ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗುಣಮಟ್ಟ ಪರಿಶೀಲನೆ: ಸಚಿವ ದಿನೇಶ್ ಗುಂಡೂರಾವ್

ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗುಣಮಟ್ಟ ಪರಿಶೀಲನೆ: ಸಚಿವ ದಿನೇಶ್ ಗುಂಡೂರಾವ್

ಆಗಸ್ಟ್ 30 ಹಾಗೂ 31ರಂದು ರಾಜ್ಯಾದ್ಯಂತ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಆಹಾರ ಸುರಕ್ಷತೆ ಕುರಿತು ಪರಿಶೀಲನೆಯ ಕಾರ್ಯಾಚರಣೆ ನಡೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಟೆಲ್ ಹಾಗೂ ರೆಸ್ಟೋರೆಂಟ್​​ಗಳಲ್ಲಿ ದಾಳಿ ನಡೆಸಿ ಆಹಾರ ಸುರಕ್ಷತೆ ಹಾಗೂ ಶುಚಿತ್ವ ಮತ್ತು ಗುಣಮಟ್ಟ ಕುರಿತು ಪರಿಶೀಲನೆ ನಡೆಸಲಾಗುವುದು. ಇಲ್ಲಿ ಸಂಗ್ರಹಿಸಲಾದ ಮಾಂಸ, ಮೀನು, ಮೊಟ್ಟೆಗಳ ಮಾದರಿಗಳ ತಪಾಸಣೆ ನಡೆಸಲಾಗುವುದು ಎಂದರು.

ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಅಸುರಕ್ಷಿತ ಆಹಾರ ತಯಾರಿಸುತ್ತಿರುವುದು ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಈ ಹಿಂದೆ ಕಬಾಬ್, ಗೋಬಿ ಮಂಚೂರಿಗೆ ಕೃತಕ ಬಣ್ಣ ಬೆರೆಸುತ್ತಿದ್ದರು. ಕೆಎಫ್​ಸಿ ಸೇರಿದಂತೆ 4 ಆಹಾರ ಉದ್ದಿಮೆಗಳ ಲೈಸನ್ಸ್ ಅಮಾನತು ಮಾಡಿದ್ದೇವೆ. ತಿಂಗಳಿಗೊಮ್ಮೆ ಕಾರ್ಯಾಚರಣೆ ಮಾಡಿ ಆಹಾರ ಜಾಗೃತಿ ಜೊತೆಗೆ ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ. ಆಹಾರಕ್ಕೂ ಆರೋಗ್ಯಕ್ಕೂ ಸಂಬಂಧ ಇದೆ. ಇದನ್ನು ಜನರಿಗೆ ಹೇಳುವ ಕೆಲಸ ಮಾಡುತ್ತಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಆಹಾರ ವಸ್ತುಗಳಲ್ಲಿ ರಾಸಾಯನಿಕ ಬಳಕೆ, ಕಲಬೆರಕೆ ಇತ್ಯಾದಿಗಳ ವಿರುದ್ಧ ಆಹಾರ ಇಲಾಖೆ ಕಳೆದ ಕೆಲವು ದಿನಗಳಿಂದ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ವಿಜಯನಗರದ ಫುಡ್​ ಸ್ಟ್ರೀಟ್​​ಗೆ ದಿಢೀರ್ ಭೇಟಿ ನೀಡಿದ್ದ ಅಧಿಕಾರಿಗಳು ಆಹಾರ ವಸ್ತುಗಳ ಮತ್ತು ತಿಂಡಿಗಳ ಪರಿಶೀಲನೆ ನಡೆಸಿದ್ದು, ಇವುಗಳ ವರದಿಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.

ಇಡೀ ರಾಜ್ಯದಲ್ಲಿ ಆಹಾರ ಗುಣಮಟ್ಟ ಪರಿಶೀಲನೆ ಮಾಡುತ್ತಿದ್ದೇವೆ. ಇದುವರೆಗೆ ಆಹಾರ ಸುರಕ್ಷತಾ ಇಲಾಖೆ ಇದೆಯೆಂದು ಜನರಿಗೆ ಗೊತ್ತಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗಸೂಚಿ ನೀಡಿದ್ದೇವೆ ಎಂದು ಅವರು ಹೇಳಿದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *