ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ (Middle East) ಯುದ್ಧದ ಕಾರ್ಮೋಡಗಳು ಕವಿದಿದ್ದು, ಜಾಗತಿಕ ತೈಲ ಪೂರೈಕೆಯ ಜೀವನಾಡಿ ‘ಹಾರ್ಮುಜ್ ಜಲಸಂಧಿ‘ (Strait of Hormuz) ಮೇಲೆ ಬಿಗಿ ಹಿಡಿತ ಮುಂದುವರಿದಿದೆ. ಈ ಬಿಕ್ಕಟ್ಟಿನಿಂದಾಗಿ ಭಾರತದ ಇಂಧನ ಮಾರುಕಟ್ಟೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕದ ನಡುವೆಯೇ ಕೇಂದ್ರ ಸರ್ಕಾರ ಅತ್ಯಂತ ಚಾಣಾಕ್ಷ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಪರ್ಯಾಯ ಮಾರ್ಗಗಳ ಮೂಲಕ ರಷ್ಯಾದಿಂದ (Russia) ಕಚ್ಚಾ ತೈಲ ಖರೀದಿಯನ್ನು ಭಾರತ ದ್ವಿಗುಣಗೊಳಿಸಿದೆ.
6 ಕೋಟಿ ಬ್ಯಾರಲ್ ತೈಲ ಬುಕ್:
ವರದಿಗಳ ಪ್ರಕಾರ, ಮುಂದಿನ ತಿಂಗಳ ಪೂರೈಕೆಗಾಗಿ ಭಾರತವು ರಷ್ಯಾದಿಂದ ಸುಮಾರು 6 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ಖರೀದಿಸಿದೆ. ಇದು ಕಳೆದ ಫೆಬ್ರವರಿ ತಿಂಗಯಲ್ಲಿ ಭಾರತ ಖರೀದಿಸಿದ ತೈಲಕ್ಕಿಂತ ಬರೋಬ್ಬರಿ ಎರಡು ಪಟ್ಟು ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದಾಗಿ ಹಡಗುಗಳ ಸಂಚಾರ ಕಠಿಣವಾಗಿರುವ ಹಿನ್ನೆಲೆಯಲ್ಲಿ, ಭಾರತವು ರಷ್ಯಾ ಮೂಲದ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ (Brent Crude) ಬೆಲೆ ಏರಿಕೆಯಾಗುತ್ತಿದ್ದರೂ, ರಷ್ಯಾ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ನೀಡುತ್ತಿರುವುದು ವರದಿಯಾಗಿದೆ. ಪ್ರತಿ ಬ್ಯಾರಲ್‌ಗೆ ಸುಮಾರು 5 ರಿಂದ 15 ಡಾಲರ್‌ವರೆಗಿನ ಪ್ರೀಮಿಯಂ ದರದಲ್ಲಿ ಈ ವ್ಯವಹಾರ ನಡೆದಿದೆ. ಯುರೋಪ್ ರಾಷ್ಟ್ರಗಳ ನಿರ್ಬಂಧದ ನಡುವೆಯೂ ರಷ್ಯಾ ಭಾರತಕ್ಕೆ ಅಗ್ಗದ ದರದಲ್ಲಿ ತೈಲ ಪೂರೈಸುತ್ತಿರುವುದು ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ.

ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ಆಶಾಕಿರಣ:
ಇತ್ತೀಚೆಗಷ್ಟೇ ಬೆಂಗಳೂರಿನ ಹೋಟೆಲ್ ಉದ್ಯಮವು ಎಲ್‌ಪಿಜಿ ಮತ್ತು ಇಂಧನ ಕೊರತೆಯಿಂದಾಗಿ 150 ಕೋಟಿ ರೂಪಾಯಿ ನಷ್ಟ ಅನುಭವಿಸಿರುವ ವರದಿಗಳು ಹೊರಬಂದಿದ್ದವು. ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಹೀಗೆಯೇ ಮುಂದುವರಿದರೆ ದೇಶಾದ್ಯಂತ ಅಡುಗೆ ಅನಿಲ ಮತ್ತು ಇಂಧನದ ಬೆಲೆ ಗಗನಕ್ಕೇರುವ ಭೀತಿ ಇತ್ತು. ಆದರೆ, ರಷ್ಯಾದಿಂದ ಈ ಮಟ್ಟದ ಬೃಹತ್ ಪ್ರಮಾಣದ ತೈಲ ಆಮದು ಮಾಡಿಕೊಳ್ಳುತ್ತಿರುವುದು ಈ ಆತಂಕವನ್ನು ಕೊಂಚ ಮಟ್ಟಿಗೆ ತಗ್ಗಿಸಿದೆ.
ಸಂಸತ್‌ನಲ್ಲಿ ಪ್ರಧಾನಿ ಮೋದಿಯವರ ಭರವಸೆ:
ಈಗಾಗಲೇ ಸಂಸತ್‌ನಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, “ಭಾರತವು 41 ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಇಂಧನ ಭದ್ರತೆಗಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ” ಎಂದು ಹೇಳಿದ್ದರು. ಅದರ ಮುಂದುವರಿದ ಭಾಗವಾಗಿ ಈಗ ರಷ್ಯಾದಿಂದ ಈ ಆಮದು ಪ್ರಕ್ರಿಯೆ ನಡೆಯುತ್ತಿದೆ. ರಷ್ಯಾದ ತೈಲ ಸಾಗಣೆಗೆ ಆರ್ಕ್ಟಿಕ್ ಮಾರ್ಗ ಅಥವಾ ಪರ್ಯಾಯ ಸಮುದ್ರ ಮಾರ್ಗಗಳನ್ನು ಬಳಸುವ ಮೂಲಕ ಹಾರ್ಮುಜ್ ಜಲಸಂಧಿಯ ಅಪಾಯವನ್ನು ಭಾರತ ತಪ್ಪಿಸುತ್ತಿದೆ.
ಇದನ್ನೂ ಓದಿ | ಮಾರ್ಚ್ 28ಕ್ಕೆ ಚಿನ್ನಸ್ವಾಮಿಯಲ್ಲಿ ಹೈವೋಲ್ಟೇಜ್ ಪಂದ್ಯ; ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್!
ಜಾಗತಿಕ ಯುದ್ಧದ ಸನ್ನಿವೇಶದಲ್ಲಿಯೂ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಇಂಧನ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ರಾಜತಾಂತ್ರಿಕ ವಿಜಯವಾಗಿ ಕಂಡುಬರುತ್ತಿದೆ. ಇದರಿಂದಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ಮತ್ತು ಹೋಟೆಲ್‌ಗಳಲ್ಲಿ ಇಂಧನದ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಲಿದೆಯಾ ಎಂಬುವುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.










