಈ ಬಾರಿಯ ಬೇಸಿಗೆಯೇ ಹಾಗಿದೆ.ಯಾರನ್ನೇ ಕೇಳಿದ್ರೂ ಸಾಕಪ್ಪ ಸಾಕು..ಬೇಸಿಗೆ ಸಹವಾಸ..ಯಾವಾಗ ಮನೆಗ್ಹೋಗಿ ಫ್ಯಾನೋ..ಎಸಿ ಮುಂದೆ ಕುಳಿತುಕೊಳ್ಳುತ್ತೇವೋ ಎನ್ನಿಸುತ್ತದೆ.ಮನೆಯಿಂದ ಹೊರಗೆ ಬರೋದೇ ಬೇಡ ಎನ್ನಿಸುತ್ತದೆ. ಬೆಳಗ್ಗೆ 7 ಗಂಟೆಯಿಂದಲೇ ನೆತ್ತಿ ಸುಡಲಿಕ್ಕೆ ಆರಂಭಿಸೋಸೂರ್ಯನ ಧಗೆ ರಾತ್ರಿಯಾದ್ರೂ ಕಡ್ಮೆಯಾಗಲ್ಲ..ಮಲಗೋಣ ಎಂದುಕೊಂಡ್ರೆ ಬಿಸಿ ಗಾಳಿ..ಒಂದ್ರೀತಿ ಬೇಸಿಗೆಯಲ್ಲಿ ಉಸಿರುಗಟ್ಟಿಸುವ ಅನುಭವ..

ದಿನದಲ್ಲಿ ಒಂದಷ್ಟು ಸಮಯ ಬಿಸಿಲಿಗೆ ಬರೋ ನಮಗೆ ಹಾಗನ್ನಿಸುವಾಗ ಇನ್ನು ದಿನದ ಬಹುತೇಕ ಸಮಯವನ್ನು ಬಸ್ ನಲ್ಲೇ ಕುಳಿತುಕೊಂಡು ಕಳೆಯುವ ನಮ್ಮ ಡ್ರೈವರ್ಸ್-ಕಂಡಕ್ಟರ್ಸ್ ಗಳ ಕಥೆ ಏನಾಗಿರಬೇಡ ಯೋಚಿಸಿ.ಬೆಳಗ್ಗೆ 6ಕ್ಕೋ ಏಳಕ್ಕೋ ಬಸ್ ನಲ್ಲೊ ಕೂತರೆ ರೆಸ್ಟ್ ಗೆಂದು ಸಿಗೋದೇ ಎರಡ್ಮೂರು ಬಾರಿ.ಅದನ್ನು ಬಿಟ್ಟರೆ ಬಸ್ ನಲ್ಲೇ ಕುಳಿತು ಕೊಂಡು ಕೆಲಸ ಮಾಡುವ ಅಸಹಾಯಕ ಸ್ಥಿತಿ. ಶಾಖ ಹೆಚ್ಚಿರುವ ಸ್ಥಳದಲ್ಲೇ ಕುಳಿತುಕೊಂಡು ಕೆಲಸ ಮಾಡುವ ಡ್ರೈವರ್ಸ್ ಗಳದ್ದು ಒಂದು ಕಥೆಯಾದ್ರೆ ಬೆವರಿಳಿಸುವ ವಾತಾವರಣದಲ್ಲಿ ಹೊಡೆದಾಡಿಕೊಂಡು-ಬೈಯ್ಯಿಸಿಕೊಂಡು ಕೆಲಸ ಮಾಡುವ ಕಂಡಕ್ಟರ್ ಗಳ ಗೋಳು ಇನ್ನೊಂದ್ ರೀತಿದು.

“ಬೇಸಿಗೆಯಲ್ಲಿ ಕೆಲಸ ಮಾಡೋದು ನಿಜಕ್ಕೂ ಸವಾಲಿನ ಕೆಲಸ.ಜನಸಾಮಾನ್ಯರು ಒಂದಷ್ಟು ನಿಮಿಷ ಬಿಸಿಲಿಗೆ ಬಂದ್ರೂ ಅಯ್ಯಪ್ಪಾ..ಸಾಕು ಸಾಕು ಎನ್ನುತ್ತಾರೆ.ಅಂ ತದ್ದರಲ್ಲಿ ಹೆಚ್ಚಿನ ಸಮಯವನ್ನು ಬಸ್‌ ಗಳಲ್ಲೇ ಕಳೆಯುವ ನಮ್ಮ ಡ್ರೈವರ್ಸ್-ಕಂಡಕ್ಟರ್ಸ್‌ ಗಳ ಸ್ತಿತಿ ಯಾವ ಶತೃವಿಗೂ ಬೇಡ ಎನ್ನಿಸುತ್ತೆ.ಬೆಂಗಳೂರಿನ ಪರಿಸ್ತಿತಿ ಹೀಗಿದ್ರೆ ಬಿಸಿಲು ಹೆಚ್ಚಿರುವ ರಾಯಚೂರು,ಬೀದರ್‌, ಹುಬ್ಬಳ್ಳಿ,ಬಳ್ಳಾರಿ,ಗುಲ್ಬರ್ಗಾ, ಬೆಳಗಾಂನಂಥ ಜಿಲ್ಲೆಗಳಲ್ಲಿ ಕೆಲಸ ಮಾಡೋರ ಕಥೆ ಏನಾಗಬೇಡ.ಬೇಸಿಗೆಯಲ್ಲಿ ಕೆಲಸ ಮಾಡೊಕ್ಕಾಗೊಲ್ಲ.ರಜೆ ಕೊಡಿ ಎಂದು ಗೋಗರೆಯುತ್ತಿದ್ದಾರಂತೆ.ನಮ್ಮ ಡ್ರೈವರ್ಸ್‌ ಗಳಿಗೆ ಆಡಳಿತ ಮಂಡಳಿ ಏನಾದರೊಂದು ವ್ಯವ‍ಸ್ಥೆ ಮಾಡಿದರೆ ಒಳ್ಳೇದೆನಿಸುತ್ತದೆ.ಇಲ್ಲವಾದಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುವುದರಲ್ಲಿ ಡೌಟೇ ಇಲ್ಲ” -ಆನಂದ್-‌ ಸಾರಿಗೆ ಮುಖಂಡ

ಬೆಂಗಳೂರಿನಲ್ಲಿ ಯಾವ್ ಪ್ರಮಾಣದ ಬಿಸಿಲು ಇದೆ ಎನ್ನೋದನ್ನು ಬಿಡಿಸಿ ಹೇಳಬೇಕಿಲ್ಲ.ಬೆಂಗಳೂರು ತನ್ನ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದ ಬಿಸಿಲಿನ ಝಳವನ್ನು ಅನುಭವಿಸಿರಲಿಲ್ಲ ಎನ್ನುವವರುಂಟು.ಯಾರಿಗೂ ಬೇಡ,ಬಿಎಂಟಿಸಿ ಡ್ರೈವರ್ಸ್-ಕಂಡಕ್ಟರ್ಸ್ ಗಳನ್ನೇ ಕೇಳಿ ನೋಡಿದ್ರೂ ನಮ್ಮ ಸರ್ವಿಸ್ ನಲ್ಲಿ ಇಷ್ಟೊಂದು ಬಿಸಿಲು ನೋಡಿರಲೂ ಇಲ್ಲ,ಇಂಥಾ ಖರಾಬ್ ವಾತಾವರಣದಲ್ಲಿ ಕೆಲಸ ಮಾಡಿರಲೂ ಇಲ್ಲ ಎನ್ನುತ್ತಾರೆ.

ಬಿಸಿಲಿಗೆ ಹೆದರಿಕೊಂಡು ಕೆಲಸ ಮಾಡದೆ ಇರಲು ಸಾಧ್ಯವಿದೆಯಾ..? ಖಂಡಿತಾ ಇಲ್ಲ.ಎಷ್ಟೇ ಸುಡುವ ಬಿಸಿಲಿರಲಿ ಇಂತದ್ದೇ ಪ್ರತಿಕೂಲಕರವಾದ ವಾತಾವರಣದಲ್ಲಿ ಕೆಲಸ ಮಾಡಲೇಬೇಕಾದ ಅಸಹಾಯಕ ಸ್ಥಿತಿ ನಮ್ಮ ಡ್ರೈವರ್ ಕಂಡಕ್ಟರ್ ಗಳದು.ಕೆಲಸಕ್ಕೆ ರಜೆ ಹಾಕಿದ್ರೆ ಸಂಬಳ ಕಟ್ ಆಗುತ್ತದೆ. ಸಿಬ್ಬಂದಿಯ ಸ್ತಿತಿಗೆ ಮರಗುವಂತ ದಯಾವಂತ ಅಧಿಕಾರಿಗಳಂತೂ ಬಿಎಂಟಿಸಿಯಲ್ಲಿ ಇಲ್ಲ.ಹಾಗಾಗಿ ಎಷ್ಟೇ ಸಮಸ್ಯೆಯಾದ್ರೂ  ಬಿಸಿಲಿಗೆ ಬೈಯ್ದುಕೊಳ್ಳುತ್ತಾ.ಮೇಲಾಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲೇ ಕೆಲಸ ಮಾಡುವಂತಾಗಿದೆ ನಮ್ಮ ಸಾರಿಗೆ ಸಿಬ್ಬಂದಿ.

ಬಿಸಿಲಿನ  ಝಳದಿಂದ ತಪ್ಪಿಸಿಕೊಳ್ಳೊಕ್ಕೆ ನ,ಮ್ಮ ಸಿಬ್ಬಂದಿನೇ ಕೆಲವೊಂದು ವ್ಯವಸ್ಥೆ ಮಾಡಿಕೊಂಡಿದ್ದಾರೆ.ತಮ್ಮ ಆರೋಗ್ಯ-ಕ್ಷೇಮವನ್ನು ತಾವೇ ಕಾಪಾಡಿಕೊಳ್ಳೊಕ್ಕೆ ಮುಂದಾಗಿದ್ದಾರೆ.ಬಿಸಿಲ ಝಳಕ್ಕೆ ನೀರಡಿಕೆಯಾಗೋದು ಸಾಮಾನ್ಯವಾಗಿರುವುದರಿಂದ ಎರಡು ಬಾಟಲ್ ನೀರಿನ ಬದಲು 4-5 ಬಾಟಲ್ ನೀರು ತರುತ್ತಿದ್ದಾರೆ.ಅದು ಬಿಸಿಯಾಗದಂತೆ ಬಟ್ಟೆ ಹಸಿ ಮಾಡಿ ಅದನ್ನು ಸುತ್ತಿಟ್ಟಿರುತ್ತಾರೆ.ಬಿಸಿಲಾಗಿರುವುದರಿಂದ ಬಾಡಿ ಹೀಟ್ ಆಗಬಾರದೆಂದು ಹೆಚ್ಚಿನ ಸಿಬ್ಬಂದಿ ಮನೆಯಿಂದ ಊಟ ತರುತ್ತಿದ್ದಾರೆ.ಮೊಸರು-ಮಜ್ಜಿಗೆಯನ್ನು ಮನೆಯಿಂದಲೇ ಮಾಡಿಸಿಕೊಂಡು ಬರುತ್ತಿದ್ದಾರೆ.

“ತುಂಬಾ ಕಷ್ಟವಾಗುತ್ತಿದೆ ಸರ್..ಕೆಲಸ ಮಾಡೊಕ್ಕೆ..ಬೆಳ್ಳಂಬೆಳಗ್ಗೆ ಬಿಸಿಲು.ನಾವು ಗಾಡಿ ಹತ್ತಿ ಸ್ಟೇರಿಂಗ್ ಹಿಡಿದು ಕೂತ್ರೆ ಸುಡೋ ಮರಳಿನ ಕೆಳಗೆ ಕೂತಂಗೆ ಆಗುತ್ತ ದೆ.ನೀರಲ್ಲಿ ನೆನೆಸಿದ ಬಟ್ಟೆಗಳನ್ನು ಸೀಟಿನ ಕೆಳಗೆ  ಹಾಕ್ಕೊಂಡು ಕೆಲಸ ಮಾಡುತ್ತಿ ದ್ದೇವೆ.ಆದ್ರೆ ಅದರಿಂದ ಏನೂ ಪ್ರಯೋಜನವಾಗುತ್ತಿಲ್ಲ.ಟ್ರಾಫಿಕ್‌ ಇದ್ದರಂತೂ ಒಂದೇ ಕಡೆ ನಿಂತು ಬೆವರಲ್ಲಿ ನೆನೆದು ಹೋಗುತ್ತೇವೆ.ಕಿಟಕಿಗಳು ಓಪನ್‌ ಇದ್ರೂ ಬಿಸಿ ಗಾಳಿ, ಜೀವ ಹಿಂಡಿಬಿಡುತ್ತೆ. ಒಂದೆರೆಡು ಲೀಟರ್‌ ನೀರು ಕುಡಿಯೋ ಜಾಗದಲ್ಲಿ 5-6 ಲೀಟರ್‌ ಇರ್ಲೇಬೇಕು.ಮಜ್ಜಿಗೆ-ಮೊಸರು-ಕೂಲ್‌ ಡ್ರಿಂಕ್ಸ್‌ ಇಲ್ಲದಿದ್ರೆ ಆಗೊಲ್ಲ.ಬಿಸಿಲಲ್ಲಿ ಮದ್ಯಾಹ್ನ ಊಟ ಸೇರೊಲ್ಲ.ರಾತ್ರಿ ಮನೆಗೆ ಹೋದ್ರೆ ಸ್ನಾನ ಮಾಡಲೇಬೇಕು..ನಮ್ಮ ಗೋಳು ಯಾರ್‌ ಕೇಳ್ತಾರೆ ಹೇಳಿ– ಬಿಎಂಟಿಸಿ ಸಿಬ್ಬಂದಿ

ದಿನಕ್ಕೆ ಎರಡು ಬಾರಿ ಸ್ನಾನ ಕಡ್ಡಾಯವಾಗಿದೆ.ಬಿಸಿಲಲ್ಲಿ ಬೆಂದು ಬೆವರಿನಿಂದ ತೊಪ್ಪೆಯಾಗುವ ಸಿಬ್ಬಂದಿ ಮನೆಗೆ ಹೋಗುವುದರೊಳಗೆ ಗಬ್ಬು ನಾರುತ್ತಿರುತ್ತಾರೆ.ಮನೆಗೆ ಹೋಗುತ್ತಿದ್ದಂತೆಯೇ ತಣ್ಣೀರಿನ ಸ್ನಾನ ಮಾಡಿದಾಗಲೇ ಅವರ ಜೀವ ತಣ್ಣಗಾಗೋದಂತೆ..

ಸಾಮಾನ್ಯ ಬಸ್ ಗಳನ್ನು ಚಾಲನೆ ಮಾಡುವ ಡ್ರೈವರ್ ಗಳ ಹೋಲಿಕೆಯಲ್ಲಿ ಎಸಿ ಬಸ್ ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿದು ಸಾವಿರಪಾಲು ಪುಣ್ಯವಂತೆ.ಎಸಿಯಲ್ಲೇ ಕೆಲಸ ಮಾಡುವ ಅವರಿಗೆ ಹೊರಗಿನ ಬಿಸಿಲು ತಟ್ಟೋದೇ ಇಲ್ಲ.ಬಸ್ ನಿಂದ ಕೆಳಗಿಳಿದಾಗಲೇ ಬಿಸಿಲ ಅನುಭವವಾಗುತ್ತಿದೆ.ಆದರೂ ತಾವು ಸೇಫ್ ಇರುವಷ್ಟು ತಮ್ಮ ಸಹದ್ಯೋಗಿಗಳು ಸೇಫ್ ಇಲ್ವಲಾ ಎಂದು ಕೆಲವರು ನೊಂದು ಮಾತನಾಡುತ್ತಾರೆ.

ಎಸಿ ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರು ಎಸಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೇಳುತ್ತಾರಂತೆ.ಡ್ರೈವರ್ಸ್-ಕಂಡಕ್ಟರ್ಸ್ ಗಳಿಗೆ ಹೆಚ್ಚಿನ ಎಸಿಯಿಂದ ಆರೋಗ್ಯ ಸಮಸ್ಯೆಯಾಗುತ್ತಿದೆಯಂತೆ.ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ತಮಗಾಗುವ ಸಮಸ್ಯೆಯನ್ನು ತಡೆದುಕೊಳ್ಳುತ್ತಿದ್ದಾರೆ.ಇದು ಒಂದ್ ರೀತಿ ಸಮಸ್ಯೆಯಾದ್ರೆ ಪ್ರಯಾಣಿಕರು ಎಸಿಗೆ ಡಿಮ್ಯಾಂಡ್ ಮಾಡುವುದರಿಂದ ದಿನನಿತ್ಯ ಪ್ರತಿ ಬಸ್ ಸರಾಸರಿ 10 ಲೀಟರ್ ಗಿಂತ ಹೆಚ್ಚಿನ  ಡೀಸೆಲ್ ಕುಡಿಯುತ್ತಿವೆಯಂತೆ.ಇದು ಒಂದ್ ರೀತಿ ಸಂಸ್ಥೆಗೆ ಲಾಸ್ ಎನಿಸಿದ್ರೂ ಪ್ರಯಾಣಿಕರ ಹಿತದೃಷ್ಟಿಯಿಂದ ಅನಿವಾರ್ಯವಂತೆ.

“ಪ್ರಕೃತಿನೇ ಹೀಗಿರುವಾಗ ನಾವು ಏನ್‌ ಮಾಡೊಕ್ಕೆ ಆಗುತ್ತೆ ಹೇಳಿ..ಇದು ನಮ್ಮ ಸಮಸ್ಯೆನಾ..? ಬಿಸಿಲು ಹೆಚ್ಚಾಗಿದೆ ಸತ್ಯ.ನಮಗೂ ಅದರ ಅರಿವಿದೆ.ನಮ್ಮ ಡ್ರೈವ ರ್ಸ್-ಕಂಡಕ್ಟರ್ಸ್‌ ಎಂಥಾ ರಿಸ್ಕ್‌ ನಲ್ಲಿ ಕೆಲಸ ಮಾಡ್ತಿದ್ದಾರೆನ್ನುವ ಅರಿವಿದೆ.ಅದರ ಬಗ್ಗೆಸಹಾನುಭೂತಿನೂ ಇದೆ.ಆದ್ರೆ ಏನ್‌ ಮಾಡೋದು.ನಮ್ಮದು ಎಸೆಂಷಿಯಲ್‌ ಸರ್ವಿಸ್..ಕೆಲಸ ಮಾಡಲೇಬೇಕು.ಅನೇಕ ಸಿಬ್ಬಂದಿ ಕೆಲಸ ಮಾಡಲಿಕ್ಕೆ ಆಗುತ್ತಿಲ್ಲ.ರ ಜೆ ಕೊಡಿ,ಆರೋಗ್ಯದ ಸಮಸ್ಯೆ ಎದುರಾಗ್ತಿದೆ ಎಂತಾರೆ.ಅವರು ಸುಳ್ಳು ಹೇಳ್ತಿದ್ದಾರೆ ಎಂದೇನು ನಮಗೆ ಅನ್ನಿಸುವುದಿಲ್ಲ.ನಮಗೂ ಅವರ ಪರವಾಗಿ ಏನೆಲ್ಲಾ ಮಾಡಬೇ ಕು ಅನ್ನಿಸುತ್ತೆ.ಆದರೆ ಬದಲಾವಣೆ ಮಾಡಿದರೆ ಸಾರ್ವಜನಿಕ ಸಾರಿಗೆ ಮೇಲೆ ದೊಡ್ಡ ಸಮಸ್ಯೆ ಆಗುತ್ತದೆ.ಹಾಗಾಗಿ ಸಮಸ್ಯೆ ಹೇಳಿಕೊಂಡು ಬರೋರಿಗೆ ಸಮಾಧಾನ ಹೇಳಿ,ಆರೋಗ್ಯದ ಬಗ್ಗೆ ಕಾಳಜಿ ಮಾತನ್ನಾಡಿ ಕಳುಹಿಸುತ್ತಿದ್ದೇವೆ,ನಮ್ಮಿಂದ ಇಷ್ಟ್‌ ಮಾತ್ರ ಮಾಡೊಕ್ಕಾಗೋದು” ..ಕೆಎಸ್‌ ಆರ್‌ ಟಿಸಿ ಅಧಿಕಾರಿ

ಹೀಗೆ ಬೇಸಿಗೆಯ ಧಗೆಯಲ್ಲಿ ಗೊಣಗುತ್ತಲೇ ಕೆಲಸ ಮಾಡುತ್ತಿರುವ ಸಾರಿಗೆ ಸಿಬ್ಬಂದಿಗೆ ಇಲಾಖೆಯಿಂದ ಯಾವುದೇ ವ್ಯವಸ್ಥೆ ಮಾಡಿಲ್ಲ.ಕೆಲವರು ಬೇಸಿಗೆಯಲ್ಲಿ ಕೆಲಸ ಮಾಡಲಾಗುತ್ತಿಲ್ಲ ರಜೆ ಕೊಡಿ ಎಂದು ಮನವಿಯನ್ನೂ ಮಾಡಿಕೊಳ್ಳುತ್ತಿದ್ದಾರಂತೆ.ಹಾಗೆಯೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕೆಲವರು ತಮಗೆ ಲಾಸ್ ಆಫ್ ಪೇಆದ್ರೂ ಮಾಡಿಕೊಡಿ ಎಂದು ಮನವಿ  ಮಾಡಿದ್ರೂ ಆಡಳಿತ ಮಾತ್ರ ಕ್ಯಾರೇ ಎನ್ನುತ್ತಿಲ್ಲ.ಬೇರೆ ನಿಗಮಗಳಲ್ಲಿ ಇರುವಂತೆ ಒಂದಷ್ಟು ವ್ಯವಸ್ಥೆಯನ್ನು ಬದಲಿಸುವ ಕೆಲಸ ಮಾಡಿದ್ರೆ ಅನುಕೂಲವಾಗುತ್ತಿತ್ತು ಎನ್ನುವುದು ಡ್ರೈವರ್ಸ್-ಕಂಡಕ್ಟರ್ಸ್ ಗಳ ಮನವಿ.ಆದರೆ ಇದಕ್ಕೆ ಆಡಳಿತ ಈವರೆಗೂ ಮಣೆ ಹಾಕಿಲ್ಲ.ಮಣೆ ಹಾಕುವಂತೆಯೂ ಕಾಣುತ್ತಿಲ್ಲ ಬಿಡಿ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳೊಕ್ಕೆ ಡ್ರೈವರ್ಸ್-ಕಂಡಕ್ಟರ್ಸ್ ಗಳು, ಯಾವಾಗ ಮಳೆ ಬರುತ್ತದೋ..ಭೂಮಿ ನೆನೆದು ಅದರಿಂದ ಹೊರಡುವ ಮಣ್ಣಿನ ವಾಸನೆ ಯಾವಾಗ ತಮ್ಮ ಮೂಗಿಗೆ ಬಡಿಯುತ್ತೋ ಎಂದು ಕಾದು ಕೂತಿದ್ದಾರೆ.

Spread the love

Leave a Reply

Your email address will not be published. Required fields are marked *