“ಸಾರಿಗೆ ಸಿಬ್ಬಂದಿ ವಿರೋಧಿ ಧೋರಣೆ”ನೇ ಸತ್ಯವತಿಗೆ ಮುಳುವಾಯ್ತಾ..? ಸಿಎಂಗೆ ಬರೆದ ದೂರು-ಸಾರಿಗೆ ಯೂನಿಯನ್ ನ ವ್ಯಾಪಕ ಆಕ್ರೋಶಕ್ಕೆ ಬೆಲೆ ತೆತ್ತರಾ ಸತ್ಯವತಿ..!
ಬೆಂಗಳೂರು: ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ, ಅಧಿಕಾರವನ್ನು ತನಗೆ ಮನಸೋಇಚ್ಛೇ ಚಲಾಯಿಸಿದರೆ ಏನಾಗಬಹುದೆನ್ನುವುದಕ್ಕೆ ಬಹುಷಃ ಐಎಎಸ್ ಸತ್ಯವತಿ ಅವರ ವರ್ಗಾವಣೆ ದುರಂತ ನಿದರ್ಶನವಾಗಬಹುದಾ..? ಗೊತ್ತಿಲ್ಲ..ಆದರೆ ಸಣ್ಣ ಮುನ್ಸೂಚನೆ ಕೊಡದೆ ಅವರನ್ನು ಸರ್ಕಾರ ಸ್ಥಳವನ್ನೂ ತೋರಿಸದೆ ವರ್ಗಾವಣೆ ಮಾಡಿರುವುದು ಇಂತದ್ದೊಂದು ಅನುಮಾನವನ್ನು ಮತ್ತಷ್ಟು ಪುಷ್ಟೀಕರಿಸಿದೆ.
ಸತ್ಯವತಿ ಮೇಡಮ್ ,ತಮ್ಮ ಸ್ವಯಂಕೃತಾಪರಾಧಕ್ಕೆ ಸರಿಯಾದ ಬೆಲೆ ತೆತ್ತಿದ್ದಾರೆ ಎನಿಸುತ್ತದೆ.ಬಿಎಂಟಿಸಿ ಕ್ಯಾಂಪಸ್ ನಲ್ಲಿ ಚರ್ಚೆಯಾಗುತ್ತಿರುವುದು ಕೂಡ ಇದೇ. ಸಾರಿಗೆ ಸಿಬ್ಬಂದಿಯನ್ನು ಸರಿಯಾಗಿ ನಡೆಸಿಕೊಂಡಿದ್ದೇ ಆದಲ್ಲಿ ಅವರಿಗೆ ಇಂಥಾ ಸ್ಥಿತಿ ಬರುತ್ತಿರಲಿಲ್ಲ.ಸಾರಿಗೆ ಸಿಬ್ಬಂದಿ ಹಾಗೂ ಅಧಿಕಾರಿಗಳ ನಡುವೆ ಬಿರುಕೊಂದನ್ನು ಸೃಷ್ಟಿಸಿ ಆ ಕಂದಕ ಬಗೆಹರಿಯದಷ್ಟು ಜಠಿಲವಾಗುವಂತೆ ಮಾಡಿದ ತಪ್ಪಿಗೆ ಅಂತಿಮವಾಗಿ ವರ್ಗಾವಣೆ ಶಿಕ್ಷೆಗೆ ಒಳಪಡಬೇಕಾಯ್ತೆನ್ನುವುದು ಚರ್ಚೆಯ ಮತ್ತೊಂದು ಭಾಗ.
ಸತ್ಯವತಿ ಮೇಡಮ್ ಬಿಎಂಟಿಸಿಗೆ ಎಂಡಿಯಾಗಿ ಬಂದಾಗ ಸಾರಿಗೆ ಸಿಬ್ಬಂದಿಯಲ್ಲಿ ಬಹಳ ನಿರೀಕ್ಷೆಗಳಿದ್ದವು. ಎಂಡಿ ಆಗಿ ಬಂದವರಲ್ಲಿ ಬಹುತೇಕರು ಸಾರಿಗೆ ಸಿಬ್ಬಂದಿಯನ್ನು ಮಲತಾಯಿ ಮಕ್ಕಳಾಗೇ ನೋಡುತ್ತಾರೆನ್ನುವ ಕಳಂಕವನ್ನು ಅವರು ತೊಡೆದಾಕುತ್ತಾರೆನ್ನುವ ನಂಬಿಕೆ ಇತ್ತು.ಆರಂಭದಲ್ಲಿ ಮೇಡಮ್ ಒಂದಷ್ಟು ಆ ರೀತಿಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದು ಕೂಡ ಸತ್ಯ.
ಆದರೆ ಯಾವಾಗ ಸಾರಿಗೆ ಸಿಬ್ಬಂದಿಯನ್ನು ಶಾಂತಿನಗರದ ಕಚೇರಿಗೆ ಬರೋದನ್ನು ತಪ್ಪಿಸಿದರೋ..? ರಿಸೆಪ್ಷನ್ ನಲ್ಲೇ ಅವರನ್ನು ತಡೆದುನಿಲ್ಲಿಸುವ ಕೆಲಸ ಮಾಡಿದ್ರೋ..? ಯಾರೊಬ್ಬರು ನನ್ನ ಬಳಿ ನೇರವಾಗಿ ಬಂದು ಮಾತನಾಡುವಂತಿಲ್ಲ..ಅದಕ್ಕೆಂದೇ ಪ್ರತ್ಯೇಕ ಡೆಸ್ಕ್ ಸ್ಥಾಪಿಸಲಾಗಿದೆ ಎನ್ನುವಂತ ಫರ್ಮಾನ್ ಹೊರಡಿಸಿದ್ರೋ ಆಗಿನಿಂದಲೇ ಅವರ ಬಗ್ಗೆ ಇಟ್ಟಂಥ ನಂಬಿಕೆ-ನಿರೀಕ್ಷೆಗಳೆಲ್ಲಾ ಹುಸಿಯಾದವು.ಸಾರಿಗೆ ಸಿಬ್ಬಂದಿಯಿಂದ ಎಂಡಿ ಸತ್ಯವತಿ ಅವರು ಬಹುದೊಡ್ಡ ಅಂತರವನ್ನು ಕಾಯ್ದುಕೊಂಡುಬಿಟ್ಟರು.ಅವರ ವರ್ಗಾವಣೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದೇ ಈ ಬೆಳವಣಿಗೆ ಎನ್ನುವುದು ಬಹುತೇಕರ ಅಭಿಪ್ರಾಯ.
ಸಾರಿಗೆ ನಿಗಮದ ಎಂಡಿ ಆದವರು ಡಿಪೋಗಳಿಗೆ ನಿರಂತರವಾಗಿ ವಿಸಿಟ್ ಮಾಡುತ್ತಿರಬೇಕು.ಅಲ್ಲಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಆಧ್ಯತೆ ಮೇಲೆ ಸ್ಪಂದಿಸಬೇಕೆನ್ನುವ ನಿಯಮವಿದೆ.ಆದರೆ ಮೇಡಮ್ ಅಧಿಕಾರ ವಹಿಸಿಕೊಂಡಾಗಿನಿಂದ ಎಷ್ಟ್ ಬಾರಿ.ಎಷ್ಟ್ ಡಿಪೋಗಳಿಗೆ ವಿಸಿಟ್ ಮಾಡಿ ಅಲ್ಲಿನ ಸಮಸ್ಯೆ ಅವಲೋಕಿಸಿದ್ದಾರೆ..? ಪರಿಹಾರ ಕಲ್ಪಿಸಿದ್ದಾರೆ..? ಸಿಬ್ಬಂದಿಯ ಅಹವಾಲು ಸ್ವೀಕರಿಸಿದ್ದಾರೆ..?ಎನ್ನೋದನ್ನು ಅವರೇ ಹೇಳಬೇಕು.ಸಾರಿಗೆ ಸಿಬ್ಬಂದಿಗೆ ಎಂಡಿ ಮೇಲೆ ಭಾರೀ ಆಕ್ರೋಶ-ಅಸಮಾಧಾನ ಮೂಡೊಕ್ಕೆ ಕಾರಣವೇ ಅವರ ಈ ಮನಸ್ಥಿತಿ. ಎಂಡಿ ಆದವರಿಗೆ ಡಿಪೋಗಳ ಬಗ್ಗೆ ಕಾಳಜಿ ಇಲ್ಲದಿರುವುದು..ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು…ಸಿಬ್ಬಂದಿ ಯ ಜತೆ ಸಂಪರ್ಕವನ್ನೇ ಇಟ್ಟುಕೊಳ್ಳದಿರುವುದನ್ನು ನಿಜಕ್ಕೂ ಯಾರಾದರೂ ಒಪ್ಪಿಕೊಳ್ಳಲು ಸಾಧ್ಯನಾ..?
ಸಾರಿಗೆ ನಿಗಮದಲ್ಲಿ ಸಿಬ್ಬಂದಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೇ ಸುಳ್ಳು ಕೇಸ್ ಗಳು.. ಕ್ಷುಲ್ಲಕ ತಪ್ಪುಗಳಿಗೆ ಶಿಕ್ಷೆ..ಮೇಡಮ್ ಅಧಿಕಾರವಹಿಸಿಕೊಂಡ ಆರಂಭದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿ ನಾನು ಅದರ ಬಗ್ಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತೇನೆ.ಸ್ಪಂದಿಸ್ತೇನೆ ಎಂದಿದ್ದರು. ಆರಂಭದಲ್ಲಿ ಹಾಗೆ ಮಾಡಿದ್ರು ಸಹ..ಆದ್ರೆ ಯಾವಾಗ ಅಧಿಕಾರಿಗಳ ಮಾತಿಗೆ ಕಿವಿಯಾಗಲಾರಂಭಿಸಿದ್ರೋ ಸಿಬ್ಬಂದಿ ಮೇಲಿನ ಸುಳ್ಳು ಆರೋಪ-ಕೇಸ್ ಗಳು ಹೆಚ್ಚಾಗಲಾರಂಭಿಸಿದ್ವು.ಅಧಿಕಾರಿಗಳು ಹೇಳಿದ ಮಾತೇ ಮೇಡಮ್ ಗೆ ವೇದವಾಕ್ಯವಾಯ್ತು ಎನಿಸುತ್ತದೆ.ಅವರು ಕೊಟ್ಟ ರಿಪೋರ್ಟನ್ನು ಪರಿಶೀಲಿಸುವ ಗೋಜಿಗೂ ಹೋಗುತ್ತಿರಲಿಲ್ಲ.
ಅಧಿಕಾರಿಗಳು ತಮ್ಮ ಕೆಲವು ಸಿಬ್ಬಂದಿ ಮೇಲೆ ವೈಯುಕ್ತಿಕವಾದ ಇದ್ದ ಸಿಟ್ಟು-ಅಸಹನೆ-ಆಕ್ರೋಶ-ಅಸಮಾಧಾನವನ್ನು ಪ್ರಯೋಗಿಸಿ ಪ್ರತೀಕಾರ ತೀರಿಸಿಕೊಳ್ಳೊಕ್ಕೆ ಚೆನ್ನಾಗಿ ಬಳಸಿಕೊಳ್ಳೊಕ್ಕೆ ಶುರುಮಾಡಿದ್ರು.ಪಾಪ ತಪ್ಪಿಲ್ಲದಿದ್ದರೂ ಅದೆಷ್ಟೋ ಸಿಬ್ಬಂದಿ ಶಿಕ್ಷೆಗೆ ಒಳಗಾಗಬೇಕಾಯಿತು.ಅದರಲ್ಲೂ ತಪ್ಪೇ ಇಲ್ಲದಿದ್ದರೂ ಸಾಕಷ್ಟು ಸಿಬ್ಬಂದಿ ಅಮಾನತು-ವಜಾ ಶಿಕ್ಷೆಗೆ ಗುರಿಯಾಗಬೇಕಾಯಿತು.( ಅದರಲ್ಲೂ ಯುವತಿ ಕೊಟ್ಟ ದೂರಿನ ಮೇಲೆ ಸರಿಯಾದ ತನಿಖೆಯನ್ನೂ ಮಾಡದೆ ಅಧಿಕಾರಿಗಳು ಕೊಟ್ಟ ಸುಳ್ಳು ರಿಪೋರ್ಟ್ ಮೇಲೆ ಕೆಂಪಣ್ಣ ಎನ್ನುವ ಅಮಾಯಕ ಕಂಡಕ್ಟರ್ ನನ್ನು ಕಾಮುಕ.ಕಾಮಕೀಟ.ಕಾಮಕ್ರಿಮಿ ಎಂದೆಲ್ಲಾ ಬಿಂಬಿಸಿ, ಆತನ ಸಂಸಾರವೇ ಬೀದಿಗೆ ಬರುವಂತೆ ಮಾಡಿದ್ದರಲ್ಲಿ ಮೇಡಮ್ ಅವರ ಪಾತ್ರ ದೊಡ್ಡದಿತ್ತೆನ್ನುವುದು ನಿಜಕ್ಕೂ ಅಮಾನವೀಯ.)
ಸತ್ಯವತಿ ಅವರು ಸಿಬ್ಬಂದಿ ಜತೆ ನಡೆದುಕೊಳ್ಳುತ್ತಿದ್ದ ರೀತಿಯ ಬಗ್ಗೆ ಸಾಕಷ್ಟು ಆಕ್ಷೇಪಗಳಿದ್ವು ಅವರ ಕಾರ್ಯವೈಖರಿ ಬಗ್ಗೆ ಹೆಮ್ಮೆ ಇದ್ದರೂ ಅವರ ನಡುವಳಿಕೆ ಬಗ್ಗೆ ಬೇಸರವಿತ್ತು.ಬಹುತೇಕರ ಬಗ್ಗೆ ಸಹಾನುಭೂತಿ-ಅನುಕಂಪವನ್ನು ವ್ಯಕ್ತಪಡಿಸದೆ ತಮ್ಮ ಸುತ್ತಲಿರುವ ಅಧಿಕಾರಿ-ಸಿಬ್ಬಂದಿ ಮಾತನ್ನು ಕೇಳಿಕೊಂಡು ಅಧಿಕಾರ ನಡೆಸುತ್ತಿದ್ದರ ಬಗ್ಗೆ ಅನೇಕ ದೂರುಗಳು ಸರ್ಕಾರದ ಮಟ್ಟದಲ್ಲಿಯೂ ದಾಖಲಾಗಿದ್ದನ್ನು ಸ್ಮರಿಸಬಹುದು.
ಮೇಡಮ್ ಕಚೇರಿಯಲ್ಲೇ ನಿಯಮಬಾಹಿರವಾಗಿ ಕೆಲಸ ಮಾಡುವ ಸಿಬ್ಬಂದಿ ನಿಯೋಜನೆ:ಸಂಸ್ಥೆ ಹಿತದೃಷ್ಟಿಯಿಂದ ಕೆಲವು ಸಾರಿಗೆ ಸಿಬ್ಬಂದಿ ಅನ್ಯಾಯ-ಅಕ್ರಮಗಳ ಬಗ್ಗೆ ದ್ವನಿ ಎತ್ತುವ ಕೆಲಸ ಮಾಡುತ್ತಲಿದ್ದಾರೆ.ಅವರನ್ನು ಕರೆದು ಅವರ ಸಲಹೆ-ಅಭಿಪ್ರಾಯ ಸಂಗ್ರಹಿಸಿ ಕೆಲಸ ಮಾಡಿದಿದ್ದರೆ ಸಮಸ್ಯೆ ಎಷ್ಟೋ ಬಗೆಹರಿಯುತ್ತಿತ್ತು.ಆದರೆ ದ್ವೇಷ-ಜಿದ್ದು-ಪ್ರತೀಕಾರದಲ್ಲೇ ಮುಳುಗಿ ಅನೇಕ ದಕ್ಷ-ನಿಷ್ಟಾವಂತ-ಪ್ರಾಮಾಣಿಕ ಸಿಬ್ಬಂದಿಯನ್ನು ದೂರದೂರಕ್ಕೆ ವರ್ಗ ಮಾಡಿ ಸಾರಿಗೆ ಸಮೂಹದ ಆಕ್ರೋಶಕ್ಕೆ ತುತ್ತಾದ್ರು. ತಮ್ಮ ಕಚೇರಿಯನ್ನೇ ನಿಯಮಬಾಹಿರವಾಗಿ ಕೆಲಸ ಮಾಡುವ ಅಧಿಕಾರಿ-ಸಿಬ್ಬಂದಿಯಿಂದ ತುಂಬಿತುಳುಕುತ್ತಿದ್ದರೂ ಅದನ್ನು ಸರಿಪಡಿಸದೆ ನಿಗಮವನ್ನು ಸರಿ ಮಾಡೊಕ್ಕೆ ಮುಂದಾದ್ರು.ಸಣ್ಣಪುಟ್ಟ ತಪ್ಪುಗಳಾದಾಗ ಅವರನ್ನು ಕರೆದು ತಿಳಿ ಹೇಳಿ ಕಳುಹಿಸುವುದನ್ನು ಬಿಟ್ಟು ಅಧಿಕಾರಿಗಳು ಕೊಡುವ ರಿಪೋರ್ಟನ್ನು ಕಣ್ಣುಮುಚ್ಚಿಕೊಂಡು ಅಂಗೀಕರಿಸುವ ಕೆಲಸ ಮಾಡುತ್ತಿದ್ದರೆನ್ನುವ ಆರೋಪ ದಂಡಿಯಾಗಿತ್ತು.ಈ ಹಿನ್ನಲೆಯಲ್ಲೇ ಮುಖ್ಯಮಂತ್ರಿ ಕಚೇರಿವರೆಗೂ ದೂರು ದಾಖಲಾಗಿತ್ತು.ದೂರು ದಾಖಲಿಸಿದವರ ಮೇಲೂ ಸೇಡಿನ ಕ್ರಮ ಕೈಗೊಂಡಿದ್ದು ಈಗ ಇತಿಹಾಸ.
ಸಾರಿಗೆ ಯೂನಿಯನ್ ಗಳಿಂದಲೂ ವರ್ತನೆ ಸುಧಾರಿಸಿಕೊಳ್ಳುವಂತೆ ಪತ್ರ:ಇದರ ನಡುವೆ ಸಾರಿಗೆ ಯೂನಿಯನ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವೇ ಮೇಡಮ್ ಸತ್ಯವತಿ ಅವರಿಂದ ಆಗಲಿಲ್ಲ.ಸಾರಿಗೆ ಯೂನಿಯನ್ ಗಳನ್ನು ಆಗಾಗ ಕರೆದು ಅವರೊಂದಿಗೆ ಸಂಸ್ಥೆಯ ಬೆಳವಣಿಗೆ-ಸಾರಿಗೆ ಸಿಬ್ಬಂದಿ ಕಲ್ಯಾಣಕ್ಕೆ ಏನ್ ಮಾಡಬೇಕೆನ್ನುವುದರ ಬಗ್ಗೆ ಅವರಿಂದ ಸಲಹೆ ಕೇಳುವ, ಅದನ್ನು ಕಾಲಕಾಲಕ್ಕೆ ಅನುಷ್ಟಾನಕ್ಕೆ ತರುವ ಕೆಲಸ ಮಾಡಬೇಕಿತ್ತು.ಆದರೆ ಮೇಡಮ್ ಅವರು ಸಾರಿಗೆ ಯೂನಿಯನ್ ಗಳ ಜತೆಗೆ ಅಂತಹದೊಂದು ಸಂಬಂಧವನ್ನಾಗಲಿ ಸಂಪರ್ಕವನ್ನಾಗಲಿ ಇಟ್ಟುಕೊಳ್ಳಲೇ ಇಲ್ಲ.ಸಾರಿಗೆ ಯೂನಿಯನ್ ಗಳನ್ನು ಶತೃಗಳಂತೆ ಪರಿಗಣಿಸಿ ಅವರಿಂದ ಭಾರೀ ಅಂತರ ಕಾಯ್ದುಕೊಂಡರು.ತಮಗಾಗುತ್ತಿರುವ ಅನ್ಯಾಯ-ಅವಮಾನದಿಂದ ಬೇಸತ್ತು ಖುದ್ದು ಕೆಎಸ್ ಆರ್ ಟಿಸಿ ಸ್ಟಾಫ್ ವರ್ಕರ್ಸ್ ಯೂನಿಯನ್ ರಾಜ್ಯಾಧ್ಯಕ್ಷರಾದ ಅನಂತಸುಬ್ಬರಾವ್ ಅವರೇ ಮೇಡಮ್ ಸತ್ಯವತಿ ಅವರಿಗೆ ಪತ್ರ ಬರೆದು ವರ್ತನ ಬದಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರಲ್ಲದೇ ಎಚ್ಚೆತ್ತುಕೊಳ್ಳದಿದ್ದರೆ ಸರ್ಕಾರದ ಗಮನಕ್ಕೆ ತರುವ ಎಚ್ಚರಿಕೆಯನ್ನೂ ನೀಡಿದ್ದರು.ಇದು ಸರ್ಕಾರದ ಗಮನಕ್ಕೂ ಹೋಗಿತ್ತು.ಇದು ಕೂಡ ಸತ್ಯವತಿ ಅವರ ವರ್ಗಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದರೂ ತಪ್ಪಾಗಲಿಕ್ಕಿಲ್ಲ.
ಸತ್ಯವತಿ ಅವರನ್ನು ಸ್ಥಳ ತೋರಿಸದೆ ವರ್ಗಾವಣೆ ಮಾಡಿರುವುದನ್ನು ನೋಡಿದಾಗ ಸರ್ಕಾರ ಅವರ ವಿಚಾರದಲ್ಲಿ ಸಾಕಷ್ಟು ಅಸಮಾಧಾನ-ಬೇಸರ ಹೊಂದಿದೆಯಾ ಎನ್ನುವ ಶಂಕೆ ಕಾಡುತ್ತೆ.ಮೇಡಮ್ ವರ್ಗಾವಣೆ ಆಗುತ್ತಿದ್ದಂತೆ ಅವರ ಹಿಂದೆ ಮುಂದೆ ಬಕೆಟ್ ಹಿಡಿದುಕೊಂಡು ಅಡ್ಡಾಡುತ್ತಿದ್ದ ಅಧಿಕಾರಿ-ಸಿಬ್ಬಂದಿಗೆ ನಡುಕ ಶುರುವಾಗಿದೆ.ಆ ಅಧಿಕಾರಿಗಳು ಯಾರು..? ಅವರು ಮೇಡಮ್ ಅವರನ್ನು ಹೇಗೆಲ್ಲಾ ದಾರಿ ತಪ್ಪಿಸಿದರು..ಮೇಡಮ್ ಅಮಾಯಕತೆಯನ್ನು ಹೇಗೆಲ್ಲಾ ಮಿಸ್ಯೂಸ್ ಮಾಡಿಕೊಂಡ್ರು..? ಅವರನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಹೇಗೆಲ್ಲಾ ಬೇಯಿಸಿಕೊಂಡರು..? ಸಾರಿಗೆ ಸಿಬ್ಬಂದಿ ವಿರುದ್ಧವಾಗಿ ಸ್ವಾರ್ಥ ಹಿತಾಸಕ್ತಿಯನ್ನು ಹೇಗೆಲ್ಲಾ ಈಡೇರಿಸಿಕೊಂಡರು ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ಸವಿವರವಾಗಿ ನೀಡಲಿದೆ ಕನ್ನಡ ಫ್ಲ್ಯಾಶ್ ನ್ಯೂಸ್..