mb patil

 ಸಚಿವ ಎಂಬಿ ಪಾಟೀಲ್ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಹಗರಣಕ್ಕೆ ಸಂಬಂಧಿಸಿ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಅಕ್ರಮ ಸೈಟು ಪ್ರಕರಣದಲ್ಲಿ ದೂರು ನೀಡಿದ ಕೆಲವೇ ಗಂಟೆಗಳಲ್ಲಿ ನೋಟಿಸ್ ಜಾರಿ ಮಾಡಿದ್ದ ರಾಜ್ಯಪಾಲರು ಇದೀಗ ಎಂಬಿ ಪಾಟೀಲ್ ವಿರುದ್ಧ ಪ್ರಾಸಿಕ್ಯೂಷನ್ ಗೆ ಯಾವಾಗ ಅನುಮತಿ ನೀಡುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಸಲಹೆ ನೀಡಿ ಸಚಿವ ಸಂಪುಟದ ಶಿಫಾರಸು ಕಳುಹಿಸಿತ್ತು. ಅಲ್ಲದೇ ಹಿಂದಿನ ಬಿಜೆಪಿ ಜೆಡಿಎಸ್ ಸರ್ಕಾರದಲ್ಲಿದ್ದ ಮುಖಂಡರ ವಿರುದ್ಧದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಮಾಡಿದ ಮನವಿಗೂ ಕ್ಯಾರೇ ಅನ್ನದ ರಾಜ್ಯಪಾಲರು ಇದೀಗ ಎಂಬಿ ಪಾಟೀಲ್ ವಿರುದ್ಧದ ದೂರಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

ಸಚಿವ ಎಂಬಿ ಪಾಟೀಲ್ ಕೆಐಎಡಿಬಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಿಯಮಗಳ ಪ್ರಕಾರ ಆನ್ ಲೈನ್ ನಲ್ಲಿ ಪ್ರಕ್ರಿಯೆ ನಡೆಸಬೇಕಾಗಿತ್ತು. ಆದರೆ ಸಚಿವ ಪಾಟೀಲ್ ಕೈಗಾರಿಕೆಗಳನ್ನು ನಡೆಸದ ಕಂಪನಿಗಳಿಗೆ ಭೂಮಿಯನ್ನು ಮಂಜೂರು ಮಾಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು ನಗರಕ್ಕೆ ಸಮೀಪವಿರುವ ಬಿಡದಿ, ವಸಂತನರಸಾಪುರ, ಕೋಲಾರ ನರಸಾಪುರ, ದೊಡ್ಡಬಳ್ಳಾಪುರ ಮುಂತಾದ ಕೈಗಾರಿಕಾ ಪ್ರದೇಶಗಳ ನಿವೇಶನ ಹಂಚಿಕೆಯಲ್ಲಿ ಅಕ್ರಮವೆಸಗಲಾಗಿದೆ. ಕಾನೂನು ಪ್ರಕ್ರಿಯೆಗಳನ್ನು ಕಡೆಗಣಿಸಿ ನಿಯಮಗಳನ್ನು ಉಲ್ಲಂಘಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಸಚಿವರ ಕಾರ್ಯಕ್ಕೆ ಕೆಲವು ಅಧಿಕಾರಿಗಳು ಬೆಂಬಲ ನೀಡಿದ್ದಾರೆ. ಈ ಅಕ್ರಮ ಹಂಚಿಕೆಯಿಂದ ಕೆಐಎಡಿಬಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಏಳು ಪುಟಗಳ ದೂರಿನಲ್ಲಿ ಸುಮಾರು 39 ಕಂಪನಿಗಳ ಪಟ್ಟಿ ನೀಡಲಾಗಿದ್ದು, ಅವುಗಳಿಗೆ ಸಿಎ ಸೈಟ್ ನೀಡಲಾಗಿದೆ. ಯಾವುದೇ ಪಾರದರ್ಶಕತೆ ಕಾಯ್ದುಕೊಳ್ಳಲಾಗಿಲ್ಲ. ಅಲ್ಲದೇ ಸಿಎ ಸೈಟ್‌ಗಳನ್ನು ಹಂಚಿಕೆ ಮಾಡಲು ನಕ್ಷೆಗಳನ್ನು ತಿರುಚಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

”ಸಮಗ್ರ ಹಾಗೂ ಉನ್ನತ ಮಟ್ಟದ ತನಿಖೆ ನಡೆಸುವುದು ಅವಶ್ಯವಾಗಿದೆ. ಸಚಿವ ಎಂ.ಬಿ.ಪಾಟೀಲ್ ಅಧಿಕಾರ ದುರುಪಯೋಗಪಡಿಸಿಕೊಂಡು ಖಾಸಗಿಯವರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ( BNS) ವಿವಿಧ ಕಲಂಗಳಡಿ ಕ್ರಿಮಿನಲ್ ಅಪರಾಧ ಎಸಗಿದ್ದಾರೆ. ಆದ್ದರಿಂದ, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17 ಮತ್ತು 19 ಮತ್ತು ಬಿಎನ್‌ಎಸ್‌ನ ಸೆಕ್ಷನ್ 218 ರ ಅಡಿಯಲ್ಲಿ ಪ್ರಾಸಿಕ್ಯೂಷನ್ ಗೆ ಒಪ್ಪಿಗೆ ನೀಡಬೇಕು ಎಂದು ದೂರುದಾರರು ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *