ಸರಳ ಸಮಾರಂಭದಲ್ಲಿ ಸಿಬ್ಬಂದಿ ಮುಂದೆ ರವಿಕುಮಾರ್-ಮಾರುತಿ ಜೋಡಿಯಿಂದ ಮಹತ್ವದ ಘೋಷಣೆ..

ಕನ್ನಡದ ಜನಪ್ರಿಯ ನ್ಯೂಸ್ ಚಾನೆಲ್ ಗಳಲ್ಲಿ ಒಂದಾದ ನ್ಯೂಸ್ ಫಸ್ಟ್ ಮೊನ್ನೆ 5ನೇ ಹುಟ್ಟುಹಬ್ಬ ಆಚರಿಸಿಕೊಂಡಿದೆ. ಚಾನೆಲ್ ನಿರ್ವಹಣೆಯೇ ಕಷ್ಟಸಾಧ್ಯವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಒಂದು ಚಾನೆಲ್ 5 ವರ್ಷ ಪೂರೈಸುವುದು ಸಾಧನೆಯೇ ಸರಿ..ಈ ಹಿನ್ನಲೆಯಲ್ಲಿ ಕನ್ನಡ ಪತ್ರಿಕೋದ್ಯಮದ ಜೋಡೆತ್ತುಗಳಾದ ಮಾರುತಿ-ರವಿಕುಮಾರ್ ಬಳಗಕ್ಕೆ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಗದಿಂದ ಅಭಿನಂದನೆ ಹಾಗೂ ಶುಭಾಷಯ ( ನಮ್ಮ ಬರವಣಿಗೆಯ ನೈತಿಕತೆ ಮತ್ತು ವಿಶ್ವಾಸಾರ್ಹತೆ ಪ್ರಶ್ನಿಸಿ ಮಾತನಾಡುವವರಿಗೆ ನಮ್ಮದೊಂದು ಸ್ಪಷ್ಟನೆ : ಕನ್ನಡ ಸುದ್ದಿ ಜಗತ್ತಿನಲ್ಲಿ ಏನೇ ನಡೆಯುತ್ತಿದ್ದರೂ ವಿಶ್ವಾಸಾರ್ಹ ಮೂಲಗಳಿಂದ ಸುದ್ದಿ ಸಂಗ್ರಹಿಸಿ ಅದನ್ನು ಪ್ರಚುರಪಡಿಸುವ ಕೆಲಸವನ್ನು ಪ್ರಾಮಾಣಿಕವಾಗಿಯಷ್ಟೇ ಅಲ್ಲ ಪಾರದರ್ಶಕವಾಗಿ ಕನ್ನಡ ಫ್ಲ್ಯಾಶ್ ನ್ಯೂಸ್ ಮಾಡ್ತಾ ಬಂದಿದೆ. ಪತ್ರಿಕೆ-ಚಾನೆಲ್ ಗಳು ಒಳ್ಳೆ ಕೆಲಸ ಮಾಡಿದಾಗ ಬೆನ್ನುತಟ್ಟುವ ಕೆಲಸ ಮಾಡುತ್ತೇವೆ..ಹಾದಿ ತಪ್ಪುವ ನಿಟ್ಟಿನಲ್ಲಿ ನಡೆದರೆ ಕಿವಿ ಹಿಂಡುತ್ತೇವೆ ಅಷ್ಟೆ..ನಾವು ಯಾರ ಪರವೂ ಅಲ್ಲ..ಯಾರ ವಿರೋಧವೂ ಅಲ್ಲ..ನಮಗೆ ಇಸಂಗಳೂ ಇಲ್ಲ.ಯಾವುದೇ ಪೂರ್ವಾಗ್ರಹಕ್ಕೂ ಒಳಗಾಗುವವರಲ್ಲ..ನ್ಯೂಸ್ ಫಸ್ಟ್ ನ ವಿಚಾರದಲ್ಲೂ ಇದು ಹೊರತಲ್ಲ.ಚಾನೆಲ್ ಕಷ್ಟದಲ್ಲಿದೆ ಎಂದು ಅಂದು ಬರೆದಿದ್ದಕ್ಕೆ ಇವತ್ತೂ ಬದ್ದರಾಗಿದ್ದೇವೆ…5ನೇ ವರ್ಷಾಚರಣೆ ಸನ್ನಿವೇಶದಲ್ಲಿ ಅಭಿನಂದನೆ ಸಲ್ಲಿಸುತ್ತಲೇ ಮತ್ತೊಂದು ಹೊಸ ಚಾನೆಲ್ ಆರಂಭಿಸುವುದಾಗಿ ಮಾಡಿದ ಘೋಷಣೆಯನ್ನೂ ಸ್ವಾಗತಿಸುತ್ತಿದ್ದೇವೆ..ಇದು ನಮ್ಮ ನಿಲುವು-ನಿಷ್ಪಕ್ಷಪಾತ ಧೋರಣೆ).

ನ್ಯೂಸ್ ಫಸ್ಟ್ ಸುದ್ದಿ ಮಾದ್ಯಮದಲ್ಲಿ ಸದ್ದು ಮಾಡಲಾರಂಭಿಸಿ 5 ವರ್ಷ ಕಳೆದಿರುವದು ಪ್ರತಿಯೊಬ್ಬ ಸಂಭ್ರಮಿಸುವ ವಿಚಾರ.ಒಂದಷ್ಟು ಎಡರು ತೊಡರುಗಳ ನಡುವೆಯೂ ಚಾನೆಲ್ 5ನೇ ಹುಟ್ಟು ಹಬ್ಬ ಆಚರಿಸಿಕೊಂಡಿದೆ.ಕಳೆದ ವರ್ಷಗಳ ಹೋಲಿಕೆಯಲ್ಲಿ ತೀರಾ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಮಾರುತಿ-ರವಿಕುಮಾರ್ ಜೋಡಿ ಶೀಘ್ರವೇ ಹೊಸದೊಂದು ಚಾನೆಲ್ ಆರಂಭಿಸುತ್ತಿರುವುದಾಗಿ ಘೋಷಿಸಿದೆ ಎನ್ನುವ ವರ್ತಮಾನ ತಿಳಿದುಬಂದಿದೆ. ಕನ್ನಡದ ಚಾನೆಲ್ ಗಳ ಸಾಲಿಗೆ ಮತ್ತೊಂದು ಹೊಸ ಚಾನೆಲ್ ಸೇರ್ಪಡೆ ಆಗುತ್ತಿದೆ ಎನ್ನುವುದು ನಿಜಕ್ಕೂ ಸಂತೋ ಷದ ವಿಚಾರ.ಟಿವಿ9 ನಂತ ಸುದ್ದಿ ಸಂಸ್ಥೆಯನ್ನು ಕಟ್ಟಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡುವಲ್ಲಿ ಯಶಸ್ವಿಯಾದ ಮಾರುತಿ-ರವಿಕುಮಾರ್ ಅವರಿಗೆ ಮತ್ತೊಂದು ಚಾನೆಲ್ ಕಟ್ಟಿ ಬೆಳೆಸುವ ಶಕ್ತಿ-ಸಾಮರ್ಥ್ಯ ಇದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.ಹಾಗಾಗಿ ಆ ಹೊಸ ಪ್ರಯತ್ನಕ್ಕೆ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಗದಿಂದ ಆಲ್ ದಿ ಬೆಸ್ಟ್ ಹಾಗೂ ಬೆಸ್ಟ್ ಆಫ್ ಲಕ್.
ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ( ಕಳೆದ ವರ್ಷ ವರ್ಷಾಚರಣೆಯನ್ನು ಖಾಸಗಿ ಹೊಟೇಲ್ ನಲ್ಲಿ ಅದ್ದೂರಿಯಾಗಿ ನಡೆಸಲಾಗಿತ್ತು. ಸಿಬ್ಬಂದಿಗೆ ಉಡುಗೊರೆ ಕೊಡಲಾಗಿತ್ತಂತೆ) ಚಾನೆಲ್ ನ ಯಶಸ್ಸಿಗೆ ಕಾರಣವಾದ ಎಲ್ಲಾ ಸಿಬ್ಬಂದಿಗೆ ಕೇಕ್ ತಿನ್ನಿಸಿ ಅವರ ಕೊಡುಗೆಯನ್ನು ಸ್ಮರಿಸಲಾಯಿತು.ನಂತರ ಎಲ್ಲರ ಸಮ್ಮುಖದಲ್ಲಿ ಶೀಘ್ರವೇ ಮತ್ತೊಂದು ಚಾನೆಲ್ ನ್ನು ಆರಂಭಿಸುತ್ತಿರುವುದಾಗಿ ಘೋಷಿಸಲಾಯಿತಲ್ಲದೇ ಅದಕ್ಕೂ ತಮ್ಮ ಕೊಡುಗೆ ದೊರೆಯಲಿ ಎಂದು ಮನವಿ ಮಾಡಿಕೊಂಡಿದ್ದಾರಂತೆ.ಸಿಬ್ಬಂದಿ ಕೂಡ ತುಂಬ ಸಮ್ಮತಿ ಸೂಚಿಸಿದ ಬಳಿಕ ಇಡೀ ಚಾನೆಲ್ ಸಿಬ್ಬಂದಿ ಹುಟ್ಟು ಹಬ್ಬದಲ್ಲಿ ಸಂಭ್ರಮಿಸಿದೆ.

ನ್ಯೂಸ್ ಫಸ್ಟ್ ಆರಂಭವಾದ ಕೇವಲ 5 ವರ್ಷಗಳಲ್ಲಿ ದೊಡ್ಡ ಮಟ್ಟದ ಚಾನೆಲ್ ಗಳಿಗೆ ಸುದ್ದಿ ವಿಚಾರದಲ್ಲಿ ಪೈಪೋಟಿ ಕೊಡುವ ಮಟ್ಟಕ್ಕೆ ಬೆಳೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ದೊಡ್ಡ ಚಾನೆಲ್ ಗಳಲ್ಲಿ ಕೆಲಸ ಮಾಡಿದ ಅನುಭವಿಗಳ ತಂಡ ನ್ಯೂಸ್ ಫಸ್ಟ್ ನಲ್ಲಿದೆ ಎನ್ನುವುದೇ ಇದಕ್ಕೆ ಕಾರಣ.ರಿಪೋರ್ಟರ್ ಗಳಿಂದ ಹಿಡಿದು ಡೆಸ್ಕ್ ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಯಾವುದೇ ಸಮಸ್ಯೆಗಳಿರಲಿ,ಕಾಂಪ್ರಮೈಸ್ ಮಾಡಿಕೊಂಡು ಹಾಕಿದ ಎಫರ್ಟ್ ನಿಂದಲೇ ಇವತ್ತು ಚಾನೆಲ್ ಇಷ್ಟು ದೊಡ್ಡಮಟ್ಟಕ್ಕೆ ಬೆಳೆಯೊಕ್ಕೆ ಕಾರಣವಾಗಿದೆ. ಸುದ್ದಿಯ ಗುಣಮಟ್ಟದ ವಿಷಯದಲ್ಲೂ ಕೂಡ ಯಾವುದೇ ರಾಜಿ ಮಾಡಿಕೊಳ್ಳದೆ ಬದ್ಧತೆ ಉಳಿಸಿಕೊಂಡಿದೆ.ಆರ್ಥಿಕವಾಗಿಯೂ ಸದೃಢತೆ ಪಡೆದಿದೆ.ಇಂಥಾ ತಂಡದಿಂದ ಮತ್ತೊಂದು ಹೇಗೆ ಚಾನೆಲ್ ಮೂಡಿ ಬರಲಿದೆ ಎನ್ನುವ ಕುತೂಹಲವಂತೂ ಇಡೀ ರಾಜ್ಯದ ವೀಕ್ಷಕರಲ್ಲಿದೆ.
ಏನೇ ಆಗಲಿ, ಚಾನೆಲ್ 5 ವರ್ಷಗಳ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಸಂಭ್ರಮದ ಸನ್ನಿವೇಶದಲ್ಲಿ ಚಾನೆಲ್ ಮುಂದೆ ಎದುರಾಗಬಹುದಾದ ಎಲ್ಲಾ ತೊಡಕು-ತೊಂದರೆಗಳನ್ನು ಮೆಟ್ಟಿ ನಿಂತು ಮುನ್ನಡೆಯುವ ಶಕ್ತಿ ಇನ್ನಷ್ಟು ನ್ಯೂಸ್ ಫಸ್ಟ್ ತಂಡಕ್ಕೆ ದೊರೆಯುವಂತಾಗಲಿ. ಚಾನೆಲ್ ನಲ್ಲಿ ಕೆಲಸ ಮಾಡುವ ಪ್ರತಿ ಸಿಬ್ಬಂದಿ ಮುಖದಲ್ಲಿ ಸದಾ ನಗು ಅರಳಿಸುವಂತ ಸ್ಥಿತಿಗೆ ಮ್ಯಾನೇಜ್ ಮೆಂಟ್ ತಲುಪಲಿ ಎನ್ನುವುದೇ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಗದ ಶುಭ ಹಾರೈಕೆ.