ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ್ರೇ..ಎಲ್ಲಿದ್ದೀರಾ..? ಇದರ ಬಗ್ಗೆ ನಿಮಗೆ ಮಾಹಿತಿ ಇದೆಯಾ..? ಮಾಹಿತಿ ಇದ್ರೂ ಇದಕ್ಕೆ ಕಡಿವಾಣ ಹಾಕೊಕ್ಕೆ ಸಾಧ್ಯವಿರುವ ಪ್ರಯತ್ನಗಳನ್ನು ಮಾಡದೇ ಇದ್ದರೆ ಅದಕ್ಕಿಂತ ದೊಡ್ಡ ಕ್ರೌರ್ಯ-ಅಮಾನವೀಯತೆ ಮತ್ತೊಂದಿರಲಾರದೇನೋ..? ಓದಿ,ಆಟವಾಡಿಕೊಂಡು, ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನಿಟ್ಟುಕೊಂಡು ನಲಿಯಬೇಕಾದ ವಯಸ್ಸಲ್ಲಿ ಯಾರ ಬಲವಂತಕ್ಕೋ…ಕ್ಷಣಿಕ ದೈಹಿಕ ಸುಖಕ್ಕಾಗಿ..ಇನ್ನ್ಯಾರದೋ ಕಾಮತೃಷೆಗೆ ಬಲಿಯಾಗಿ ಅವಧಿಪೂರ್ವ ಪ್ರಸವಕ್ಕೊಳಗಾಗಿ ಬಾಲಮಾತೆ( ಅಪ್ರಾಪ್ತ ಮಾತೆಯರು) ಆಗುತ್ತಿರುವ ಮಕ್ಕಳ ವಿಷಯ ನಿಮ್ಗೆ ಗೊತ್ತಿಲ್ವೇ..? ಮಾಹಿತಿ ಬೇಕಿದ್ರೆ ಈ ಕೂಡಲೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೊಮ್ಮೆ ಭೇಟಿ ನೀಡಿ ವಿಚಾರಿಸಿಕೊಳ್ಳಿ..ಪ್ಲೀಸ್..
ನಿಜಕ್ಕೂ ಇದು ನಾಗರಿಕ ಸಮಾಜ ನಾಚಿಕೆಯಿಂದ ತಲೆತಗ್ಗಿಸಬೇಕಾದ ವಿಚಾರ.ನಾವು ಶಿಲಾಯುಗದಲ್ಲಿ ದ್ದೇವೋ.? ಅಥವಾ ಮಾನವೀಯ ಸಮಾಜದಲ್ಲಿದ್ದೇವೊ ಎಂಬ ಶಂಕೆ ಮೂಡುವಂತ ಬೆಳವಣಿಗೆಗೆ ಕರ್ನಾಟಕ ಸಾಕ್ಷಿಯಾಗಿದೆ.ಇಂತದ್ದೊಂದು ಆತಂಕಕ್ಕೆ ಕಾರಣ, ಹೆಣ್ಣು ಮಕ್ಕಳು ಕಾನೂನುಬದ್ಧವಾಗಿ ಪ್ರಸವಕ್ಕೆ ನಿಗಧಿಯಾಗಿರುವ ವಯಸ್ಸಿಗಿಂತ ಮುನ್ನವೇ ತಾಯಂದರಾಗುತ್ತಿರುವುದು..ಸಾಧ್ಯವೇ ಇಲ್ಲ, ನಾವು ಅದಕ್ಕೆಲ್ಲಾ ಅವಕಾಶ ಕೊಡುತ್ತಿಲ್ಲ ಎಂಬುದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಾದವೇ ಆಗಿದ್ರೆ ಮಕ್ಕಳ ಹಕ್ಕುಗಳ ರಕ್ಷಣಾ ವೇದಿಕೆ ನೀಡಿರುವ ಶಾಕಿಂಗ್ ರಿಪೋರ್ಟ್ ನ್ನೊಮ್ಮೆ ನೋಡಲಿ..ನಾವು ಹಾಗು ನಮ್ಮ ಸಮಾಜ ಎಷ್ಟರ ಮಟ್ಟಿಗೆ ಸುಸಂಸ್ಕ್ರತವಾಗಿದೆ ಎನ್ನುವುದು ಗೊತ್ತಾಗುತ್ತದೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಕನ್ನಡ ಫ್ಲ್ಯಾಶ್ಯ ನ್ಯೂಸ್ ಗೆ ಸ್ಪೋಟಕ ಮಾಹಿತಿಯೊಂದು ದೊರೆತಿದೆ.ಈ ರಿಪೋರ್ಟ್ ನೋಡಿದಾಗ ಕ್ಷಣ ಬೆಚ್ಚಿಬಿದ್ದಿದ್ದಂತೂ ಸತ್ಯ.ಏಕೆಂದ್ರೆ ನಮ್ಮ ವ್ಯವಸ್ಥೆ ಇಷ್ಟೊಂದು ಶೋಚನೀಯವಾದ ಸ್ಥಿತಿಗೆ ತಲುಪಿದೆಯಾ ಎಂಬ ಚಿಂತೆ ಕಾಡುವಷ್ಟರ ಮಟ್ಟಿಗೆ ಕರ್ನಾಟಕದಲ್ಲಿ ಬಾಲಮಾತೆಯರು ಪತ್ತೆಯಾಗಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವರದಿ ಪ್ರಕಾರವೆ ರಾಜ್ಯದಲ್ಲಿದ್ದಾರಂತೆ ಬರೋಬ್ಬರಿ 1,30,962 ಬಾಲಮಾತೆಯರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವರದಿ ಪ್ರಕಾರವೇ 2021-22 ರಲ್ಲಿ 45,279 ಬಾಲಮಾತೆಯರು ಪತ್ತೆಯಾಗಿದ್ದಾರೆ.ಇನ್ನು 2022-23 ರಲ್ಲಿ 49, 291 ಹಾಗು 2023-24 ರಲ್ಲಿ 39,392 ಬಾಲಮಾತೆಯರು ಪತ್ತೆಯಾಗಿರುವ ಆತಂಕಕಾರಿ ಸಂಗತಿ ಹೊರಬಿದ್ದಿದೆ. 14-15ರಿಂದ 15-16, 16-17, 17-18,18-19 ವಯಸ್ಸುಗಳ ಕೆಟಗರಿಯಲ್ಲಿ ಬಾಲಮಾತೆಯಾದವರ ವಿವರಗಳನ್ನು ಬಹಿರಂಗಪಡಿಸಿರುವ ಆಯೋಗ 2021-22 ರಲ್ಲಿ 14-15ರ ವಯಸ್ಸಲ್ಲಿ 147 ಮಕ್ಕಳು ಬಾಲಮಾತೆಯಾಗಿರುವುದಾಗಿ ಹೇಳಿದೆ.ಹಾಗೆಯೇ 15-16 ವಯಸ್ಸಲ್ಲಿ 509 , 16-17 ವಯಸ್ಸಲ್ಲಿ 1,413, 17-18ನೇ ವಯಸ್ಸಲ್ಲಿ 9,723 ಹಾಗು 18-19 ವಯಸ್ಸಲ್ಲಿ 33, 487 ಮಕ್ಕಳು ಬಾಲಮಾತೆಯರಾಗಿದ್ದಾರೆನ್ನುವುದಾಗಿ ಹೇಳಿದೆ.
ಇನ್ನು 2022-23 ರಲ್ಲಿ 14-15ರ ವಯಸ್ಸಲ್ಲಿ 217, 15-16 ವಯಸ್ಸಲ್ಲಿ 686, 16-17 ವಯಸ್ಸಲ್ಲಿ 1,881, 17-18ನೇ ವಯಸ್ಸಲ್ಲಿ 10,414, 18-19 ವಯಸ್ಸಲ್ಲಿ 36,093 ಹೀಗೆ ವಿವಿಧ ವಯಸ್ಸುಗಳಲ್ಲಿ ಬಾಲ ಮಾತೆಯಾದವರು ಒಟ್ಟು 49, 291 ಎಂದು ಹೇಳಿದೆ.2023-24 ರಲ್ಲಿ 14-15ರ ವಯಸ್ಸಲ್ಲಿ 156, 15-16 ವಯಸ್ಸಲ್ಲಿ 419, 16-17 ವಯಸ್ಸಲ್ಲಿ 1,397,17-18ನೇ ವಯಸ್ಸಲ್ಲಿ 6,659 ಹಾಗೂ 18-19 ವಯಸ್ಸಲ್ಲಿ 30,761 ಹೀಗೆ ವಿವಿಧ ವಯಸ್ಸುಗಳಲ್ಲಿ ಬಾಲ ಮಾತೆಯಾದವರು ಒಟ್ಟು 39,392 ಎಂದು ಅಂಕಿಅಂಶ ತಿಳಿಸಿದೆ.
ಹಾಗೆಯೇ ಬಾಲಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾದ ಜಿಲ್ಲೆಗಳ ಪಟ್ಟಿಯನ್ನು ನೋಡುವುದಾದ್ರೆ 2021 ರಲ್ಲಿ ಬೆಂಗಳೂರು ನಗರದಲ್ಲೇ 6,455 ಬಾಲಮಾತೆಯರು ಪತ್ತೆಯಾಗಿದ್ದರಂತೆ. 4,066 ಬಾಲಮಾತೆಯರು ಪತ್ತೆಯಾದ ಬೆಂಗಳೂರು ಗ್ರಾಮಾಂತರಕ್ಕೆ 2ನೇ ಸ್ಥಾನದ ಕುಖ್ಯಾತಿ ದೊರೆತಿದ್ದರೆ ,3,173 ಬಾಲಮಾತೆಯರನ್ನು ಪಡೆದ ಮೈಸೂರಿಗೆ 3ನೇ ಸ್ಥಾನ ದೊರೆತಿದೆ. ತುಮಕೂರು,ಉತ್ತರ ಕನ್ನಡ,ಚಿತ್ರದುರ್ಗ,ಬಳ್ಳಾರಿ ಜಿಲ್ಲೆಗಳಲ್ಲಿ ಸರಾಸರಿ 2ಸಾವಿರಕ್ಕಿಂತ ಹೆಚ್ಚಿನ ಬಾಲಮಾತೆಯರು ಪತ್ತೆಯಾಗಿದ್ದಾರೆ.
ಇನ್ನು 2022 ರಲ್ಲಿ ಬೆಂಗಳೂರು ನಗರದಲ್ಲೇ 6,702 ಬಾಲಮಾತೆಯರು ಪತ್ತೆಯಾಗಿದ್ದಾರೆ. ಹಾಗೆಯೇ 4,258 ಬಾಲಮಾತೆಯರು ಪತ್ತೆಯಾದ ಬೆಳಗಾವಿಗೆ 2ನೇ ಸ್ಥಾನದ ಕುಖ್ಯಾತಿ ದೊರೆತಿದೆ. 3,349 ಬಾಲಮಾತೆಯ ರನ್ನು ಪಡೆದ ವಿಜಯಪುರಕ್ಕೆ 3ನೇ ಸ್ಥಾನದಲ್ಲಿದೆ. ಇನ್ನು ಕಲ್ಬುರ್ಗಿ-3142,ಬಾಗಲಕೋಟೆ-2,226,ಬಳ್ಳಾರಿ-2881,ಮೈಸೂರು-2747 ಬಾಲಮಾತೆಯರು ಪತ್ತೆಯಾಗಿದ್ದಾರೆ. ಮೇಲ್ಕಂಡ ವರ್ಷದಲ್ಲಿ 4 ಸಾವಿರಕ್ಕಿಂತ ಹೆಚ್ಚು ಬಾಲ ಮಾತೆಯರು ಹೆಚ್ಚಿದ್ದಾರೆ.
ಹಾಗೆಯೇ 2023 ರಲ್ಲಿ ಬೆಂಗಳೂರು ನಗರದಲ್ಲೇ 4506 ಬಾಲಮಾತೆಯರು ಪತ್ತೆಯಾಗಿದ್ದರೆ, 3,974 ಬಾಲಮಾತೆಯರು ಪತ್ತೆಯಾದ ಬೆಳಗಾವಿಗೆ 2ನೇ ಸ್ಥಾನದ ಕುಖ್ಯಾತಿ ದೊರೆತಿದೆ. 3,242 ಬಾಲಮಾತೆಯರನ್ನು ಪಡೆದ ವಿಜಯಪುರಕ್ಕೆ 3ನೇ ಸ್ಥಾನ ದೊರೆತಿದೆ. ಹಾಗೆಯೇ ಬಳ್ಳಾರಿ-2,349, ಕಲ್ಬುರ್ಗಿ-1,956ಮೈಸೂರು-1,789,ತುಮಕೂರು-1750 ಬಾಲಮಾತೆಯರು ಪತ್ತೆಯಾ್ಗಿದ್ದಾರೆ.ಒಂದು ಸಣ್ಣ ಸಮಾಧಾನದ ವಿಚಾರ ಏನೆಂದರೆ, 2023 ರಲ್ಲಿ ಬಾಲಮಾತೆಯರ ಸಂಖ್ಯೆ ತುಸು ಕಡಿಮೆಯಾಗಿದೆ.
ಇನ್ನು 2024ರಲ್ಲಿ ಬಾಲಮಾತೆಯರ ಸಂಖ್ಯೆ ಹೆಚ್ಚಿರುವ ಆತಂಕವಿದೆಯಂತೆ. ಮೇಲ್ಕಂಡ ಪ್ರಕರಣಗಳ ವಿಲೇವಾರಿಯೇ ಆಯೋಗಕ್ಕೆ ದೊಡ್ಡ ಚಿಂತೆಯಾಗಿದೆ. ಇವನ್ನು ಫೋಕ್ಸೋ ಕೇಸುಗಳಾಗಿ ಪರಿಗಣಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನಲಾಗಿದ್ದು, ಪ್ರಕರಣಗಳನ್ನು ಹೇಗೆ ಹ್ಯಾಂಡಲ್ ಮಾಡಬೇಕೆನ್ನುವ ಚಿಂತೆಯಲ್ಲಿ ಆಯೋಗವಿದೆ ಎಂದು ಅಧ್ಯಕ್ಷ ನಾಗಣ್ಣ ಗೌಡ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ. ಇದರ ಜತೆಗೆ ನಿತ್ಯವೂ ಆಯೋಗಕ್ಕೆ ಬಾಲಮಾತೆಯರು ಹಾಗು ಪೋಕ್ಸೋ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆಯಂತೆ. ವಿಲೇವಾರಿಗೆ ಕಾನೂನಾತ್ಮಕ ತೊಡಕು ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರ-ಮಕ್ಕಳ ಕಲ್ಯಾಣ ಇಲಾಖೆಗೆ ಸಲಹೆ ಕೇಳಲು ಆಯೋಗ ಮುಂದಾಗಿದೆಯಂತೆ.
ಅಪ್ರಾಪ್ರ ವಯಸ್ಸಿನಲ್ಲಿ ಪ್ರೀತಿಸಿ ಮದುವೆಯಾಗಿ ಮಕ್ಕಳಾಗಿ ಸುಖ ಸಂಸಾರ ನಡೆಸುತ್ತಿರಬಹುದಾದ ಸಾಕಷ್ಟು ಪ್ರಕರಣಗಳು ಇದರಲ್ಲಿ ಇದೆಯಂತೆ.ಆದ್ರೆ ವಯಸ್ಸಿನ ಕಾರಣದಿಂದ ಕಾನೂನಿನ ದೃಷ್ಟಿಯಲ್ಲಿ ಇವೆಲ್ಲಾ ಬಹುತೇಕ ಫೋಕ್ಸೋ ಪ್ರಕರಣಗಳಾಗುವ ಸಾಧ್ಯತೆಯಿದೆಯಂತೆ.ಫೋಕ್ಸೋ ಕೇಸ್ ದಾಖಲಿಸಿದ್ರೆ ಸೌಹಾರರ್ದಯುತವಾಗಿ ಬದುಕುತ್ತಿರಬಹುದಾದ ಎಷ್ಟೋ ಸಂಸಾರಗಳಲ್ಲಿ ತೊಡಕು ಎದುರಾಗುವ ಸಾಧ್ಯತೆಗಳಿವೆಯಂತೆ.ಈ ನಿಟ್ಟಿನಲ್ಲಿ ಪ್ರಕರಣಗಳನ್ನು ಹೇ್ಗೆ ನೋಡಬೇಕು ಎನ್ನುವ ಗೊಂದಲದಲ್ಲಿ ಆಯೋಗವಿದೆಯಂತೆ.ಹಾಗಾಗಿ ಸಲಹೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಚಿಂತನೆ ಆಯೋಗದಿಂದ ನಡೆದಿದೆ ಎನ್ನಲಾಗ್ತಿದೆ.
1 ಲಕ್ಷದ 30 ಸಾವಿರದಷ್ಟು ಅಪ್ರಾಪ್ತ ವಯಸ್ಸಿನ ತಾಯಂದಿರು ಕಳೆದ 3 ವರ್ಷಗಳಲ್ಲಿ ಪತ್ತೆಯಾಗಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ.ಇದು ನಮ್ಮ ಸಂಸ್ಕ್ರತಿ-ಸಂಸ್ಕಾರಕ್ಕೆ ಚ್ಯುತಿ ತರುವಂತ ಸಂಗತಿ ಅಷ್ಟೇ ಅಲ್ಲ ನಾಗರಿಕ ಸಮಾಜ ನಾಚಿಕೆಯಿಂದ ತಲೆತಗ್ಗಿಸಬೇಕಾದ ವಿಚಾರ.ಮಾನ್ಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೆಣ್ಣು ಮಕ್ಕಳು ಕಾನೂನು ನಿಗಧಿ ಮಾಡಿರುವ ವಯಸ್ಸಿಗೆ ಮುನ್ನ ಯಾಕೆ ಅಪ್ರಾಪ್ತ ತಾಯಂದಿರಾಗುತ್ತಿದ್ದಾರೆ ಎನ್ನುವುದನ್ನು ಅವಲೋಕಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡದೇ ಹೋದಲ್ಲಿ 1,30 ಲಕ್ಷದಷ್ಟಿರುವ ಸಂಖ್ಯೆಯಲ್ಲಿ ಹೆಚ್ಚಳವಾಗುವ ಆತಂಕವಿದೆ.