:ವೃತ್ತಿನಿಷ್ಠೆ-ಕಾರ್ಯಕ್ಷಮತೆ”ಗೆ ಮತ್ತೊಂದು ಹೆಸರೇ “ಎಕ್ಸ್ ಕ್ಲ್ಯೂಸಿವ್ ನ್ಯೂಸ್” ಗಳ “ಹೆಡ್ ಕ್ವಾರ್ಟರ್ಸ್” ಬದ್ರುದ್ದೀನ್..
ಬೆಂಗಳೂರು: ಕನ್ನಡ ಪತ್ರಿಕಾರಂಗದಲ್ಲಿ ಸ್ನೇಹಜೀವಿ-ಅಜಾತಶತೃ ಎಂದೇ ಕರೆಯಿಸಿ ಕೊಳ್ಳುವುದು ತೀರಾ ಕಷ್ಟ… ಕಷ್ಟ ಎನ್ನುವುದಕ್ಕಿಂತ ಅಸಾಧ್ಯವಾದ ಮಾತು.ಆದರೆ ಅದಕ್ಕೆ ಅಪವಾದ ಎನ್ನುವಂತೆ ಹೆಸರು-ವ್ಯಕ್ತಿತ್ವ-ಕೈ.. ಯಾವುದನ್ನೂ ಕೊಳಕು ಮಾಡಿಕೊಳ್ಳದೆ ಸುಮಾರು 30 ವರ್ಷಗಳಿಗಿಂತಲೂ ದೀರ್ಘ ಸಮಯದಿಂದಲೂ ವೃತ್ತಿನಿಷ್ಠೆಯನ್ನುಳಿಸಿಕೊಂಡ ಹಿರಿಯ ಪತ್ರಕರ್ತ ಬದ್ರುದ್ದೀನ್ ಮಾಣಿ.
ಪಬ್ಲಿಕ್ ಟಿವಿಯಲ್ಲಿ 9 ವರ್ಷಗಳಿಂದಲೂ ರಾಜಕೀಯ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ ಬದ್ರುದ್ದೀನ್ ಸ್ವ ಇಚ್ಛೆಯಿಂದ ನಿವೃತ್ತಿ ಪಡೆದು ಹೊರಬಂದಿದ್ದಾರೆ.ಇದ್ದಷ್ಟು ದಿನವೂ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡ ಪಬ್ಲಿಕ್ ಟಿವಿ ಬಳಗ ಕೂಡ ಹೃದಯಸ್ಪರ್ಷಿ ಎನಿಸುವಂಥ ವಿದಾಯವನ್ನು ಭಾರವಾದ ಮನಸಿನಿಂದಲೇ ನೀಡಿ ಕಳುಹಿಸಿದೆ.ಬದ್ರುದ್ದೀನ್ ಕೂಡ ಪಬ್ಲಿಕ್ ಟಿವಿ ಜತೆಗಿನ 9 ಸಾರ್ಥಕ ವರ್ಷಗಳ ಒಡನಾಟದ ನೆನಪುಗಳೊಂದಿಗೆ “ಕಣ್ಣಾಲಿ”ಗಳನ್ನು ತೇವಗೊಳಿಸಿಕೊಂಡು ಹೊರಬಂದಿದ್ದಾರೆ.
ಯೆಸ್…ಬದ್ರುದ್ದೀನ್..ಇತ್ತೀಚಿನ ಓರಗೆಯ ಪತ್ರಕರ್ತರುಗಳಿಗೆ ಈ ಹೆಸರು,ವ್ಯಕ್ತಿತ್ವ,ಆ ಹೆಸರಿಗಿರುವ ತಾಕತ್ತು, ಮರ್ಯಾದೆ, ವೃತ್ತಿನಿಷ್ಠೆ-ಬದ್ಧತೆ-ಕಾರ್ಯಕ್ಷಮತೆ-ಸುದ್ದಿ ಕೆದಕುವ ಜಾಣ್ಮೆ-ಸುದ್ದಿ ಮೂಲಗಳೊಂದಿಗಿನ ವಿಶ್ವಾಸರ್ಹತೆಯ ಪರಿಚಯ ಇರಲಿಕ್ಕಿಲ್ಲ ಎನಿಸುತ್ತೆ.
ಆದ್ರೆ ವಿಧಾನಸೌಧದ ಮೊಗಸಾಲೆಯಲ್ಲಿ ಅಡ್ಡಾಡಿದವರಿಗೆ,(”ವಾಟ್ಸಪ್ ಯೂನಿವರ್ಸಿಟಿ” ಯಲ್ಲಿ ಬರುವ ಸುದ್ದಿಗಳನ್ನು ಫಾರ್ವರ್ಡ್ ಮಾಡೋದನ್ನು ವರದಿಗಾರಿಕೆ ಎಂದುಕೊಂಡಿರುವ ಮನಸ್ಥಿತಿಯ ಇತ್ತೀಚಿನ ಪತ್ರಕರ್ತರನ್ನು ಹೊರತುಪಡಿಸಿ) ಸುದ್ದಿಯನ್ನು ಹುಡುಕುವ ಅನ್ವೇಷಣಾ ಪ್ರವೃತ್ತಿಯ ರಾಜಕೀಯ ವರದಿಗಾರರಿಗೆ ಬದ್ರುದ್ದೀನ್ ಪರಿಚಯ ಇರಲೇಬೇಕೆನ್ನುವ ಮಾತಿದೆ.ಅದು ಸತ್ಯ ಕೂಡ.ಏಕೆಂದರೆ ರಾಜಕೀಯ ವರದಿಗಾರಿಕೆ ಮಾಡುವ ಪ್ರತಿಯೋರ್ವ ಪತ್ರಕರ್ತನಿಗೆ ಬದ್ರುದ್ದೀನ್ ಪರಿಚಯದ ಜತೆಗೆ ಅವರ ತಾಕತ್ತಿನ ಅರಿವು ಇರಲೇಬೇಕೆನ್ನುವುದು ಅವರ ಕಾರ್ಯವೈಖರಿಯನ್ನು ತೀರಾ ಹತ್ತಿರದಿಂದ ನೋಡಿರುವ ನನ್ನಂಥ ಅದೆಷ್ಟೋ ಪತ್ರಕರ್ತರ ಅಭಿಪ್ರಾಯ-ವಾದ ಕೂಡ.
ಇಂಥಾ ಬದ್ರುದ್ದೀನ್ “ಆಕ್ಟೀವ್ ಜರ್ನಲಿಸಂ(ಸಕ್ರೀಯ ಪತ್ರಿಕೋದ್ಯಮ)”ನಿಂದ ದೂರ ಸರಿಯುತ್ತಿದ್ದಾರೆನ್ನುವುದು ಜೀರ್ಣಿಸಿಕೊಳ್ಳಲಾಗದ ವಿಷಯ. 3 ದಶಕಗಳಿಂದಲೂ ಪತ್ರಿಕೋದ್ಯಮ ಮಾಡಿಕೊಂಡು ಬಂದಿದ್ದ ಬದ್ರುದ್ದೀನ್ ಅವರೇ ಹೇಳುವಂತೆ ತಮ್ಮ ತೀರಾ ವೈಯುಕ್ತಿಕವಾದ ಕಾರಣಗಳಿಗೆ ಪಬ್ಲಿಕ್ ಟಿವಿಯಿಂದ ಹೊರಬಂದು ತಾವೇ ಒಂದು ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ.9 ವರ್ಷಗಳವರೆಗೆ ಅವರೊಂದಿಗೆ ಭಾವನಾತ್ಮಕವಾದ ನಂಟನ್ನು ಹೊಂದಿದ್ದ ಪಬ್ಲಿಕ್ ಟಿವಿ ಬಳಗ ಒಲ್ಲದ ಮನಸಿನಿಂದ ಅವರನ್ನು ಕಳುಹಿಸಿಕೊಟ್ಟಿದೆ.ಹೋಗುವಾಗ ಚಾನೆಲ್ ನ ಬಾಗಿಲು ನಿಮಗೆ ಸದಾ ತೆಗೆದಿರುತ್ತದೆ, ಯಾವ್ ಕ್ಷಣ ಬರಬೇಕೆನ್ನಿಸುತ್ತೋ ಸ್ವಾಗತ ಎಂಬ ಮಾತನ್ನೇಳಿ ಕಳುಹಿಸಿದೆ.ಆಡಳಿತ ಮಂಡಳಿ ಮಾತಿಗೆ ಭಾವುಕಗೊಂಡು ಹಿರಿ-ಕಿರಿಯ ಸಹದ್ಯೋಗಿಗಳ ಶುಭಹಾರೈಕೆಗಳೊಂದಿಗೆ ಹೊರಬಂದಿದ್ದಾರೆ.
ಬದ್ರುದ್ದೀನ್ ತಾಕತ್ತು ರಾಜಕೀಯ ವರದಿಗಾರಿಕೆ ಮಾಡಿದ ಪತ್ರಕರ್ತರಿಗೆ ಚೆನ್ನಾಗಿ ಗೊತ್ತು. ಸುದ್ದಿಯನ್ನು ಹೇಗೆ ಹೆಕ್ಕಿ ತೆಗೆಯ ಬೇಕು ಎನ್ನುವುದರಿಂದ ಹಿಡಿದು ನಂಬಿಕೆ ಇಟ್ಟು ಸುದ್ದಿ ನೀಡುವ “ಮೂಲ”ಗಳ ವಿಶ್ವಾಸಾರ್ಹತೆಗೆ ಕಿಂಚಿತ್ ಧಕ್ಕೆ ಬಾರದಂಗೆ ಸಂಪರ್ಕಗಳನ್ನು ಹೇಗೆ ನಿಭಾಯಿಸಬೇಕು ಎನ್ನುವವರೆಗಿನ ಸೂಕ್ಷ್ಮಗಳನ್ನು ಅವರಷ್ಟು ಚೆನ್ನಾಗಿ ಅರ್ಥಮಾಡಿಕೊಂಡ ಪತ್ರಕರ್ತರು ತೀರಾ ಕಡಿಮೆ.ರಾಜಕೀಯದವರೊಂದಿಗೆ ತಮ್ಮ ನಂಟು ಹೇಗೆ ಇರಲಿ,ಎಷ್ಟೇ ಗಾಢ-ಆತ್ಮೀಯವಾಗಿದ್ರೂ ವೃತ್ತಿ ನಿಷ್ಠೆ-ಪಾವಿತ್ರ್ಯತೆಗೆ ಭಂಗ ಬರದಂತೆ ಸುದ್ದಿಯನ್ನು ಎಕ್ಸ್ ಕ್ಲ್ಯೂಸಿವ್ ಆಗಿ ಸ್ಪೋಟಿಸುವ ಜಾಣ್ಮೆ ಮೆಚ್ಚುವಂತದ್ದು. ಸುದ್ದಿಯನ್ನು ಕೊಡಲೇಬೇಕೆನ್ನುವ ಅವಸರಕ್ಕೆ ಬಿದ್ದವರಲ್ಲವೇ ಅಲ್ಲ. ದಾಖಲೆಯಿಲ್ಲದೆ-ಸಾಕ್ಷ್ಯವಿಲ್ಲದೆ ಸುದ್ದಿ ಮಾಡಿದವರಲ್ಲ.
ಇವತ್ತಿನ ಅವಸರದ ಪತ್ರಿಕೋದ್ಯಮದಲ್ಲಿ ಮಾಮೂಲಾಗಿ ಹೋಗಿರುವ “ಚಪಾತಿ ಸುದ್ದಿ”( ಊಹಾಪೋಹದ ಕಪೋಲಕಲ್ಪಿತ ಸುದ್ದಿ)ಯಿಂದ ಸದಾ ದೂರವಿದ್ದವರು.ಏಕೆಂದರೆ ಕೇವಲ ಟಿಆರ್ ಪಿ ಹೆಚ್ಚಿಸಿಕೊಳ್ಳಲಿಕ್ಕೆ ಸತ್ಯಕ್ಕೆ ದೂರವಾದ ಅಹಿತಕರವಾದ ಸುದ್ದಿಯನ್ನು ಬ್ರೇಕ್ ಮಾಡುವುದರಿಂದ ಯಾರದೋ ಮನಸಿಗೆ ಘಾಸಿಯಾಗಬಹುದು, ತೇಜೋವಧೆಯಾಗ ಬಹುದು, ಅದು ವೃತ್ತಿನಿಷ್ಟೆಯಲ್ಲ ಎಂದು “ಚಪಾತಿ” ಹಾಕುವ ಬಹುತೇಕ ಸುದ್ದಿಗಾರರ ಬಗ್ಗೆ ಬೇಸರ-ಅಸಹನೆಯಿಂದ ಹೇಳುತ್ತಿದ್ದರು ಬದ್ರುದ್ದೀನ್.ಅಷ್ಟೇ ಅಲ್ಲ, ಯಾರ ವಿರುದ್ಧವೇ ಸುದ್ದಿ ಮಾಡಿದ್ರೂ ಅವರೊಂದಿಗೆ ಇರುವ ಸೌಹಾರ್ದಯುತ ಸಂಬಂಧವನ್ನು ಹಾಳು ಮಾಡಿಕೊಂಡವರಲ್ಲ ಬದ್ರುದ್ದೀನ್.ಇವರ ವಿರುದ್ದ ರಾಜಕೀಯದವರು ಪ್ರದರ್ಶಿಸುತ್ತಿದ್ದುದು ಕೇವಲ ಸಾತ್ವಿಕ ಆಕ್ರೋಶ ಮಾತ್ರ.ಹಾಗಾಗಿನೇ ಬದ್ರುದ್ದೀನ್ ಎಲ್ಲಾ ಪಕ್ಷಕ್ಕೂ ಅಚ್ಚುಮೆಚ್ಚಿನ ವರದಿಗಾರ. ಇವತ್ತಿಗೂ ಬದ್ರುದ್ದೀನ್ ಬಗ್ಗೆ ರಾಜಕಾರಣಿಗಳಲ್ಲಿ ಅದೇ ಭಾವನೆ-ಅಭಿಪ್ರಾಯ ಇದೆ.
ಬದ್ರುದ್ದೀನ್ ಅವರೇ “ಎಕ್ಸ್ ಕ್ಲ್ಯೂಸಿವ್ ಸುದ್ದಿ”ಗಳ ಹೆಡ್ ಕ್ವಾರ್ಟರ್ಸ್:ಇದರಲ್ಲಿ ಅನುಮಾನ ವೇ ಇಲ್ಲ.ಪಬ್ಲಿಕ್ ಟಿವಿಯಲ್ಲಿ ರಾಜಕೀಯವಾಗಿ ಸಂಚಲನ ಮೂಡಿಸಿದ ಬಹುತೇಕ ಸುದ್ದಿಗಳ ಸ್ಪೋಟದ ಹಿಂದಿನ ಶಕ್ತಿಯೇ ಬದ್ರುದ್ದೀನ್.ಒಂದಿಲ್ಲೊಂದು ತಿರುವು ಪಡೆಯುವ, ಮಗ್ಗಲು ಬದಲಿಸುತ್ತಲೇ ಇರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರು ಕೊಟ್ಟಷ್ಟು ಬ್ರೇಕಿಂಗ್ ನ್ಯೂಸ್ ನ್ನು ಬೇರೊಂದು ಚಾನೆಲ್ ನೀಡಿರುವ ಸಾಧ್ಯತೆ ಕಡಿಮೆಯೇನೋ..? ವಿಧಾನಸೌಧದ ಪಡಸಾಲೆಯಲ್ಲಿ ಗಿರಕಿ ಹೊಡೆಯುವ ಇತರೆ ಚಾನೆಲ್ ಗಳ ವರದಿಗಾರರೇ ಬದ್ರುದ್ದೀನ್ ತಾಕತ್ತಿಗೆ ಅಚ್ಚರಿ ಪಟ್ಟಿದ್ದುಂಟು.ವಿಧಾನಸೌಧದ ಕಾರಿಡಾರ್ ನಲ್ಲಿ ಕಾಣಿಸಿಕೊಳ್ಳದಿದ್ದರೂ ಕುಳಿತಲ್ಲಿಂದಲೇ ಸುದ್ದಿ ಮೂಲಗಳಿಂದ ಸುದ್ದಿ ಪಡೆದು ಅದನ್ನು ಬ್ರೇಕ್ ಮಾಡೋ ತಾಕತ್ತು ಬದ್ರುದ್ದೀನ್ ಗೆ ಇತ್ತು.ಇನ್ನು ಕಾರಿಡಾರ್ ನಲ್ಲಿ ಮೈ ಪರಚಿಕೊಂಡು ಕೆಲಸ ಮಾಡಿದಿದ್ದರೆ ಏನೇನಾಗಬಹುದಿತ್ತೋ..ಊಹೆ ಮಾಡೋರಿಗೆ ಅದರ ಅಂದಾಜು ಸಿಗಬಹುದೇನೋ..? ಹಾಗಾಗಿನೇ ಪಬ್ಲಿಕ್ ಟಿವಿಯಲ್ಲಿ ಬದ್ರುದ್ದೀನ್ ಅವರು ಬ್ರೇಕಿಂಗೋ..ಎಕ್ಸ್ ಕ್ಲ್ಯೂಸಿವ್ ಸುದ್ದಿ ಕೊಡ್ತಾರೆಂದ್ರೆ ಅದನ್ನು ಇತರೆ ಚಾನೆಲ್ ಗಳ ವರದಿಗಾರರು ಫಾಲೋ ಮಾಡುತ್ತಿದ್ದರು.ಬದ್ರುದ್ದೀನ್ ಅವರ ಸುದ್ದಿ ಎಂದ್ರೆ ಅಷ್ಟರ ಮಟ್ಟಿಗೆ ವಿಶ್ವಾಸಾರ್ಹವಾಗಿರುತ್ತೆನ್ನುವುದು ವರದಿಗಾರರ ನಂಬಿಕೆ.
ಹಿಂದೆ ನಿಂತು ಬೆಳೆಸುವ ನಾಯಕತ್ವದ ಗುಣವೇ ಬದ್ರುದ್ದೀನ್ ಅವರ ಪ್ಲಸ್: ಇದು ಬದ್ರುದ್ದೀನ್ ಜತೆ ಕೆಲಸ ಮಾಡಿದ ಎಲ್ಲರೂ ಒಪ್ಪುವಂತ ವಿಷಯ.ತಾನೊಬ್ಬನೇ ಬೆಳೆಯುವುದಲ್ಲ ಪತ್ರಿಕೋದ್ಯಮ, ತಮ್ಮ ಜತೆಗಿರುವ ಎಲ್ಲರನ್ನೂ ಬೆಳೆಸಿ ಅವರ ಬೆಳವಣಿಗೆಯಲ್ಲಿ ಸಂಭ್ರಮಿಸುವುದೇ ನೈಜ ಪತ್ರಿಕೋದ್ಯಮ ಎನ್ನುವ ಸಿದ್ದಾಂತ ಬದ್ರುದ್ದೀನ್ ಅವರದು.ಅದೇ ಅವರ ಬಗೆಗಿನ ನಂಬಿಕೆ-ವಿಶ್ವಾಸ ಹೆಚ್ಚಾಗೊಕ್ಕೆ ಕಾರಣವಾಯ್ತು.ಬದ್ರುದ್ದೀನ್ ಮನಸು ಮಾಡಿದಿದ್ದರೆ ಅವರಿಗೆ ಸಿಗುವ ಅದೆಷ್ಟೋ ಎಕ್ಸ್ ಕ್ಲ್ಯೂಸಿವ್ ಸುದ್ದಿಗಳನ್ನು ತಾನೇ ಸ್ಕ್ರೀನ್ ನಲ್ಲಿ ಮೊದಲು ಸ್ಪೋಟಿಸಿ ಬೆಳೆಯಬಹುದಿತ್ತು.
ಆದರೆ ಯಾವತ್ತು ಹಾಗೆ ಮಾಡದ ಬದ್ರುದ್ದೀನ್ ತನ್ನ ಜತೆಗಿರುವ ಪತ್ರಕರ್ತರಿಗೆ ಅದನ್ನು ಹಂಚಿ ಅವರದೇ ಸುದ್ದಿ ಎನ್ನುವಂತೆ ಅದಕ್ಕೆ ಪ್ರಚಾರ ಕೊಡಿಸುತ್ತಿದ್ದರು. ಅವರ ಬೆಳವಣಿಗೆಯಲ್ಲಿ ಸಂತೋಷ ಪಡುತ್ತಿದ್ದರು.ಎಲ್ಲರೂ ಬೆಳೆಯಬೇಕು ಕಣ್ರೋ ಎಂದು ಹೇಳುತ್ತಿದುದ್ದನ್ನು ನೆನಪಿಸಿಕೊಳ್ಳುವವರು ಅದೆಷ್ಟೋ ಜನ.ಪಬ್ಲಿಕ್ ಟಿವಿಯ 9 ವರ್ಷಗಳ ಸುಧೀರ್ಘ ಸೇವಾವಧಿಯಲ್ಲಿ ಎಷ್ಟೋ ವರದಿಗಾರರ ಬ್ರೇಕಿಂಗ್-ಎಕ್ಸ್ ಕ್ಲ್ಯೂಸಿವ್ ಸುದ್ದಿಗಳ ಹಿಂದಿನ ಶಕ್ತಿಯೇ ಒನ್ ಎಂಡ್ ಒನ್ಲಿ ಬದ್ರುದ್ದೀನ್ ಎನ್ನಬಹುದೇನೋ.. ಟಿಆರ್ ಪಿ ಹಿಂದೆ ಬಿದ್ದು ಅವಸರವಸರದಲ್ಲಿ ಏನೇನೋ ಹೇಳುವ ಧಾವಂತಕ್ಕೆ ಸಿಲುಕಿ ಅದೆಷ್ಟೋ ಸುಳ್ಳುಗಳನ್ನು ತಮ್ಮ ಕಿರಿಯ ಸಹದ್ಯೋಗಿಗಳ ಬಾಯಿಂದ ಹೇಳಿಸಿ ಅಭಾಸ ಸೃಷ್ಟಿಸುತ್ತಿರುವ,ಜನರಿಂದ ಉಗಿಸಿಕೊಳ್ಳೊಕ್ಕೆ ಕಾರಣವಾಗುತ್ತಿರುವ ಅದೆಷ್ಟೋ ಚೀಫ್ ಗಳಿಗೆ ಬದ್ರುದ್ದೀನ್ ಅಪವಾದ ಎನ್ನುವುದಕ್ಕೆ ಕಾರಣವೇ ಇನ್ನೊಬ್ಬರನ್ನು ಬೆಳೆಸುವ ಅವರ ನಾಯಕತ್ವದ ಗುಣ.
ಬದ್ರುದ್ದೀನ್ ವಿದಾಯಕ್ಕೆ ಕಣ್ಣೀರಿಟ್ಟ ಪಬ್ಲಿಕ್ ಟಿವಿ ಬಳಗ: ಪಬ್ಲಿಕ್ ಟಿವಿ ಬಳಗದ ಮೂಲಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಕೊಟ್ಟ ಮಾಹಿತಿ,ಖುದ್ದು ಬದ್ರುದ್ದೀನ್ ನೀಡಿದ ವಿವರಣೆಗಳು ಒಂದು ಚಾನೆಲ್ ತನ್ನ ಹಿರಿಯ ಸಹದ್ಯೋಗಿಯನ್ನು ಹೀಗೂ ನಡೆಸಿಕೊಳ್ಳಬಲ್ಲದಾ ಎನ್ನುವ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ.ತನ್ನ ವೈಯುಕ್ತಿಕ ಕಾರಣಗಳಿಂದ ಚಾನೆಲ್ ಬಿಡಬೇಕೆಂದುಕೊಂಡಿದ್ದೇನೆ ಎಂದು ವರ್ಷಗಳ ಹಿಂದೆ ಹೇಳಿದ್ದಾಗಲೇ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಸೇರಿದಂತೆ ಸಂಪಾದಕೀಯ ಮಂಡಳಿ ನಿಮ್ಮನ್ನು ಕಳಕೊಳ್ಳೊಕ್ಕೆ ನಮಗೆ ಇಷ್ಟವಿಲ್ಲ.ನಿಮಗೆ ಕೆಲಸದ ಹೊರೆ ಕಡಿಮೆ ಮಾಡಬೇಕಾ..ಅದನ್ನು ಮಾಡೊಕ್ಕೆ ನಾವು ಸಿದ್ದ.ನಿಮ್ಮ ಹಿರಿತನ-ಜೇಷ್ಠತೆ-ಅನುಭವ ಎಲ್ಲಕ್ಕಿಂತ ಜ್ಞಾನಭಂಡಾರದ ಅವಶ್ಯಕತೆ ನಮಗಿದೆ ಎಂದು ಹೇಳಿತ್ತಂತೆ ಮ್ಯಾನೇಜ್ಮೆಂಟ್.
ಕೆಲಸದ ಹೊರೆ ಕಡಿಮೆ ಮಾಡೊಕ್ಕೆ ಅವರು ಇಚ್ಛೆ ಪಟ್ಟಂತೆ ಡಿಜಿಟಲ್ ಮಖ್ಯಸ್ಥರನ್ನಾಗಿ ನಿಯೋಜಿಸಲಾಗಿತ್ತು.ಅವರ ಮನವಿ ಯನ್ನೆಲ್ಲಾ ಕಾಲಕಾಲಕ್ಕೆ ಈಡೇರಿಸುತ್ತಾ ಬಂದಿತ್ತಂತೆ.ಆದರೆ ಏನೇ ಕೊಟ್ಟರೂ ಕೆಲಸಕ್ಕೆ ನ್ಯಾಯ ತೀರಿಸದೆ ಸವಲತ್ತುಗಳನ್ನು ಬಳಸಿಕೊಳ್ಳುವುದು ನನಗೆ ಮುಜುಗರ ತರಿಸುತ್ತೆ.ಅಲ್ಲದೇ ಅದು ವೃತ್ತಿನಿಷ್ಟೆಯಲ್ಲ ಎಂದು ವಿನಯಪೂರ್ವಕವಾಗಿ ಹೇಳುತ್ತಲೇ ವೈಯುಕ್ತಿಕ ಕಾರಣಗಳಿಂದ ಕೆಲಸ ಬಿಡಲೇಬೇಕೆನ್ನುವ ತೀರ್ಮಾನಕ್ಕೆ ಬಂದಾಗ ಇಡೀ ಪಬ್ಲಿಕ್ ಟಿವಿ ಬಳಗ ಶಾಕ್ ಗೆ ಒಳಗಾ ಗಿತ್ತಂತೆ. ಎಷ್ಟೇ ಮನವಿ ಹೊರತಾಗ್ಯೂ ತನ್ನ ನಿರ್ದಾರ ಬದಲಿಸದಿದ್ದಾಗ ಅನಿವಾರ್ಯವಾಗಿ ಬೀಳ್ಕೊಡುಗೆ ನೀಡಬೇಕಾ ಯಿತಂತೆ.ಆ ವಿದಾಯ ಕೂಡ ಭಾವನಾತ್ಮಕ-ಹೃದಯಸ್ಪರ್ಷಿಯಾಗಿತ್ತಂತೆ.ಎಲ್ಲರ ಮನಸುಗಳು ಭಾರಗೊಂಡಿದ್ವಂತೆ. ಮಾತುಗಳು ಗದ್ಗದಿತವಾಗಿದ್ವಂತೆ.ಬದ್ರುದ್ದೀನ್ ನಮ್ಮಿಂದ ದೂರವಾಗುತ್ತಿದ್ದಾರೆನ್ನುವುದನ್ನು ಜೀರ್ಣಿಸಿಕೊಳ್ಳಲಾಗದವರ ಕಣ್ಣಾಲಿಗಳು ತುಂಬಿಬಂದಿದ್ವಂತೆ.ಕೆಲವರು ತಮ್ಮ ವಾಟ್ಸಪ್-ಫೇಸ್ ಬುಕ್ ಸ್ಟೇಟಸ್ ನಲ್ಲಿ ಹಾಕ್ಕೊಂಡಿರುವ ವಾಕ್ಯಗಳೇ ಬದ್ರುದ್ದೀನ್ ಜತೆ ಅವರಿಗಿರುವ ಭಾವನಾತ್ಮಕ ನಂಟನ್ನು ಸಾರಿ ಹೇಳುವಂತಿದೆ.
“ಕಸ್ತೂರಿ” ಬಿಡುವಾಗ ಅತ್ತಿದ್ದೆ. ಮತ್ತೊಮ್ಮೆ ಕಣ್ಣೀರು ಹಾಕಿದ್ದು “ಪಬ್ಲಿಕ್” ತೊರೆಯುವಾಗ: ಈ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಬದ್ರುದ್ದೀನ್ ಅವರನ್ನೇ ಸಂಪರ್ಕ ಮಾಡಿತು.ಸುಮಾರು 15 ನಿಮಿಷಗಳ ಮಾತುಕತೆ ವೇಳೆ ಬದ್ರುದ್ದೀನ್ ಪಬ್ಲಿಕ್ ಜತೆಗಿನ 9 ವರ್ಷಗಳ ನಂಟನ್ನು ಮನೋಜ್ಞವಾಗಿ ಬಿಚ್ಚಿಟ್ಟರು.ನಾನು ನನ್ನ ವೃತ್ತಿಯಲ್ಲಿ ಅತ್ತಿದ್ದು ಎರಡೇ ಬಾರಿ.ಒಂದು ನನ್ನ ಕುಟುಂಬದಂತಿದ್ದ ಕಸ್ತೂರಿ ಟಿವಿಯನ್ನು ಬಿಡುವಾಗ.ಅದಾಗಿ 9 ವರ್ಷಗಳ ನಂತರ ನನ್ನ ಕಣ್ಣನ್ನು ತೋಯಿಸಿದ್ದು ಪಬ್ಲಿಕ್ ಟಿವಿ.ನನ್ನನ್ನು ರಂಗಣ್ಣಆಗಲಿ,ದಿವಾಕರ್ ಆಗಲಿ ಯಾವತ್ತೂ ಕೆಲಸಗಾರನಂತೆ ನೋಡಲೇ ಇಲ್ಲ.ವೈಯುಕ್ತಿಕ ಕಾರಣಗಳಿಂದ ಎಷ್ಟೋ ಬಾರಿ ಚಾನೆಲ್ ಬಿಡಬೇಕೆಂದುಕೊಂಡಾಗಲೂ ನನ್ನನ್ನು ತಡೆದಿದ್ದು, ಮ್ಯಾನೇಜ್ಮೆಂಟ್ ನನ್ನ ಮೇಲೆ ಇಟ್ಟಿರುವ ನಂಬಿಕೆ.ನನಗೆ ಯಾವುದರಲ್ಲೂ ಕಡಿಮೆ ಮಾಡಲೇ ಇಲ್ಲ.
ಆದ್ರೆ ನನ್ನ ಮಗ 10ನೇ ತರಗತಿ ಓದುತ್ತಿದ್ದಾನೆ.ಅವನ ಎಜುಕೇಷನ್ ನೋಡಬೇಕು.ಈ 31 ವರ್ಷಗಳಲ್ಲಿ ಫ್ಯಾಮಿಲಿಗೆ ಟೈಮ್ ಕೊಡಲಿಕ್ಕೇನೆ ಆಗಲಿಲ್ಲ.ಅದನ್ನು ಮಿಸ್ ಮಾಡಿಕೊಳ್ಳೊಕ್ಕೆ ಸಿದ್ದನಿಲ್ಲ.ಹಾಗಾಗಿ ಪಬ್ಲಿಕ್ ಟಿವಿ ಬಿಡುವ ನಿರ್ದಾರ ಕೈಗೊಂಡೆ.ಭಾರವಾದ ಮನಸಿನಿಂದಲೇ ಹೊರಬಂದಿದ್ದೇನೆ.ಆದರೆ ಕೆಲವೊಂದು ವಿಚಾರಗಳಲ್ಲಿ ಚಾನೆಲ್ ಜತೆಗೆ ನಂಟು ಇದ್ದೇ ಇರುತ್ತೆ.ಅದನ್ನು ಕಳೆದುಕೊಳ್ಳೊಕ್ಕೆ ಇಷ್ಟವಿಲ್ಲ ಎಂದ್ರು.
ಮುಖ್ಯವಾಹಿನಿಯಿಂದ ಡಿಜಿಟಲ್ ಗೆ ಹಾಕಿ ಮೂಲೆಗುಂಪು ಮಾಡಿದ್ರಿಂದ ಬೇಸತ್ತು ಹೊರಬರುತ್ತಿದ್ದೀರಿ ಎನ್ನುವ ಸುದ್ದಿ ಪಸರ್ ಆಗ್ತಿದೆಯೆಲ್ಲಾ ಎಂದು ಕೇಳಿದ್ರೆ, ಛೇ..ಛೇ.. ಹಾಗೇನಾದ್ರೂ ಅಂದ್ರೆ ನನಗೆ ಒಳ್ಳೇದಾಗೊಲ್ಲ..ನನ್ನ ಆತ್ಮಕ್ಕೆ ನಾನು ವಂಚನೆ ಮಾಡಿಕೊಂಡಂತೆ.ರಂಗಣ್ಣ ನನಗೆ ಎಲ್ಲಾ ರೀತಿಯ ಸ್ವಾತಂತ್ರ್ಯ-ಅವಕಾಶ ಕೊಟ್ಟಿದ್ದಾರೆ.ಡಿಜಿಟಲ್ ನಾನೇ ಆಯ್ಕೆ ಮಾಡಿಕೊಂಡ ವಿಭಾಗ ಅಷ್ಟೇ.ಸುಮ್ಮನೆ ಹಾಗೆಲ್ಲಾ ಸುಳ್ಳು ಸುದ್ದಿ ಹರಡೋದು ಸರಿಯಲ್ಲ..ನಾನು ಪಬ್ಲಿಕ್ ಟಿವಿ ಬಗ್ಗೆ ಹಾಗೆ ಮಾತನಾಡಿದ್ರೆ ನನಗೆ ಖಂಡಿತಾ ಒಳ್ಳೇದಾಗೊಲ್ಲ ಎಂದ್ರು.
ಬದ್ರುದ್ದೀನ್ ಅವರನ್ನು ತೆಗುದ್ರಂತೆ…ಅಲ್ಲಲಾ..ಬೇಸರದಿಂದ ಅವರೇ ಬಿಟ್ಟರಂತೆ..: ಹೀಗೂ ಒಂದು ಸುದ್ದಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಕಳೆದೊಂದು ವರ್ಷದಿಂದ ಬದ್ರುದ್ದೀನ್ ಅವರನ್ನು ಮೂಲೆಗುಂಪು ಮಾಡಿದ್ರು.ಮುಖ್ಯವಾಹಿನಿಯಿಂದ ತೆಗೆದು ಡಿಜಿಟಲ್ ಗೆ ಹಾಕಿದ್ರು.ಇದರಿಂದ ಬದ್ರುದ್ದೀನ್ ಗೆ ತೀರಾ ಅವಮಾನವಾಯಿತಂತೆ.ಅನೇಕ ಬಾರಿ ಕೋರಿಕೊಂಡರೂ ಅದನ್ನು ಪರಿಗಣಿಸಲೇ ಇಲ್ವಂತೆ.ಇಷ್ಟ ಇದ್ದರೆ ಮಾಡಿ,ಇಲ್ಲಾಂದ್ರೆ ಬಿಡಿ ಎಂದು ಹೇಳಿತ್ತಂತೆ ಮ್ಯಾನೇಜ್ಮೆಂಟ್..ಹಾಗಾಗಿ ಬದ್ರುದ್ದೀನ್ ಅವರೇ ಕೆಲಸ ಬಿಟ್ಟರಂತೆ..ಹೀಗೆ ಪತ್ರಕರ್ತರ ಮಿತ್ರರೇ ಫೋನಾಯಿಸಿ ಹೇಳಿದ್ದುಂಟು.ಅವರ ಬಗ್ಗೆ ಬರೆಯಿರಿ ಎಂದು ಮನವಿ ಮಾಡಿದ್ದುಂಟು.ಪತ್ರಿಕೋದ್ಯಮದಲ್ಲಿ ಹೀಗೆಲ್ಲಾ ಸುದ್ದಿ ಹಬ್ಬುವುದು ಸಹಜ.ಆದರೆ ಅವಸರ ಮಾಡದೆ ಅವಲೋಕಿಸಿದಾಗ ಬದ್ರು ಅವರ ನಿರ್ಗಮನ ಹಾಗೂ ಅದರ ಹಿಂದೆ ಇರುವ ಕಾರಣಗಳು ಅನಾವರಣಗೊಂಡವು.
ತೀರಾ ವೈಯುಕ್ತಿಕ ಕಾರಣಗಳಿಗೆ 54ರ ವಯಸ್ಸಿನಲ್ಲಿ ಬದ್ರು ಸಕ್ರೀಯ ಪತ್ರಿಕೋದ್ಯಮದಿಂದ ನಿರ್ಗಮಿಸಿದ್ದಾರೆ.ಇದು ಕೇವಲ ಪಬ್ಲಿಕ್ ಟಿವಿಗೆ ಮಾತ್ರವಲ್ಲ, ನಮ್ಮ ಇಡೀ ಪತ್ರಿಕಾರಂಗಕ್ಕೆ ದೊಡ್ಡ ಶಾಕ್ ಹಾಗೂ ನಷ್ಟ.ಆದ್ರೂ ವ್ಯಕ್ತಿಗೆ ವೈಯುಕ್ತಿಕ ಬದುಕೂ ಅಷ್ಟೇ ಮುಖ್ಯ.ಹಾಗಾಗಿ ಅವರ ನಿರ್ದಾರವನ್ನು ಗೌರವಿಸಬೇಕಷ್ಟೆ.ಬದ್ರುದ್ದೀನ್ ಅವರ ಮುಂದಿನ ಆಯ್ಕೆಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಮುಂಗಡವಾಗಿಯೇ ಆಲ್ ದಿ ಬೆಸ್ಟ್ ಹೇಳುತ್ತೆ.