EXCLUSIVE…MYSTRY BEHIND PRABHUDHDHA UNNATURAL DEATH..!? /”ಪ್ರಬುದ್ದಾ”ಳದು  “ಕೊಲೆ” ಎಂದು “ತಾಯಿ” ಬೊಬ್ಬಿಡುತ್ತಿದ್ರೂ,”ಆತ್ಮಹತ್ಯೆ” ಎಂದು ಸಂಶಯಿಸುತ್ತಿರುವುದೇಕೆ ಪೊಲೀಸ್ರು..?!

EXCLUSIVE…MYSTRY BEHIND PRABHUDHDHA UNNATURAL DEATH..!? /”ಪ್ರಬುದ್ದಾ”ಳದು “ಕೊಲೆ” ಎಂದು “ತಾಯಿ” ಬೊಬ್ಬಿಡುತ್ತಿದ್ರೂ,”ಆತ್ಮಹತ್ಯೆ” ಎಂದು ಸಂಶಯಿಸುತ್ತಿರುವುದೇಕೆ ಪೊಲೀಸ್ರು..?!

  • -ಮೇಲ್ನೋಟಕ್ಕೆ ಅಸಹಜ ಸಾವೆಂದು ಅನುಮಾನಿಸಿದ್ದ, ಸುಬ್ರಮಣ್ಯಪುರ ಪೊಲೀಸ್ರು  ದಿಢೀರ್  ಆತ್ಮಹತ್ಯೆ ಎನ್ನುವ ತೀರ್ಮಾನಕ್ಕೆ ಬರುತ್ತಿರುವುದೇಕೆ..?
  • -ತಾನೇ ಕತ್ತು ಸೀಳಿ-ಕೈ ಕೊಯ್ದುಕೊಂಡು  ಭೀಕರವಾಗಿ  ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲಳಾಗಿದ್ಲಾ ಪ್ರಬುದ್ಧ..!?
  • -ಸಾಂದರ್ಭಿಕ ಸನ್ನಿವೇಶಗಳು ಪ್ರಬುದ್ಧಳಾದು ಅಸಹಜ ಸಾವೆಂದು ಸೂಚ್ಯಿಕರಿಸುತ್ತಿರುವುದು ಪೊಲೀಸರಿಗೆ ಗೊತ್ತಾಗ್ತಿಲ್ವೇ..?
  • ತನ್ನ ಮಗಳದು ಆತ್ಮಹತ್ಯೆಯಲ್ಲ..ಕೊಲೆ..ಎಂದು ಅಮ್ಮ ಬೊಬ್ಬಿರಿಯುತ್ತಿದ್ರೂ ಹೆತ್ತ ಒಡಲ ಸಂಕಟ ಪೊಲೀಸರಿಗೆ ಅರ್ಥವಾಗುತ್ತಿಲ್ಲವೇಕೆ..?
  • ಇರುವೆಯನ್ನೂ ನೋಯಿಸದಷ್ಟು ನಿರುಪದ್ರವಿಯಾಗಿದ್ದ  ತನ್ನ ಮಗಳ ಹಂತಕರು ಯಾರು..? ಅಷ್ಟೊಂದು ಭೀಕರವಾಗಿ ಕೊಲ್ಲೊಕ್ಕೆ ಕಾರಣ ಕೇಳ್ತಿರುವ ಅಮ್ಮನ ಪ್ರಶ್ನೆಗೆ ಸಿಗಲೇಬೇಕಲ್ವೇ ಉತ್ತರ
  • ಕೋಳಿ ಕತ್ತು ಸೀಳಿದಷ್ಟೇ ಸಲೀಸಾಗಿ ಕೊಲೆ ಮಾಡುತ್ತಿರುವ ಹಂತಕರ ರಾಜಧಾನಿಯಾಯ್ತಾ ಬೆಂಗಳೂರು..? ಕಾಮನ್ ಮ್ಯಾನ್ ಕಮಿಷನರ್ ದಯಾನಂದ್ ಸುಮ್ಮನಿರೋದೇಕೆ..? 
ಅಸಹಜ ಸಾವಿನಲ್ಲೇ ನೂರಾರು ಪ್ರಶ್ನೆಗಳನ್ನು ಉಳಿಸಿ ಹೋದ ಯುವತಿ ಪ್ರಬುದ್ಧಾ
ಅಸಹಜ ಸಾವಿನಲ್ಲೇ ನೂರಾರು ಪ್ರಶ್ನೆಗಳನ್ನು ಉಳಿಸಿ ಹೋದ ಯುವತಿ ಪ್ರಬುದ್ಧಾ

ಬೆಂಗಳೂರು: “ನನ್ನ ಮಗಳು ನನ್ನಷ್ಟೇ ಧೈರ್ಯಶಾಲಿ..ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ವೀಕ್ ಮೈಡೆಂಡ್ ಅಲ್ಲವೇ ಅಲ್ಲ…ಆತ್ಮಹತ್ಯೆ ಎನ್ನುವುದೆಲ್ಲಾ ಸುಳ್ಳು…ಯಾಕೆ ನಮ್ಮ ಬದುಕಿನ ಜತೆ ಚೆಲ್ಲಾಟ ಆಡ್ತಿದಿರಾ..ತಾಯಿ ಸೌಮ್ಯ ಆಕ್ರೋಶದ ಗದ್ಗದಿತ ಧ್ವನಿಯಲ್ಲಿ ಮಾತನಾಡ್ತಿದ್ರೆ ಏನ್ ಹೇಳಬೇಕೆಂದು ತೋಚದೆ ಗಂಟಲು ಬಿಗಿಯುತ್ತಿತ್ತು…”( ಅಸಹಜ ಸಾವಿಗೆ ಈಡಾದ ಪ್ರಬುದ್ಧಳಾ  ಫೋಟೋಗಳು ಭಯಂಕರವಾಗಿರುವುದರಿಂದ ಅವುಗಳನ್ನು ಇಲ್ಲಿ ಪ್ರದರ್ಶಿಸುತ್ತಿಲ್ಲ..) 

ಇಡೀ ರಾಜ್ಯ ಪೆನ್ ಡ್ರೈವ್ ಪ್ರಕರಣದ ಕೋಲಾಹಲದಲ್ಲಿ ಮುಳುಗೋಗಿರುವ ನಡುವೆ ರಾಜಧಾನಿ ಬೆಂಗಳೂರಲ್ಲಿ ನಡೆದ ಘಟನೆ ಹೆಣ್ಣು ಹೆತ್ತ ಪೋಷಕರನ್ನು ತೀವ್ರ ಕ್ಷೋಭೆಗೀಡುಮಾಡಿಬಿಡ್ತು. ಮಾದ್ಯಮಗಳಿಗೆ ಒಂದೆರೆಡು ಬಾರಿ ಹೆಡ್ ಲೈನ್ಸ್ ಆಗಿದ್ದು ಬಿಟ್ಟರೆ ಅದರ ಮೇಲೆ ಬೆಳಕು ಚೆಲ್ಲುವ ಯತ್ನವನ್ನು ಬಹುತೇಕ ಮಾಡಲೇ ಇಲ್ಲ.ಆದರೆ ರಾಜ್ಯದಲ್ಲಿ ಸಂಭವಿಸಿದ ನಾಲ್ಕನೇ ಹೆಣ್ಣುಮಗಳ ಈ ಕೊಲೆ, ಪೋಷಕರಲ್ಲಿ ಯಾಕಾದ್ರೂ ಹೆಣ್ಣುಮಕ್ಕಳನ್ನು ಹೆತ್ತೆವೋ ಎನ್ನುವ ಆತಂಕದ ಭಾವನೆ ಮೂಡಿಸಿದ್ದು ಕೂಡ ಸುಳ್ಳಲ್ಲ..ಏಕೆಂದರೆ ಎದೆಯುದ್ದಕ್ಕೆ ಬೆಳೆದ ಹೆಣ್ಮಕ್ಕಳನ್ನು ವಿಕೃತ ಮನಸ್ತಿತಿಯ ಯಾರೋ ಕಿಡಿಗೇಡಿಗಳು, ಕೋಳಿಯನ್ನು ಚಾಕುವಿನಲ್ಲಿ ಕೊಂದಷ್ಟು ಸಲೀಸಾಗಿ ಕೊಲೆ ಮಾಡುತ್ತಾರೆಂದ್ರೆ ಎಂಥಾ ಪೋಷಕರಲ್ಲೂ ಇದು ದಿಗಿಲು ಸೃಷ್ಟಿಸದೆ ಇರುತ್ತಾ..? ಖಂಡಿತಾ ಇಲ್ಲ..ಹೆಣ್ಮಕ್ಕಳಿಗೆ ರಕ್ಷಣೆಯೇ ಇಲ್ಲದಂತಾಗಿರುವ ಇಂದಿನ ದಿನಮಾನಗಳಲ್ಲಿ ಹೆಣ್ಣು ಹೆತ್ತವರು,ಅದರಲ್ಲೂ ಎದೆಯ ಮಟ್ಟಕ್ಕೆ ಬೆಳೆದ ಹೆಣ್ಮಕ್ಕಳಿರುವ ತಂದೆತಾಯಿಗಳು ಮಕ್ಕಳ ಪ್ರಾಣ-ಶೀಲದ ಬಗ್ಗೆ ಚಿಂತಾಕ್ರಾಂತರಾಗಬೇಕಾಗಿ ಬಂದಿರುವುದು ನಮ್ಮನ್ನಾಳುವ ಸರ್ಕಾರಗಳ ಹೊಣೆಗೇಡಿತನ ಹಾಗೂ ನಿರಾತಂಕವಾದ ಜೀವನ ನಿರ್ವಹಣೆಗೆ ಅನುಕೂಲವಾದಂಥ ಸ್ತಿತಿ ಕಾಯ್ದುಕೊಳ್ಳೊಕ್ಕೆ ಸಾಧ್ಯವಾಗದ ನಮ್ಮ ಪೊಲೀಸ್ ವ್ಯವಸ್ಥೆಯ ದುರಂತವೇ ಸರಿ.

ರಾಜಧಾನಿ ಬೆಂಗಳೂರು, ದಿನೇ ದಿನೇ ಹೆಣ್ಮಕ್ಕಳು ಹಾಗೂ ಅವರ ಪೋಷಕರಲ್ಲಿ ಭಯದ ವಾತಾವರಣಕ್ಕೆ ಕಾರಣವಾಗುವಷ್ಟು ದಯನೀಯ ಸ್ತಿತಿ ತಲುಪ್ತಿದೆ ಅನಿಸ್ತಿದೆ.ಯಾಕಂದ್ರೆ ಕೀಚಕ-ಕಿರಾತಕರು ಹಾಡಹಗಲೇ ಮನೆಗೆ ನುಗ್ಗಿ ಅತ್ಯಾಚಾರ-ಕೊಲೆ-ಸುಲಿಗೆ ಮಾಡಿ ಹೋಗುವಷ್ಟು ಇಲ್ಲಿ ವ್ಯವಸ್ಥೆ ಸಲೀಸಾಗಿದೆ.ಅಪರಾಧಿ ಮನಸ್ತಿತಿಯ ಕಿಡಿಗೇಡಿಗಳಿಗೆ ಕಾನೂನಿನ ಬಗ್ಗೆ ಭಯವೇ ಇಲ್ಲವಾಗಿದೆ.

ಇಂಥಾ ಪರಿಸ್ಥಿತಿಯಲ್ಲಿ ನಮ್ಮ ಹೆಣ್ಮಕ್ಕಳ ಜೀವ-ಶೀಲದ ಬಗ್ಗೆ ಯಾವ ಗ್ಯಾರಂಟಿ ಇಟ್ಟುಕೊಳ್ಳೊಕ್ಕಾಗುತ್ತೆ ಹೇಳಿ.ಇದನ್ನೆಲ್ಲಾ ಹೇಳೊಕ್ಕೆ ಕಾರಣವಾಗಿದ್ದು ಪಾಪದ ಹುಡುಗಿಯ ಅಸಹಜ ಸಾವು.ನನ್ನ ಮಗಳದು ಕೊಲೆ..ಕೊಲೆ..ಎಂದು ತಾಯಿ ಕೂಗಿ ಹೇಳುತ್ತಿದ್ದರೂ ಅದಕ್ಕೆ ಆತ್ಮಹತ್ಯೆಯ ಬಣ್ಣ ಕಟ್ಟಿ ಇಡೀ ಪ್ರಕರಣಕ್ಕೆ ತಿಪ್ಪೆ ಸಾರಿಸುವ ಪ್ರಯತ್ನಕ್ಕೆ ಕೈ ಹಾಕಿದಂತಿದೆ ನಮ್ಮ ಪೊಲೀಸ್ ವ್ಯವಸ್ಥೆ.ತನಿಖೆ ಪೂರ್ಣಗೊಳಿಸದೆ ಕೊಲೆ ಎನ್ನೋ ಶಂಕೆ ಇದ್ದರೂ ಸಾಂದರ್ಭಿಕ ಸನ್ನಿವೇಶ ಗಮನಿಸಿದ್ರೆ ಇದೊಂದು ಆತ್ಮಹತ್ಯೆ ಇರಬಹುದೆನ್ನುವ ತೀರ್ಮಾನಕ್ಕೆ ಬರುವಂತೆ ಕಾಣ್ತಿದೆ.ಭವಿಷ್ಯದ ಬಗ್ಗೆ ಸುಂದರ ಕನಸುಗಳನ್ನು ಹೊತ್ತಿದ್ದ ಮಹತ್ವಾಕಾಂಕ್ಷೆಯ ಹೆಣ್ಣುಮಗಳ ಅಸಹಜ ಸಾವಿನ ವಿಚಾರದಲ್ಲಿ ಏಕಾಏಕಿ ತೀರ್ಮಾನಕ್ಕೆ ಬರುವಂತೆ ಕಾಣ್ತಿರೋದನ್ನು ಗಮನಿಸಿದ್ರೆ ಎಲ್ಲೋ ಏನೋ ಆಗ್ತಿದೆ ಎನ್ನುವ ಗುಮಾನಿ ಮೂಡೋದು ಸಹಜ.

ಆಕೆ ಹೆಸರು,ಪ್ರಬುದ್ಧಾ ವಯಸ್ಸು 20.ಎರಡನೇ ಡಿಗ್ರಿ ಓದುತ್ತಿದ್ಲು.ತಾಯಿ ಸೌಮ್ಯ ಕೆ.ಆರ್.ಸಾಹಸಿ ಮನೋಭಾವದ ಹೆಣ್ಮಗಳು.ಕಷ್ಟಪಟ್ಟು ತನ್ನ ಬದುಕನ್ನು ತಾನೇ ರೂಪಿಸಿಕೊಂಡ ಧೈರ್ಯವಂತೆ. ಬರಹಗಾರ್ತಿಯಾಗಿ, ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದ ಸೌಮ್ಯ ಅನ್ಯಾಯ ಕಂಡ್ರೆ ಸಿಡಿದೇಳುವ ಮನೋಪ್ರವೃತ್ತಿಯವರು.ಸಾಕಷ್ಟು ಜನಪರ-ಜೀವಪರವಾದ ಹೋರಾಟ-ಚಳುವಳಿ-ಸಂಘಟನೆಗಳಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡ ಜೀವನ್ಮುಖಿ.ಬದುಕಿನ ಬಗ್ಗೆ ಅತಿಯಾದ ಪ್ರೀತಿ-ಆದರ ಹೊಂದಿದ್ದ ಸೌಮ್ಯರಿಗಿರುವ ಎರಡು ಮಕ್ಕಳಲ್ಲಿ ಮೊದಲನೆಯವಳೇ ಪ್ರಬುದ್ಧ.

ಅಮ್ಮಳ ಕಷ್ಟಸಹಿಷ್ಣುತೆಯ ಜೀವನವನ್ನು ಮಗುವಾಗಿದ್ದಾಗಿನಿಂದಲೇ ನೋಡಿದ್ದ ಪ್ರಬುದ್ಧ. ಹೆಸರಿಗೆ ತಕ್ಕಂತೆ ವಯಸ್ಸಿಗೆ ಮೀರಿದ ಪ್ರಬುದ್ಧತೆ ಬೆಳೆಸಿಕೊಂಡಿದ್ಲು.ಅಮ್ಮನಿಗೆ ತಕ್ಕ ಮಗಳಾಗಿ ಬೆಳೆಯುತ್ತಿದ್ದಳು. ಜನಪರವಾದ ವಿಚಾರಗಳು ಬಂದಾಗ ಅಮ್ಮನ ಬೆನ್ನಿಗೆ ನಿಂತು ಪ್ರೋತ್ಸಾಹಿಸುತ್ತಿದ್ದಳು.ಸಣ್ಣ ವಯಸ್ಸಿಗೇ ಮಾನವ ಜಗತ್ತನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ನಿರರ್ಗಳವಾಗಿ ಮಾತನಾಡ್ತಿದ್ಲು.. ಚರ್ಚೆಗಳಿ ತಿದ್ಲು.ತರ್ಕ ಮಾಡದೆ ಏನನ್ನೂ ಒಪ್ಪಿಕೊಳ್ಳುವ ಜಾಯಮಾನವೇ ಆ ಹೆಣ್ಮಗಳದ್ದಲ್ಲ. ಮಗಳನ್ನು ಬಹು ಎತ್ತರಕ್ಕೆ ಬೆಳೆಯೋದನ್ನು ನೋಡಬೇಕೆನ್ನುವ ಬೆಟ್ಟದಷ್ಟು ಆಸೆ ಹೊತ್ತಿದ್ದ ಸೌಮ್ಯರ ಕನಸು,ಮುದ್ದಿನ-ಹೆಮ್ಮೆಯ ಮಗಳ( ಬಂಗಾರಿ) ದಾರುಣ ಅಂತ್ಯದೊಂದಿಗೆ  ನುಚ್ಚು ನೂರಾಗಿದೆ.ಬದುಕಿನ ಆಸರೆಯೇ ಅವಸಾನಗೊಂಡಿದೆ.ಸೌಮ್ಯ ಅಕ್ಷರಶಃ ದಿಕ್ಕುತೋಚದಂತಾಗಿದ್ದಾರೆ.

ಸೌಮ್ಯ ಎಂಥಾ ಸ್ವಾಭಿಮಾನಿ ಹೆಣ್ಮಗಳು ಎಂದ್ರೆ…

“ಪ್ರಬುದ್ಧಳ ತಾಯಿ ಕೆ.ಆರ್ ಸೌಮ್ಯ ಎಂಥಾ ಸ್ವಾಭಿಮಾನದ ಹೆಣ್ಮಗಳು ಎಂದ್ರೆ ಮಕ್ಕಳ ಬದುಕು ರೂಪಿಸ್ಲಿಕ್ಕೆ ಅವರ ಭವಿಷ್ಯ ಕಟ್ಟೊಕ್ಕೆ ಅವರು ಪಟ್ಟ ಶ್ರಮ, ಮಾಡಿದ ತ್ಯಾಗ ಅಷ್ಟಿಷ್ಟಲ್ಲ.ಅಷ್ಟೇನೂ ಸ್ಥಿತಿವಂತವಲ್ಲದ ಕುಟುಂಬವನ್ನು ಹೆಣ್ಮಗಳಾಗಿ ನಿಭಾಯಿಸಲು ರಕ್ತಬೆವರನ್ನು ಒಂದಾಗಿಸಿ ದುಡಿದವ ರು.ತುಂಬಾ ಆತ್ಮೀಯರೆನಿಸಿಕೊಂಡವರನ್ನು ಬಿಟ್ಟರೆ ಯಾರ ಬಳಿಯೂ ತನ್ನ ಅಳಲು-ಸಂಕಟ ಹೇಳಿ ಕೊಂಡವರಲ್ಲ.ಸ್ವಾಭಿಮಾನ-ಆತ್ಮಗೌರವದ  ಪ್ರಶ್ನೆ ಬಂದ್ರೆ ರಾಜಿಯಿಲ್ಲದ ನಿಷ್ಟೂರ ಮನೋಭಾವ. ಕಷ್ಟ ಎಂದು ಬಂದ್ರೆ ತನ್ನ ಬಳಿ ಇರುವುದನ್ನೆಲ್ಲಾ ಧಾರೆ ಎರೆವ ಮಾತೃ ಹೃದಯಿ.ತನ್ನ ಅನುಭವಿಸುವ ಯಾತನೆ-ಸಂಕಟ ಮಕ್ಕಳಿಗೆ ತಿಳಿಯಬಾರದೆಂದು ಎಲ್ಲಾ ನೋವನ್ನು ತಾನೊಬ್ಬಳೇ ನುಂಗಿದವಳು .ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಎಲ್ಲಿಯೂ ರಾಜಿಮಾಡಿಕೊಂಡವರಲ್ಲ.ಮಕ್ಕಳಲ್ಲಿ ಸಂಸ್ಕಾರ-ಸಂಸ್ಕ್ರತಿ-ಮನುಷ್ಯತ್ವ-ಅಂತಃಕರಣದಂಥ ಮೌಲ್ಯಾದರ್ಶ ಬೆಳೆಸಿದವರು.ಸ್ವಾಭಿಮಾನದ ಪಾಠ ಹೇಳಿಕೊಟ್ಟವರು..ಅವರ ದಾರಿಯಲ್ಲೇ ಮಗಳು ಪ್ರಬುದ್ಧ ನಡೆಯುತ್ತಿದ್ದಳು.ಚೆನ್ನಾಗಿ ಓದಿ  ಅಮ್ಮನ ಕಷ್ಟಗಳಿಗೆಲ್ಲಾ ತಿಲಾಂಜಲಿ ನೀಡಬೇಕು.ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಹಿರಿದಾಸೆ ಹೊಂದಿದ್ದಳು..ಆದ್ರೆ ವಿಧಿ ಅಮ್ಮ ಮತ್ತು ಮಗಳನ್ನು ಮತ್ತೆ ಸಂಧಿಸದಷ್ಟು ದೂರ ಮಾಡಿಬಿಡ್ತು..ಸೌಮ್ಯಳನ್ನು ಅರ್ಥ ಮಾಡಿಕೊಂಡವರಿಗಷ್ಟೆ ಆಕೆಯ ಆರ್ತನಾದ ಕೇಳೋದು”

ಅಮರೇಶ್- ಸೌಮ್ಯರ ಆತ್ಮೀಯರು

ಆಗಿದ್ದಾದ್ರೂ ಏನು..? ಎನ್ನುವುದನ್ನು ತಿಳಿಸೊಕ್ಕೆ ಪ್ರಬುದ್ಧಳೇ ಇಲ್ಲ.ರಕ್ತದ ಮಡುವಿನಲ್ಲಿ ನರಳಿ ಪ್ರಾಣ ಬಿಟ್ಟಿದ್ದಾಳೆ.ಪಾಪ ಆ ಹೆಣ್ಮಗು ಸಾಯುವಾಗ ಎಷ್ಟು ನರಳಿರಬಹುದೋ..? ಬದುಕೊಕ್ಕೆ ಎಷ್ಟೆಲ್ಲಾ ಪ್ರಯತ್ನಿಸಿರಬಹುದೋ..? ನೆನಸಿಕೊಂಡ್ರೆ ಕರುಳು ಕಿತ್ತುಬರುತ್ತೆ.ಘಟನೆಯ ಬರ್ಭರತೆ-ಭೀಕರತೆ ಗಮನಿಸಿದಾಗ ಪೊಲೀಸರು ಶಂಕಿಸುವಂತೆ ಅದು ಆತ್ಮಹತ್ಯೆಯಂತೂ ಆಗಿರ್ಲಿಕ್ಕಿಲ್ಲ.ಆ ರೀತಿ ಕಾಣಿಸುವುದೂ ಇಲ್ಲ.ಆತ್ಮಹತ್ಯೆ ಮಾಡಿಕೊಳ್ಳೊಕ್ಕೆ ಆಕೆ ನಿರ್ದರಿಸಿದ್ದಾಳೆಂದೇ ಕೊಂಡ್ರೂ, ಅಷ್ಟೊಂದು ಭೀಕರವಾಗಿ ಕೊಂದುಕೊಳ್ಳೊಕ್ಕೆ ಮುಂದಾಗಿದ್ಲಾ..ಅಷ್ಟೊಂದು ಬರ್ಭರವಾಗಿ ಕೊಂದುಕೊಳ್ಳೊಕ್ಕೆ ಆಕೆಗೆ ಅಂಥಾ ಕಾರಣಗಳಿದ್ವಾ..? ಮಗಳ ಅಂತರಂಗ-ಬಹಿರಂಗವನ್ನೆಲ್ಲಾ ಅರಿತಿರೋ ಅಮ್ಮ ಸೌಮ್ಯ ಹೇಳುವಂತೆ ನೋ ಚಾನ್ಸ್..ಸಮಸ್ಯೆಗಳ ಜತೆಗೆ ಬೆಳೆದು ಅದನ್ನೇಗೆ ಎದುರಿಸಬೇಕೆನ್ನುವ ಛಲ-ಧೈರ್ಯವನ್ನು ತನ್ನಿಂದ ಬಳುವಳಿಯಾಗಿ ಪಡೆದಿದ್ದ ನನ್ನ ಮಗಳಿಗೆ ಬದುಕನ್ನು ಎದುರಿಸ್ಲಿಕ್ಕಾಗು ತ್ತಿರಲಿಲ್ವೇ..? ಖಂಡಿತಾ ಇಲ್ಲ. ಎಲ್ಲವನ್ನು ನನ್ನ ಬಳಿ ಹೇಳಿಕೊಳ್ಳುತ್ತಿದ್ದ ಮಗಳಿಗೆ ನನ್ನಿಂದ ಮುಚ್ಚಿಡುವಂಥ ಸಮಸ್ಯೆ ಇರಲಿಕ್ಕೆ ಸಾಧ್ಯವೇ ಇಲ್ಲ ಎನ್ನುವಾಗ ತಾಯಿ ಮಾತು ಸತ್ಯ ಎನಿಸುತ್ತದೆ. ಅಷ್ಟಕ್ಕೂ ಸೌಮ್ಯ ಅವರಿಗೆ ಸುಳ್ಳು ಹೇಳುವ ದರ್ದು-ಅನಿವಾರ್ಯತೆಯಾದ್ರೂ ಏನಿದೆ ಹೇಳಿ..ಅಲ್ವಾ..?

ಸ್ವಂತ ಪರಿಶ್ರಮ-ಹೋರಾಟಗಳ ಮೂಲಕವೇ ಬದುಕು ಕಟ್ಟಿಕೊಂಡ ಪ್ರಬುದ್ಧಾಳ ತಾಯಿ ಸ್ವಾಭಿಮಾನಿ ಸೌಮ್ಯ ಕೆ.ಆರ್
ಸ್ವಂತ ಪರಿಶ್ರಮ-ಹೋರಾಟಗಳ ಮೂಲಕವೇ ಬದುಕು ಕಟ್ಟಿಕೊಂಡ ಪ್ರಬುದ್ಧಾಳ ತಾಯಿ ಸ್ವಾಭಿಮಾನಿ ಸೌಮ್ಯ ಕೆ.ಆರ್

ತಾಯಿ ಸೌಮ್ಯ ಅವರೇ ಹೇಳುವಂತೆ ಪ್ರಬುದ್ಧಗೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೆ ಕಾರಣಗಳಿರಲಿಲ್ಲ ವಂತೆ.ಅಷ್ಟೊಂದು ಭೀಕರವಾಗಿ ಕೃತ್ಯ ನಡೆದಿರುವುದನ್ನು ನೋಡಿದ್ರೆ ಇದೊಂದು ಕೊಲೆ ಎಂದೇ ಅವರು ಸಂಶಯಿಸುತ್ತಾರೆ.ಮೇಲ್ನೋಟಕ್ಕೆ ಅದು ಕೊಲೆ ನಡೆದಿರುವಂಗೆ ತೋರುತ್ತದೆ.ಕೈಯನ್ನು ಅಷ್ಟೊಂದು ಭಯಾನಕವಾಗಿ ಕೊಯ್ದುಕೊಂಡು ಕತ್ತನ್ನು ಸೀಳಿಕೊಂಡು ಸಾಯುವ ಚಾನ್ಸೇ ಇಲ್ಲ.ಇದೆಲ್ಲವನ್ನು ನೋಡಿದ್ರೆ ಯಾರೋ ಆಕೆಯನ್ನು ಕೊಂದು ಹಾಕಿದ್ದಾರೆ.ಮನೆಯ ಹಿಂದಿನ ಬಾಗಿಲು ಹೊಡೆದು ಒಳಪ್ರವೇಶಿಸಿ ಮೊಬೈಲ್ ಕಸಿದು ಪೈಶಾಚಿಕ ಕೃತ್ಯ ಎಸಗಿದ್ದಾರೆನ್ನುವುದು ಸೌಮ್ಯರ ಗುರುತರ ಪ್ರತಿಪಾದನೆ.ಅದು ಸತ್ಯವೂ ಇರಬಹುದು.ತನಿಖೆ ಸರಿಯಾಗಿ ನಡುದ್ರೆ ಸತ್ಯವೂ ಬಯಲಾಗಬಹುದು.

ಸೌಮ್ಯಗೆ ತಮ್ಮ ಮಗಳ ಬಗ್ಗೆ ಅಷ್ಟೊಂದು ಆತ್ಮವಿಶ್ವಾಸ ಇರೊಕ್ಕೆ ಕಾರಣವೂ ಇದೆ. ಪರಿಶ್ರಮದಿಂದ ಬೆಳೆದ ಅಮ್ಮನಂತೆ ನಾನೂ ಆಗಬೇಕೆನ್ನುವುದು ಆಕೆಯ ಆಸೆಯಾಗಿತ್ತು.ಅಮ್ಮನ ಒಳ್ಳೆಯ ಫ್ರೆಂಡ್ ಆಗಿದ್ದಾಕೆ.ತನ್ನ ಸುತ್ತ-ತನ್ನೊಂದಿಗೆ ಏನೇ ನಡುದ್ರೂ ಅದನ್ನು ಪಿನ್ ಟು ಪಿನ್ ತಾಯಿಗೆ ಬಂದು ವರದಿ ಒಪ್ಪಿಸುತ್ತಿದ್ದಾಕೆ.ಅಂತದ್ದರಲ್ಲಿ ಸಧ್ಯಕ್ಕೆ ಪೊಲೀಸರು ಅನುಮಾನಿಸುತ್ತಿರುವಂತೆ, ಆತ್ಮಹತ್ಯೆ ಮಾಡಿಕೊಳ್ಳೊಕ್ಕೆ ಕಾರಣವಾಗಿರಬಹುದೆನ್ನಲಾದ ವಿಷಯವನ್ನು ಅಮ್ಮನೊಂದಿಗೆ ಶೇರ್ ಮಾಡಿಕೊಳ್ಳದೆ ಇರುತ್ತಿದ್ಲಾ..ನನ್ನ ಬಂಗಾರಿ ನನ್ನ ಮಗಳಲ್ಲ,ನನ್ನ ಸ್ನೇಹಿತೆ.ನನ್ನ ಬಗ್ಗೆ ಆಕೆಗೆ..ಆಕೆ ಬಗ್ಗೆ ನನಗೆ ತಿಳಿಯದೆ ಇದ್ದ ವಿಷಯಗಳೇ ಇರಲಿಲ್ಲ..ಅಂತದ್ದರಲ್ಲಿ ಆತ್ಮಹತ್ಯೆಗೆ ಕಾರಣವಾಗಬಹುದಾದ ವಿಚಾರ ಹೇಳಿಕೊಳ್ಳುತ್ತಿರಲಿಲ್ವೇ..ಅಂಥಾ ಮಗಳನ್ನು ಯಾಕೆ..ಯಾರು ಕೊಂದರೋ ಎನ್ನುವುದು ಅಮ್ಮನಿಗೂ ಮಿಲಿಯನ್ ಡಾಲರ್ ಪ್ರಶ್ನೆಯಾಗುಳಿದಿದೆ.

ಪ್ರಬುದ್ಧಾ ಅಸಹಜ ಸಾವಿಗೆ ಸಂಬಂಧಿಸಿದಂತೆ ತನಿಖೆಯೇನೋ ನಡೆಯುತ್ತಿದೆ.ಆದ್ರೆ ಘಟನೆ ನಡೆದು ಕೆಲ ಘಂಟೆಗಳಲ್ಲೇ ಪೊಲೀಸರು ಇದೊಂದು ಆತ್ಮಹತ್ಯೆ ಯತ್ನ ಇರಬಹುದೆನ್ನುವ ಹೇಳಿಕೆಯನ್ನು ಮಾದ್ಯಮಗಳಿಗೆ ಕೊಡ್ತಾರೆಂದ್ರೆ( ಮಾದ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದೇ ಹಾಗೆ..) ಅರ್ಥವೇನು..? ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿದ ವೇಳೆಯಲ್ಲಿ ಕಂಡುಬಂದ ವಿದ್ಯಾಮಾನಗಳ ಬಗ್ಗೆ ಇದೊಂದು ಅಸಹಜ ಸಾವಿರಬಹುದು ಹೇಳಿದ್ದೇ ಅವರು..ಕೈ  ಕೊಯ್ದಿರುವ-ಕತ್ತು ಸೀಳಿರುವ ದೃಶ್ಯಗಳು..ಅದರ ರೀತಿ,ಮನೆಯ ಒಡೆದ ಸ್ತಿತಿಯಲ್ಲಿರುವ ಹಿಂಬಾಗಿಲು-ಮೊಬೈಲ್ ಕಳವು..ಚೆಲ್ಲಾಪಿಲ್ಲಿಯಾದ ವಸ್ತುಗಳು.. ಇದೆಲ್ಲವನ್ನು ಗಮನಿಸಿಯೇ ಪೊಲೀಸರು ಹೀಗೊಂದು ಅನುಮಾನ ವ್ಯಕ್ತಪಡಿಸಿದ್ದರು.ಹೀಗೆಲ್ಲಾ ಹೇಳಿದ್ದ ಪೊಲೀಸರೇ ಇದನ್ನೊಂದು ಆತ್ಮಹತ್ಯೆ ಎಂದು ಹೇಳಿಬಿಟ್ರೆ ಅದನ್ನು ಕೊಲೆ ಎಂದು ಗಂಟಲು ಹರಿದುಕೊಂಡು ನ್ಯಾಯಕ್ಕಾಗಿ  ಘೀಳಿಡುವ ಅಮ್ಮನಿಗೆ ಏನಾಗಬೇಡ..ಹಾಗೆಂದು ತನಿಖೆಯನ್ನು ಅಮ್ಮನ ಸಮಾಧಾನಕ್ಕಾಗಿ ಮಾಡಿ ಎಂದೇನಲ್ಲ..ಅಸಹಜ ಸಾವಿನ ಹಿಂದೆ ಇರುವ ಕಿರಾತಕರು ಯಾರು..ಅವರ ಉದ್ದೇಶವೇನು ಎನ್ನುವುದು ಸಾರ್ವಜನಿಕವಾಗಿಯು ತಿಳಿಯಬೇಕಲ್ವಾ..

“ರಾಜಧಾನಿಯಲ್ಲಿ ಹದಗೆಡುತ್ತಿದೆ ಕಾನೂನು ಸುವ್ಯವಸ್ಥೆ..”

ಕಾಮನ್ ಮ್ಯಾನ್ ಪೊಲೀಸ್ ಕಮಿಷನರ್ ಎಂದೇ ಹೆಸರಾಗಿರುವ ದಯಾನಂದ್ ಅವರನ್ನು ಅನಿವಾರ್ಯವಾಗಿ ಎಚ್ಚರಿಸಬೇಕಾಗಿ ಬಂದಿರುವುದು ವಿಪರ್ಯಾಸ.ಬೆಂಗಳೂರಿನಲ್ಲಿ ಕ್ರೈಮ್ ಎನ್ನುವುದು ಎಷ್ಟು ಮಾಮೂಲಾಗಿ ಬಿಟ್ಟಿದೆ ಎಂದ್ರೆ ಇಲ್ಲಿ ಕಿರಾತಕರಿಗೆ ಕೊಲೆ ಎನ್ನುವುದು ಕೋಳಿಯ ಕತ್ತು ಸೀಳಿದಷ್ಟೆ ಸಲೀಸೆನ್ನುವಂತಾಗಿದೆ. ಅಪರಾಧ ಚಟುವಟಿಕೆಗಳಲ್ಲಿರುವವರಿಗೆ ಕಡಿವಾಣ ಇಲ್ಲವಾಗಿದೆ. ನ್ಯಾಯ ಸಿಗುತ್ತೆ ಎಂದು ಸ್ಟೇಷನ್ ಗಳಿಗೆ ಹೋಗುವವರಿಗೆ ನಿರಾಶೆ ಕಟ್ಟಿಟ್ಟಬುತ್ತಿ ಎನ್ನುವಂತಾಗಿದೆ.ಜನರ ಸಮಸ್ಯೆ ಬಗೆಹರಿಸಬೇಕಾದ ಸ್ಟೇಷನ್ ಗಳು ಸೆಟ್ಲ್ ಮೆಂಟ್ ತಾಣಗಳಾಗಿವೆ.ಇದನ್ನು ಕಮಿಷನರ್ ದಯಾನಂದ್ ಅವರೇ ಒಪ್ಪಿಕೊಂಡಿದ್ರಲ್ಲದೇ ಅಂಥವರ ವಿರುದ್ದ ಕಠಿಣ ಕ್ರಮದ ಮಾತನ್ನಾಡಿದ್ರು.ಇದು ಒತ್ತಟ್ಟಿಗಿರಲಿ, ಬೆಂಗಳೂರಲ್ಲಿ ಅಮಾಯಕರ ಬದುಕುಗಳಿಗೆ ಕೊಳ್ಳಿ ಇಡುತ್ತಿರುವವ ಕಿಡಿಗೇಡಿಗಳು ಹಾಗೂ ಕಿರಾತಕರಿಗೆ ಯಾವುದೇ ಬ್ರೇಕ್ ಇಲ್ಲವಾಗಿದೆ.ಕಾನೂನು-ಶಿಕ್ಷೆ ಬಗ್ಗೆ ಅವರಿಗೆ ಭಯವೇ ಇಲ್ಲವಾಗಿದೆ.ಕ್ರೈಂ ಸಂಖ್ಯೆ ಹೆಚ್ಚಲು,ಲಗಾಮಿಲ್ಲದೆ ದುಷ್ಕ್ರತ್ಯ ಮುಂದುವರೆಸ್ಲಿಕ್ಕೆ ಕಾರಣವೇ ಇದು. ಪೊಲೀಸ್ ಕಮಿಷನರ್ ದಯಾನಂದ್ ಸಾಹೇಬ್ರು ಎಚ್ಚೆತ್ತುಕೊಂಡು ಇಲಾಖೆಗೆ ಶಾಕ್ ಟ್ರೀಟ್ಮೆಂಟ್ ಕೊಡದಿದ್ದಲ್ಲಿ ಜನರ ಹಿಡಿಶಾಪಕ್ಕೆ ತುತ್ತಾಗಬೇಕಾಗ್ತದೇನೋ..?

ಯಾರೊಂದಿಗೂ ವಿರೋಧ-ದ್ವೇಷ ಕಟ್ಟಿಕೊಳ್ಳದೆ ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಇರುತ್ತಿದ್ದ ನನ್ನ ನಿಷ್ಪಾಪಿ-ನಿರುಪದ್ರವಿ ಮಗಳನ್ನು ಕೊಂದವರು ಯಾರು..? ಯಾರಿಗು ತೊಂದರೆ ಕೊಡದಿದ್ದ ಆಕೆಯನ್ನು ಕೊಲ್ಲೊಕ್ಕೆ ಕಾರಣ ಏನು..? ಕೈ ಕತ್ತರಿಸಿ ಕೊರಳು ಸೀಳಿ ಹಾಕುವಷ್ಟರ ಮಟ್ಟಿಗೆ ಬರ್ಭರವಾಗಿ ಕೊಲ್ಲುವಂಥ ದ್ವೇಷವೇನಿತ್ತು..? ಎನ್ನುವ ಸತ್ಯ ನನಗೆ ತಿಳಿಯಬೇಕು.ಹೋರಾಟ-ಸಂಘಟನೆಗಳಲ್ಲಿರುವ ನನ್ನ ಮೇಲಿನ ಕೋಪವನ್ನೇನಾದ್ರೂ ನನ್ನ ಮಗಳ ಮೇಲೆ ತೀರಿಸಿಕೊಳ್ಳಲಾಯ್ತಾ..? ಎನ್ನುವ ಪ್ರಶ್ನೆಗೆ ಉತ್ತರ ಸಿಗಲೇಬೇ ಕೆನ್ನುವುದು ತಾಯಿ ಸೌಮ್ಯರ ಮನವಿ..ಆ ಮನವಿಗೆ ಸ್ಪಂದಿಸಬೇಕಿರುವುದು ಪೊಲೀಸರ ಕರ್ತವ್ಯ ಹಾಗೂ ಬಾಧ್ಯಸ್ಥಿಕೆ ಕೂಡ.ಅದನ್ನು ಮಾಡದೆ ನಿರ್ದಾರಕ್ಕೆ ಬಂದಿರುವುದು ಎಷ್ಟರ ಮಟ್ಟಿಗೆ ಸರಿ…ಯಾರದೋ ಒತ್ತಡಕ್ಕೆ ಸಿಲುಕಿ ಪ್ರಕರಣಕ್ಕೆ ತೇಪೆ ಹಚ್ಚುವ ಪ್ರಯತ್ನವನ್ನು ಪೊಲೀಸ್ರು ಮಾಡಿದ್ರೆ ತನ್ನ ಅನ್ಯಾಯದ ಸಾವಿಗೆ ನ್ಯಾಯ ಸಿಗದ ಪ್ರಬುದ್ಧಳ ಆತ್ಮ ಮಗ್ಗಲು ಬದಲಿಸೊಲ್ಲೆ…ಮಗಳನ್ನು ಕಳೆದುಕೊಂಡ ಅಮ್ಮನ ಹಿಡಿಶಾಪ ಅವರಿಗೆ ತಟ್ಟದೆ ಇರೊಲ್ಲ..

ಎಲ್ಲಿದ್ದೀರಾ ಮಹಿಳಾ ಹೋರಾಟಗಾರ್ತಿಯರೇ..?

“ಮಹಿಳಾ ಸಂಕುಲದ ಮೇಲೆ ದೌರ್ಜನ್ಯ-ಕ್ರೌರ್ಯಗಳಾದಾಗ ಧ್ವನಿ ಎತ್ತುವ ಮಹಿಳಾ ಸಂಘಟನೆಗಳು, ಬೆಂಗಳೂರಿನಲ್ಲಿ ನಡೆದೋಗಿರುವ ಮಹಿಳಾ ಹೋರಾಟಗಾರ್ತಿಯ ಮಗಳ ಅಸಹಜ ಸಾವಿನ ಬಗ್ಗೆ ಧ್ವನಿ ಎತ್ತದಿರುವುದು ಆಶ್ವರ್ಯದೊಂದಿಗೆ ಆತಂಕವನ್ನೂ ಉಂಟುಮಾಡಿದೆ.ಜತೆಗೆ ಆಕ್ರೋಶ ಮೂಡಿಸಿದೆ.ಮಹಿಳೆಯರಿಗೆ ಅನ್ಯಾಯವಾದಾಗ ಮಂಚೂಣಿಯಲ್ಲಿ ನಿಂತು ಹೋರಾಡಿ ನ್ಯಾಯ ನೀಡಿದ ಸೌಮ್ಯ ತನ್ನ ಮಗಳ ಸಾವಿನ ವಿಚಾರದಲ್ಲಿ ಅಕ್ಷರಶಃ ಒಂಟಿಯಾಗ್ಹೋಗಿದ್ದಾರೆ.ಅವರ ಬೆಂಬಲಕ್ಕೆ ಯಾವುದೇ ಮಹಿಳಾ ಸಂಘಟನೆಗಳು-ಹೋರಾಟಗಾರ್ತಿಯರಿಲ್ಲ ಎನ್ನುವುದೇ ನೋವಿನ ಸಂಗತಿ.ಸಣ್ಣಪುಟ್ಟ ವಿಚಾರಗಳಾದಾಗ ಧ್ವನಿ ಎತ್ತುವ ಮಹಿಳಾ ಸಂಘಟನೆಗಳು ಪ್ರಬುದ್ಧಳ ಅನ್ಯಾಯದ ಸಾವಿನ ವಿರುದ್ದ ಹೋರಾಟಕ್ಕಿಳಿಯುವ ಮಾತು ಹಾಳಾಗಿ ಹೋಗ್ಲಿ,ಸೌಮ್ಯಗೊಂದು ಸಾಂತ್ವನದ ಮಾತನ್ನು ಹೇಳದಿರುವುದು ನಾಚಿಕೆಗೇಡಿನ ವಿಚಾರ.ಅವರ ಹೊಣೆಗೇಡಿತನಕ್ಕೆ ಧಿಕ್ಕಾರವಿರಲಿ..”

ಪ್ರಬುದ್ದಾಳ ಸಾವು ಆತ್ಮಹತ್ಯೆಯೋ..ಕೊಲೆಯೋ ಎನ್ನುವ ಗೊಂದಲ ಬಗೆಹರಿಯಲಿ..ಆಕೆಯ ಆತ್ಮ ನೆಮ್ಮದಿಯಲ್ಲಿ ಮಗ್ಗಲು ಬದಲಿಸಲಿ…ಒಂದ್ವೇಳೆ ಆಕೆಯದು ಕೊಲೆ ಎನ್ನುವುದೇ ಸಾಬೀತಾದಲ್ಲಿ ಕಿರಾತಕರಿಗೆ ಕಠಿಣಾತೀಕಠಿಣ ಶಿಕ್ಷೆಯಾಗಲಿ..ಆತ್ಮಹತ್ಯೆ ಎನ್ನುವುದೇ ಆದಲ್ಲಿ ಅಮ್ಮ ಸೌಮ್ಯಗೆ ಕಾರಣದ ನಿಗೂಢತೆ ತಿಳಿಯಲಿ..ಪೊಲೀಸರು ಯಾವುದೇ ಒತ್ತಡ-ಆಮಿಷಕ್ಕೆ ಮಣಿಯದೆ ತಮ್ಮ ಕರ್ತವ್ಯಪ್ರಜ್ನೆ ಮೆರೆಯಲಿ..ಮಗಳ ಅನ್ಯಾಯದ ಸಾವಿಗೆ ನ್ಯಾಯ ಸಿಗಲಿ ಎಂದು  ಕಣ್ಣೀರಿಡುತ್ತಿರುವ  ಅಮ್ಮನಿಗೆ ನ್ಯಾಯ ಸಿಗಲಿ.. ಪ್ರಬುದ್ಧಳಾ ಸಾವಿಗೆ ಕಂಬನಿ ಮುಡಿಯುವ..ಸಾಂತ್ವನ ಸೂಚಿಸುವ ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯವೂ ಅದೇ…

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *