ಅನಧೀಕೃತ “PG”ಗಳಿಗೆ ಬ್ರೇಕ್:CCTV-ನಿರ್ಗಮನ ದ್ವಾರ-ಪ್ರತಿಯೊಬ್ಬರಿಗೆ 70 ಚದರಡಿ ಸ್ಥಳಾವಕಾಶ-135 ಲೀಟರ್ ನೀರು,ಆಹಾರ ಗುಣಮಟ್ಟಕ್ಕೆ FSSAI ಪತ್ರ,ಅಗ್ನಿಸುರಕ್ಷತೆ ,24*7 ಸೆಕ್ಯೂರಿಟಿ ಗಾರ್ಡ್ ,ಪೊಲೀಸ್ ಸಹಾಯವಾಣಿ ಕಡ್ಡಾಯ..

ಅನಧೀಕೃತ “PG”ಗಳಿಗೆ ಬ್ರೇಕ್:CCTV-ನಿರ್ಗಮನ ದ್ವಾರ-ಪ್ರತಿಯೊಬ್ಬರಿಗೆ 70 ಚದರಡಿ ಸ್ಥಳಾವಕಾಶ-135 ಲೀಟರ್ ನೀರು,ಆಹಾರ ಗುಣಮಟ್ಟಕ್ಕೆ FSSAI ಪತ್ರ,ಅಗ್ನಿಸುರಕ್ಷತೆ ,24*7 ಸೆಕ್ಯೂರಿಟಿ ಗಾರ್ಡ್ ,ಪೊಲೀಸ್ ಸಹಾಯವಾಣಿ ಕಡ್ಡಾಯ..

ಬೆಂಗಳೂರು: ಬೇಕಾಬಿಟ್ಟಿಯಾಗಿ ಪಿಜಿ(PG-PAYING GUESTS)ಗಳನ್ನು ನಡೆಸುವವರಿಗೆ ಬಿಬಿಎಂಪಿ(BBMP) ಸರಿಯಾಗಿಯೇ ಕಡಿವಾಣ ಹಾಕೊಕ್ಕೆ ಮುಂದಾಗಿದೆ.ಪಿಜಿಯಲ್ಲಿ ಯುವತಿಯೊಬ್ಬಳ ಕೊಲೆ ನಡೆದ ಮೇಲೆ ಎಚ್ಚೆತ್ತುಕೊಂಡು ಅದೆಲ್ಲಕ್ಕೂ ಕಡಿವಾಣ ಹಾಕಿ ಪಿಜಿಗಳನ್ನು ಸುರಕ್ಷಿತ ತಾಣವನ್ನಾಗಿಸೊಕ್ಕೆ ಹೊರಟಂತಿದೆ‘ ಬಿಬಿಎಂಪಿ.  ಕೆಲವು ಪ್ರಮುಖ ನಿಯಾಮವಳಿಗಳನ್ನು ರೂಪಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BRAHAT BENGALURU MAHANAGARA PALIKE) ಇದರ ಕಡ್ಡಾಯ ಅಳವಡಿಕೆ ಹಾಗೂ ಪಾಲನೆಗೆ ಕಟ್ಟಪ್ಪಣೆ ಮಾಡಿದೆ. ಗೈಡ್ ಲೈನ್ಸ್ (GUIDELINES) ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಜಾರಿ ಮಾಡುವುದಲ್ಲದೇ ಪಿಜಿಗಳನ್ನು ಪರವಾನಗಿಯನ್ನೇ ರದ್ದು ಮಾಡುವ ನಿರ್ದಾರ ಕೈಗೊಂಡಿದೆ.

ಬೆಂಗಳೂರಿನಲ್ಲಿ ಒಂದು ಅಂದಾಜು ಎಷ್ಟು ಪಿಜಿಗಳಿರಬಹುದು..ಎಷ್ಟ್ ಜನ ಪಿಜಿಗಳನ್ನೇ ಅವಲಂಭಿತವಾಗಿರಬಹುದು.ನೀವ್ ಕೇಳಿದ್ರೆ ಆಶ್ವರ್ಯವಾಗಬಹುದು 25 ಸಾವಿರಕ್ಕೂ ಹೆಚ್ಚು ಪಿಜಿಗಳು  ಬೆಂಗಳೂರಿನ ಒಳ ಹಾಗೂ ಹೊರಭಾಗದಲ್ಲಿದ್ದು 20 ಲಕ್ಷದಷ್ಟು ಜನರು ಇದನ್ನೇ ಅವಲಂಭಿಸಿದ್ದಾರಂತೆ. ಸಾವಿರಾರು ಹಣವನ್ನು ಖರ್ಚು ಮಾಡಿ ಪಿಜಿಗಳಲ್ಲಿ ವಾಸ ಮಾಡುತ್ತಿರುವವರಿಗೆ ಅಗತ್ಯ ಸುರಕ್ಷತೆ ಜತೆಗೆ ಶುಚಿತ್ವದ ವ್ಯವಸ್ಥೆ-ವಿಶಾಲವಾದ ಸ್ಥಳಾವಕಾಶ-ಗಾಳಿ ಬೆಳಕು,ರುಚಿಯಾದ ಆಹಾರ ಕಲ್ಪಿಸುವ ಕೆಲಸವನ್ನು ಪಿಜಿ ಮಾಲೀಕರು ಮಾಡುತ್ತಿದ್ದಾರಾ..? ಬಹುತೇಕ ಇಲ್ಲ ಎನ್ನುವ ಉತ್ತರ ಸಿಗುತ್ತದೆ.

ಅದರಲ್ಲೂ ಪ್ರತಿಷ್ಟಿತ ಕಾಲೇಜುಗಳು ಇರುವ ಪ್ರದೇಶದಲ್ಲಂತೂ ಪಿಜಿಗಳು ನೂರಾರು ಸಂಖ್ಯೆಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿವೆ.ಎತ್ತುತ್ತಿವೆ ಹಾಗು ಇನ್ನೂ ತಲೆ ಎತ್ತಲಿವೆ.ಅಲ್ಲೆಲ್ಲಾ ಬಹುತೇಕ ಪಿಜಿಗಳು ಕಟ್ಟಡ ನಿರ್ಮಾಣದಿಂದ ಹಿಡಿದು ಅಗತ್ಯ ವ್ಯವಸ್ಥೆ ಕಲ್ಪಿಸುವವರೆಗಿನ ಬಹುತೇಕ ನಿಯಮಗಳನ್ನು ಗಾಳಿಗೆ ತೂರಿವೆ. ಇದಕ್ಕೆ ಕೆಲವು ಬಿಬಿಎಂಪಿ, ಆಹಾರ ಸುರಕ್ಷತಾ ಇಲಾಖೆ, ಪೊಲೀಸ್, ಹಾಗೂ ಅಗ್ನಿಶಾಮಕ ಅಧಿಕಾರಿಗಳು ಕಾರಣವಾಗಿದ್ದಾರೆ ಎನ್ನುವುದು ದುರಾದೃಷ್ಟಕರ.ಕೆಲವು ಭ್ರಷ್ಟರು ಹಾಗು ಅಪ್ರಮಾಣಿಕರು ಪಿಜಿ ಮಾಲಿಕರಿಂದ ಹಣ ಪಡೆದು ಅಕ್ರಮಗಳನ್ನೊಳಗೊಂಡು ಪಿಜಿಗಳು ನಡೆಯುವಂತೆ ಮಾಡುತ್ತಿದ್ದಾರೆ.

ಇವೆಲ್ಲವನ್ನು ಮನಗಂಡಿಯೇ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲು ಬಿಬಿಎಂಪಿ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ನಿಯಮ ರೂಪಿಸಲು ಯತ್ನಿಸುತ್ತಲೇ ಇತ್ತು.ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ.ಆದರೆ ಮೊನ್ನೆ ನಡೆದ ಘಟನೆ ಮೇಲಂತೂ ಸಾರ್ವಜನಿಕವಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದರಿಂದ ಅಂತಿಮವಾಗಿ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಿದೆ.ಇದರಲ್ಲಿರುವ ಗೈಡ್ ಲೈನ್ಸ್ ಗಳನ್ನು ಶೇಕಡಾ 90 ರಷ್ಟು ಪಿಜಿಗಳು ಅನುಸರಿಸುತ್ತಿಲ್ಲ ಎನ್ನುವುದು ದುರಂತವಾದ್ರೂ ವಾಸ್ತವ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020ರ ಸೆಕ್ಷನ್ 305ರ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿರುವ “ಪೇಯಿಂಗ್ ಗೆಸ್ಟ್’ (PGs)ಗಳಿಗೆ ‘ಪರವಾನಿಗೆ ಮಂಜೂರಾತಿ’/’ನವೀಕರಣ’ ಹಾಗೂ ಈಗಾಗಲೇ ಪರವಾನಿಗೆ ಪಡೆದು ಅಸ್ತಿತ್ವದಲ್ಲಿರುವ ಪೇಯಿಂಗ್ ಗೆಸ್ಟ್‌ಗಳಿಗೆ ಸಂಬಂಧಿಸಿದಂತೆ  ಬಿಬಿಎಂಪಿ ರೂಪಿಸಿರುವ ಗೈಡ್ ಲೈನ್ಸ್ ಗಳ ವಿವರ ಕೆಳಕಂಡಂತಿದೆ.

ನಿಯಮ.1. ಪೇಯಿಂಗ್ ಗೆಸ್ಟ್‌ಗಳಲ್ಲಿನ ಎಲ್ಲಾ ಪ್ರವೇಶ/ನಿರ್ಗಮನ ದ್ವಾರ, ಮತ್ತು ಆವರಣದ ಸುತ್ತಮುತ್ತಲಿನ ಘಟನಾವಳಿಗಳನ್ನು ಚಿತ್ರೀಕರಿಸಲು ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿರತಕ್ಕದ್ದು. ಪ್ರತಿಯೊಂದು ಸಿ.ಸಿ ಟಿ.ವಿ. ಕ್ಯಾಮರಾದ ವೀಡಿಯೋ ಮತ್ತು ಫುಟೇಜ್‌ಗಳನ್ನು 90 ದಿನಗಳವರೆಗೆ ಹಾರ್ಡ್‌ ವೇರ್ & ಸಾಫ್ಟ್‌ವೇರ್ ಬ್ಯಾಕಪ್ ಸ್ಟೋರೆಜ್‌ನ್ನು ಸಂರಕ್ಷಿಸತಕ್ಕದ್ದು.

ನಿಯಮ.2. ವಸತಿ ಸಂಬಂಧಿತ ಕಟ್ಟಡ ನಿಯಮಗಳ ಪ್ರಕಾರ, ಪೇಯಿಂಗ್ ಗೆಸ್ಟ್ಗಳಲ್ಲಿ ಪ್ರತಿಯೊಬ್ಬ ನಿವಾಸಿಗೆ ವಾಸಕ್ಕೆ ತಲಾ 70 ಚದರ ಅಡಿಗಳ ಕನಿಷ್ಠ ಜಾಗವಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಟ್ಟಡದಲ್ಲಿ ಒದಗಿಸಲಾದ/ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ನಿರ್ಧಿಷ್ಟ ಸಂಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಗಿಯನ್ನು ನೀಡತಕ್ಕದ್ದು.

ನಿಯಮ.3. ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯಗಳ ಸೇವೆಯನ್ನು ಒದಗಿಸಿರತಕ್ಕದ್ದು.

ನಿಯಮ.4. ಪೇಯಿಂಗ್ ಗೆಸ್ಟ್‌ಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿರತಕ್ಕದ್ದು. ಪ್ರತಿಯೊಬ್ಬ నిವಾಸಿಗೆ 135 LPCD ನೀರಿನ ಲಭ್ಯತೆ ಇರುವುದನ್ನು ಮಾಲೀಕರು/ಉದ್ದಿಮೆದಾರರು ಖಚಿತಪಡಿಸಿಕೊಳ್ಳತಕ್ಕದ್ದು.

ನಿಯಮ.5. ಪೇಯಿಂಗ್ ಗೆಸ್ಟ್‌ ಗಳಲ್ಲಿ ಉದ್ದಿಮೆದಾರರು ತಮ್ಮದೇ ಆದ ಅಡುಗೆಮನೆ ಹೊಂದಿದ್ದಲ್ಲಿ, ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ 03 ತಿಂಗಳ ಅವಧಿಯೊಳಗೆ ಕಡ್ಡಾಯವಾಗಿ FSSAI ಇಲಾಖೆಯಿಂದ ಲೈಸನ್ಸ್‌ನ್ನು ಪಡೆದುಕೊಳ್ಳತಕ್ಕದ್ದು.

ನಿಯಮ.6. ಉದ್ದಿಮೆದಾರರು/ಮಾಲೀಕರು ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ ನಿವಾಸಿಗಳ ಸುರಕ್ಷತಾ ದೃಷ್ಟಿಯಿಂದ ಕನಿಷ್ಟ ಪಕ್ಷ 01 ಸಿಬ್ಬಂದಿಯನ್ನಾದರೂ ಕಡ್ಡಾಯವಾಗಿ 24*7 ಸೇವೆಯಡಿಯಲ್ಲಿ ನಿಯೋಜಿಸಿರತಕ್ಕದ್ದು.

ನಿಯಮ.7. ಪೇಯಿಂಗ್ ಗೆಸ್ಟ್ ಉದ್ದಿಮೆಗಳಿಗೆ ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಪತ್ರ ವಿತರಿಸುವ ಮುನ್ನ ಉದ್ದೇಶಿತ ಕಟ್ಟಡದಲ್ಲಿ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಆಳವಡಿಸಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

ನಿಯಮ.8. ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ, ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯವಾಣಿ ಸಂಖ್ಯೆ-1533 ಮತ್ತು ಪೋಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ:101 ಅನ್ನು ಪ್ರದರ್ಶಿಸುವ ಫಲಕವನ್ನು ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಟ್ಟಿದ್ದು.

ನಿಯಮ.9. ಪೇಯಿಂಗ್ ಗೆಸ್ಟ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ(First Aid Kits)ಗಳನ್ನು ಆಳವಡಿಸಿರತಕ್ಕದ್ದು.

ನಿಯಮ.10. ಪೇಯಿಂಗ್ ಗೆಸ್ಟ್‌ನ ಮಾಲೀಕರು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿಗೊಳಸಲು ಕ್ರಮವಹಿಸತಕ್ಕದ್ದು.

ವಲಯ ಆರೊಗ್ಯಾಧಿಕಾರಿಯವರು, ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ತಮ್ಮ-ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಮೇಲ್ಕಂಡ ಮಾರ್ಗಸೂಚಿಗಳ ಪಾಲನೆಯಾಗುತ್ತಿರುವ ಕುರಿತು ಪ್ರತೀ ಆರು ತಿಂಗಳಿಗೊಮ್ಮೆ ಖಚಿತಪಡಿಸಿಕೊಳ್ಳತಕ್ಕದ್ದು.ಎಲ್ಲಾ ವಲಯ ಆಯುಕ್ತರುಗಳು ಮೇಲ್ಕಂಡ ಮಾರ್ಗಸೂಚಿಗಳ ಪಾಲನೆಯಾಗುತ್ತಿರುವುದರ ಕುರಿತು ಪರಿಶೀಲಿಸಿ ಖಚಿತಪಡಿಸಿಕೊಳ್ಳತಕ್ಕದ್ದು ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುವ ಉದ್ದಿಮೆದಾರರ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-2020ರ ಕಾಯ್ದೆ ಸೆಕ್ಷನ್ 307 & 308ರಂತೆ ಅಗತ್ಯ ಕ್ರಮ ಜರುಗಿಸಲು ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಸೂಚಿಸಿದ್ದಾರೆ.

ಪಿಜಿಗಳಿಗೆ ಕಡಿವಾಣ ಹಾಕೊಕ್ಕೆ ಬಿಬಿಎಂಪಿಯೇನೂ ಗೈಡ್ ಲೈನ್ಸ್ ರೂಪಿಸಿದೆ.ಆದರೆ ಅವುಗಳ ಪಾಲನೆ ಎಷ್ಟರ ಮಟ್ಟಿಗೆ ಆಗುತ್ತೆ.ಅದನ್ನು ಎಷ್ಟರ ಮಟ್ಟಿಗೆ ಮಾನಿಟರ್ ಮಾಡಲಾಗುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ..

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *