ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ಯಾಂಪಸ್ ನಲ್ಲಿ ಇವತ್ತು ಒಂದೇ ವಿಷಯದ ಬಗ್ಗೆ ಚರ್ಚೆ..ಅದು ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಕಚೇರಿ ಮೇಲೆ ನಡೆದ ಇ.ಡಿ ರೇಡ್.. ಬಹುಷಃ ಬಿಬಿಎಂಪಿಯಲ್ಲೇ ಪ್ರಹ್ಲಾದ್ ಅವರಷ್ಟು ಪ್ರಭಾವಶಾಲಿ ಅಧಿಕಾರಿ ಇನ್ನೊಬ್ಬನಿರಲಾರರೇನೋ..?!.ಅಂಥಾ ಅಧಿಕಾರಿಗೇನೆ ಇ.ಡಿ ತೋಡಿದ ಖೆಡ್ಡಾಕ್ಕೆ ಕೇವಲ ಬಿಬಿಎಂಪಿಯಷ್ಟೇ ಅಲ್ಲ, ಸರ್ಕಾರವೇ ಒಂದ್ ಕ್ಷಣ ಅದುರೋಗಿದೆ.ಏಕಂದ್ರೆ ಎಲ್ಲರಿಗು ಗೊತ್ತಿರುವಂತೆ ಪ್ರಹ್ಲಾದ್ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಅತ್ಯಾಪ್ತ ವರ್ಗದಲ್ಲಿ ಗುರುತಿಸಿಕೊಂಡಿದ್ದ ಅಧಿಕಾರಿ. ನಿಮಗೆ ಗೊತ್ತಿರಲಿ ಅಂಥಾ ಹೇಳುತ್ತೇವೆ ಕೇಳಿ, ಬಿಬಿಎಂಪಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಏನೇ ಕೆಲಸವಾಗ ಬೇಕೆಂದ್ರೂ ಜನ ಮೊದಲು ನೆನಪು ಮಾಡಿಕೊಳ್ಳುತ್ತಿದ್ದುದೇ ಪ್ರಹ್ಲಾದ್ ಅವರನ್ನಂತೆ ಎನ್ನುವಷ್ಟು ಅವರು ಫೇಮಸ್ ಆಗಿದ್ರಂತೆ.
ಬಿಜೆಪಿ ಮಾಜಿ ಕಾರ್ಪೊರೇಟರ್ ಎನ್.ಆರ್ ರಮೇಶ್ ಅವರು ಕೊಟ್ಟ ದೂರು ಬಿ.ಎಸ್ ಪ್ರಹ್ಲಾದ್ ಅವರ ಬುಡವನ್ನೇ ಕಾಯಿಸಿದೆ. ಯಾರು ನನ್ನನ್ನು ಏನೂ ಮಾಡಿಕೊಳ್ಳಲಿಕ್ಕಾಗೊಲ್ಲ..ನನಗೆ ದೊಡ್ಡವರ ಕೃಪಕಟಾಕ್ಷವಿದೆ.ನಾನೇನೇ ಮಾಡಿದ್ರೂ ನಡೆದೋಗ್ತದೆ ಎನ್ನುವ ಪ್ರಹ್ಲಾದ್ ಅಹಮಿಕೆಗೆ ಇ.ಡಿ ರೇಡ್ ಮರ್ಮಾಘಾತವನ್ನೆ ಮಾಡಿದೆ. ಪ್ರಹ್ಲಾದ್ ವಿರುದ್ಧ ಲೋಕಾಯುಕ್ತ,ಎಸಿಬಿ ಗೆ ದಂಡಿ ದೂರು ಕೊಟ್ಟರೂ ಅನೇಕ ಕಾರಣಗಳಿಂದ ಬಚಾವಾಗುತ್ತಿದ್ದ ಪ್ರಹ್ಲಾದ್ ಗೆ ಇ.ಡಿ ಕುಣಿಕೆ ಸಖತ್ತಾಗಿಯೇ ಪೆಟ್ಟು ನೀಡಿದೆ. ಬಹುಷಃ ಎನ್ ಆರ್ ರಮೇಶ್ ಅವರೊಳಗಿರುವ ಹೋರಾಟಗಾರನೊಬ್ಬನಿಗೆ ಸಿಕ್ಕ ಅತೀ ದೊಡ್ಡ ಗೆಲುವು ಇದೆಂದ್ರೂ ಅತಿಶಯೋಕ್ತಿಯಲ್ಲ.ಈ ಕಾರಣಕ್ಕೆ ಎನ್.ಆರ್ ರಮೇಶ್ ಅವರಿಗೊಂದು ಅಭಿನಂದನೆ ಸಲ್ಲಲೇಬೇಕು.
ಸಾಮರ್ಥ್ಯ-ಅರ್ಹತೆಯ ಮಾನದಂಡದಲ್ಲಿ ಬಿ.ಎಸ್ ಪ್ರಹ್ಲಾದ್ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿದಿದ್ದರೆ ಅವರಲ್ಲಿ ಅಹಮಿಕೆ-ಗರ್ವ-ನಾನೇ ಎಲ್ಲಾ ಎನ್ನುವ ಸ್ವಾರ್ಥ ಎನ್ನೋದು ಬರುತ್ತಿರಲಿಲ್ಲವಂತೆ. ಆರಂಭದ ದಿನಗಳಲ್ಲಿ ಪ್ರಹ್ಲಾದ್ ಅವರನ್ನು ಬಿಬಿಎಂಪಿಯಲ್ಲಿ ಕಂಡವರೇ ಹೇಳುವ ಮಾತುಗಳಿವು.ಈ ಮನುಷ್ಯನಿಗೆ ಅಧಿಕಾರ ಸಿಗ್ತಿದ್ದಂಗೆ ನೈಜವಾಗಿ ಇರಬೇಕಿದ್ದ ಸೌಜನ್ಯ-ಸಂಯಮಗಳೇ ಕಾಣೆಯಾದವು.ಮುಖ್ಯ ಆಯುಕ್ತರನ್ನು ತಾತ್ಸಾರದಿಂದ ನೋಡುವ,ಅವರ ಬಗ್ಗೆ ಹಗುರವಾಗಿ ಮಾತನಾಡುವ ಮಟ್ಟಕ್ಕೆ ತಲುಪಿಬಿಟ್ಟ.ಆದರೆ ಕಾಲಚಕ್ರದಲ್ಲಿ ಎಲ್ಲದಕ್ಕೂ ಒಂದು ಅಂತ್ಯ ಇರುತ್ತದೆ ಎನ್ನುವಂತೆ ಇ.ಡಿ ದಾಳಿಯಿಂದ ಎಲ್ಲವೂ ಮುರಿದಂಗಾಗಿದೆ ಎಂದು ಹಾಲು ಕುಡಿದಷ್ಟೆ ಸಂತಸದಲ್ಲಿ ಮಾತನಾಡಿಕೊಳ್ಳುತ್ತಿದ್ದ ಅಧಿಕಾರಿ ಸಿಬ್ಬಂದಿ ಅದೆಷ್ಟೋ..
ಇ.ಡಿ ದಾಳಿ ಹಿಂದಿನ ರಿಯಲ್ ಹೀರೋ ಎನ್ ಆರ್ ರಮೇಶ್: “ಅಧಿಕಾರ ಸಿಗುವರೆಗಷ್ಟೇ ಕ್ರಿಯಾಶೀಲವಾ ಗಿರಬೇಕು ಎನ್ನುವ ರಾಜಕಾರಣಿಗಳ ಸಾಲಿಗೆ ಅಪವಾದ ವಾಗಿ ನಿಲ್ಲುತ್ತಾರೆ ಮಾಜಿ ಕಾರ್ಪೊರೇಟರ್ ಎನ್.ಆರ್ ರಮೇಶ್. ಕಾರ್ಪೊರೇಟರ್ ಆಗಿ ಅಧಿಕಾರ ಅನುಭವಿಸಿ ಮಾಜಿ ಆದ ಮೇಲೆಯೂ ಬಿಬಿಎಂಪಿ ಹಾಗೂ ಸರ್ಕಾರದ ಮಟ್ಟದಲ್ಲಿ ನಡೆದಿರುವ ಸಾಕಷ್ಟು ಅಕ್ರಮ-ಅವ್ಯವಹಾರಗಳ ವಿರುದ್ದ ತಮ್ಮದೇ ಹಂತದಲ್ಲಿ ಹೋರಾಟ ನಡೆಸುತ್ತಾ ಬಂದಿರುವ ಹೆಗ್ಗಳಿಕೆ ಅವರದು. ಯಾವುದೇ ವಿಷಯದಲ್ಲಿ ಇರಬಹುದು,ವಾರಕ್ಕೊಂದು, 15 ದಿನಕ್ಕೊಂದು, ಅಥವಾ ತಿಂಗಳಿಗೊಂದಾದ್ರೂ ದೂರನ್ನು ಕೊಡುವ ಸಂಪ್ರದಾಯ ಅವರದು.ಅನೇಕರಿಗೆ ಅದು ಕಿರಿಕಿರಿ ಆಗಿರಬಹುದು.ಅವರ ಜತೆ ಕೆಲಸ ಮಾಡಿದ ಮಾಜಿ ಕಾರ್ಪೊರೇಟರ್ ಗಳೇ ಆತನಿಗೇನು ಕೆಲಸವಿಲ್ಲ ಬಿಡ್ರಿ,ಆತ ಕೊಟ್ಟಿರುವ ದೂರುಗಳಿಗೆ ಎಲ್ಲಿ ಲಾಜಿಕ್ ಎಂಡ್ ಸಿಕ್ಕಿದೆ..ಹೇಳಿ ,ಮಾದ್ಯಮಗಳಿಗೆ ಕೆಲಸವಿಲ್ಲ,ನಿಮಗೆ ಸುದ್ದಿ ಬೇಕು,ಅದಕ್ಕಾಗಿ ಕರೆದಾಗಲೆಲ್ಲಾ ಹೋಗ್ತಿರಿ ಎಂದು ಮಾದ್ಯಮಗಳ ಬಗ್ಗೆ ಹಗುರವಾಗಿ ಮಾತನಾಡುವವರು ಇಂದೂ ಇದ್ದಾರೆ.ಈ ವರ್ತಮಾನ ಎನ್.ಆರ್ ರಮೇಶ್ ಕಿವಿಗೂ ಬೀಳದೆ ಇರಲು ಸಾಧ್ಯ ವಿಲ್ಲ.ಆದ್ರೆ ಅದ್ಯಾವುದಕ್ಕೂ ಕೇರ್ ಮಾಡದೆ ತಮ್ಮ ಹೋರಾಟವನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದ ಹೆಗ್ಗಳಿಕೆ ಅವರದು.ಪ್ರಹ್ಲಾದ್ ವಿರುದ್ದ ಎಷ್ಟೇ ದೂರು ಕೊಟ್ಟು,ಅದರಲ್ಲಿ ಬಹುತೇಕ ಯಾವುದೇ ಕ್ರಮಗಳಾಗದ ಹೊರತಾಗಿಯೂ ದೃತಿ ಗೆಡದೆ ತಮ್ಮ ಹೋರಾಟವನ್ನು ಇ.ಡಿ ವರೆಗೆ ಕೊಂಡೊಯ್ದ ತಾಳ್ಮೆ-ಸಂಯ,-ಛಲ-ಆತ್ಮವಿಶ್ವಾಸದ ಫಲವಾಗೇ ಇವತ್ತು ಇ.ಡಿ ರೇಡ್ ನಂಥ ಮಹಾನ್ ಸಾಧನೆ ಸಾಧ್ಯವಾಗಿದೆ.ತಮ್ಮ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ರಮೇಶ್ ಕೆಲಸದ ಮೂಲಕ ಸರಿಯಾಗೇ ಉತ್ತರ ಕೊಟ್ಟಿದ್ದಾರೆ”
“ಪ್ರಹ್ಲಾದ್ ವ್ಯಕ್ತಿತ್ವ-ನಡುವಳಿಕೆ-ಮಾತುಗಾರಿಕೆಯೂ ಹಾಗೆಯೇ ಇತ್ತು ಬಿಡಿ. ಪ್ರಧಾನ ಅಭಿಯಂತರ ಹುದ್ದೆ ಸಿಗ್ತಿದ್ದಂಗೆ ತನಗೇನೋ ಸಿಕ್ಕಬಾರದು ಸಿಕ್ಕಿದೆ ಎನ್ನುವ ರೇಂಜ್ನಲ್ಲಿ ಫೋಸ್ ಕೊಟ್ಟಿಕೊಂಡು ಅಡ್ಡಾಡುತ್ತಿದ್ದರು.ಅವರೊಂದಿಗೆ ಕೆಲಸ ಮಾಡಿದವರನ್ನು ಕೂಡ ತಾತ್ಸಾರವಾಗಿ ನೋಡಲಾರಂಭಿ ಸಿದ್ದರು.ಬಿಬಿಎಂಪಿಯಲ್ಲಿ ಕಾಣಿಸಿಕೊಳ್ಳೋದೇ ಕಡಿಮೆ ಆಗಿತ್ತು. ವಿಧಾನಸೌಧ,ವಿಕಾಸ ಸೌಧಗಳಲ್ಲೇ ಓಡಾಡ ಹೆಚ್ಚಾಗಿತ್ತು.ಕಮಿಷನರ್ ಕರೆದ್ರೂ ಸರ್ಕಾರದ ಕೆಲಸದಲ್ಲಿದ್ದೇನೆ” ಎಂದು ಹೇಳಿ ಜಾರಿಕೊಳ್ಳಲಾರಂಭಿಸಿದ್ರು.ಮಾಡಬೇಕಿರೋ ಕೆಲಸಕ್ಕಿಂತ ಮಾಡಿದ್ದೇ ಬೇರೆಯದ್ದು.ಇದರ ಪರಿಣಾಮ ಏನಾಗಬಹುದೆನ್ನುವ ಪರಿವಿದ್ದರೂ ತನ್ನನ್ನು ದೊಡ್ಡವರು ರಕ್ಷಿಸ್ತಾರೆನ್ನುವ ಅತಿಯಾದ ಆತ್ಮವಿಶ್ವಾಸ ದಲ್ಲೇ ಯಡವಟ್ಟು ಮಾಡಿಕೊಳ್ತಲೇ ಹೋದರು.ಅದರ ಅಂತ್ಯ ಇ.ಡಿ ದಾಳಿ ರೂಪದಲ್ಲಿ ಆಗಿದೆ ಎಂದು ಮಾತನಾಡಿಕೊಳ್ಳಲಾಗುತ್ತಿದೆ.
ಪ್ರಹ್ಲಾದ್ ವಿರುದ್ದವೇನು ಕಡಿಮೆ ಆರೋಪಗಳಿದ್ವಾ..ಮೈ ತುಂಬಾ ಆಪಾದನೆಗಳನ್ನು ಹೊತ್ತಿದ್ದ ಅಧಿಕಾರಿ ಅವ್ರು.ಅದರ ಬಗ್ಗೆ ಇದೇ ಎನ್ ಆರ್ ರಮೇಶ್ ಕೊಟ್ಟ ದೂರುಗಳೇನು ಕಡಿಮೆನಾ..? ನಿಧನರಾದ ಸಾಮಾಜಿಕ ಕಾರ್ಯಕರ್ತ ಅಮರೇಶ್ ಸಾಕ್ಷ್ಯ ಸಮೇತ ನೀಡಿದ್ದ ದೂರುಗಳೇನು ಕಡಿಮೆನಾ..? ಎಸಿಬಿ,ಲೋಕಾಯುಕ್ತಕ್ಕೆ ಹತ್ತಾರು ದೂರುಗಳನ್ನು ಇವರಿಬ್ಬರೆ ನೀಡಿದ್ರು.ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪ್ರಹ್ಲಾದ್ ಬಹುತೇಕ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಪಡೆದಿದ್ದರು.ಇದು, ಎಸಿಬಿ,ಲೋಕಾಯುಕ್ತ ತನಿಖೆಯ ಸಾಚಾತನದ ಬಗ್ಗೆನೇ ಪ್ರಶ್ನೆ ಹುಟ್ಟುವಂತೆ ಮಾಡಿತ್ತು.ಹಾಗೆಂದು ಎನ್ ಆರ್ ರಮೇಶ್ ತಮ್ಮ ಹೋರಾಟ ಕೈ ಬಿಟ್ಟಿರಲಿಲ್ಲ.ಲೋಕಾಯುಕ್ತಕ್ಕೆ ದೂರು ಕೊಟ್ಟು ಕೊಟ್ಟು ಸಾಕಾಗಿ ಅಂತಿಮವಾಗಿ ಅವರು ಇ.ಡಿ ಮೊರೆ ಹೋಗಿದ್ದರು.ಪ್ರಹ್ಲಾದ್ ಅವರ ವಿರುದ್ಧದ ಆರೋಪಗಳಿಗೆ ಪುರಾವೆ ಕೊಟ್ಟಿದ್ರು. ತಂಡವನ್ನು ರೆಡಿ ಮಾಡಿಕೊಂಡ ಇ.ಡಿ ಅಧಿಕಾರಿಗಳು ಒಮ್ಮಿಂದೊಮ್ಮೆಗೆ ದಾಳಿ ಮಾಡಿ ಪ್ರಹ್ಲಾದ್ ಅವರನ್ನೇ ತಬ್ಬಿಬ್ಬುಗೊಳಿಸಿಬಿಟ್ರು.ಬಿಬಿಎಂಪಿ ಕ್ಯಾಂಪಸ್ ನಲ್ಲಿ ಸಂಚಲನ ಮೂಡಿಸಿಬಿಟ್ರು.
ಪ್ರಹ್ಲಾದ್ ತಮಗೆ ಸಿಕ್ಕ ಅಧಿಕಾರ-ಹುದ್ದೆಯನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡಿದಿದ್ದರೆ ಇವತ್ತು ಇಂಥಾ ಸ್ತಿತಿ ಬರುತ್ತಿರಲಿಲ್ಲವೇನೋ..? ಅಧಿಕಾರವನ್ನು ಭ್ರಷ್ಟಾಚಾರ-ಅಕ್ರಮ-ಹಗರಣ ಮಾಡಲಿಕ್ಕೆ ಮೀಸಲಿಟ್ಟುಬಿಟ್ರು.ನೂರಾರು ಕೋಟಿ ಮೊತ್ತದ ಅನಗತ್ಯ-ನಿಷ್ಪ್ರಯೋಜಕ ಪ್ರಾಜೆಕ್ಟ್ ಗಳನ್ನು ಸರ್ಕಾರದ ಮಟ್ಟದಲ್ಲಿ ಅಪ್ರೂವಲ್ ಮಾಡಿಸಿಕೊಂಡು ಬರುತ್ತಿದ್ದರು.ಗುತ್ತಿಗೆದಾರರಿಗೆ ಪ್ರಯೋಜನ ಮಾಡಿಕೊಡುವ ಏಕೈಕ ಉದ್ದೇಶದಿಂದ ಈ ಅನಗತ್ಯ ಯೋಜನೆ ಮಂಜೂರು ಮಾಡಿಸಿಕೊಂಡು ಬರುತ್ತಿದ್ದಾರೆನ್ನುವ ಆಪಾದನೆ ಪ್ರತಿ ಬಾರಿಯು ಕೇಳಿಬರುತ್ತಿತ್ತು.ಈ ಬಗ್ಗೆ ಕಮಿಷನರ್ ವರೆಗೆ ದೂರು ಸಲ್ಲಿಕೆಯಾಗುತ್ತಿದ್ದರೂ ಪಾಪ..! ತುಷಾರ ಗಿರಿನಾಥ್ ಅವರ ಮೇಲೆಯೇ ಏನೂ ಕ್ರಮ ಕೈಗೊಳ್ಳದಂತೆ ಒತ್ತಡ ಹೇರುವ ಕೆಲಸ ನಡೆಯುತ್ತಿತ್ತು.ತನ್ನ ವಿರುದ್ದ ಏನೇ ದೂರು ಬಂದರೂ,ಎಂತದ್ದೇ ಗಂಭೀರ ಆಪಾದನೆ ಕೇಳಿಬಂದ್ರೂ ಅದಕ್ಕೆ ಹೇಗೆ ತಿಪ್ಪೆ ಸಾರಿಸಬೇಕೆನ್ನುವ ವಿದ್ಯೆಯನ್ನು ಪ್ರಹ್ಲಾದ್ ಕರಗತ ಮಾಡಿಕೊಂಡಿದ್ದರಿಂದಲೇ ಇಷ್ಟ್ ವರ್ಷ ಪ್ರಹ್ಲಾದ್ ಸೇಫ್ ಆಗಲು ಸಾಧ್ಯವಾಗಿತ್ತೆನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರೊಂದಿಗೆ ಪ್ರಹ್ಲಾದ್ ಅತ್ಯಂತ ಆತ್ಮೀಯವಾದ ಒಡನಾಟ ಇಟ್ಟುಕೊಂಡಿದ್ದರೆನ್ನುವ ಮಾತಿದೆ.ಒಂದ್ವೇಳೆ ಡಿ.ಕೆ ಶಿವಕುಮಾರ್ ಕಮಿಷನರ್ ತುಷಾರ್ ಗಿರಿನಾಥ್ ಅವರ ಕರೆಗಳನ್ನು ಸ್ವೀಕರಿಸುತ್ತಿದ್ದರೋ ಇಲ್ಲವೊ ಗೊತ್ತಿಲ್ಲ,ಆದ್ರೆ ಪ್ರಹ್ಲಾದ್ ಕರೆ ಮಾಡಿದಾಕ್ಷಣ “ರಪ್ “ಅಂಥ ಪ್ರತಿಕ್ರಿಯೆ ಕೊಡುತ್ತಿದ್ದರಂತೆ. ಡಿ.ಕೆ ಶಿವಕುಮಾರ್ ಗೆ ಆ ಮಟ್ಟಿಗೆ ಒನ್ ಟು ಒನ್ ಇದ್ದರೆನ್ನುವ ಪ್ರಹ್ಲಾದ್ ಅನೇಕರ ಮುಂದೆ ಇದನ್ನು ಪ್ರೂವ್ ಕೂಡ ಮಾಡಿದ್ದರಂತೆ.ಅಂದರೆ ತಾನೆಷ್ಟು ಪ್ರಭಾವಿ ಎನ್ನುವುದನ್ನು ಇತರರಿಗೆ ಮನವರಿಕೆ ಮಾಡಿಕೊಡುವುದು ಕೂಡ ಇದರ ಹಿಂದಿನ ಉದ್ದೇಶವಾಗಿತ್ತೆನ್ನುವುದು ಸ್ಪಷ್ಟ.
ಡಿ.ಕೆ.ಶಿವಕುಮಾರ್ ಅವರು, ಬಿಬಿಎಂಪಿಯಲ್ಲಿನ ಆಗುಹೋಗುಗಳ ಬಗ್ಗೆ ಚರ್ಚೆ ಮಾಡುತ್ತಿದ್ದುದು,ಮಾಹಿತಿ ಪಡೆಯುತ್ತಿದ್ದುದು,ಸಲಹೆ ಪಡೆಯುತ್ತಿದ್ದುದು ಕೂಡ ಇದೇ ಪ್ರಹ್ಲಾದ್ ಅವರಿಂದ ಎನ್ನುವ ಮಾತಿದೆ. ಕಮಿನಷರ್ ಅವರನ್ನೂ ಓವರ್ ಟೇಕ್ ಮಾಡಿದ್ದರೆನ್ನಲಾ ಗುತ್ತಿದ್ದ ಪ್ರಹ್ಲಾದ್ ಬೆಳವಣಿಗೆಯೇ ಅನೇಕರ ಕಣ್ಣು ಕುಕ್ಕುವಂತೆ ಮಾಡಿದೆ.ಮನುಷ್ಯ ಸಿಕ್ಕಾಪಟ್ಟೆ ಹಾರಾಡುತ್ತಿದ್ದಾನೆ,ಇರಲಿ ಎಲ್ಲಕ್ಕೂ ಒಂದ್ ಟೈಮ್ ಬರುತ್ತದೆ ಎಂದು ಹೇಳುತ್ತಿದ್ದವರ ಪ್ರಕಾರದ ಆ ಟೈಮ್ ಇದೇನಾ..? ಸಂಶಯವೇ ಇಲ್ಲ.ತಮ್ಮ ನೆಚ್ಚಿನ ಅಧಿಕಾರಿ ಇ.ಡಿ ರೇಡ್ ಗೆ ಒಳಗಾಗಿರುವುದು ಡಿಕೆ ಶಿಗೂ ಕೂಡ ಶಾಕ್ ನೀಡಿದ್ರೂ ಆಶ್ಚರ್ಯವಿಲ್ಲ.ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಅವರು ಕೂಡ ಇ.ಡಿ ಮುಂದೆ ಯಾವುದಾದ್ರೂ ಸನ್ನಿವೇಶದಲ್ಲಿ ಹಾಜರಾಗಬೇಕಾಗಿ ಬರಬಹುದಾ..? ಗೊತ್ತಿಲ್ಲ, ಆದ್ರೆ ಸಾಧ್ಯತೆಗಳನ್ನೂ ಅಲ್ಲಗೆಳೆಯುವಂತಿಲ್ಲ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ.
ಪ್ರಹ್ಲಾದ್ ಅವರ ಕಚೇರಿ ಮೇಲೆ ರೇಡ್ ಮಾಡಿರುವ ಇ.ಡಿ ತನ್ನ ಕಾರ್ಯಾಚರಣೆಯನ್ನು ಬೋರ್ವೆಲ್ ಬಗ್ಗೆ ಬಂದಿರುವ ದೂರಿಗೆ ಸೀಮಿತಗೊಳಿಸುತ್ತದೆ ಎನ್ನಲಾಗದು.ಪ್ರಹ್ಲಾದ್ ವಿರುದ್ದದ ಬೇನಾಮಿ ಆಸ್ತಿ ಸಂಪಾದನೆ,ಅಕ್ರಮ ಹಣ ಗಳಿಕೆ, ಅಧಿಕಾರ ದುರ್ಬಳಕೆ, ಕಿಕ್ ಬ್ಯಾಕ್ ಆಪಾದನೆ, ಬ್ಯಾಂಕ್ ನ ಖಾತೆಗಳಲ್ಲಿ ಆಗಿರಬಹುದಾದ ಟ್ರಾನ್ಸ್ಯಾಂಕ್ಷನ್ ನಂತ ಸಾಕಷ್ಟು ಆರೋಪಗಳಿಗು ವ್ಯಾಪಿಸುವ ಸಾಧ್ಯತೆಗಳಿವೆಯಂತೆ. ಈ ಕಾರಣಕ್ಕೇನೆ ಮೂರು ದಿನಗಳವರೆಗೂ ಪ್ರಹ್ಲಾದ್ ಅವರನ್ನು ತಮ್ಮ ವಶಕ್ಕೆ ಕೊಡುವಂತೆ ಇ.ಡಿ ಮನವಿ ಮಾಡಿಕೊಂಡಿದೆ ಎನ್ನುವ ಮಾತುಗಳಿವೆ.ಈ ಅವಧಿಯಲ್ಲೇ ಪ್ರಹ್ಲಾದ್ ಅವರನ್ನು ಎಲ್ಲಾ ಆಯಾಮಗಳಲ್ಲೂ ತಪಾಸಣೆ-ತನಿಖೆಗೊಳಪಡಿಸಬಹುದು.ಆ ವೇಳೆ ಪ್ರಹ್ಲಾದ್ ಅವರ ಬ್ರಹ್ಮಾಂಡ ಬಯಲಾದ್ರೆ ದೊಡ್ಡಮಟ್ಟದ ಸಂಕಷ್ಟಕ್ಕೆ ಅವರು ಸಿಲುಕುವ ಸಾಧ್ಯತೆಗಳಿವೆ.ಅದು ಸರ್ಕಾರ ಮತ್ತು ಬಿಬಿಎಂಪಿಯಲ್ಲಿ ಪ್ರಹ್ಲಾದ್ ಜತೆ ಸಂಪರ್ಕದಲ್ಲಿರುವ ಯಾರ್ಯಾರ ಕೊರಳು ಸುತ್ತಿಕೊಳ್ಳಲಿದೆಯೋ ಗೊತ್ತಾಗುತ್ತಿಲ್ಲ.ಆದರೆ ಪ್ರಹ್ಲಾದ್ ಮೇಲೆ ನಡೆದ ರೇಡ್ ನ ನಂತರ ಬಿಬಿಎಂಪಿಯಲ್ಲಿ ಪ್ರಹ್ಲಾದ್ ಜತೆಗೆ ಸಂಪರ್ಕದಲ್ಲಿದ್ದು ನಾನಾ ರೀತಿಯ ವ್ಯವಹಾರ ನಡೆಸಿರಬಹುದಾದಂಥ ಅದೆಷ್ಟೋ ಅಧಿಕಾರಿ-ಸಿಬ್ಬಂದಿ-ಗುತ್ತಿಗೆದಾರರು, ಮದ್ಯವರ್ತಿಗಳಿಗೆ ಆತಂಕ ಸೃಷ್ಟಿಯಾಗಿರುವುದಂತೂ ಸತ್ಯ.