“ಸಾರಿಗೆ ಮುಖಂಡ”ರೇ, ಸ್ವಹಿತಾಸಕ್ತಿ ಬಿಡಿ-1.20 ಲಕ್ಷ “ಸಾರಿಗೆ ಸಿಬ್ಬಂದಿ” ಹಿತಾಸಕ್ತಿಗಾಗಿ ಒಗ್ಗೂಡಿ…

“ಸಾರಿಗೆ ಮುಖಂಡ”ರೇ, ಸ್ವಹಿತಾಸಕ್ತಿ ಬಿಡಿ-1.20 ಲಕ್ಷ “ಸಾರಿಗೆ ಸಿಬ್ಬಂದಿ” ಹಿತಾಸಕ್ತಿಗಾಗಿ ಒಗ್ಗೂಡಿ…

-“ಡಬಲ್ ಗೇಮ್”  ಸರ್ಕಾರ.?!, ಸಾರಿಗೆ ನೌಕರರ ಬೇಡಿಕೆಗಳೂ ಈಡೇರಬಾರದು..?!ಸಂಘಟನೆಗಳೂ ಒಂದಾಗಬಾರದು.?!

-ಸಾರಿಗೆ ಸಂಘಟನೆಗಳನ್ನೇ ಒಡೆದಾಳುತ್ತಿದೆಯಾ  ಸರ್ಕಾರ..? ಮೂರ್ಖರಾಗುತ್ತಿದ್ದಾರಾ ಸಾರಿಗೆ ಸಿಬ್ಬಂದಿ..?!!!?

ಬೆಂಗಳೂರು: ಮೊನ್ನೆ ಮೊನ್ನೆ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿತ್ತು.ಅದನ್ನು ಮಹಾರಾಷ್ಟ್ರ ಸಾರಿಗೆ ನಿಗಮಕ್ಕೆ ಸಂಬಂಧಿಸಿದ ಫೋಟೋ ಎನ್ನಲಾಗ್ತಿತ್ತು.ಆ ಫೋಟೋ ನೋಡಿದ ಪ್ರತಿಯೊಬ್ಬ ಸಾರಿಗೆ ಸಿಬ್ಬಂದಿ ಒಂದ್ ಕ್ಷಣ ಹೊಟ್ಟೆ ಉರಿದುಕೊಂಡಿದ್ರೂ ಆಶ್ಚರ್ಯವಿಲ್ಲ..ಹಾಗೆಯೇ ತಮ್ಮಲ್ಲಿರುವ ಸಾರಿಗೆ ಸಂಘಟನೆಗಳ ಬಗ್ಗೆ ಆಕ್ರೋಶಗೊಂಡಿದ್ರೂ ಅತಿಶಯವಿಲ್ಲ..ಈ  ನಿಟ್ಟುಸಿರಿಗೆ ಕಾರಣ, ಬೇರೆ ರಾಜ್ಯಗಳ ಸಾರಿಗೆ ನಿಗಮಗಳ ಸಾರಿಗೆ ಸಂಘಟನೆಗಳ ನಡುವೆ ಇರುವಂಥ ಒಗ್ಗಟ್ಟು-ಐಕ್ಯತೆ-ಸಂಘಟನಾತ್ಮಕ ಶಕ್ತಿ ನಮ್ಮಲ್ಲಿಲ್ಲವಲ್ಲ ಎನ್ನುವ ಬೇಸರ.ನೋವು.ಹತಾಷೆ..

ಯೆಸ್..ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ 1 ಲಕ್ಷದ 20 ಸಾವಿರದಷ್ಟು ಸಿಬ್ಬಂದಿಯ ಮನಸಲ್ಲೂ ಸಾರಿಗೆ ಸಂಘಟನೆಗಳ ಬಗ್ಗೆ ಬೇಸರ-ಆಕ್ರೋಶ ಇರಬಹುದೇನೊ..ಬೇರೆ ರಾಜ್ಯಗಳಲ್ಲಿ ಸಾರಿಗೆ ಸಂಘಟನೆಗಳು ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಮುಷ್ಕರಕ್ಕೆ ಕರೆ ಕೊಟ್ಟರೆ ರಾಜ್ಯ ಸರ್ಕಾರಗಳೇ ಬೆದರಿ ಮಾತುಕತೆಗೆ ಕರೆಯುತ್ತವೆ.ಬೇರೆಲ್ಲು ಬೇಡ,ಪಕ್ಕದ ಮಹಾರಾಷ್ಟ್ರವೇ ಇದಕ್ಕೊಂದು ತಾಜಾ ಉದಾಹರಣೆ. ಬೇಡಿಕೆ ಈಡೇರದ ಬೇಸರಕ್ಕೆ ಅಲ್ಲಿನ ಸಾರಿಗೆ ಸಂಘಟನೆಗಳು ತಮ್ಮೊಳಗಿನ ಬೇಸರ-ಅಸಮಾಧಾನ-ವಿಚಾರಬೇಧಗಳನ್ನೆಲ್ಲಾ ಬದಿಗೊತ್ತಿ ಸಾರಿಗೆ ಸಿಬ್ಬಂದಿಯ ಹಿತಾಸಕ್ತಿಗಾಗಿ ಸರ್ಕಾರದ ವಿರುದ್ಧ ತಿರುಗಿಬಿದ್ದವು.ಕೆಲಸ ಸ್ಥಗಿತಗೊಳಿಸುವ ಎಚ್ಚರಿಕೆ ಕೊಟ್ಟವು.

ಅಲ್ಲಿನ ಶಿಂಧೆ ಸರ್ಕಾರ ಯಾವ್ ರೀತಿ ಪತರಗುಟ್ಟಿ ಹೋಯ್ತೆಂದ್ರೆ ತಮ್ಮೆಲ್ಲಾ ಕೆಲಸ ಬದಿಗೊತ್ತಿ ಎಲ್ಲಾ ಸಾರಿಗೆ ಸಂಘಟನೆಗಳನ್ನು ಮಾತುಕತೆಗೆ ಕರೆಯಿಸಿಬಿಡ್ತು.ಮಾತುಕತೆ ವೇಳೆ ಕೂಡ ಅಷ್ಟೇ ಸಾರಿಗೆ ಸಂಘಟನೆಗಳ ಮುಖಂಡರು ತಮ್ಮ ಬೇಳೆ ಬೇಯಬೇಕೆನ್ನುವ ಮನಸ್ತಿತಿ ಬಿಟ್ಟು ಒಮ್ಮತದಿಂದ “ಬೇಡಿಕೆ ಈಡೇರಿಸಿದ್ರೆ ಕೆಲಸ..ಇಲ್ಲದಿದ್ರೆ ಮುಷ್ಕರ” ಎಂಬ ಒಂದೇ ನಿಲುವನ್ನು ಪ್ರತಿಪಾದಿಸಿದ್ರು.ಸರ್ಕಾರ ಬೇರೆ ರೀತಿಯಲ್ಲಿ ಅವರ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಮಾಡಿತಾದ್ರೂ ಯಾರೊಬ್ಬರೂ ಅದಕ್ಕೆ ಅವಕಾಶ ನೀಡಲಿಲ್ಲ..ಪರಿಣಾಮ ಏನಾಯ್ತು,ಸರ್ಕಾರವೇ ಅವರ ಮುಂದೆ ಕೈ ಜೋಡಿಸಿ ಬೇಡಿಕೆ ಈಡೇರಿಸಲು ಕಾಲಾವಕಾಶ ಕೇಳಿದೆ.ಸಾರಿಗೆ ಸಂಘಟನೆಗಳ ಮುಖಂಡರು ಕೂಡ ಡೆಡ್ ಕೈನ್ ಫಿಕ್ಸ್ ಮಾಡಿದ್ದಾರೆ.

ಆದ್ರೆ ನಮ್ಮಲ್ಲೇನಾಗಿದೆ.ಮಹಾರಾಷ್ಟ್ರದ ಪರಿಸ್ತಿತಿಯನ್ನು ನಮ್ಮಲ್ಲಿರುವ ಸಾರಿಗೆ ಸಂಘಟನೆಗಳ ಮನಸ್ತಿತಿ-ಧೋರಣೆ-ನಿಲುವುಗಳೊಂದಿಗೆ ತಾಳೆ ಹಾಕಿ ನೋಡಿದ್ರೆ ಅವರೆಲ್ಲಾ ಏಕೆ ಹಾಗೆ..ನಮ್ಮವರೆಲ್ಲಾ ಏಕೆ ಹೀಗೆ ಎಂಬ ಬೇಸರ-ಆಕ್ರೋಶ ಮೂಡುತ್ತದೆ.ನಮ್ಮ ಸಾರಿಗೆ ಸಂಘಟನೆಗಳ ಸ್ತಿತಿ ಏನಾ್ಗಿದೆ..ಮುಖಂಡರುಗಳ ಮನಸ್ಥಿತಿ ಹೇಗಿದೆ..?ಅವಲೋಕಿಸಿದ್ರೆ ಬೇಸರವಾಗುತ್ತದೆ.ಮೊದಲೆಲ್ಲಾ ಸಾರಿಗೆ ಸಂಘಟನೆಗಳು ಮುಷ್ಕರಕ್ಕೆ ಕರೆ ಕೊಟ್ಟರೆ ಸರ್ಕಾರಗಳು ಅದುರಿ ಹೋಗುತ್ತಿದ್ದವು.ಆದ್ರೆ ಇವತ್ತು ಅದನ್ನು ಸರ್ಕಾರಗಳು ಪರಿಗಣನೆಗೆ ತೆಗೆದುಕೊಳ್ಳುತ್ತಲೇ ಇಲ್ಲ.ಸಾರಿಗೆ ಸಂಘಟನೆಗಳ ಮುಖಂಡರು ಕೂಡ ಮುಷ್ಕರದ ಮಹತ್ವವನ್ನು ಸರ್ಕಾರಗಳು ನಿರ್ಲಕ್ಷ್ಯಿಸುವಷ್ಟರ ಮಟ್ಟಿಗೆ ಹಾಳು ಮಾಡಿವೆ.ಸವಕಲುಗೊಳಿಸಿವೆ.ಇದು ಸಾರಿಗೆ ಸಂಘಟನೆಗಳ ದುರಂತವೆಂದ್ರೂ ತಪ್ಪಾಗಲಿಕ್ಕಿಲ್ಲ.

ನಾಲ್ಕು ನಿಗಮಗಳ ಸಾರಿಗೆ ಸಂಘಟನೆಗಳಲ್ಲಿ ಮೊದಲೆಲ್ಲಾ ಹೀಗಿರಲಿಲ್ಲವಂತೆ.ಮು ಷ್ಕರಕ್ಕೆ ಕರೆ ಕೊಟ್ಟರೆ ಅದೊಂದು ವೇದವಾಕ್ಯವಾಗಿಬಿಡ್ತಿತ್ತಂತೆ.ಅದನ್ನು ಪ್ರಶ್ನಿಸುವ ಗೋಜಿಗೆ ಯಾರೊಬ್ಬರೂ ಹೋ್ಗುತ್ತಿರಲಿಲ್ಲವಂತೆ.ಸರಕಾರಕ್ಕೂ ಮುಷ್ಕರದ ಹಿಂದಿನ ಉದ್ದೇಶ ಅರ್ಥವಾಗಿ ಸಾರಿಗೆ ಸಂಘಟನೆಗಳ  ಮುಖಂಡರನ್ನು ಸಭೆ ಸೇರಿಸಿ ರಾಜಿಸೂತ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಿಬಿಡುತ್ತಿದ್ದವಂತೆ.ಆದ್ರೆ ಇವತ್ತು ಸಾರಿಗೆ ಸಂಘಟನೆಗಳ ಮುಷ್ಕರದ ಕರೆ-ಘೋಷಣೆ ಹಿಂದಿನ ಉದ್ದೇಶವನ್ನು ಅರ್ಥಮಾಡಿಕೊಳ್ಳುತ್ತಿರುವ ಸರ್ಕಾರಗಳು ಮಾತುಕತೆಗೆ ಕರೆಯುವ ಸೌಜನ್ಯವನ್ನು ತೋರಿಸುತ್ತಿಲ್ಲ. ಮಾತುಕತೆಗೆ ಕರೆದರೂ ಎಲ್ಲಾ ಸಂಘಟನೆ್ಗಳನ್ನು ಆಹ್ವಾನಿಸಿ ಆಯ್ದವರನ್ನು ಮಾತ್ರ ಕರೆದು ಆ ಹಂತದಲ್ಲಿಯೇ ಮುಗಿಸುವ ಕೆಲಸ ಮಾಡ್ತಿದೆ.ಮೇಲ್ನೋಟಕ್ಕೆ ಸರ್ಕಾರದ ಈ ಧೋರಣೆ ಡಬಲ್ ಸ್ಟ್ಯಾಂಡರ್ಡ್ ಎನ್ನಿಸಬಹುದು.ಆದರೆ ಸಾರಿಗೆ ಸಂಘಟನೆಗಳಲ್ಲಿಲ್ಲದ ಒಗ್ಗಟ್ಟು-ಐಕ್ಯತೆ-ಸಮನ್ವಯ-ಸಾಮರಸ್ಯದ ಕೊರತೆಯನ್ನೇ ಸರ್ಕಾರಗಳು ಎನ್ ಕ್ಯಾಶ್ ಮಾಡಿಕೊಳ್ತಿವೆ ಎನ್ನುವುದು ಸೂಕ್ತವಾಗಬಹುದೇನೊ..?

ಸಾರಿಗೆ ಸಂಘಟನೆಗಳ ಒಗ್ಗಟ್ಟು ಹಿಂದೆಲ್ಲಾ ಹೇಗಿತ್ತು ಎನ್ನುವುದಕ್ಕೆ ಹೆಚ್ಚಿನ ಪೀಠಿಕೆ ಅವಶ್ಯಕತೆ ಇಲ್ಲ.ಕಾರ್ಮಿಕ ಸಂಘಟನೆಗಳಲ್ಲೇ ಅತ್ಯಂತ ದೊಡ್ಡ ಶ್ರಮಿಕ ಸಂಘಟನೆ ಸಾರಿಗೆ ನಿಗಮಗಳದ್ದಾಗಿತ್ತು. ಇಷ್ಟೊಂದು ದೊಡ್ಡ ಸಂಖ್ಯಾಬಲದ ಸಂಘಟನೆಯನ್ನು ಎದುರಾಕಿಕೊಳ್ಳೋ ಧೈರ್ಯವನ್ನು ಸರ್ಕಾರಗಳು ಮಾಡುತ್ತಿರಲಿಲ್ಲ.ಎದುರಾಕಿಕೊಂಡರೆ ಏನಾಗಬಹುದೆನ್ನುವ ಅಂದಾಜು ಕೂಡ ಸರ್ಕಾರಗಳಿಗಿತ್ತು.ಹಾಗಾಗಿ ಅವರೊಂದಿಗೆ ಸಂಘರ್ಷಕ್ಕಿಂತ ಸಾಮರಸ್ಯದ ಮಾತುಕತೆಯೇ ಸೂಕ್ತ ಎನ್ನುವ ಸಮರ್ಥನೆಗೆ ಸರ್ಕಾರಗಳು ಬಂದಿದ್ವು.ಅಷ್ಟೇ ಅಲ್ಲದೇ ಸಂಘಟನೆಗಳು ಕೂಡ ತಮ್ಮ ಹಕ್ಕುಗಳ ಪ್ರತಿಪಾದನೆಯನ್ನು ಅನಾವಶ್ಯಕವಾಗಿ ಮಾಡುತ್ತಿರಲಿಲ್ಲ.ಸಾಂದರ್ಭಿಕವಾಗಿ ಎಲ್ಲವೂ ನಡೆಯುತ್ತಿತ್ತು.ಆದರೆ ಬದಲಾದ ಕಾಲಘಟ್ಟ ಹಾಗೂ  ಬದಲಾದ ಸಾರಿಗೆ ಸಂಘಟನೆಗಳ ಆಧ್ಯತೆ-ಪ್ರಾಮುಖ್ಯತೆ ಸರ್ಕಾರಗಳನ್ನು ಸಾರಿಗೆ ಸಂಘಟನೆಗಳ ಬಗ್ಗೆ ಹಗುರವಾಗಿ ನೋಡುವಂತೆ ಮಾಡ್ತು.ಇದಕ್ಕೆ ಇತ್ತೀಚಿನ ವರ್ಷಗಳಲ್ಲಿ ನಡೆದ ಸಾರಿಗೆ ಮುಷ್ಕರಗಳು ಅದಕ್ಕೆ ಸರ್ಕಾರ ಸ್ಪಂದಿಸಿದ ರೀತಿ..ಸಾರಿಗೆ ಸಂಘಟನೆಗಳು ಅಸ್ತಿತ್ವಕ್ಕೆ ಹೊಡೆದಾಡಬೇಕಾದ ಸನ್ನಿವೇಶ,ಸಾರಿಗೆ ಸಿಬ್ಬಂದಿ  ದಿಕ್ಕುದಿಸೆಯಿಲ್ಲದಂತೆ ದಿಕ್ಕೆಟ್ಟಿರುವ ಸಾರಿಗೆ ಸಮೂಹದ ಚಿತ್ರಣವೇ ಇದೆಲ್ಲಕ್ಕೂ ಸಾಕ್ಷಿ ಎನಿಸುತ್ತದೆ.

ಮಹಾರಾಷ್ಟ್ರ ಸಾರಿಗೆ ಸಂಘಟನೆಗಳ ಒಗ್ಗಟ್ಟು ನಮಗೆ ಪಾಠವಾಗಬೇಕಲ್ವಾ,..?! ಇದು ಮಹಾರಾಷ್ಟ್ರದಲ್ಲಿ ನಡೆದ ಘಟನೆ, ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ವಿಫಲವಾದ ಅಲ್ಲಿನ ಶಿಂಧೆ ಸರ್ಕಾರದ ವಿರುದ್ಧವೇ ತೊಡೆತಟ್ಟಿ ಒಂದಾದ ಸಾರಿಗೆ ಸಂಘಟನೆಗಳು.ಆಮೇಲೆ ಅಲ್ಲಿನ ಸರ್ಕಾರಕ್ಕೆ ತನ್ನ ತಪ್ಪಿನ ಅರಿವಾಗಿ ಎಲ್ಲಾ ಸಂಘಟನೆಗಳನ್ನು ಕರೆದು ಬೇಡಿಕೆ ಈಡೇರಿಸಲು ಕಾಲಾವಕಾಶ ಕೇಳಿದೆ.ಸಾರಿಗೆ ನಿಗಮಗಳ ಸಾರಿಗೆ ಸಂಘಟನೆಗಳು ಕೂಡ ಬೇಡಿಕೆ ಈಡೇರಿಸಲು ಡೆಡ್ ಲೈನ್ ನೀಡಿವೆಯಂತೆ..ಆ ಒಗ್ಗಟ್ಟು ನಮ್ಮಲ್ಲೇಕೆ ಸಾಧ್ಯವಿಲ್ಲ..ಸಾರಿಗೆ ಮುಖಂಡರು ಆತ್ನಾವಲೋಕನ ಮಾಡಿಕೊಳ್ಳಬೇಕಷ್ಟೆ..
ಮಹಾರಾಷ್ಟ್ರ ಸಾರಿಗೆ ಸಂಘಟನೆಗಳ ಒಗ್ಗಟ್ಟು ನಮಗೆ ಪಾಠವಾಗಬೇಕಲ್ವಾ,..?! ಇದು ಮಹಾರಾಷ್ಟ್ರದಲ್ಲಿ ನಡೆದ ಘಟನೆ, ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ವಿಫಲವಾದ ಅಲ್ಲಿನ ಶಿಂಧೆ ಸರ್ಕಾರದ ವಿರುದ್ಧವೇ ತೊಡೆತಟ್ಟಿ ಒಂದಾದ ಸಾರಿಗೆ ಸಂಘಟನೆಗಳು.ಆಮೇಲೆ ಅಲ್ಲಿನ ಸರ್ಕಾರಕ್ಕೆ ತನ್ನ ತಪ್ಪಿನ ಅರಿವಾಗಿ ಎಲ್ಲಾ ಸಂಘಟನೆಗಳನ್ನು ಕರೆದು ಬೇಡಿಕೆ ಈಡೇರಿಸಲು ಕಾಲಾವಕಾಶ ಕೇಳಿದೆ.ಸಾರಿಗೆ ನಿಗಮಗಳ ಸಾರಿಗೆ ಸಂಘಟನೆಗಳು ಕೂಡ ಬೇಡಿಕೆ ಈಡೇರಿಸಲು ಡೆಡ್ ಲೈನ್ ನೀಡಿವೆಯಂತೆ..ಆ ಒಗ್ಗಟ್ಟು ನಮ್ಮಲ್ಲೇಕೆ ಸಾಧ್ಯವಿಲ್ಲ..ಸಾರಿಗೆ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕಷ್ಟೆ..

ಹಾಗಾದ್ರೆ ಸಮಸ್ಯೆ ಇರುವುದೆಲ್ಲಿ..?! ಸಾರಿಗೆ ಸಂಘಟನೆಗಳಲ್ಲೇ ಎನ್ನುವುದು ಸತ್ಯ ಹಾಗೆಯೇ ವಾಸ್ತವ ಕೂಡ.ಇಷ್ಟೊಂದು ದೊಡ್ಡ ಸಂಖ್ಯೆಯ ಸಾರಿಗೆ ಸಿಬ್ಬಂದಿಯ ಹಿತಾಸಕ್ತಿಯನ್ನೇ ಸಾರಿಗೆ  ಸಂಘಟನೆಗಳು ಮರೆತುಬಿಟ್ಟಿವೆಯಾ ಎಂದೆನಿಸುವ ವಾತಾವರಣ ನಿರ್ಮಾಣವಾಗಿದೆ.ಮುಖಂಡರ ಹಿತಾಸಕ್ತಿಗಳು ಕೂಡ ಮೊದಲಿದ್ದಂತೆ ಸಾರಿಗೆ ಸಿಬ್ಬಂದಿಯ ಪರವಾಗಿಲ್ಲ ಎನ್ನುವ ಮಾತು ಆಯಾ ಸಂಘಟನೆಗಳಲ್ಲಿರುವ ಸಿಬ್ಬಂದಿ ಮೂಲಕವೇ ಕೇಳಿಬರುತ್ತಿದೆ. ಸಾರಿಗೆ ಸಿಬ್ಬಂದಿಯ ಹಿತವನ್ನು ಕೇಂದ್ರೀಕರಿಸಿಕೊಂಡು ಕೆಲವರು ಹೋರಾಟಕ್ಕೆ ಮುಂದಾದ್ರೆ ಅದನ್ನು ಇತರೆ ಸಂಘಟನೆಗಳು ಬೆಂಬಲಿಸುತ್ತಿಲ್ಲ.ಮೊದಲೆಲ್ಲಾ ತಮ್ತಮ್ಮ ಬೇಸರಗಳು ಏನೇ ಇದ್ರೂ ಎಲ್ಲವನ್ನು ಬದಿಗೊತ್ತಿ ಮುಷ್ಕರ-ಪ್ರತಿಭಟನೆ-ಹೋರಾಟಗಳೆಂದಾಗ ಎಲ್ಲರೂ ಒಂದೆಡೆ ಸೇರುತ್ತಿದ್ದರು.ಅಭಿಪ್ರಾಯಗಳು ವಿನಿಮಯವಾಗುತ್ತಿದ್ದವು.ಅಂತಿಮವಾಗಿ ಒಂದು ಒಗ್ಗಟ್ಟಿನ ಸಂದೇಶ ರವಾನೆಯಾಗುತ್ತಿತ್ತು.ಉದ್ದೇಶ ಈಡೇರುವವೆಗೂ ಹೋರಾಟ ಮುಂದುವರೆಯುತ್ತಿತ್ತು.ಆದ್ರೆ ಇಂದೇನಾಗಿದೆ.ಸಂಘಟನೆಗಳ ನಡುವೆ ಒಗ್ಗಟ್ಟಿಲ್ಲ ಎನ್ನುವ ಮಾತು ಹಾಳಾಗಿ ಹೋಗ್ಲಿ,ಒಬ್ಬರನ್ನು ಕಂಡ್ರೆ ಇನ್ನೊಬ್ಬರು ಮುಖ ಕಿವುಚಿಕೊಳ್ಳುವ ಸ್ತಿತಿ.ಒಬ್ಬರು ಮುಷ್ಕರಕ್ಕೆ ಕರೆ ಕೊಟ್ಟರೆ ಇನ್ನೊಬ್ಬರ ವಿರೋಧ, ನಮ್ಮನ್ನು ಮಾತುಕತೆಗೇ ಕರೆದಿಲ್ಲ.ನಮ್ಮ ಅಭಿಪ್ರಾಯವನ್ನೇ ಸ್ವೀಕರಿಸಿಲ್ಲ.ನಮ್ಮ ಅವಶ್ಯಕತೆ ಬೇಡ ಎಂದ ಮೇಲೆ ನಮ್ಮ ಬೆಂಬಲ ಏಕೆ ಬೇಕು.? ಹೀಗೆ ಸಿಟ್ಟು-ಸೆಡವು-ಆಕ್ರೋಶ-ಕೆಂಡಕಾರುವ ಮನಸ್ತಿತಿ..ಇದೆಲ್ಲದರ ಪರಿಣಾಮ ಸಾರಿಗೆ ಸಿಬ್ಬಂದಿ ಮೇಲಾಗುತ್ತಿರುವುದು ದುರಂತ.

ಸಾರಿಗೆ ಸಂಘಟನೆಗಳಲ್ಲಿ ಇರುವ ಈ ಭಿನ್ನಮತ-ಭಿನ್ನರಾಗ-ಮೂಡದ ಒಮ್ಮತ-ಸಮ್ಮತವೇ ಸರ್ಕಾರಗಳಿಗೆ ಅಸ್ತ್ರಗಳಾಗುತ್ತಿವೆ.ಅವರನ್ನೇ ಒಡೆದಾಳುವ ಕೆಲಸಕ್ಕೆ ಇದು ಸಹಕಾರಿಯಾಗುತ್ತಿದೆ.ಒಂದಷ್ಟು ಸಂಘಟನೆ ಗಳನ್ನು ಮಾತ್ರ ಮಾತುಕತೆಗೆ ಕರೆದು ಉಳಿದವರನ್ನು ಹೊರಗಿಡುವ ಕೆಲಸ ಮಾಡುತ್ತಿವೆ.ಇದು ಸಾರಿಗೆ ಸಂಘಟನೆಗಳಲ್ಲೇ ದೊಡ್ಡ ಮಟ್ಟದ ಒಡಕು ಸೃಷ್ಟಿಸುತ್ತಿದೆ.ಸರಿಪಡಿಸಲಾಗದ ಕಂದಕ ಸೃಷ್ಟಿಸುತ್ತಿವೆ. ಸಂಘಟನೆಗಳ ನಡುವಿರುವ ಇಕ್ಕಟ್ಟು-ಬಿಕ್ಕಟ್ಟನ್ನು ದೊಡ್ಡದು ಮಾಡ್ತಿದೆ.ಇದೆಲ್ಲಾ ಸರ್ಕಾರದ ಒಡೆದಾಳುವ ಮನಸ್ತಿತಿ ಎನ್ನುವುದೇ ಪರಸ್ಪರ ಕಚ್ಚಾಡುತ್ತಿರುವ ಸಂಘಟನೆಗಳ  ಮುಖಂಡರಿಗೆ ಗೊತ್ತಾಗದಿರುವುದು ದುರಾದೃಷ್ಟಕರ.ಏಕೆಂದ್ರೆ ಸಾರಿಗೆ ಸಂಘಟನೆಗಳು ಒಂದಾಗಿರುವವರೆಗೂ, ಅವರಲ್ಲಿ ಒಗ್ಗಟ್ಟು ಜೀವಂತವಾಗಿರುವವರೆಗೂ ತಮ್ಮ ಬೇಳೆ ಬೇಯಿಸಿಕೊಳ್ಳೊಕ್ಕೆ ಸಾಧ್ಯವೇ ಇಲ್ಲ ಎನ್ನುವುದನ್ನು ಸರ್ಕಾರಗಳು ಚೆನ್ನಾಗಿ ಅರ್ಥ ಮಾಡಿಕೊಂಡಿವೆ.ಹಾಗಾಗಿಯೇ ಪರಸ್ಪರರ ನಡುವೆ ಭಿನ್ನಾಭಿಪ್ರಾಯ ಹೆಚ್ಚಿಸಿ ಸಂಘರ್ಷಕ್ಕೆ ಕಾರಣವಾಗುವ ವಾತಾವರಣ ನಿರ್ಮಿಸುತ್ತಿವೆ.ಇದನ್ನು ಅರ್ಥ ಮಾಡಿಕೊಳ್ಳದೆ ಸಾರಿಗೆ ಸಂಘಟನೆಗಳು ಹಾಗೂ ಅದರ ಮುಖಂಡರು ಸರ್ಕಾರಗಳು ತೋಡುವ ಕುಳಿಗೆ ಕುರಿಗಳಂತೆ ಬೀಳುತ್ತಿದ್ದಾರೆ.ಅವರ ಜತೆ ಸಾರಿಗೆ ಸಿಬ್ಬಂದಿ ಕೂಡ ಮುಳುಗಿ ಹೋಗುತ್ತಿದ್ದಾರೆ.

ಹಾಗಂಥ ಪರಿಸ್ತಿತಿ ಸುಧಾರಿಸುವ ಸಾಧ್ಯತೆಗಳೇ ಇಲ್ವಾ..? ಸಾರಿಗೆ ಸಂಘಟನೆಗಳು ಮೈ ಕೊಡವಿ ಮೇಲೇಳುವ ಸನ್ನಿವೇಶ ಮತ್ತೆ ನಿರ್ಮಾಣವಾಗುವುದೇ ಇಲ್ವಾ..? ಸಾರಿಗೆ ಸಂಘಟನೆಗಳೆಂದ್ರೆ ಸರ್ಕಾರುಗಳು ಅದುರಿ ಮೊಣಕಾಲೂರುವ ಸನ್ನಿವೇಶ ಮತ್ತೆ ಬರುವುದಕ್ಕೆ ಸಾಧ್ಯವೇ ಇಲ್ಲವಾ..? ಸಂಘಟನೆಗಳೆಂದ್ರೆ ಸಹವಾಸ ಸಾಕಪ್ಪಾ..ಮೊದಲು ಅವರನ್ನು ಕರೆದು ಸಮಸ್ಯೆಯನ್ನು ಬಗೆಹರಿಸಿಬಿಡೋಣ ಎಂದು ಸರ್ಕಾರಗಳು ಹೆದರುವಂಥ ಸ್ತಿತಿ ಬರುವುದು ಅಸಾಧ್ಯನಾ..? ಸಾರಿಗೆ ಸಿಬ್ಬಂದಿ ಸಿಗಬೇಕಾದ ಸಮಯಕ್ಕೆ ಸೌಲಭ್ಯ-ಸವಲತ್ತು ಸಿಗದೆ ಒದ್ದಾಡುತ್ತಿರುವಂಥ ಸ್ತಿತಿ ದೂರವಾಗಲಿಕ್ಕೆ ಸಾಧ್ಯವೇ ಇಲ್ವಾ..? ಇಂಥಾ ಪ್ರಶ್ನೆಗಳಿಗೆ ಉತ್ತರ ಒಂದೇ.. ಸಾರಿಗೆ ಸಂಘಟನೆಗಳ ಮುಖಂಡರು ತಮ್ಮ ಹಿತಾಸಕ್ತಿ ಬದಿಗೊತ್ತಿ ಸಾರಿಗೆ ಸಿಬ್ಬಂದಿಯ ಹಿತಾಸಕ್ತಿಗೆ ಒಂದಾಗಬೇಕು..ಆಗ ಗತವೈಭವ ಮರುಕಳಿಸುವುದರಲ್ಲಿ ಅನುಮಾನವೇ ಇಲ್ಲ.. ಆದರೆ ಅದು ಸಾಧ್ಯನಾ,..? ಅದು ಸಾರಿಗೆ ಸಂಘಟನೆಗಳ ವಿವೇಚನೆಗೆ ಬಿಟ್ಟ ವಿಚಾರ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *