ವಿಧಾನಪರಿಷತ್  ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿಯಲ್ಲಿ ಬಂಡಾಯ-ಅಪಸ್ವರ-ಬಹಿರಂಗವಾಗೇ ಅಸಮಾಧಾನ ತೋಡಿಕೊಂಡ ಟಿಕೆಟ್ ವಂಚಿತ ಮಾಜಿ ಶಾಸಕ ರಘುಪತಿ ಭಟ್

ಸರ್ಜಿ ಸಮೂಹ ಆಸ್ಪತ್ರೆಗಳ ಅಧ್ಯಕ್ಷ  ಡಾ. ಧನಂಜಯ್ ಸರ್ಜಿ
ಸರ್ಜಿ ಸಮೂಹ ಆಸ್ಪತ್ರೆಗಳ ಅಧ್ಯಕ್ಷ  ಡಾ. ಧನಂಜಯ್ ಸರ್ಜಿ

ಶಿವಮೊಗ್ಗ: ಪ್ರಶ್ನೆಗೆ ಉತ್ತರವೇನೋ ಸಿಕ್ಕಿದೆ..ಆದರೆ ಆ ಉತ್ತರವೇ ಬಿಜೆಪಿಯೊಳಗೊಂದು ಬಂಡಾಯ ಸೃಷ್ಟಿಸಿದೆ.ಅನಾಯಾಸವಾಗಿ ಗೆಲ್ಲಬಹುದೆನ್ನುವ ಲೆಕ್ಕಾಚಾರಕ್ಕೆ ತಡೆಯೊಡ್ಡುವ ಲಕ್ಷಣ ಗೋಚರಿಸ್ತಿದೆ.ನೈರುತ್ಯ ಪದವೀಧರ ಕ್ಷೇತ್ರಕ್ಕೆ ಯಾರಾಗ್ತಾರೆ ಅಭ್ಯರ್ಥಿ ಎನ್ನುವ ಪ್ರಶ್ನೆಗೆ ಶಿವಮೊಗ್ಗದ ಖ್ಯಾತ ವೈದ್ಯ ಹಾಗೂ ಸರ್ಜಿ ಸಮೂಹ ಆಸ್ಪತ್ರೆಗಳ ಅಧ್ಯಕ್ಷ  ಡಾ. ಧನಂಜಯ್ ಸರ್ಜಿ ಎನ್ನುವ ಉತ್ತರವೇನೋ ಸಿಕ್ಕಿದೆ.ಆದರೆ ಅವರ ಆಯ್ಕೆ ಬಗ್ಗೆ ಪಕ್ಷದೊಳಗೇ ಅಪಸ್ವರ ವ್ಯಕ್ತವಾಗ್ತಿರೋದು ಮಾತ್ರ ಒಳ್ಳೆಯ ಲಕ್ಷಣವೆಂದೆನಿಸ್ತಿಲ್ಲ ಎನ್ನುತ್ತಾರೆ ಶಿವಮೊಗ್ಗದ ಬಿಜೆಪಿಯ ಹಿರಿಯರು.

ಸರ್ಜಿ ಆಸ್ಪತ್ರೆಯನ್ನು ನಿರ್ಮಿಸಿ ಅದರ ಮೂಲಕ ಆರೋಗ್ಯಸೇವೆ ಶುರುಮಾಡಿ ಅದರಿಂದಲೇ ಹೆಸರು ಪಡೆದವರು ಡಾ.ಧನಂಜಯ ಸರ್ಜಿ.ಆರೋಗ್ಯ ಸೇವೆಗೆ ಸೀಮಿತಗೊಳಿಸಿಕೊಳ್ಳದೆ ಅದ್ಯಾಕೆ ಅವರಿಗೆ ರಾಜಕೀಯದ ಆಸಕ್ತಿ ಹಿಡಿಯಿತೋ ಗೊತ್ತಿಲ್ಲ,,ಆಸ್ಪತ್ರೆಯತ್ತ ತಲೆ ಹಾಕೋದನ್ನು ಬಿಟ್ಟು ಕೆಲ ವೈದ್ಯರಿಗೆ ಅದರ ಜವಾಬ್ದಾರಿ ಒಪ್ಪಿಸಿ, ಬಿಜೆಪಿ ಮುಖಂಡರ ಹಿಂದೆ ಪ್ರದಕ್ಷಿಣೆ ಹಾಕಲಾರಂಭಿಸಿದ್ರಂತೆ ಡಾ.ಧನಂಜಯ್.ಅದು ತಪ್ಪೇನಲ್ಲ.ಆದ್ರೆ ಬಿಜೆಪಿಯ ಅನೇಕ ಮುಖಂಡರೇ ಈ ವೈದ್ಯರಿಗೇಕೆ ಬೇಕು ರಾಜಕೀಯದ ಉಸಾಬರಿ ಎಂದು ಮಾತನಾಡಿಕೊಂಡಿದ್ದುಂಟು.(ಹಾಗೆಂದು ವೈದ್ಯರೇನು ರಾಜಕೀಯ ಪ್ರವೇಶಿಸಲೇಬಾರದೆಂದೆನಲ್ಲ..ಹಾಗೆಯೇ ರಾಜಕೀಯ ಪ್ರವೇಶಿಸಿಯೇ ಇಲ್ಲವೆಂದೆನಲ್ಲ.)ಆದರೆ ಇದ್ಯಾವುದಕ್ಕೂ ಸೊಪ್ಪಾಕದೆ ರಾಜಕೀಯ ಭವಿಷ್ಯ-ಅಸ್ಥಿತ್ವಕ್ಕಾಗಿ ತಮ್ಮದೇ ಧಾಟಿಯಲ್ಲಿ ಪ್ರಯತ್ನಿಸಿ ಕೊನೆಗೂ ಅದರಲ್ಲಿ ಯಶಸ್ವಿಯಾಗಿದ್ದು ಕಡಿಮೆ ಸಾಧನೆಯೇನಲ್ಲ.

ಹಾಗೆ ನೋಡಿದ್ರೆ ಕಳೆದ ವಿಧಾನಸಭೆ ಚುನಾವಣೆಯಲ್ಲೇ ಡಾ.ಸರ್ಜಿ ಹೆಸರು ಕೇಳಿಬಂದಿತ್ತು.ಆದರೆ ಈ  “ಚಿಲ್ಟು-ಚೈಲ್ಡ್” ಗೆ ಟಿಕೆಟ್ಟಾ ಎಂದು ನಗೆಯಾಡಿದ್ರಂತೆ ಈಶ್ವರಪ್ಪ.ತನ್ನ ಮುಂದೆ ಬಚ್ಚಾ..ಈತ ಟಿಕೆಟ್ ವಿಚಾರದಲ್ಲಿ ಪ್ರತಿಸ್ಪರ್ದಿನಾ ಎಂದು ಗುಟುರು ಹಾಕಿದ್ದ ಈಶ್ವರಪ್ಪ ಏನೆಲ್ಲಾ ಸರ್ಕಸ್ ಗಳ ಬಳಿಕ ಡಾ.ಸರ್ಜಿಗೆ ಟಿಕೆಟ್ ತಪ್ಪಿಸಿ ತಾವು ಗಿಟ್ಟಿಸಿದ್ರು.ಆದರೆ ಆ ಸನ್ನಿವೇಶದಲ್ಲಿ ಈಶ್ವರಪ್ಪಗಿಂತ ಮುನ್ನಲೆಯಲ್ಲಿ ಕೇಳಿಬಂದಿತ್ತುಇದೇ ಸರ್ಜಿ ಹೆಸರು ಎನ್ನುವುದು ಗಮನಿಸ್ಬೇಕಾದ ವಿಷಯ.ಈಶ್ವರಪ್ಪ ಅವರ ಅನುಭವ-ಹಿರಿತನಕ್ಕೆ ಬೆಲೆ ಕೊಟ್ಟು ಡಾ.ಸರ್ಜಿ ಸುಮ್ಮನಾದ್ರು ಬಿಟ್ರೆ ಜಾತಿ ಹಾಗೂ ಹಣ ಬಲದ ಮೇಲೆ ಪರಿಶ್ರಮ ಹಾಕಿದ್ರೆ ಈಶ್ವರಪ್ಪಗೆ ಟಿಕೆಟ್ ಸಿಗೋದು ಕಷ್ಟವಾಗ್ತಿತ್ತೇನೋ..ಈ ವಿಷಯ ಟಿಕೆಟ್ ಪಡೆಯೊಕ್ಕೆ ಎಷ್ಟೆಲ್ಲಾ ತಿಣುಕಾಡಬೇಕಾಯ್ತೆನ್ನುವುದನ್ನುಅರಿತಿರುವ  ಈಶ್ವರಪ್ಪಗೂ ಗೊತ್ತಿದೆ.

“ವಿಧಾನ ಪರಿಷತ್ ಟಿಕೆಟ್ ಘೋಷಣೆಯಾಗಿದೆ. ಶಿಕ್ಷಕರ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿ ಪದವೀಧರ ಕ್ಷೇತ್ರದ ಟಿಕೆಟ್ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಗೆ ನೀಡಲಾಗಿದೆ. ಇದು ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡದೆ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಭಾಗದ ವಿದ್ಯಾವಂತ, ಪ್ರಜ್ಞಾವಂತ ಮತದಾರರಿಗೆ ಅನ್ಯಾಯ ಮಾಡಿದ ಹಾಗಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಬಿಜೆಪಿಯ ನಿಲುವಿನಿಂದ ವಿಚಲಿತನಾಗಿದ್ದೇನೆ.

ನನ್ನ ಹೆಸರಿನ ಬದಲು ಬೇರೆ ಹೆಸರು ಘೋಷಣೆಯಾಗಿದ್ದು, ಟಿವಿ ಮೂಲಕ ತಿಳಿಯಿತು. ಆದರೆ ನಾನು ವಿಚಲಿತನಾಗದೆ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ನನಗೆ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಪಕ್ಷದ ಹಿರಿಯರು ಭರವಸೆ ನೀಡಿದ್ದರು. ಆ ಪ್ರಕಾರ ಪದವೀಧರರ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅತಿ ಹೆಚ್ಚು ಸದಸ್ಯರನ್ನು ನೋಂದಾಯಿಸಿದ್ದೇನೆ. ಅಲ್ಲದೆ ಪಕ್ಷ ನೀಡಿದ ಶಿವಮೊಗ್ಗ ಲೋಕಸಭಾ ಚುನಾವಣಾ ಪ್ರಭಾರಿ ಜವಾಬ್ದಾರಿಯನ್ನು 40 ದಿನಗಳ ಕಾಲ ಶಿವಮೊಗ್ಗದಲ್ಲಿ ಉಳಿದು ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ”

ಲೋಕಸಭಾ ಚುನಾವಣೆ ಮುಗೀತಿದ್ದಂಗೆ  ವಿಧಾನಪರಿಷತ್ ಚುನಾವಣೆ ಕಾವು ಪಡೆದಿದೆ.ಶಿವಮೊಗ್ಗ –ಉಡುಪಿ-ಚಿಕ್ಕಮಗಳೂರು ಒಳಗೊಂಡಿರುವ  ನೈರುತ್ಯ ಪದವೀಧರ ಕ್ಷೇತ್ರಕ್ಕೆ  ಬಿಜೆಪಿಯಿಂದ ಯಾರ್ ಅಭ್ಯರ್ಥಿಯಾಗ್ತಾರೆನ್ನುವ ಕುತೂಹಲವಿತ್ತು.ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಗೇನೆ ಟಿಕೆಟ್ ಪೈನಲ್ ಎನ್ನುವ ಮಾತುಗಳಿದ್ವು.ರಘುಪತಿ ಭಟ್ ಗೆ ಪಕ್ಷದ ವರಿಷ್ಟರು ಆ ರೀತಿಯಲ್ಲಿ ಆಶ್ವಾಸನೆ ಕೊಟ್ಟಿದ್ರು.ರಾಜಕೀ ಯ ಅನುಭವಿ ಭಟ್ ಅವರು ಕೂಡ ಇದೇ ವಿಶ್ವಾಸದಲ್ಲಿ ಸಂಘಟನೆ ಹಾಗೂ ಪ್ರಚಾರಕ್ಕೂ ಸಿದ್ದತೆ ಮಾಡಿಟ್ಟುಕೊಂಡಿದ್ರು.ಆದ್ರೆ ಡಾ.ಸರ್ಜಿ ಹೆಸರನ್ನು ಫೈನಲ್ ಮಾಡುತ್ತಿದ್ದಂತೆ ಕೇವಲ ರಘುಪತಿ ಭಟ್ ಅವರಿಗಷ್ಟೇ ಅಲ್ಲ,ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಿಗೂ ದೊಡ್ಡ ಅಘಾತ ಉಂಟಾಗಿದೆ.

ರಘುಪತಿ ಭಟ್ ಅವರು ತಮಗೆ ದೊಡ್ಡ ಅನ್ಯಾಯವಾಗಿದೆ ಎಂಬ ಬೇಸರ-ಅಸಮಾಧಾನ-ಆಕ್ರೋಶವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.ಅವರ ಸೋಶಿಯಲ್ ಮೀಡಿಯಾ ಪೇಜಸ್ ನಲ್ಲೂ ಆ ಅಸಮಾಧಾನ ವ್ಯಕ್ತವಾದಂತಿದೆ. 1994 ರಿಂದಲೂ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತನಾಗಿ, ಪದಾಧಿಕಾರಿಯಾಗಿ ವಿವಿಧ ಸ್ಥರಗಳಲ್ಲಿ ಕೆಲಸ ಮಾಡಿದ್ದೇನೆ. ವಿಧಾನ ಸಭೆಗೆ ಸ್ಪರ್ಧಿಸಿದ 3 ಬಾರಿಯೂ ಗೆದ್ದಿರುತ್ತೇನೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಯಾವುದೇ ಮಾಹಿತಿ ನೀಡದೆ ನನ್ನನ್ನು ಬದಲಾಯಿಸಲಾಯಿತು.ಕಾರಣ ಕೇಳಿದಾಗ ಸೂಕ್ತ ರಾಜಕೀಯ ಸ್ಥಾನಮಾನದ ಭರವಸೆ ಕೊಟ್ಟು ಸಮಾಧಾನಿಸಲಾಯ್ತು.ಆ ಸ್ಥಾನಮಾನ ನಾನು ವಿಧಾನಪರಿಷತ್ ಗೆ ಟಿಕೆಟ್ ಎಂದು ಭಾವಿಸಿದ್ದೆ.ಆದರೆ ಅದು ಹುಸಿಯಾಗಿದೆ.ನನಗಿಂತ ನನ್ನ ನಂಬಿದ್ದ ಲಕ್ಷಾಂತರ ಕಾರ್ಯಕರ್ತರಿಗೆ ಅಘಾತವಾಗಿದೆ.ಅವರನ್ನು ಸಮಾಧಾನಿಸುವುದು ಕಷ್ಟವಾಗಿದೆ ಎಂಬ ಲಹರಿಯಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಹೌದು  ಡಾ,ಧನಂಜಯ ಸರ್ಜಿ ಅವರ ಹೋಲಿಕೆಯಲ್ಲಿ ರಘುಪತಿ ಭಟ್ ಅವರಿಗೆ ರಾಜಕೀಯ ಅನುಭವವಿದೆ.ಸಂಘಟನೆ ಮಾಡುವ ತಾಕ್ತತಿದೆ.ಸರ್ಜಿ ಇನ್ನೂ ಕಲಿಕೆಯ ವಿದ್ಯಾರ್ಥಿ.ಅದು ಹೋಗಲಿ ಸರ್ಜಿಗೆ ಟಿಕೆಟ್ ಕೊಡಲಾಗುತ್ತಿರುವ ವಿಚಾರವನ್ನು ಮೊದಲೇ ಭಟ್ ಅವರಿಗೆ ಸ್ಪಷ್ಟಪಡಿಸಬೇಕಿತ್ತು.ಅದನ್ನು ಮಾಡದೆ ಟಿಕೆಟ್ ನಿಮಗೇ ಪಕ್ಕಾ ಎಂದು ಸುಳ್ಳು ಭರವಸೆ ಕೊಡುತ್ತಲೇ ಅಂತಿಮವಾಗಿ ಇನ್ನೊಬ್ಬರಿಗೆ ಅದನ್ನು ನೀಡುವುದು ಎಂಥವರಿಗೂ ಬೇಸರ ತರಿಸುತ್ತದೆ.ಈ ಬೆಳವಣಿಗೆಯಿಂದ ನೊಂದ ಭಟ್ ಅವರನ್ನು ಸಮಾಧಾನ ಪಡಿಸುವ ಕೆಲಸವನ್ನೂ ಪಕ್ಷದ ವರಿಷ್ಟರು ಮಾಡಿಲ್ಲ ಎನ್ನುವುದು ರಘುಪತಿ ಭಟ್ ಅವರಂಥ ಬಿಜೆಪಿಯ ನಿಷ್ಟಾವಂತ ಮುಖಂಡರಲ್ಲಿ” ಇಷ್ಟೆಲ್ಲಾ ಅಪಮಾನವಾದ್ಮೇಲೂ ಪಕ್ಷದಲ್ಲಿ ಉಳಿಯಬೇಕೇ” ಎನ್ನುವ ಪ್ರಶ್ನೆ ಮೂಡಿಸುವುದರಲ್ಲಿ ತಪ್ಪೇನಿದೆ ಹೇಳಿ.

ಡಾ.ಧನಂಜಯ ಸರ್ಜಿ ಅವರಿಗೆ ಟಿಕೆಟ್ ಘೋಷಿಸಿರುವುದು ಉಡುಪಿ-ಚಿಕ್ಕಮಗಳೂರು ಭಾಗದ ಬಿಜೆಪಿ ಕಾರ್ಯಕರ್ತರನ್ನು ನಖಶಿಖಾಂತ ಉರಿಸಿರುವುದು ಪಕ್ಕಾ.ಇದನ್ನು ಅವರು ಚುನಾವಣೆಯಲ್ಲಿ ತೋರಿಸುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಂದು ಕಾಲದ ವಿರೋಧಿಗಳಾದ ಬಿಜೆಪಿಗರ ಪರ ನೀಯತ್ತಾಗಿ ಕೆಲಸ ಮಾಡ್ತಾರೆನ್ನುವುದೂ ಡೌಟೇ.

ಇದೆಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿಯಿಂದ ಸಧ್ಯಕ್ಕೆ ಅಮಾನತ್ತಾಗಿರುವ ಕೆ.ಎಸ್ ಈಶ್ವರಪ್ಪ ಕೂಡ ಧನಂಜಯ ಸರ್ಜಿ ವಿರುದ್ದ ಹಳೇ ಜಿದ್ದು-ಸೇಡು ತೀರಿಸಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.ಪಕ್ಷದಲ್ಲಿ ಇಲ್ಲದಿದ್ದರೇನು, ಬಿಜೆಪಿ ಜತೆ ಇನ್ನೂ ನಿಕಟ ಸಂಪರ್ಕ-ಸಾವಿರಾರು ಕಾರ್ಯಕರ್ತರೊಂದಿಗೆ ವಿಶ್ವಾಸ-ಸಂಬಂಧ ಉಳಿಸಿಕೊಂಡಿರುವ ಈಶ್ವರಪ್ಪ ವಿಧಾನಪರಿಷತ್ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸೊಲ್ಲ ಎಂದು ತಿಳಿದುಕೊಂಡ್ರೆ ಅದು ಬಿಜೆಪಿಯವರ ತಪ್ಪುಗ್ರಹಿಕೆ ಆಗ್ಬೋದೇನೋ ಎನ್ನುತ್ತಾರೆ ಶಿವಮೊಗ್ಗದ ಹಿರಿಯ ಬಿಜೆಪಿ ಮುಖಂಡರು.

ಹಾಗಾಗಿ ಧನಂಜಯ ಸರ್ಜಿ ಅವರು ಪಕ್ಷದೊಳಗೇ ಇರುವ ಅತೃಪ್ತಿ-ಅಸಮಾಧಾನದ ಸವಾಲನ್ನು ಮೊದಲು ಎದುರಿಸಬೇಕಾಗಿ ಬಂದಿದೆ.ಶಿವಮೊಗ್ಗದ ನೆಲ ಬಿಜೆಪಿಯ ಭದ್ರಕೋಟೆ ಎಂದುಕೊಂಡು ಸುಮ್ಮನಾದ್ರೆ ಅದೇ ಮುಳುವಾಗುವ ಸಾಧ್ಯತೆಗಳಿವೆ.ಮೈತ್ರಿ ಅಭ್ಯರ್ಥಿಯಾಗಿರುವುದರಿಂದ ಗೆಲುವು ಅನಾಯಾಸ ಎಂದುಕೊಳ್ಳುವುದೂ ಸರಿಯಲ್ಲ.ಏಕೆಂದರೆ ಅವರಿಗೆ ಸಧ್ಯಕ್ಕೆ ಅನುಕೂಲಕ್ಕಿಂತ ಪ್ರತಿಕೂಲದ ವಾತಾವರಣ ಇರುವುದೇ ಹೆಚ್ಚೆಂದು ಭಾಸವಾಗುತ್ತದೆ.ಯಾರನ್ನೂ ಅತಿಯಾಗಿ ನಂಬದೇ..ಅತಿಯಾದ ಆತ್ಮವಿಶ್ವಾಸ ಮೂಡಿಸಿಕೊಳ್ಳದೆ ಎಚ್ಚರದಿಂದಿದ್ದರಷ್ಟೇ ರಾಜಕೀಯ ಹಾದಿ ಸುಗಮವಾಗಬಹುದೇನೋ..? ಇಲ್ಲವಾದಲ್ಲಿ ರಾಜಕೀಯದ ಬೀಜಾಕ್ಷರಗಳನ್ನೂ ಬಲ್ಲದ ಸರ್ಜಿ ಅವರಿಗೆ ಅವರ ಸುತ್ತಮುತ್ತಲಿರೋರೇ ಖೆಡ್ಡಾ ತೋಡಿ,ಅದರೊಳಗೆ ಅವರು ಬಿದ್ದರೆ ಆಳಿಗೊಂದು ಕಲ್ಲು ಎನ್ನುವಂತೆ ಮಜಾ ತೆಗೆದುಕೊಳ್ಳುವುದು ಕನ್ಫರ್ಮ್..

Spread the love

Leave a Reply

Your email address will not be published. Required fields are marked *

You missed