ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ‘ಜೋಗಿ’ಯಂತಹ ಕಲಾಕೃತಿಯ ಮೂಲಕ ತಾಯಿ ಸೆಂಟಿಮೆಂಟ್ ಅನ್ನು ಉತ್ತುಂಗಕ್ಕೆ ಏರಿಸಿದ್ದ ನಿರ್ದೇಶಕ ಪ್ರೇಮ್, ಈಗ ತಮ್ಮದೇ ಸೃಜನಶೀಲತೆಯ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆಯೇ? ಎಂಬ ಪ್ರಶ್ನೆ ಗಾಂಧಿನಗರದ ಗಲ್ಲಿಗಳಿಂದ ಹಿಡಿದು ಸೋಶಿಯಲ್ ಮೀಡಿಯಾದವರೆಗೂ ಕೇಳಿಬರುತ್ತಿದೆ. ಧ್ರುವ ಸರ್ಜಾ ಅಭಿನಯದ ‘ಕೆಡಿ-ದಿ ಡೆವಿಲ್’ ಚಿತ್ರದ “ಸರ್ಸೆ ನಿನ್ನ ಸೆರಗ ಸರ್ಸೆ” ಹಾಡು ಬಿಡುಗಡೆಯಾದ ಬೆನ್ನಲ್ಲೇ ಕನ್ನಡಿಗರ ಆಕ್ರೋಶದ ಕಟ್ಟೆ ಒಡೆದಿದೆ.
ಭಾವನೆಗಳ ಬರೆಯೋ ಲೇಖನಿಯಿಂದ ಬಂತೇ ‘ಡಬಲ್ ಮೀನಿಂಗ್’ ಹೊಲಸು?
“ಬೇಡುವೆನು ವರವನ್ನು ಕೊಡೆ ತಾಯೆ ಜನ್ಮವನು…” ಎಂದು ಬರೆದಾಗ ಪ್ರೇಮ್ ಅವರ ಲೇಖನಿಗೆ ಕನ್ನಡಿಗರು ಅಕ್ಷರಶಃ ನಮಿಸಿದ್ದರು. ಅಮ್ಮನ ಮಮತೆಯನ್ನು ಪದಗಳಲ್ಲಿ ಹಿಡಿದಿಟ್ಟಿದ್ದ ಪ್ರೇಮ್ ಅವರನ್ನು ‘ಶೋ ಮ್ಯಾನ್’ ಎಂದು ಕೊಂಡಾಡಲಾಗಿತ್ತು. ಆದರೆ, ಇಂದು ಅದೇ ಲೇಖನಿಯಿಂದ ಬಂದಿರುವ “ಸರ್ಸೆ ನಿನ್ನ ಸೆರಗ ಸರ್ಸೆ” ಹಾಡಿನ ಸಾಹಿತ್ಯವನ್ನು ಕಂಡರೆ, “ಪ್ರೇಮ್ ಅವರ ಸೃಜನಶೀಲತೆಯ ಬತ್ತಳಿಕೆಯಲ್ಲಿ ಸರಕು ಖಾಲಿಯಾಯಿತೇ?” ಎಂಬ ಅನುಮಾನ ಕಾಡುತ್ತಿದೆ.
ಬಾಲಿವುಡ್‌ನ ಐಟಂ ಡಾನ್ಸರ್ ನೋರಾ ಫತೇಹಿ ಅವರ ನೃತ್ಯವನ್ನೇ ನಂಬಿ, ಕೇವಲ ವ್ಯೂಸ್ (Views) ಬೆನ್ನತ್ತಿದ ಪ್ರೇಮ್, ಸಾಹಿತ್ಯದ ಗುಣಮಟ್ಟವನ್ನು ಅಧೋಗತಿಗೆ ಇಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಡಬಲ್ ಮೀನಿಂಗ್ ಪದಗಳು ಮತ್ತು ಅಶ್ಲೀಲತೆಯ ಪರಮಾವಧಿಯಾಗಿರುವ ಈ ಹಾಡು ಕೌಟುಂಬಿಕವಾಗಿ ಕುಳಿತು ನೋಡಲು ಅಸಾಧ್ಯವಾಗಿದೆ.
ಪೋರ್ನ್ ಸಿನಿಮಾಗಳನ್ನು ಕದ್ದು ನೋಡುತ್ತಿದ್ದ ಕಾಲಕ್ಕೆ ಇಂದಿನ ಸಿನಿಮಾಗಳು ಬಹಿರಂಗವಾಗಿ ಪೈಪೋಟಿ ನೀಡುತ್ತಿರುವಂತೆ ಭಾಸವಾಗುತ್ತಿದೆ ಎಂಬುದು ಸಾರ್ವಜನಿಕರ ಆತಂಕ.
ನಿರ್ದೇಶಕರು ಕೇವಲ ಯುವಜನತೆಯನ್ನು ಸೆಳೆಯಲು ಅಥವಾ ‘ವೈರಲ್’ ಆಗಲು ಅಶ್ಲೀಲತೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು ಆರೋಗ್ಯಕರ ಚಿತ್ರರಂಗದ ಲಕ್ಷಣವಲ್ಲ ಎಂಬುದು ವಿಮರ್ಶಕರ ಅಭಿಪ್ರಾಯ.
ಸ್ಯಾಂಡಲ್‌ವುಡ್ ಘನತೆಗೆ ಕುಂದು?
ಧ್ರುವ ಸರ್ಜಾ ಅವರಂತಹ ಮಾಸ್ ಹೀರೊ ಮತ್ತು ಹೊಂಬಾಳೆ ಸಂಸ್ಥೆಯಂತಹ (ಸಹಭಾಗಿತ್ವದ) ದೊಡ್ಡ ಚಿತ್ರತಂಡದಿಂದ ಇಂತಹ ಕನಿಷ್ಠ ಮಟ್ಟದ ಸಾಹಿತ್ಯವನ್ನು ಜನ ನಿರೀಕ್ಷಿಸಿರಲಿಲ್ಲ. ಮಿಲಿಯನ್ ಗಟ್ಟಲೆ ವ್ಯೂಸ್ ಬಂದಿರಬಹುದು, ಆದರೆ ಅದು ಚಿತ್ರದ ಯಶಸ್ಸಲ್ಲ, ಬದಲಿಗೆ ಸಾಂಸ್ಕೃತಿಕ ಅವನತಿಯ ಸಂಕೇತ ಎಂದು ಅನೇಕರು ಕಿಡಿಕಾರುತ್ತಿದ್ದಾರೆ.
ಪ್ರೇಮ್ ಅವರೇ, ಕನ್ನಡಿಗರು ನಿಮ್ಮನ್ನು ಪ್ರೀತಿಸಿದ್ದು ನೀವು ನೀಡಿದ ಭಾವನಾತ್ಮಕ ಸಾಲುಗಳಿಗಾಗಿ. ಇಂದು ನೀವು ನೀಡುತ್ತಿರುವ ಈ ‘ಡಬಲ್ ಮೀನಿಂಗ್’ ಸೌಂಡ್ ಟ್ರ್ಯಾಕ್‌ಗಳು ನಿಮ್ಮನ್ನು ‘ಜೋಗಿ’ ಸ್ಥಾನದಿಂದ ಕೆಳಕ್ಕೆ ಇಳಿಸುತ್ತಿವೆ ಎಂಬುದು ನೆನಪಿರಲಿ.










