ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್-2’ ಚಿತ್ರ ಮಾರ್ಚ್ 19, 2026 ರಂದು ಅದ್ಧೂರಿಯಾಗಿ ತೆರೆಕಂಡಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ ಈ ಎರಡನೇ ಭಾಗದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಆದರೆ, ನಟಿ ರಮ್ಯಾ ಅವರಿಗೆ ಈ ಚಿತ್ರ ತೀವ್ರ ನಿರಾಸೆ ಮೂಡಿಸಿದೆ.
ಸಿನಿಮಾ ವೀಕ್ಷಿಸಿದ ನಂತರ ರಮ್ಯಾ ಅವರು, “ಒಂದು ಭರವಸೆಯ ಕಥೆಯನ್ನು ಹೇಗೆ ಸಹನೆಯ ಪರೀಕ್ಷೆಯನ್ನಾಗಿ (Endurance Test) ಮಾಡಬಹುದು ಎಂಬುದಕ್ಕೆ ಈ ಸಿನಿಮಾ ಒಂದು ಮಾದರಿ” ಎಂದು ವ್ಯಂಗ್ಯವಾಡಿದ್ದಾರೆ. ಚಿತ್ರದ ಓಟವು ಆಸಕ್ತಿ ಇಲ್ಲದ ಯಾವುದೋ ಒಂದು ಬೋರಿಂಗ್ ಪಠ್ಯಪುಸ್ತಕದ ಕೊನೆಯೇ ಇಲ್ಲದ ಅಧ್ಯಾಯಗಳನ್ನು ಓದಿದಂತೆ ಭಾಸವಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ರಣವೀರ್ ಸಿಂಗ್ ನಟನೆ ಮತ್ತು ಅವರ ‘ಹೇರ್ ಸ್ಟೈಲ್’
ನಟ ರಣವೀರ್ ಸಿಂಗ್ ಅವರ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಮ್ಯಾ, “ಧುರಂಧರ್ ಮೊದಲ ಭಾಗದಲ್ಲಿ ಅವರು ತೋರಿಸಿದ ಅಭಿನಯ ಅದ್ಭುತವಾಗಿತ್ತು. ಆದರೆ ಈ ಬಾರಿ ಅವರ ಪ್ರತಿಭೆಯನ್ನು ತೋರಿಸಲು ಹೆಚ್ಚಿನ ಅವಕಾಶವಿಲ್ಲ. ಸಿನಿಮಾದಲ್ಲಿ ಅವರ ನಟನೆಗಿಂತ ಅವರ ಕೂದಲೇ ಹೆಚ್ಚು ಕಾಣಿಸುತ್ತಿದೆ. ಮೊದಲ ಭಾಗದಲ್ಲಿ ಆ ಕೂದಲಿಗೆ ಒಂದು ವ್ಯಕ್ತಿತ್ವ ಇತ್ತು, ಆದರೆ ಇಲ್ಲಿ ಅದು ಕೇವಲ ದೃಶ್ಯಗಳನ್ನು ಮರೆಮಾಚುವಂತೆ ಕಾಣುತ್ತಿದೆ” ಎಂದು ಹಾಸ್ಯದ ಧಾಟಿಯಲ್ಲಿ ಟೀಕಿಸಿದ್ದಾರೆ.
Just watched Dhurandhar 2 and wow! what a masterclass in how to turn something promising into an endurance test.
— Ramya/Divya Spandana (@divyaspandana) March 20, 2026
It’s like reading a textbook of the most boring subject with never-ending chapters and at some point, your brain just gives up and starts laughing out of sheer despair…
ಚಿತ್ರದಲ್ಲಿನ ಹಿಂಸಾಚಾರದ ಬಗ್ಗೆ ರಮ್ಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇದು ಸಿನಿಮಾ ಅಲ್ಲ, ಬದಲಿಗೆ ಕೈಗೆ ಸಿಕ್ಕ ಪ್ರತಿಯೊಂದು ವಸ್ತುವನ್ನು (ಸಿರಿಂಜ್, ಸ್ಪ್ಯಾನರ್, ಚಾಕು, ಚೈನ್) ಹೇಗೆ ಮಾರಕಾಸ್ತ್ರವಾಗಿ ಬಳಸಿ ಹಿಂಸೆ ಮಾಡಬಹುದು ಎನ್ನುವುದಕ್ಕೆ ಒಂದು ಕೈಪಿಡಿಯಂತಿದೆ” ಎಂದಿದ್ದಾರೆ. ಅಲ್ಲದೆ, ನಟರ ಕಾಲುಗಳು ತುಂಡಾಗಿದ್ದರೂ ಅಥವಾ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದರೂ ಅವರು ಸುದೀರ್ಘವಾದ ಸಂಭಾಷಣೆಗಳನ್ನು (TED Talk ನೀಡುವಂತೆ) ಹೊಡೆಯುವುದು ವೈದ್ಯಕೀಯ ವಿಜ್ಞಾನಕ್ಕೇ ಸವಾಲು ಹಾಕುವಂತಿದೆ. ಇಂತಹ ದೃಶ್ಯಗಳಿಗೆ ‘ನೋಬೆಲ್ ಪ್ರಶಸ್ತಿ’ ನೀಡಬೇಕು ಎಂದು ಅವರು ವ್ಯಂಗ್ಯವಾಡಿದ್ದಾರೆ.
ಪ್ರೊಪಗಾಂಡಾ ಮತ್ತು ಜಿಂಗೋಯಿಸಂ ಆರೋಪ
ಕೇವಲ ತಾಂತ್ರಿಕ ಅಂಶಗಳಷ್ಟೇ ಅಲ್ಲದೆ, ಚಿತ್ರದ ವಸ್ತು ವಿಷಯದ ಬಗ್ಗೆಯೂ ರಮ್ಯಾ ಧ್ವನಿ ಎತ್ತಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರು ಹಳೆಯ ಕಾಲದ ‘ಜಿಂಗೋಯಿಸಂ’ (ಅತಿಯಾದ ದೇಶಭಕ್ತಿ) ಮತ್ತು ‘ಪ್ರೊಪಗಾಂಡಾ’ (ಪ್ರಚಾರದ ಹೂರಣ) ದಿಂದ ಹೊರಬರಬೇಕು ಎಂದು ಸಲಹೆ ನೀಡಿದ್ದಾರೆ. ಸಿನಿಮಾವು ಕೇವಲ ಒಂದು ನಿರ್ದಿಷ್ಟ ಅಜೆಂಡಾವನ್ನು ಪ್ರಚಾರ ಮಾಡುವಂತಿದೆ ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ | ಜಮೀರ್ ಅಹಮ್ಮದ್ ರಾಜೀನಾಮೆ ಅಸ್ತ್ರ: ದಾವಣಗೆರೆ ಟಿಕೆಟ್ ಫೈಟ್ ಈಗ ಹೈಕಮಾಂಡ್ ಅಂಗಳಕ್ಕೆ!
ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನವೇ 100 ಕೋಟಿಗೂ ಅಧಿಕ ಗಳಿಕೆ ಕಂಡಿರುವ ಈ ಚಿತ್ರಕ್ಕೆ ಒಂದು ಕಡೆ ಅಲ್ಲು ಅರ್ಜುನ್, ಮಹೇಶ್ ಬಾಬು ಅಂತಹ ನಟರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ರಮ್ಯಾ ಅವರ ಈ ಹೇಳಿಕೆ ಸಿನಿಮಾ ಪ್ರಿಯರನ್ನು ಎರಡು ಗುಂಪುಗಳನ್ನಾಗಿ ಮಾಡಿದೆ. “ಥಿಯೇಟರ್ಗೆ ಹೋಗಿ ಹಣ ಮತ್ತು ಸಮಯ ವ್ಯರ್ಥ ಮಾಡಬೇಡಿ, ಬದಲಿಗೆ ಒಟಿಟಿಯಲ್ಲಿ ಬರುವವರೆಗೆ ಕಾಯಿರಿ” ಎಂದು ರಮ್ಯಾ ಜನರಿಗೆ ಕಿವಿಮಾತು ಹೇಳಿದ್ದಾರೆ.










