REAL JOURNALISM-“ವಯನಾಡು” ದುರಂತ:ಪ್ರತಿಕೂಲ ಸನ್ನಿವೇಶದಲ್ಲಿ ದಿಟ್ಟ “ವರದಿಗಾರಿಕೆ”

REAL JOURNALISM-“ವಯನಾಡು” ದುರಂತ:ಪ್ರತಿಕೂಲ ಸನ್ನಿವೇಶದಲ್ಲಿ ದಿಟ್ಟ “ವರದಿಗಾರಿಕೆ”

“ವೈಪರೀತ್ಯ”ಗಳ ನಡುವೆ “ವರದಿಗಾರಿಕೆ”ಯಲ್ಲಿ ತೊಡಗಿರುವ ಸಾಹಸಿ “ಪತ್ರಕರ್ತರು”

ಬೆಂಗಳೂರು: ವರದಿಗಾರರ ಬದುಕೇ ಹಾಗೆ..ವರದಿಗಾರಿಕೆನೆ ಹೀಗೆ..ಅದೊಂದು ದಣಿವಿಲ್ಲದ ಅವಿಶ್ರಾಂತ  ದುಡಿಮೆ.ಎಲ್ಲರೂ ತಮ್ಮ ಕುಟುಂಬಗಳೊಂದಿಗೆ ಆಯಾಗಿ ಮನೆಯಲ್ಲಿ ಕಾಲ ಕಳೆಯುತ್ತಿದ್ದರೆ ಪತ್ರಕರ್ತರು ಕುಟುಂಬವಿದ್ದರೂ ಒಂದ್ರೀತಿ ಸಂನ್ಯಾಸಿಗಳಂತೆ ದುಡಿಯುವ ಶ್ರಮಿಕರು.ವೈಯುಕ್ತಿಕ ಜೀವನವೆನ್ನೋದೇ ಅವರಿಗಿರೊಲ್ಲ.ಖಾಸಗಿ ಕ್ಷಣಗಳೇ ಅವರ ಪಾಲಿಗೆ ದುರ್ಲಭ.ಅದರಲ್ಲೂ ದಿಢೀರ್ ಸಂಭವಿಸುವ ವಿಪ್ಲವಕಾರಿ ಸಂದರ್ಭಗಳಲ್ಲಂತೂ ಅವರ ಜೀವನ-ಪಡಿಪಾಟಲು-ಕಾರ್ಯ ಒತ್ತಡ ಅದರಿಂದ ಅನುಭವಿಸುವಂತ ಮಾನಸಿಕ ಯಾತನೆ ಯಾವ್ ಶತೃವಿಗೂ ಬೇಡ ಎನ್ನಿಸುತ್ತೆ.

ಇದನ್ನೆಲ್ಲಾ ಹೇಳೊಕ್ಕೆ ಕಾರಣ, ಪಕ್ಕದ ರಾಜ್ಯ ದೇವರನಾಡು ಕೇರಳಾದಲ್ಲಿ ಸಂಭವಿಸಿರುವ ಭೂ ಕುಸಿತ. ಕೇರಳಾದ ಸ್ವರ್ಗ ಎಂದೇ ಕರೆಯಿಸಿಕೊಳ್ಳುವ ವಯನಾಡು ಪ್ರಾಕೃತಿಕ ವಿಕೋಪಕ್ಕೆ ಭೂಸಮಾಧಿಯಾದ ಘಟನೆಯನ್ನು ಇತಿಹಾಸ ಯಾವತ್ತಿಗು ಮರೆಯದು.ಅತ್ಯಂತ ಕಹಿ ಘಟನೆಯಾಗಿ ಇತಿಹಾಸದ ಪುಟ ಸೇರಿದ ವಯನಾಡು ದುರಂತವನ್ನು ದೂರದಲ್ಲಿ ಕುಳಿತು ನೋಡುವಾಗ್ಲೇ ಮನಸು ಭಾರಗೊಳ್ಳುತ್ತದೆ.ಕಣ್ಣುಗಳು ತೇವವಾಗುತ್ತವೆ.ಎಂಥಾ ಕಲ್ಲುಹೃದಯವನ್ನೂ ಮರುಗುವಂತೆ ಕರಗಿಸುತ್ತದೆ.ಅಂತದ್ದರಲ್ಲಿ ವರದಿಗಾರಿಕೆಗೆ  ಸಾಕ್ಷಾತ್ ಅಲ್ಲಿಗೆ ತೆರಳಿದ ಪತ್ರಕರ್ತರ ಮಾನಸಿಕತೆ ಏನಾಗಿರಬಾರದು ಹೇಳಿ.ಬದುಕೇ ಇಷ್ಟೆನಾ..? ಎನ್ನುವ ಜಿಗುಪ್ಸೆಯಿಂದ ಹಿಡಿದು, ಪ್ರಕೃತಿ ಮುನಿದರೆ ಏನಾಗಬಹುದೆನ್ನುವ ಸತ್ಯ ಅರಿಯೊಕ್ಕೆ ಸಾಧ್ಯವಾಗಿರಬಹುದು.

ವಯನಾಡು ದುರಂತ ದಿನೇ ದಿನೇ ಗಂಭೀರಸ್ವರೂಪ ಪಡೆಯುತ್ತಿದ್ದ ಸನ್ನಿವೇಶದಲ್ಲಿ ನಮ್ಮ ಕನ್ನಡದ ಅನೇಕ ಸುದ್ದಿವಾಹಿನಿಗಳು ವರದಿಗಾರರನ್ನು ಸಾಕ್ಷಾತ್ ವರದಿಗೆಂದು ಕಳುಹಿಸಿಕೊಟ್ಟಿವೆ.ಬಹುತೇಕ ಸುದ್ದಿ ವಾಹಿನಿಗಳ ವರದಿಗಾರರು ವಾರದಿಂದಲೂ ಅಲ್ಲೇ ಬೀಡುಬಿಟ್ಟು ದುರಂತದ ನಾನಾ ಆಯಾಮಗಳನ್ನು ಅನಾವರಣಗೊಳಿಸುವ ಕೆಲಸ ಮಾಡುತ್ತಲೇ ಇದ್ದಾರೆ.ದುರಂತ ನಡೆದು ಒಂದಷ್ಟು ದಿನ ಕಳುದ್ರೂ ವಯನಾಡು ಅಪಾಯದಿಂದ ಮುಕ್ತವಾಗಿಲ್ಲ ಎನ್ನುವ ಸತ್ಯ ಅಲ್ಲಿಗೆ ತೆರಳಿರುವವರಿಗೆ ಗೊತ್ತಿದೆ.

ಹವಾಮಾನ ಇಲಾಖೆ ಹೇಳಿರುವ ಮಾಹಿತಿಯಂತೆ ವಯನಾಡು ಮತ್ತೆ  ಯಾವ್ದೇ ಕ್ಷಣದಲ್ಲಿ ದುರಂತಕ್ಕೀಡಾಗಬಹುದಂತೆ.ಇದೆಲ್ಲವನ್ನು ಮನಗಂಡಿಯೇ ಅಲ್ಲಿ ವರದಿಗಾರರು ಕೆಲಸ ಮಾಡುತ್ತಿದ್ದಾರೆ.ಪ್ರತಿಕೂಲಕರವಾದ ವಾತಾವರಣದಲ್ಲಿ ಜೀವವನ್ನು ಅಪಾಯಕ್ಕೊಡ್ಡಿಕೊಂಡೇ ಕಾರ್ಯನಿರತರಾಗಿದ್ದಾರೆ.ಅವರ ದೈರ್ಯ-ಸಾಹಸಕ್ಕೆ ಒಂದು ಹ್ಯಾಟ್ಸಾಫ್ ಹೇಳಲೇಬೇಕು.

ವಯನಾಡಿನಲ್ಲಿ ನಿಂತು ವರದಿಗಾರಿಕೆ ಮಾಡೋದು ಎಲ್ಲರೂ ಅಂದುಕೊಂಡಷ್ಟು ಅನಾಯಾಸದ ಕೆಲಸವಲ್ಲ.ಅದೊಂದು ಕರುಳು ಹಿಂಡುವಂತ ಸನ್ನಿವೇಶ.ಅದೆಷ್ಟೋ ವರದಿಗಾರರು ವರದಿ ಮಾಡುವಾಗಲೇ ಅಲ್ಲಿನ ದಾರುಣ ಸನ್ನಿವೇಶಕ್ಕೆ ಕಣ್ಣೀರಾಗಿದ್ದಾರೆ.ಅವರ ದ್ವನಿ ಕೊರಳಲ್ಲೇ ಬಿಗಿಹಿಡಿದ್ದಿದೆ.

ಏದುಸಿರು-ನಿಟ್ಟುಸಿರು ಬಿಟ್ಟಿದ್ದಾರೆ.ಮಣ್ಣಿನಡಿ ಅವಿತು ಹೋದ ದೊಡ್ಡವರ-ಮಕ್ಕಳ-ಪ್ರಾಣಿಗಳ ದೇಹಗಳು ಛಿದ್ರಛಿದ್ರವಾಗಿ  ಕೊಳೆತು ನಾರುವ ಸ್ತಿತಿಯಲ್ಲಿ ದೊರೆಯುತ್ತಿರುವುದನ್ನು ಕಣ್ಣಾರೆ ಕಂಡು ಬಿಕ್ಕಿಬಿಕ್ಕಿ ಅತ್ತಿದ್ದಾರೆ.ಜನ್ಮಕ್ಕಾಗುವಷ್ಟು ನೆನಪುಗಳನ್ನು ಮನಸಿನ ತುಂಬಾ ಹರಡಿಬಿಟ್ಟಿದೆ ಆ ಅಂತಃಕರಣ ಕಲಕುವಂಥ  ಸನ್ನಿವೇಶ.

ಕನ್ನಡ ಪ್ಲ್ಯಾಶ್ ನ್ಯೂಸ್ ವಯನಾಡುಗೆ ತೆರಳಿದ ಒಂದಷ್ಟು ವರದಿಗಾರರು-ಕ್ಯಾಮೆರಾಮನ್ ಗಳನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಕಲೆ ಹಾಕುವ ಪ್ರಯತ್ನ ಮಾಡ್ತು.ಪ್ರತಿಕ್ರಿಯಿಸಿದ ಎಲ್ಲರ ಕೊರಳುಗಳು ಮಾತನಾಡುವಾಗ ಬಿಗಿದಿದ್ವು, ಮನುಷ್ಯನ ಸ್ವಾರ್ಥ ಮಿತಿಮೀರಿದ್ರೆ ಏನಾಗಬಹುದು  ಪ್ರಕೃತಿ ಮುನಿದ್ರೆ ಏನಾಗ್ತದೆ ಎನ್ನುವುದಕ್ಕೆ ವಯನಾಡು ದುರಂತ ದುರಂತ ಉದಾಹರಣೆ ಸಾರ್..ರಾತ್ರಿ ಮಲಗಿದ್ದವರೆಲ್ಲಾ ಬೆಳಗಾಗುವುದರೊಳಗೆ ಅವಶೇಷಗಳ ಅಡಿಯಲ್ಲಿ ಹೂತೋದ ಕಥೆಯನ್ನು ಸ್ಥಳೀಯರಿಂದ ಕೇಳಿ ಬದುಕು ಇಷ್ಟೆನಾ ಎನ್ನಿಸಿಬಿಡ್ತು.ಒಂದು ಸಣ್ಣ ಮುನ್ಸೂಚನೆಯ ಸೂಕ್ಷ್ಮನೂ ಕೊಡದೆ ಪ್ರಕೃತಿ ಒಂದಿಡೀ ಗ್ರಾಮ ವನ್ನು ಬಲಿತೆಗೆದುಕೊಂಡಿದ್ದು ದುರಂತ.ಆ ಕಥೆಗಳನ್ನು ಕೇಳುವಾಗ ಕಣ್ಣಾಲಿಗಳು ತುಂಬಿಬಂದ್ವು. ನಾವು ಕಾಲಿಟ್ಟ ಕಡೆಯಲ್ಲೆಲ್ಲಾ ದೇಹಗಳು ಸಿಗುತ್ತಿದ್ದವು..ವೃತ್ತಿಜೀವನದ ಅತ್ಯಂತ ಕ್ಲಿಷ್ಟಕರವಾದ ವರದಿಗಾರಿಕೆ ಎನ್ನಿಸ್ತು ಎಂದ್ರು.

ಕಾರ್ಯಾಚರಣೆಯಲ್ಲಿ ತೊಡಗಿರುವ ರಕ್ಷಣಾ ಪಡೆಗಳ ಕೆಲಸವಂತೂ ಯಾವ್ ಶತೃವಿಗು ಬೇಡ ಎನ್ನಿಸ್ತು.ಪ್ರಾಕೃತಿಕ ವಿಕೋಪಗಳ ಸನ್ನಿವೇಶದಲ್ಲಿ ಅವರು ನಿರ್ವಹಿಸುವ ಕ್ಲಿಷ್ಟಕರ ಹಾಗು ನಿರ್ಣಾಯಕ ಪಾತ್ರವನ್ನು ಹತ್ತಿರದಿಂದ ನೋಡುವ ಅವಕಾಶ ಸಿಗ್ತು.

ತಮ್ಮ ಪ್ರಾಣದ ಹಂಗುತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗುವ ಅವರು ಭೂಸಮಾಧಿಯಾದ ಗ್ರಾಮದ ಆಳವನ್ನು ಬಗೆಯುವಾಗ ಸಿಗುತ್ತಿದ್ದ ಹೆಣದ ರಾಶಿಗಳನ್ನು ಒಂದೆಡೆ ಗುಂಪು ಹಾಕುತ್ತಿದ್ದರು.ಕೆಲವೊಂದು ಹೆಣಗಳು ಕೊಳೆತು ನಾರುವಂಥ ಸ್ಥಿತಿಯಲ್ಲಿ ಸಿಗುತ್ತಿದ್ವು.ಸ್ವಲ್ಪವು ಅಸಹ್ಯಮಾಡಿಕೊಳ್ಳದೆ ಅದನ್ನು ತೆಗೆಯುತ್ತಿದ್ದರು.ಅವಶೇಷಗಳ ಅಡಿಯಲ್ಲಿ ಯಾರದಾದ್ರೂ ದ್ವನಿ ಕೇಳಿಸಿದ್ರೆ ಸಾಕು,ಅವರು ಅವರನ್ನು ಹೊರ ತೆಗೆಯೊಕ್ಕೆ ತೆಗೆದುಕೊಳ್ಳುತ್ತಿದ್ದ ರಿಸ್ಕ್..ವ್ಹಾವ್..ಅವರಿಗೆ ನಿಜಕ್ಕೂ ಹ್ಯಾಟ್ಸಾಪ್..ಅವರ ಕೆಲಸದ ಮುಂದೆ ನಮ್ಮದೇನೂ ಇಲ್ಲ ಎನ್ನಿಸಿಬಿಡ್ತು ಸರ್ ಎಂದು ಇನ್ನೋರ್ವ ಪತ್ರಕರ್ತ ತಮ್ಮ ಅನುಭವ ಹಂಚಿಕೊಂಡ್ರು.

ವಯನಾಡುನ ಧಾರುಣ ಸನ್ನಿವೇಶದ ಮುಂದೆ ನಮ್ಮ ಮನೆಗಳೇ ನಮಗೆ ನೆನಪಾಗ್ಲಿಲ್ಲ.ಸಂಬಂಧಿಕರಿಗಾಗಿ ಕಣ್ಣೀರಿಡುವ ಅನಾಥರ ಆರ್ತನಾದ.ಹೆತ್ತವರನ್ನು ಕಳಕೊಂಡ ಕಂದಮ್ಮಗಳ ಆಕ್ರಂಧನ,ಜತೆಗಿದ್ದವರನ್ನು ಶಾಶ್ವತವಾಗಿ ದೂರಮಾಡಿಕೊಂಡವರ ಅರಚಾಟ, ಜತೆಗೆ ನೀರು-ಆಹಾರದ ಹಸಿವಿನ ಚೀತ್ಕಾರ ಕಂಡು ಕಣ್ಣೀರಿಟ್ಟಿದ್ದೇನೆ.ಅಯ್ಯೋ ದೇವರೇ ಎಲ್ಲರ ಕಣ್ಣೀರನ್ನು ಒರೆಸು ಎಂದು ಬೇಡಿಕೊಳ್ಳುವುದನ್ನು ಬಿಟ್ಟರೆ ಏನೂ ಮಾಡ್ಲಿಕ್ಕಾಗದ ಅಸಹಾಯಕ ಸನ್ನಿವೇಶ ಅದು.ಜನ್ಮಕ್ಕಾಗುವಷ್ಟು ನೆನಪುಗಳನ್ನು ವಯನಾಡು ದುರಂತ ಕಲ್ಪಿಸಿಕೊಟ್ಟಿದೆ.ಆರಂಭದಲ್ಲಿ ಒಂದೆರೆಡು ರಾತ್ರಿ ನಿದ್ದೆನೇ ಮಾಡಲಾಗಲಿಲ್ಲ.ದೇಶದ ಯಾವ್ದೇ ಭಾಗದಲ್ಲಿ ಪ್ರಾಕೃತಿಕ ವಿಪ್ಲವ-ಪಲ್ಲಟ-ದುರಂತಗಳಾದ್ರೂ ವಯನಾಡು ಕಣ್ಮುಂದೆ ಹಾದುಹೋಗುತ್ತದೆ.

ರಿಪೋರ್ಟರ್ಸ್ ಗಿಂತ ಅಲ್ಲಿನ ದಾರುಣ ದೃಶ್ಯಗಳನ್ನು ಸೆರೆ ಹಿಡಿಯುವ ಫೋಟೋಗ್ರಾಫರ್-ಕ್ಯಾಮೆರಾಮನ್ ಗಳ ಕಥೆ ಕರುಣಾಜನಕ. ಕೆಲವು ಕ್ಯಾಮೆರಾಮನ್ ಗಳನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಮಾತನಾಡಿಸಿ ಅವರ ಅನುಭವ ಕಲೆ ಹಾಕುವ ಪ್ರಯತ್ನ ಮಾಡ್ತು.ಆ ಅನುಭವದ ಮಾತು ಕೇಳಿ ಒಂದ್ ಕ್ಷಣ ಗದ್ಗದಿತನಾಗುವಂತಾಯ್ತು.

ಅಲ್ಲಿನ ದೃಶ್ಯಗಳನ್ನು ಲೆನ್ಸ್ ನಲ್ಲಿ ಇಳಿಸಿ ಝೂಮ್ ಇನ್-ಝೂಮ್ ಔಟ್ ಮಾಡುವಾಗ ಕೈಗಳೇ ಶೇಕ್ ಆಗ್ತಿದ್ವು. ಕಾಲುಗಳಲ್ಲಿ ಅದೆಂತದ್ದೋ ನಡುಕ-ಕಣ್ಣಲ್ಲಿ ಬುಳುಬುಳು ನೀರು ಬರುತ್ತಿತ್ತು.ಮನಸನ್ನು ಎಷ್ಟೆ ಗಟ್ಟಿ ಮಾಡಿಕೊಂಡರೂ ಕೈ-ಕಾಲುಗಳು ಸ್ಥಿಮಿತಕ್ಕೇ ಬರುತ್ತಿರಲಿಲ್ಲ.ಅಲ್ಲಿ ಸತ್ತವರು ನಮ್ಮ ನಡುವಿರುವವರಲ್ಲೇ ಯಾರೋ ಒಬ್ಬರೆನ್ನುವ ಭಾವ ಕಾಡುತ್ತಿತ್ತು.ಕಣ್ಣೀರು ಒರೆಯಿಸಿಕೊಂಡು ಕೆಲಸ ಮಾಡಿದ್ದಿದೆ.ನನ್ನ ಅಳುವನ್ನು ನನ್ನ ರಿಪೋರ್ಟರ್  ಸಮಾಧಾನ ಮಾಡಿ ನಿಲ್ಲಿಸಿದ್ದಿದೆ.

ವಯನಾಡುವಿನ ಅನೇಕ ಸ್ಥಳಗಳಲ್ಲಿ ಶೂಟ್ ಮಾಡುವಾಗ ನಾನು ಹಾಗೂ ನನ್ನ ರಿಪೋರ್ಟರ್ ಇಬ್ಬರೂ ಅತ್ತಿದ್ದಿದೆ.ಜೀವನ ಇಷ್ಟೆನಾ..ಎಂದು ಅನುಭಾವಿಗಳಂತೆ ಮಾತನಾಡಿದ್ದಿದೆ.ತಮ್ಮವರನ್ನು ಕಳೆದುಕೊಂಡ ಒಂದಷ್ಟು ವಿಳಾಸವಿಲ್ಲದೆ ಅಲೆಯುವಾಗ ಕರುಳು ಹಿಂಡುತ್ತಿತ್ತು. ನಮ್ಮ ಕ್ಯಾಮೆರಾ  ಮುಂದೆ ಜನ  ಅಂದು ರಾತ್ರಿ ನಡೆದ ದುರ್ಘಟನೆಯನ್ನು ವಿವರಿಸುತ್ತಿದ್ದರೆ ನಮಗೆ ಅರಿವಿಲ್ಲದಂತೆ ನಾವೇ ಭಾವುಕರಾಗಿದ್ದಿದೆ ಎಂದು ಕ್ಯಾಮೆರಾಮನ್ ಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಭೂಕಂಪನ, ಪ್ರವಾಹ-ಅತಿವೃಷ್ಟಿ-ಅನಾವೃಷ್ಟಿಯಂಥ ಪ್ರತಿಕೂಲಕರವಾದ ಸನ್ನಿವೇಶಗಳ ವರದಿಗಾರಿಕೆಗೆ ತೆರಳುವ ವರದಿಗಾರರಿಗೆ ಅಲ್ಲಿನ ಪ್ರತಿಕೂಲ ಸನ್ನಿವೇಶದಲ್ಲಿ ಕೆಲಸ ಮಾಡುವುದು ಲೈಫ್ ರಿಸ್ಕ್ ಎನಿಸೋದು ಸಹಜ.ಅಲ್ಲಿ ಸಂಭವಿಸಿರುವ ಜೀವಹಾನಿ-ವ್ಯಾಕುಲತೆ- ಮನಸನ್ನು ಮುದುಡೋದು ಕಾಮನ್..ಆದ್ರೆ ವಯನಾಡು ದುರಂತದ ವರದಿಗಾರಿಕೆ ವರದಿಗಾರರನ್ನು ಹೆಚ್ಚೆಚ್ಚು ಕಾಡಿದ್ದು-ಕಾಡುತ್ತಿರುವುದು ಮನುಕುಲವನ್ನೇ ತಲ್ಲಣಿಸಿದ ಅಲ್ಲಿನ ಸನ್ನಿವೇಶಗಳಿಂದ .. ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡ್ತಿರುವ ವರದಿಗಾರರೆಲ್ಲಾ ಕಣ್ಣೀರಾಕದೆ ಇರ್ಲಿಕ್ಕಿಲ್ಲವೇನೋ ಎಂದೆನಿಸುತ್ತದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *