ಮನೆಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಮಾಜಿ ಶಾಸಕರೊಬ್ಬರ ಪತ್ನಿ ಮೃತಪಟ್ಟ ದಾರುಣ ಘಟನೆ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸಂಭವಿಸಿದೆ.
ಕಂಗ್ಪೊಕಿ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಸೈಕುಲ್ ಮಾಜಿ ಶಾಸಕ ಯಮ್ ತಾಂಗ್ ಹಾವೊಕಿಪ್ ಪತ್ನಿ ಸಪಮ್ ಚಾರುಬಲಾ ಮೃತಪಟ್ಟ ದುರ್ದೈವಿ.
ಹಾವೊಕಿಪ್ ಅವರ ಎರಡನೇ ಪತ್ನಿ ಸಪಮ್ ಚಾರುಬಲಾ ಬಾಂಬ್ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ.
ಶಾಸಕ ಹಾವೊಕಿಪ್ ಘಟನೆ ಸಂಭವಿಸಿದಾಗ ಮನೆಯಲ್ಲೇ ಇದ್ದರು. ಆದರೆ ಅವರು ಯಾವುದೇ ಗಾಯ ಇಲ್ಲದೇ ಪಾರಾಗಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.