ಯೋಗ ಗುರು ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈ ಬಿಡಲು ನಿರ್ಧರಿಸಿರುವ ಸುಪ್ರೀಂಕೋರ್ಟ್ ಈ ಕುರಿತು ಮೇ 14ರಂದು ತೀರ್ಪು ಪ್ರಕಟಿಸಲಿದೆ.
ಯೋಗ ಗುರು ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಒಡೆತನದ ಪತಂಜಲಿ ಆಯುರ್ವೇದಿಕ್ ಉತ್ಪನ್ನಗಳ ಕಂಪನಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಅಥವಾ ಸುಳ್ಳು ಜಾಹಿರಾತು ಪ್ರಕಟಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯೊಂದಿಗೆ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ತೆರೆ ಎಳೆದಿದೆ.
ನ್ಯಾಯಮೂರ್ತಿ ಹೀಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಔಸಾದ್ದೀನ್ ಅಮಾನುಲ್ಲಾ ನೇತೃತ್ವದ ವಿಭಾಗೀಯ ಪೀಠ ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪನ್ನು ಮೇ 14ಕ್ಕೆ ನಿಗದಿಪಡಿಸಿದೆ.
ಆಧುನಿಕ ಚಿಕಿತ್ಸಾ ಪದ್ಧತಿಯಿಂದ ರೋಗಿ ಗುಣಮುಖ ಆಗಲ್ಲ. ಈ ಚಿಕಿತ್ಸಾ ಪದ್ಧತಿ ವ್ಯರ್ಥ ಎಂದು ಪದೇಪದೆ ಹೇಳಿಕೆ ನೀಡಿದ್ದ ಬಾಬಾ ರಾಮ್ ದೇವ್ ವಿರುದ್ಧ ಭಾರತೀಯ ವೈದ್ಯಕೀಯ ಮಂಡಳಿ ಸುಪ್ರೀಂಕೋರ್ಟ್ ಗೆ ದೂರು ನೀಡಿತ್ತು. ಸುದೀರ್ಘ ವಿಚಾರಣೆ ವೇಳೆ ಬಾಬಾ ರಾಮ್ ದೇವ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂಕೋರ್ಟ್ ಕ್ಷಮೆಯಾಚನೆಯನ್ನು ತಿರಸ್ಕರಿಸಿತ್ತು.
ಭೇಷರತ್ ಕ್ಷಮೆಯಾಚನೆ ಅಲ್ಲದೇ ಎಲ್ಲಾ ಪತ್ರಿಕೆ ಮತ್ತು ಟೀವಿ ಚಾನೆಲ್ ಗಳಲ್ಲಿ ಮುಖಪುಟದಲ್ಲಿ ಕ್ಷಮೆಯಾಚಿಸಿದ ನಂತರ ಬಾಬಾ ರಾಮ್ ದೇವ್ ಕ್ರಮವನ್ನು ಒಪ್ಪಿಕೊಂಡ ಸುಪ್ರೀಂಕೋರ್ಟ್, ವಿಚಾರಣೆ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿ ತೀರ್ಪು ಪ್ರಕಟಿಸಲು ನಿರ್ಧರಿಸಿದೆ.