ಬುಲೆಟ್ ಪ್ರೂಫ್ ಕಾರು ಅವಶ್ಯಕತೆ ಇಲ್ಲ ಎಂದು ನೆಮ್ಮದಿಯಾಗಿದ್ದ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ಇದೀಗ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಬುಲೆಟ್ ಪ್ರೂಫ್ ಕಾರು ತರಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಬೆಚ್ಚಿರುವ ರಾಜ್ಯಪಾಲರು ತಮ್ಮ ರಕ್ಷಣೆಗೆ ಬುಲೆಟ್ ಪ್ರೂಫ್ ಕಾರು ತರಿಸಿಕೊಂಡಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನೀಡಲಾಗಿದ್ದ ಬುಲೆಟ್ ಪ್ರೂಫ್ ಕಾರನ್ನು ತಿರಸ್ಕರಿಸಿದ್ದರು. ಆದರೆ ಇದೀಗ ರಾಜ್ಯದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಇನ್ನೋವಾ ಕಾರನ್ನು ತ್ಯಜಿಸಿ ಬುಲೆಟ್ ಪ್ರೂಫ್ ಕಾರನ್ನು ತರಿಸಿಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡರು ರಾಜ್ಯಪಾಲರ ವಿರುದ್ಧ ಟೀಕಾಪ್ರಹಾರ ನಡೆಸಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯಪಾಲರ ನಡೆ ಅಚ್ಚರಿ ಮೂಡಿಸಿದೆ.
ಇದೇ ವೇಳೆ ರಾಜ್ಯಪಾಲರು ಬುಧವಾರ ನಡೆದ ಬೆಂಗಳೂರು ವಿವಿ ಘಟಿಕೋತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ಸಾರ್ವಜನಿಕ ಕಾರ್ಯಕ್ರಮಗಳಿಂದಲೂ ದೂರ ಉಳಿದಿದ್ದಾರೆ.
ಮೂಲಗಳ ಪ್ರಕಾರ ಮುಂದಿನ 10 ದಿನಗಳ ಕಾಲ ಅಂದರೆ ಆಗಸ್ಟ್ 25ರವರೆಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೇ ಇರಲು ರಾಜ್ಯಪಾಲರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.