advertise here

Search

ಕೆಎಸ್‌ಪಿಸಿಬಿ ಲ್ಯಾಪ್‌ಟಾಪ್ ಹಗರಣ: 72 ಸಾವಿರದ ಲ್ಯಾಪ್‌ಟಾಪ್‌ಗೆ 1.17 ಲಕ್ಷ ಪಾವತಿ!

kspcb laptop purchase scam

ಬೆಂಗಳೂರು: ಪರಿಸರ ಮಾಲಿನ್ಯ ತಡೆಗಟ್ಟಬೇಕಾದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಈಗ ಭ್ರಷ್ಟಾಚಾರದ ‘ಮಾಲಿನ್ಯ’ದಿಂದ ನಾರುತ್ತಿದೆ. ಅಧಿಕಾರಿಗಳ ಕಮಿಷನ್ ಆಸೆಗೆ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. 180 ಲ್ಯಾಪ್‌ಟಾಪ್‌ಗಳ ಖರೀದಿಯಲ್ಲಿ ನಡೆದಿರುವ ಈ ‘ಡಿಜಿಟಲ್ ದರೋಡೆ’ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಏನಿದು ಲ್ಯಾಪ್‌ಟಾಪ್ ಹಗರಣ?

2023ರ ಜನವರಿಯಲ್ಲಿ ಮಂಡಳಿಯ ಉನ್ನತ ಅಧಿಕಾರಿಗಳ ಬಳಕೆಗಾಗಿ 180 ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ತೀರ್ಮಾನಿಸಲಾಗಿತ್ತು. ಅಂದಿನ ಅಧ್ಯಕ್ಷರಾಗಿದ್ದ ಡಾ. ಶಾಂತ ತಮ್ಮಯ್ಯ ಅವರು 2.11 ಕೋಟಿ ರೂ. ವೆಚ್ಚದಲ್ಲಿ ‘ಡೆಲ್ ವೋಸ್ಟೋ’ (Dell Vostro) ಮಾದರಿಯ ಲ್ಯಾಪ್‌ಟಾಪ್‌ಗಳ ಖರೀದಿಗೆ ಹಸಿರು ನಿಶಾನೆ ತೋರಿಸಿದ್ದರು. ಆದರೆ, ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗಿಂತ ಹೆಚ್ಚಾಗಿ ‘ಪರ್ಸೆಂಟೇಜ್’ ವ್ಯವಹಾರವೇ ಮುನ್ನೆಲೆಗೆ ಬಂದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಯಾವುದೇ ಸರ್ಕಾರಿ ಖರೀದಿ ಪ್ರಕ್ರಿಯೆ ಜೆಮ್ (GeM) ಪೋರ್ಟಲ್ ಮೂಲಕ ಸ್ಪರ್ಧಾತ್ಮಕವಾಗಿ ನಡೆಯಬೇಕು. ಆದರೆ, ಇಲ್ಲಿನ ಐಟಿ ವ್ಯವಸ್ಥಾಪಕರು ಮತ್ತು ಕೆಲ ಅಧಿಕಾರಿಗಳು ತಮಗೆ ಬೇಕಾದ ‘ಸನ್ ಪ್ಲಸ್ ಸಾಫ್ಟ್‌ವೇರ್ ಟೆಕ್ನಾಲಜೀಸ್’ ಕಂಪನಿಗೆ ಅನುಕೂಲ ಮಾಡಿಕೊಡಲು ‘ಪ್ರೊಫೈಟರ್ ಆರ್ಟಿಕಲ್ ಸರ್ಟಿಫಿಕೇಟ್’ (PAC) ಎಂಬ ವಿಚಿತ್ರ ಷರತ್ತನ್ನು ಅಳವಡಿಸಿದ್ದರು. ಇದರಿಂದಾಗಿ ಬೇರೆ ಯಾವ ಕಂಪನಿಗಳೂ ಬಿಡ್‌ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮಾರುಕಟ್ಟೆಯಲ್ಲಿ ಕೇವಲ 72,000 ರೂ. ಆಸುಪಾಸಿನಲ್ಲಿದ್ದ ಲ್ಯಾಪ್‌ಟಾಪ್‌ಗೆ ಪ್ರತಿ ಒಂದಕ್ಕೆ 1,17,764 ರೂ. (ಜಿಎಸ್‌ಟಿ ಸೇರಿ) ಪಾವತಿಸಲಾಗಿದೆ!

ಒಂದು ಲ್ಯಾಪ್‌ಟಾಪ್‌ಗೆ ಬರೋಬ್ಬರಿ 45,764 ರೂ. ಅಧಿಕ ಬೆಲೆ ನೀಡಲಾಗಿದೆ. ಒಟ್ಟು 180 ಲ್ಯಾಪ್‌ಟಾಪ್‌ಗಳಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 75 ಲಕ್ಷ ರೂಪಾಯಿ ನೇರ ನಷ್ಟ ಉಂಟಾಗಿದೆ. ಇದೇ ಮಾದರಿಯ ಲ್ಯಾಪ್‌ಟಾಪ್ ಅನ್ನು ಅದೇ ಸಮಯದಲ್ಲಿ ಗುಜರಾತ್ ಸರ್ಕಾರ ಕೇವಲ 71,039 ರೂ.ಗೆ ಖರೀದಿಸಿತ್ತು. ಆದರೆ ಕರ್ನಾಟಕದ ಮಾಲಿನ್ಯ ನಿಯಂತ್ರಣ ಮಂಡಳಿ ಮಾತ್ರ ದುಬಾರಿ ಬೆಲೆ ತೆತ್ತಿರುವುದು ಅಧಿಕಾರಿಗಳ ‘ಕಮಿಷನ್’ ಆಸೆಗೆ ಸಾಕ್ಷಿಯಾಗಿದೆ.

ALSO READ :  ಧರ್ಮಸ್ಥಳ ಪ್ರಕರಣ: ಮರುತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ತನಿಖೆಗೆ ತಡೆಯೊಡ್ಡುತ್ತಿರುವ ‘ಅದೃಶ್ಯ’ ಕೈಗಳು?

ಈ ಅಕ್ರಮದ ಕುರಿತು ನವೀನಕುಮಾರ್ ಎಂಬುವವರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ವರದಿ ನೀಡುವಂತೆ ಸೂಚಿಸಿ 4 ತಿಂಗಳು ಕಳೆದರೂ ಮಂಡಳಿಯ ಅಧಿಕಾರಿಗಳು ಕದಲುತ್ತಿಲ್ಲ. ಇಷ್ಟೇ ಅಲ್ಲದೆ, ಈ ಅಕ್ರಮದಲ್ಲಿ ಶಾಮೀಲಾಗಿರುವ ಕೆಲವರು ತಾವು ‘ಸಿಎಂ ಸಂಬಂಧಿ’ ಎಂದು ಹೇಳಿಕೊಂಡು ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಗರಣವನ್ನು ಒಳಗೊಳಗೇ ಮುಚ್ಚಿಹಾಕಲು ಭರ್ಜರಿ ತಯಾರಿ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ | ಬೆಂಗಳೂರಿನ ‘ಪಂಚ ಪಾಲಿಕೆ’ಗಳ ಚೊಚ್ಚಲ ಬಜೆಟ್: 15,000 ಕೋಟಿ ರೂ. ಆಯವ್ಯಯದಲ್ಲಿ ಯಾರಿಗೆ ಏನು ಸಿಗಲಿದೆ?

ಕೆಎಸ್‌ಪಿಸಿಬಿ ಅಧ್ಯಕ್ಷರ ಪ್ರತಿಕ್ರಿಯೆ:

ಈ ಕುರಿತು ಪ್ರತಿಕ್ರಿಯಿಸಿರುವ ಕೆಎಸ್‌ಪಿಸಿಬಿ ಪ್ರಸ್ತುತ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರು, “ಈ ಖರೀದಿ ಪ್ರಕ್ರಿಯೆ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ನಾನು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ವರದಿ ಬಂದ ತಕ್ಷಣ ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದ್ದಾರೆ.

ಖರೀದಿಸಲಾದ 180 ಲ್ಯಾಪ್‌ಟಾಪ್‌ಗಳ ಪೈಕಿ ಶೇ. 90ರಷ್ಟು ಬಳಕೆಯಾಗುತ್ತಿದ್ದರೆ, ಉಳಿದವುಗಳು ಮಂಡಳಿಯ ಕಚೇರಿಯ ಮೂಲೆಯಲ್ಲಿ ಧೂಳು ಹಿಡಿಯುತ್ತಿವೆ. ಸಣ್ಣ ಮೊತ್ತದ ಟೆಂಡರ್‌ನಲ್ಲೂ ಅಧಿಕಾರಿಗಳು ತೋರಿರುವ ಈ ‘ಕೈಚಳಕ’ ಪಾರದರ್ಶಕ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top