ಬೆಂಗಳೂರು: ಸುದ್ದಿ ಜಗತ್ತಿನ ಹಿರಿಯ ಸ್ನೇಹಿತ-ಖ್ಯಾತ ಛಾಯಾಗ್ರಾಹಕ “ಶ್ರೀನಾಥ್ ಭೂಮಿ” ಧೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
“ಪಾರ್ಶ್ವವಾಯು”ಪೀಡಿತರಾಗಿದ್ದ ಶ್ರೀನಾಥ್ ಭೂಮಿ ತಮ್ಮ ವೃದ್ದ ತಾಯಿ ಜತೆ ಸಿಬಿಐ ಕಚೇರಿಯಿರುವ ಗಂಗಾನಗರದಲ್ಲಿ ವಾಸವಾಗಿದ್ದರು.ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಶ್ರೀನಾಥ್ ಚಿಕಿತ್ಸೆ ಪಡೆಯಲು ಹಣಕ್ಕೆ ಪರದಾಡುತ್ತಿದ್ದರು.ಒಂದೆಡೆ ವೃದ್ಧ ತಾಯಿ ನೋಡಿಕೊಳ್ಳಬೇಕಾದ ಪರಿಸ್ತಿತಿ ಇನ್ನೊಂದೆಡೆ ಚಿಕಿತ್ಸೆಗೂ ಹಣವಿಲ್ಲದೆ ಪರದಾಡುವಂಥ ಪರಿಸ್ತಿತಿ..ಇವೆರಡರಿಂದ ಜರ್ಝರಿತರಾಗಿದ್ದ ಶ್ರೀನಾಥ್ ಇಹಲೋಕವನ್ನೇ ತ್ಯಜಿಸಿದ್ದಾರೆ.
ಸಮಯ ಟಿವಿ ಸೇರಿದಂತೆ ಅನೇಕ ನ್ಯೂಸ್ ಚಾನೆಲ್ ಗಳಲ್ಲಿ ಕೆಲಸ ಮಾಡಿದ್ದ ಶ್ರೀನಾಥ್ ಭೂಮಿ ಅವರು ಕೆಲ ವರ್ಷಗಳಿಂದ ಕೆಲಸವಿಲ್ಲದೆ ಜೀವನ ನಿರ್ವಹಣೆಯು ಕಷ್ಟವಾಗುತ್ತಿದೆ ಎಂದು ಸ್ನೇಹಿತರು,ಆತ್ಮೀಯರ ಬಳಿ ಹೇಳಿಕೊಂಡಿದ್ದರಂತೆ. ಪಾರ್ಶ್ವವಾಯು ಅವರನ್ನು ಮತ್ತಷ್ಟು ಕೃಶಗೊಳಿಸಿತ್ತು.ಚಿಕಿತ್ಸೆಗೆ ಹಣವಿಲ್ಲದಿದ್ದರೂ ಯಾರ ಬಳಿಯೂ ನೆರವು ಕೇಳದ ಸ್ವಾಭಿಮಾನಿಯಾಗಿದ್ರು.
ಅನಾರೋಗ್ಯದಿಂದ ಬಳಲುತ್ತಿದ್ದರೂ ಯಾರಾದರೊಂದು ಕೆಲಸ ಕೊಟ್ಟರೆ ಸಾಕು ನಾನು ಕೆಲಸ ಮಾಡಲಿಕ್ಕೆ ಸಿದ್ದ.ಜೀವನ ನಿರ್ವಹಣೆ ಮಾಡಬೇಕಿದೆ.ಹಾಗೆಯೇ ನನ್ನನ್ನು ನಂಬಿರುವ ತಾಯಿಯನ್ನು ನೋಡಿಕೊಳ್ಳಬೇಕಿದೆ ಎಂದು ವಿನಮ್ರವಾಗಿ ನುಡಿಯುತ್ತಿದ್ದರು.ಆದರೆ ದುರಾದೃಷ್ಟವಶಾತ್ ಅವರಿಗೆ ಕೆಲಸವೇ ಸಿಗಲಿಲ್ಲ..ಹಾಗಾಗಿ ಕೊನೇ ದಿನಗಳಲ್ಲಿ ತುಂಬಾ ಕಷ್ಟದಲ್ಲೇ ಜೀವನ ನಡೆಸಿದರು.
ಇನ್ನು ಆರೋಗ್ಯ ಚೆನ್ನಾಗಿದ್ದ ಹಾಗೂ ವಯಸ್ಸು ಚಿಕ್ಕದಾಗಿದ್ದಾಗ ಸುದ್ದಿ ಜಗತ್ತಿನ ಕೆಲವೇ ಕೆಲವು ಅತ್ಯುತ್ತಮ ಕ್ಯಾಮೆರಾಮನ್ ಗಳಲ್ಲಿ ತಮ್ಮನ್ನು ಒಬ್ಬರಾಗಿ ಗುರುತಿಸಿಕೊಂಡಿದ್ದರು ಭೂಮಿ ಶ್ರೀನಾಥ್.ಭಾರೀ ಬೇಡಿಕೆಯೂ ಅವರಿಗಿತ್ತು.ಅವರ ಕ್ಯಾಮೆರಾ ಕೈಚಳಕಕ್ಕೆ ಮಾರು ಹೋಗದವರೇ ಕಡಿಮೆ ಎನ್ನಬಹುದೇನೋ..ಆದರೆ ವಯಸ್ಸಾದ ಕ್ಯಾಮೆರಾಮನ್ ಗಳನ್ನು ನಿರ್ಲಕ್ಷ್ಯಿಸುವ ಕೆಟ್ಟ ಸಂಪ್ರದಾಯ ಸುದ್ದಿ ವಾಹಿನಿಗಳಲ್ಲಿ ಹೆಚ್ಚಾಗಲಾರಂಭಿಸಿತೋ ಶ್ರೀನಾಥ್ ಅವರಂತೆಯೇ ಸಾಕಷ್ಟು ಹಿರಿಯ ಛಾಯಾಗ್ರಾಹಕರು ಮೂಲೆಗುಂಪಾದರು.ಇಂದು ಯೂ ಟ್ಯೂಬ್ ಮಾಡಿಕೊಂಡು ಸಣ್ಣಪುಟ್ಟ ಕೇಬಲ ಚಾನೆಲ್ ಗಳಲ್ಲಿ ಸೇರಿಕೊಂಡು ಜೀವನ ನಿರ್ವಹಣೆ ಮಾಡುವುದನ್ನು ನೋಡಿದರೆ ಬೇಸರವಾಗುತ್ತದೆ.
ಸುದ್ದಿ ಜಗತ್ತಿಗೆ ಅಪರಿಚಿತರೇನು ಅಲ್ಲದಿದ್ದ ಶ್ರೀನಾಥ್ ಅವರ ಸಂಕಷ್ಟಕ್ಕೆ ಮರುಗುವ ಕೆಲಸವನ್ನು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಿಡಿದು ಯಾವೊಂದು ಸೋಕಾಲ್ಡ್ ಪತ್ರಕರ್ತರ ಸಂಘಟನೆಗಳೂ ಮಾಡಲಿಲ್ಲ ಎನ್ನುವುದು ಬೇಸರ.ಬೇಡದ ವಿಚಾರಗಳಲ್ಲಿ ಲಾಭಿ-ರಾಜಕೀಯ ಮಾಡಿಕೊಂಡಿರುವ ಪತ್ರಕರ್ತರ ಸಂಘಟನೆಗಳ ಮನಸ್ತಿತಿ-ಧೋರಣೆ ಗಮನಿಸಿದ್ರೆ ನಾಚಿಕೆ-ಬೇಸರವಾಗುತ್ತದೆ.ಕೊನೇ ದಿನಗಳಲ್ಲಿ ಶ್ರೀನಾಥ್ ಅವರ ನೆರವಿಗೆ ಬಂದಿದ್ದರೆ ಇನ್ನೊಂದಷ್ಟು ವರ್ಷ ಆ ಜೀವ ಬದುಕುತ್ತಿತ್ತೇನೋ.. ಮಗನನ್ನು ಕಳೆದುಕೊಂಡಿರುವ ವೃದ್ಧತಾಯಿಗೆ ಆಸರೆ ಯಾರು..ಆ ತಾಯಿಯ ಜೀವನದ ಗತಿಯೇನು..? ಈ ಪ್ರಶ್ನೆಗಳಿಗೆ ಉತ್ತರ ಕೊಡುವವರ್ಯಾರು…?ಹಿರಿಯ ಸ್ನೇಹಿತ ಶ್ರೀನಾಥ್ ಭೂಮಿ ಸಾವಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಕಂಬನಿ ಮಿಡಿಯುತ್ತೆ..