3 ಸೂಪರ್ ಓವರ್ ಕಂಡ ಮೊದಲ ಪಂದ್ಯ ಎಂಬ ವಿಶ್ವದಾಖಲೆ ಬರೆದ ಕರ್ನಾಟಕದ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ರೋಚಕ ಪಂದ್ಯ ಗೆದ್ದು ಸಂಭ್ರಮಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವಿನ ರೋಚಕ ಪಂದ್ಯ 3 ಸೂಪರ್ ಓವರ್ ಪಂದ್ಯಕ್ಕೆ ಸಾಕ್ಷಿಯಾಗಿ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಹುಬ್ಬಳ್ಳಿ ಟೈಗರ್ಸ್ ತಂಡ 20 ಓವರ್ ಗಳಲ್ಲಿ 164 ರನ್ ಗೆ ಆಲೌಟಾಯಿತು. ನಂತರ ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿ ಸಮಬಲ ಸಾಧಿಸಿತು.
ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ 34 ಎಸೆತಗಳಲ್ಲಿ 9 ಬೌಂಡರಿ ಸೇರಿದ 54 ರನ್ ಬಾರಿಸಿದರೆ, ಮೈಸೂರಿನ ಮನ್ವಂತ್ ಕುಮಾರ್ 32 ರನ್ ಗೆ 4 ವಿಕೆಟ್ ಪಡೆದು ಮಿಂಚಿದರು.
ಮೊದಲ ಸೂಪರ್ ಓವರ್ ನಲ್ಲಿ ಬೆಂಗಳೂರು ತಂಡ 1 ವಿಕೆಟ್ ಕಳೆದುಕೊಂಡು 10 ರನ್ ಗಳಿಸಿದರೆ, ಹುಬ್ಬಳ್ಳಿ ತಂಡ ಕೂಡ ಅಷ್ಟೇ ರನ್ ಗಳಿಸಿ ಮತ್ತೆ ಟೈನಲ್ಲಿ ಅಂತ್ಯಗೊಂಡಿತು. ವಿಶೇಷ ಅಂದರೆ ಎರಡೂ ತಂಡಗಳು ತಲಾ 1 ಸಿಕ್ಸರ್ ಬಾರಿಸಿದ್ದರಿಂದ ಫಲಿತಾಂಶ ನಿರ್ಣಯ ಕಠಿಣವಾಗಿ ಎರಡನೇ ಸೂಪರ್ ಓವರ್ ಆಡಿಸಲು ನಿರ್ಧರಿಸಲಾಯಿತು.
ಎರಡನೇ ಸೂಪರ್ ಓವರ್ ನಲ್ಲಿ ಹುಬ್ಬಳ್ಳಿ 8 ರನ್ ಗಳಿಸಿದರೆ, ಬೆಂಗಳೂರು ತಂಡ ಕೂಡ ಅಷ್ಟೇ ರನ್ ಗಳಿಸಿದ್ದರಿಂದ ಮತ್ತೆ ಸಮಬಲದಲ್ಲಿ ಅಂತ್ಯಗೊಂಡಿತು. ಮೂರನೇ ಸೂಪರ್ ಓವರ್ ನಲ್ಲಿ ಬೆಂಗಳೂರು ತಂಡ 1 ವಿಕೆಟ್ ಕಳೆದುಕೊಂಡು 12 ರನ್ ಗಳಿಸಿತು. ಹುಬ್ಬಳ್ಳಿ ಪರ ಮನ್ವಂತ್ ಕ್ರಾಂತಿಕುಮಾರ್ 2 ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.