ನಿಜವಾಗ್ಲೂ “ನ್ಯೂಸ್ ಫಸ್ಟ್” ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆಯಾ..?! ಚಾನೆಲ್ ಸಿಬ್ಬಂದಿಯಲ್ಲೇಕೆ ಗೊಂದಲ-ಆತಂಕ..!?

ಕನ್ನಡದ ಅತ್ಯಂತ ಜನಪ್ರಿಯ ಸುದ್ದಿ ಚಾನೆಲ್ ಗಳಲ್ಲಿ ಒಂದಾದ ನ್ಯೂಸ್ ಫಸ್ಟ್ (news first)ಕಾರ್ಯಾರಂಭ ಮಾಡಿದ ಕಡಿಮೆ ಅವಧಿಯಲ್ಲೇ ಅಪಾರ ಜನಮನ್ನಣೆ ಪಡೆಯಿತೆನ್ನುವುದು ಎಷ್ಟು ಸತ್ಯವೋ, ನಂಬರ್ 1,2,3 ಚಾನೆಲ್ ಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು,ಇವತ್ತಿಗೂ ಅದೇ ವೃತ್ತಿಪರ ಪರಂಪರೆಯನ್ನುಳಿಸಿಕೊಂಡು ಹೋಗುತ್ತಿದೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.ಸುದ್ದಿಯ ಗುಣಮಟ್ಟದ ವಿಚಾರದಲ್ಲಿ ಯಾವುದೆ ರಾಜಿಯಿಲ್ಲದೆ ವೃತ್ತಿನಿಷ್ಟೆ ಉಳಿಸಿಕೊಂಡು ಮುನ್ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.
ಹಾಗಾಗಿ ಇಂಥಾ ಚಾನೆಲ್ ಗಳ ಬಗ್ಗೆ ಸದಾ ನಿರೀಕ್ಷೆಗಳಿರುತ್ತವೆ.ಪರಿಸ್ತಿತಿ ಹೀಗಿರುವಲ್ಲೇ ಕೇಳಿಬರುವ ಕೆಲವೊಂದು ಸಂಗತಿಗಳು ಆತಂಕ ಮೂಡಿಸಿಬಿಡ್ತವೆ. ಹೌದಾ..ಛೇ..ಛೇ ಹಾಗಾಗಬಾರದಿತ್ತಲ್ಲ ಎಂಬ ಭಾವನೆಯನ್ನೂ ಮೂಡಿಸುತ್ತವೆ. ನ್ಯೂಸ್ ಫಸ್ಟ್ ಚಾನೆಲ್ ವಿಚಾರದಲ್ಲಿಯೂ ಅಂತದ್ದೇ ಒಂದಷ್ಟು ಸುದ್ದಿಗಳು ಕೇಳಿಬಂದಿವೆ.ಆದರೆ ಸುದ್ದಿಮನೆಯಲ್ಲಿ ಕೆಲಸ ಮಾಡುವ ನೂರಾರು ಮಾದ್ಯಮಮಿತ್ರರ ಬದುಕು-ಭವಿಷ್ಯದ ದೃಷ್ಟಿಯಿಂದ ವಾಸ್ತವದಲ್ಲಿ ಅವೆಲ್ಲಾ ಸುಳ್ಳಾಗಿರಲಿ ಎನ್ನುವುದಷ್ಟೇ ನಮ್ಮ ಆಶಯ. ( ನಮ್ಮ ದೃಷ್ಟಿಯಲ್ಲಿ ಕನ್ನಡದ ಯಾವ ನ್ಯೂಸ್ ಚಾನೆಲ್ ಗಳು ಮುಚ್ಚಬಾರದು.. ಉದ್ಯೋಗಿಗಳು ಬೀದಿಗೆ ಬೀಳಬಾರದು.ಏಕಂದ್ರೆ ಯಾವುದೇ ಚಾನೆಲ್ ಗಳು-ಸುದ್ದಿ ಸಂಸ್ಥೆಗಳು ಬಾಗಿಲು ಹಾಕಿಕೊಂಡ್ರೂ ಬೀದಿಗೆ ಬೀಳುವುದು ನಮ್ಮ ವೃತ್ತಿಬಾಂಧವರಲ್ಲವೇ..? ಕೆಲಸ ಕಳೆದುಕೊಂಡು ಅವರು ಅನುಭವಿಸುವ ಸಂಕಷ್ಟಗಳು ಹೇಗಿರುತ್ತವೆ ಎನ್ನುವುದನ್ನು ನೋಡಿದ್ದೇವೆ..ಯಾರ ಬದುಕುಗಳು ಹಾಗಾಗಬಾರದು ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಮಾನವೀಯ ಕಳಕಳಿ ಅಷ್ಟೇ..
ನಮ್ಮ ಸುದ್ದಿ ಮಾದ್ಯಮಗಳು ಅಲ್ಲಿ ಕೆಲಸ ಮಾಡುವ ಮಾದ್ಯಮ ಮಿತ್ರರ ಕಾಳಜಿ-ಕಳಕಳಿಯಲ್ಲಷ್ಟೇ ಕೆಲಸ ಮಾಡುವ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ನ್ಯೂಸ್ ಫಸ್ಟ್ ಚಾನೆಲ್ ನಲ್ಲಿ ನಡೆಯುತ್ತಿದೆ ಎನ್ನಲಾದ ಎನ್ನುವ ಆತಂಕಕಾರಿ ವಿಚಾರಗಳು ಕೇಳಿಬಂದಿವೆ.ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕೆಲವರು ಅಲ್ಲಿ ಕೆಲಸ ಮಾಡುತ್ತಿರುವ ನೂರಾರು ಸಿಬ್ಬಂದಿ ಕಾಳಜಿಯ ಏಕೈಕ ಕಾರಣಕ್ಕೆ ಮಾಹಿತಿ ನೀಡಿದ್ದಾರೆ.( ಹಾಗೆಂದು ನಮಗೂ ಗೌರವವಿರುವ ನ್ಯೂಸ್ ಫಸ್ಟ್ ನ ಸಂಸ್ಥೆಗೆ ಮುಜುಗರ ತರುವುದಾಗಲಿ,ಅದರ ಘನತೆಗೆ ಧಕ್ಕೆ ತರುವುದಾಗಲಿ ನಮ್ಮ ಉದ್ದೇಶ ಅಲ್ಲವೇ ಅಲ್ಲ.)ಆದರೆ ಕೇಳಿಬಂದ ಮಾಹಿತಿಗಳನ್ನು ಅವಲೋಕಿಸಿ ನೋಡಿದ್ರೆ ನ್ಯೂಸ್ ಫಸ್ಟ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯಾ ಎನ್ನುವ ಶಂಕೆ ಕಾಡುತ್ತದೆ.

ಕೆಲ ವರ್ಷಗಳ ಹಿಂದೆ ಲೋಕಾರ್ಪಣೆ ಗೊಂಡ ನ್ಯೂಸ್ ಫಸ್ಟ್ ,ಕಡಿಮೆ ಅವಧಿಯಲ್ಲಿ ಜನಪ್ರಿಯಗೊಂಡಿತ್ತೆನ್ನುವುದರಲ್ಲಿ ಸಂಶಯವಿಲ್ಲ.ಈ ಯಶಸ್ಸಿಗೆ ಕಾರಣ ವೃತ್ತಿಪರ ಮಾದ್ಯಮಮಿತ್ರರ ತಂಡ. ಮಾರುತಿ-ರವಿಕುಮಾರ್( maruti and ravikumar) ಅವರ ಮಾರ್ಗದರ್ಶನವೇ ಈ ಯಶಸ್ಸಿಗೆ ಕಾರಣವಾಗಿರಬಹುದೇನೋ.. ಬಹುಷಃ ವೃತ್ತಿನಿಷ್ಟ ಮಾದ್ಯಮಮಿತ್ರರಿಲ್ಲದಿದ್ದರೆ ಅವರಿಬ್ಬರಿಂದಲೇ ಏನೂ ಸಾಧ್ಯವಾಗುತ್ತಿರಲಿಲ್ಲವೇನೋ..? ಏಕೆಂದರೆ ಚಾನೆಲ್ ಗೆ ಅವರಿಬ್ಬರು ಆಧಾರ ಸ್ಥಂಬವಾಗಿದ್ರೂ ಒಂದಿಡೀ ಚಾನೆಲ್ ಯಶಸ್ಸು ಪಡೆಯೊಕ್ಕೆ ಅವರ ಜತೆ ಸೇರಿಕೊಂಡವರ ಪಾತ್ರ ಹಿರಿದು ಕೂಡ. ವೃತ್ತಿಪರರನ್ನೇ ಒಳಗೊಂಡ ತಂಡ ದುಡಿದ ಪರಿಣಾಮ, ಕಡಿಮೆ ಅವಧಿಯಲ್ಲಿ ನ್ಯೂಸ್ ಫಸ್ಟ್ ಕರ್ನಾಟಕದ ಮನೆ ಮಾತಾಯಿತು.ನ್ಯೂಸ್ ವಿಭಾಗ, ಕ್ಯಾಮೆರಾಮನ್ ಸೆಕ್ಷನ್, ಪ್ರೊಡಕ್ಷನ್ ಸೆಕ್ಷನ್,ಟೆಕ್ನಿಕಲ್ ಸೆಕ್ಷನ್, ಡ್ರೈವರ್ ಯೂನಿಟ್ ಗಳಲ್ಲಿ ಪ್ರಾಮಾಣಿಕವಾಗಿ ದುಡಿದವರ ಶ್ರಮದಿಂದ ಚಾನೆಲ್ ಜನಪ್ರಿಯತೆಯೊಂದಿಗೆ ಆರ್ಥಿಕವಾಗಿಯೂ ಬಲಿಷ್ಠವಾಯಿತು.ಈ ಹೊತ್ತಿನವರೆಗೂ ಆರ್ಥಿಕ ಸಂಪನ್ಮುಲದ ಕೊರತೆಯ ಯಾವುದೇ ಸುದ್ದಿಗಳು ಹರಿದಾಡಿರಲಿಲ್ಲ.ಚಾನೆಲ್ ನಲ್ಲಿ ದುಡಿಯುತ್ತಿರುವ ಎಲ್ಲರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿರುವುದರಿಂದಲೇ ಯಾವುದೇ ದೂರು-ಆಕ್ಷೇಪ ಕೇಳಿಬಂದಿಲ್ಲ.

ನ್ಯೂಸ್ ಫಸ್ಟ್ ಚಾನೆಲ್ ನಲ್ಲಿ ದುಡಿಯುತ್ತಿರುವವರಲ್ಲಿ ಶೇಕಡಾ 99 ರಷ್ಟು ಮಾದ್ಯಮ ಮಿತ್ರರು ಮ್ಯಾನೇಜ್ಮೆಂಟ್ ಬಗ್ಗೆ ಯಾವುದೇ ಆಕ್ಷೇಪಾರ್ಹ ಮಾತನ್ನಾಡಿಲ್ಲ.ಎಂತದ್ದೇ ವ್ಯತ್ಯಾಸಗಳಿ ದ್ದರೂ ಕೊರತೆ ಮಾತನ್ನಾಡಿರಲಿಲ್ಲ.ಆದರೆ ಇದೀಗ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಿ ಹೆಸರು ಹೇಳಲಿಚ್ಛಿಸದ ಕೆಲವರು ಅವರನ್ನು ಸಹಜವಾಗಿಯೇ ಕಾಡುತ್ತಿರುವ ಉದ್ಯೋಗಭದ್ರತೆಯ ಆತಂಕದ ಬಗ್ಗೆ ಮಾತನ್ನಾಡಿದ್ದಾರೆ.ಸರ್ ಇಲ್ಲಿಯವರೆಗೆ ಹೇಗೋ ನಡೆದೋಯ್ತು..ಮುಂದ್ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.ಇದಕ್ಕೆ ಮ್ಯಾನೇಜ್ಮೆಂಟ್ ಮಾತ್ರ ಸಮಜಾಯಿಷಿ-ಪರಿಹಾರ ನೀಡಲು ಸಾಧ್ಯ ಎನ್ನುವುದು ಕೂಡ ವಾಸ್ತವ.ಈವರೆಗೂ ಚಾನೆಲ್ ನ ಬಗ್ಗೆ ನೆಗೆಟಿವ್ ಆಗಿ ಅಲ್ಲೊಂದು ಇಲ್ಲೊಂದು ಎನ್ನುವಂತೆ ಕೆಲವು ಮಾತು ಕೇಳಿಬರುತ್ತಿದ್ದರೂ ಅದಕ್ಕೆ ತಲೆಕೆಡಿಸಿಕೊಂಡಿರದಿದ್ದ ಸಿಬ್ಬಂದಿ, ಇತ್ತೀಚೆಗೆ ನಡೆದ ಬೆಳವಣಿಗೆಗಳಿಂದ ದಿಗಿಲುಗೊಂಡಿದ್ದಾರಂತೆ.ಅದು ಸಹಜ ಕೂಡ ಅಲ್ವೇ..!
ಹಾಗಾದ್ರೆ ಇತ್ತೀಚೆಗೆ ನಡೆದಿದ್ದು ಏನು..? ಕೆಲವು ವಿಶ್ವಸನೀಯ ಮೂಲಗಳ ಪ್ರಕಾರ ಇತ್ತೀಚೆಗೆ ಚಾನೆಲ್ ನ ಮುಖ್ಯಸ್ಥರು ಎಲ್ಲಾ ಸಿಬ್ಬಂದಿಯ ಓಪನ್ ಮೀಟಿಂಗ್ ಕರೆದಿದ್ದರಂತೆ. ಮೀಟಿಂಗ್ ಕರೆದಾಗಲೇ ಸಿಬ್ಬಂದಿಗೆ ಏನೋ ಯಡವಟ್ಟಾಗಿದೆ ಎನ್ನುವ ಅಂದಾಜು ಸಿಕ್ಕಾಗಿತ್ತಂತೆ.ಹಾಗಾಗಿ ಎಲ್ಲರೂ ಆತಂಕದಿಂದಲೇ ಭಾಗವಹಿಸಿದ್ದಾರೆ. ಮುಖ್ಯಸ್ಥರೆನಿಸಿಕೊಂಡವರು ಚಾನೆಲ್ ಸಂಕಷ್ಟದಲ್ಲಿದೆ.. ಇರುವ ಉದ್ಯೋಗಿಗಳು ಹೆಚ್ಚಾಗಿದ್ದಾರೆ.ಇಷ್ಟ್ ದಿನ ಕಷ್ಟವಿದ್ದರೂ ಮೆಂಟೇನ್ ಮಾಡಿದ್ವಿ..ನಿಮ್ಮನ್ನೆಲ್ಲಾ ಚೆನ್ನಾಗಿಯೇ ನೋಡಿಕೊಂಡಿದ್ದೇವೆ.. ಆದ್ರೆ ಭವಿಷ್ಯದಲ್ಲಿ ಹಾಗೆ ಮಾಡಲು ಸಾಧ್ಯವಾಗುವುದಿಲ್ಲವೇನೋ ಎಂದು ಅಳಲು ತೋಡಿಕೊಂಡರಂತೆ.
ಮುಂದುವರೆದು, ಚಾನೆಲ್ ನ ಆರ್ಥಿಕ ಸ್ತಿತಿಗತಿಯನ್ನಾಧರಿಸಿ ಏನೆಲ್ಲಾ ಮಾಡಬಹುದು ಎನ್ನುವುದನ್ನು ನಮ್ಮಲ್ಲೇ ಇರುವ ತಂಡವೊಂದು ಅಧ್ಯಯನ ಮಾಡಿ ಮಾಹಿತಿ ಕೊಟ್ಟಿದೆ.ಅದರ ಪ್ರಕಾರ ಅರ್ಧಕ್ಕರ್ದದಷ್ಟು ಸಿಬ್ಬಂದಿಯ ಅಗತ್ಯ ಮುಂದಿನ ದಿನಗಳಲ್ಲಿ ಇರುವುದಿಲ್ಲ.ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಿದರೆ ಚಾನೆಲ್ ನ್ನು ಉಳಿಸಿಕೊಂಡು ಹೋಗಬಹುದು.ಇಲ್ಲವಾದ್ರೆ ಕಷ್ಟವಾಗಬಹುದು ಎಂಬ ಮಾಹಿತಿ ನೀಡಿದೆ.ಚಾನೆಲ್ ಉಳಿಯಬೇಕು ಎಂದ್ರೆ ಈ ಅಂಶಗಳನ್ನು ಪರಿಗಣಿಸಲೇಬೇಕಿದೆ ಎಂಬ ಧಾಟಿಯಲ್ಲಿ ಮಾತನಾಡಿದ್ಯಂತೆ.ಈ ಮಾತುಗಳನ್ನು ಕೇಳುತ್ತಿ ದ್ದಂತೆ ಅಲ್ಲಿದ್ದವರಿಗೆಲ್ಲಾ ಆಕಾಶವೇ ಕಳಚಿಬಿದ್ದ ಭಾವನೆ. ಅನಿಶ್ಚಿತತೆಯ ವಾತಾವರಣವೊಂದು ಸೃಷ್ಟಿಯಾದಂತೆ ಭಾಸವಾಗಿದೆ. ಮುಖ್ಯಸ್ಥರೆನಿಸಿಕೊಂಡವರ ಮಾತು ಕೇಳಿ ಒಂದ್ ಕ್ಷಣ ಸಿಬ್ಬಂದಿ ತಬ್ಬಿಬ್ಬಾಗಿದ್ದಾರಂತೆ. ಯಾರನ್ನೂ ಬಲ ವಂತವಾಗಿ ಕೆಲಸ ಬಿಡಿ ಎಂದು ಹೇಳುವುದಿಲ್ಲ.ಅದು ಮಾನವೀಯತೆಯೂ ಅಲ್ಲ.ಹಾಗಂತ ಇಷ್ಟೊಂದು ಸಿಬ್ಬಂದಿಯನ್ನುಳಿಸಿಕೊಂಡು ಹೋಗಲೂ ಸಾಧ್ಯವಿಲ್ಲ ಎಂದ್ಹೇಳಿ ಅಡ್ಡಗೋಡೆ ಮೇಲೆ ದೀಪ ಇಟ್ಟುಬಿಟ್ಟರಂತೆ.

ಯಾರನ್ನು ಕೆಲಸದಿಂದ ತೆಗಯೊಲ್ಲ ಎಂದಿದ್ದನ್ನು ಕೇಳಿ ಸಮಾಧಾನಗೊಂಡ್ರೂ, ಇಷ್ಟೊಂದು ಜನರನ್ನು ಉಳಿಸಿಕೊಳ್ಳಲಿಕ್ಕೂ ಆಗೊಲ್ಲ ಎಂದಿದ್ದು ಮತ್ತೆ ಗೊಂದಲಕ್ಕೆ ಕಾರಣವಾಯಿತಂತೆ. ಇಷ್ಟವಿದ್ದವರು ಕೆಲಸ ಮಾಡಬಹುದು..ಇಲ್ಲದವರು ಬೇರೆ ದಾರಿ ನೋಡಿಕೊಳ್ಳಬಹುದು ಎಂಬ ಸಂದೇಶ ರವಾನಿಸುವ ಲಹರಿಯಲ್ಲಿದ್ದಂತೆ ಇತ್ತಂತೆ.ಈ ನಡುವೆ ಕೆಲಸ ಮಾಡಲು ಇಷ್ಟವಿರುವವರು ಇನ್ಮುಂದೆ ಸಂಸ್ಥೆ ಅಳವಡಿಸಿಕೊಳ್ಳಲಿರುವ ಸ್ಟೈಲ್ ಶೀಟ್ ನಂತೆ ಕೆಲಸ ಮಾಡಬೇಕಾಗುತ್ತದೆ ಎಂದಿದ್ದಾರಂತೆ.ಇದರ ಸೂಕ್ಷ್ಮವನ್ನು ಅನೇಕರು ಅರ್ಥೈಸಿಕೊಂಡು ಸುಮ್ಮನಾಗಿದ್ದಾರಂತೆ.
ಇದು ಇತರೆ ಸಿಬ್ಬಂದಿಯ ವಿಚಾರವಾದ್ರೆ ಫೀಲ್ಡ್ ನಲ್ಲಿ ಕೆಲಸ ಮಾಡುವ ರಿಪೋರ್ಟರ್ಸ್ ಗಳಿಗೆ ಬೇರೆಯದೇ ಟಾಸ್ಕ್ ಕೊಡುವ ಬಗ್ಗೆ ಮ್ಯಾನೇಜ್ಮೆಂಟ್ ಮಾತಾಡಿದೆಯಂತೆ. ಇನ್ಮುಂದೆ ರಿಪೋರ್ಟರ್ಸ್ ಕೇವಲ ರಿಪೋರ್ಟರ್ಸ್ ಗಳಾಗಿ ಕೆಲಸ ಮಾಡುವಂತಿಲ್ಲ.ಸಂಸ್ಥೆಗೆ ಅತ್ಯಗತ್ಯವಾಗಿರುವ ಸಂಪನ್ಮೂಲ ಕ್ರೋಢೀಕರಣದ ಬಗ್ಗೆಯೂ ತಲೆಕೆಡಿಸಿ ಕೊಳ್ಳಬೇಕು. ದಯವಿಟ್ಟು ಸುದ್ದಿಯನ್ನು ಸುದ್ದಿಯಾಗಿ ನೋಡಬೇಡಿ.ಅದರಾಚೆಗೂ ಇರುವ ಸೂಕ್ಷ್ಮಗಳನ್ನು ಅರಿತು ಕೆಲಸ ಮಾಡಬೇಕು.ಅದರಿಂದ ಸಂಸ್ಥೆಗೂ ಲಾಭವಾಗಬೇಕು ಎನ್ನುವ ಲಹರಿಯಲ್ಲಿ ಮಾತನಾಡಿ ದ್ದಾರೆನ್ನುವುದು ಕೂಡ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.ಕೇವಲ ಸುದ್ದಿಯ ಹುಡುಕಾಟ ಬಿಟ್ಟರೆ ಬೇರೆ ಆಯಾಮಗಳಲ್ಲಿ ಕೆಲಸ ಮಾಡಲು ಗೊತ್ತಿಲ್ಲದ, ಪಾಪ..! ಒಂದಷ್ಟು ರಿಪೋರ್ಟರ್ಸ್ ಗೊಂದಲಕ್ಕೆ ಸಿಲುಕಿದ್ರೂ ತತ್ ಕ್ಷಣಕ್ಕೆ ರಿಯಾಕ್ಟ್ ಮಾಡಿಲ್ವಂತೆ.
ಸುದ್ದಿ ಜಗತ್ತೆನ್ನುವುದು ಅಪ್ಪಟ ಉದ್ಯಮವಾಗಿ ಪರಿಣಮಿಸಿರುವ ಪ್ರಸ್ತುತ ಸನ್ನಿವೇಶದಲ್ಲಿ ಸುದ್ದಿಗಳನ್ನು ಸುದ್ದಿಯಾಗಿ ನೋಡದೆ ಅದರಾಚೆ ಇರುವ ಸೂಕ್ಷ್ಮಗಳನ್ನು ಗಮನಿಸುವ,ಅದನ್ನೇ ಎನ್ ಕ್ಯಾಶ್ ಮಾಡಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಇದು ತಪ್ಪು ಕೂಡ ಅಲ್ಲ ಬಿಡಿ.ಏಕಂದ್ರೆ ಚಾನೆಲ್ ನಡೆಯೊಕ್ಕೆ ಬೇಕಿರುವುದು ಬಂಡವಾಳ.ಸುದ್ದಿಯಿಂದ ನಿಮಗೆ ಜನಪ್ರಿಯತೆ ದೊರೆಯುತ್ತದೆಯೋ ಹೊರತು,ಆರ್ಥಿಕ ಬಲವಲ್ಲ..ಇನ್ನು ಟಿಆರ್ ಪಿ ಆಧರಿಸಿ ಜಾಹಿರಾತು ಕೊಡುವ ವಾಣಿಜ್ಯ ಸಂಸ್ಥೆಗಳ ಮನಸ್ತಿತಿ ಕೂಡ ಬದಲಾಗಿದೆ.ಜಾಹಿರಾತು ವಿಚಾರಕ್ಕೆ ಬರುವುದಾದ್ರೆ ಮಾರುಕಟ್ಟೆಯಲ್ಲಿ ದೊರೆಯುವ ಜಾಹಿರಾತು ಸ್ವರೂಪದ ಲಾಭದಲ್ಲಿ ಶೇಕಡಾ 50-60ಷ್ಟರ ಸಿಂಹಪಾಲನ್ನು ಟಿವಿ-9,ಪಬ್ಲಿಕ್ ನಂಥ ಕೆಲ ಚಾನೆಲ್ ಗಳೇ ಪಡೆಯುತ್ತಿವೆ.ಉಳಿದ ಪಾಲಿಗೆ ಇತರೆ ಚಾನೆಲ್ ಗಳು ಹೊಡೆದಾಡಬೇಕಾದ ಸ್ತಿತಿಯಿದೆ. ಜಾಹಿರಾತು ಸ್ವರೂಪದ ಲಾಭ ಕಡಿಮೆಯಾಗಿರುವುದರಿಂದ ಅನಿವಾರ್ಯವಾಗಿ ಆದಾಯದ ಮೂಲಗಳಿಲ್ಲದಂತಾಗಿದೆ.
ಬಹುಷಃ ನ್ಯೂಸ್ ಫಸ್ಟ್ ಚಾನೆಲ್ ನ ಆಡಳಿತ ಕೂಡ,ಆರ್ಥಿಕವಾಗಿ ಎದುರಿಸುತ್ತಿರಬಹುದಾದ ಸಮಸ್ಯೆಯ ಚಿತ್ರಣವನ್ನು ತನ್ನ ಸಿಬ್ಬಂದಿ ಮುಂದೆ ತೆರೆದಿಟ್ಟರಬಹುದೇನೋ.? ಸಿಬ್ಬಂದಿ ಮುಂದೆ ತನ್ನ ಅಳಲನ್ನು ತೋಡಿಕೊಂಡಿರಬಹುದೇನೋ..? ಭವಿಷ್ಯದ ಆತಂಕವನ್ನು ಪ್ರಸ್ತಾಪಿಸಿರಬಹುದೇನೋ ಅಲ್ವಾ.?ವೃತ್ತಿಯನ್ನೇ ನಂಬಿಕೊಂಡು ಕೆಲಸ ಮಾಡುತ್ತಿರುವ ಮಾದ್ಯಮ ಮಿತ್ರರ ಬದುಕು-ಭವಿಷ್ಯದ ಬಗ್ಗೆ ಕೊಂಚವೂ ಆಲೋಚಿಸದೆ ತಮ್ಮ ಹಿತಾಸಕ್ತಿಗಾಗಿ ಇತ್ತೀಚಿನ ವರ್ಷಗಳಲ್ಲಿ ಅನೇಕ ಚಾನೆಲ್ ಗಳು ಬಾಗಿಲು ಹಾಕಿಕೊಳ್ಳುತ್ತಿವೆ.ಪರಿಸ್ತಿತಿ ಹೀಗಿರುವಾಗ ನ್ಯೂಸ್ ಫಸ್ಟ್ ಮ್ಯಾನೇಜ್ಮೆಂಟ್ ಅಂತದ್ದ್ಯಾವುದೇ ಆತಂಕ ಸೃಷ್ಟಿಸದೆ ಸೂಕ್ಷ್ಮವಾಗಿ ಕೆಲವು ವಿಚಾರಗಳನ್ನು ಹೇಳಿದ್ದರಲ್ಲಿ ಆಶ್ಚರ್ಯವು ಇಲ್ಲ ಎನಿಸ್ತದೆ.
ನಿಜಕ್ಕೂ ನ್ಯೂಸ್ ಪಸ್ಟ್ ಆರ್ಥಿಕವಾಗಿ ಬಸವಳಿದಿದೆಯೇ..? ಸುದ್ದಿ ಜಗತ್ತಿನ ವಾಣಿಜ್ಯ ಮಾರುಕಟ್ಟೆಯಲ್ಲಿನ ಕೆಲವು ಸಂಗತಿಗಳು ಹೇಳುವ ಸತ್ಯ ಬೇರೆಯೇ ಇದೆ.ನ್ಯೂಸ್ ಫಸ್ಟ್ ನ ಫೈನಾನ್ಷಿಯಲ್ ಸ್ಟೇಟಸ್ ಚೆನ್ನಾಗಿಯೇ ಇದೆಯಂತೆ. ಕಮರ್ಷಿಯಲ್ಲಾಗಿ ಸಾಕಷ್ಟು ಆದಾಯವೂ ಹರಿದುಬರುತ್ತಿದೆಯಂತೆ. ಫಸ್ಟ್ ಲೈನ್ ಚಾನೆಲ್ ಗಳಿಗೆ ಸಿಗುವಷ್ಟೇ ಜಾಹಿರಾತು ಕೂಡ ದೊರೆಯುತ್ತಿದೆಯಂತೆ.ಇದೆಲ್ಲದರ ಜತೆಗೆ ಆದಾಯ ಕ್ರೋಢಿಕರಿಸುವಂಥ ಕೆಲವು ಕಾರ್ಯಕ್ರಮಗಳು ಚಾನೆಲ್ ಬ್ಯಾನರ್ ಅಡಿಯಲ್ಲಿ ಆಯೋಜನೆಗೊಳ್ಳುತ್ತಿವೆಯಂತೆ. ಎಲ್ಲಕ್ಕಿಂತ ಹೆಚ್ಚಾಗಿ ಚಾನೆಲ್ ಸಿಬ್ಬಂದಿಗೆ ನಿಯತವಾಗಿ ಉತ್ತಮ ಸ್ವರೂಪದಲ್ಲೇ ಸಂಬಳ ಕೊಡಲಾಗುತ್ತಿದೆ ಎನ್ನುವುದೇ ಸಂಸ್ಥೆ ಆರ್ಥಿಕವಾಗಿ ಸಬಲವಾಗಿದೆ ಎನ್ನುವುದನ್ನು ಸಾರಿ ಹೇಳುತ್ತಿದೆ.ಹೀಗೆಲ್ಲಾ ಇರುವಾಗ ,ಸಂಸ್ಥೆ ಆರ್ಥಿಕವಾಗಿ ಹಿಂಜರಿತ ಅನುಭವಿಸುತ್ತಿದೆ. ಇರುವ ಸಿಬ್ಬಂದಿ ಹೆಚ್ಚೆನಿಸುತ್ತಿದ್ದಾರೆ.ಇಷ್ಟೊಂದು ಹೊರೆ ಸಹಿಸಿಕೊಂಡು ಸಂಸ್ಥೆ ನಡೆಸುವುದು ಕಷ್ಟವಾಗುತ್ತಿದೆ ಎಂಬ ಮಾತುಗಳು ಮ್ಯಾನೇಜ್ಮೆಂಟ್ ನಿಂದ ಕೇಳಿಬಂದಿತೆನ್ನುವುದು ಸ್ವಲ್ಪ ಗೊಂದಲ ಮೂಡಿಸುತ್ತದೆ. ಯಾವ ಕಾರಣಕ್ಕೆ ಈ ರೀತಿ ಹೇಳಲಾಯಿ ಎನ್ನುವುದು ದೊಡ್ಡ ಪ್ರಶ್ನೆ ಮೂಡಿಸಿದೆ.

ಚಾನೆಲ್ ಮಾರುವ ಪ್ರಯತ್ನ ನಡೆಯುತ್ತಿದೆಯೇ..? ಇದೆಲ್ಲದರ ನಡುವೆಯೇ ಸಾಕಷ್ಟು ದಿನಗಳಿಂದಲು ಸುದ್ದಿ ಜಗತ್ತಿನಲ್ಲಿ ಕೇಳಿಬಂದ ಮತ್ತೊಂದ ವಿಷಯ ಎಂದರೆ ನ್ಯೂಸ್ ಫಸ್ಟ್ ಸೇಲ್ ಗಿದೆಯಂತೆ…? ಎನ್ನುವುದು.ಎನ್ ಡಿಟಿವಿ ಜತೆ ಮಾತುಕತೆ ನಡೆಯುತ್ತಿದೆ ಎನ್ನುವ ಮಾತು ಒಂದೆಡೆಯಾದರೆ, ಟೈಮ್ಸ್ ನೌ ಜತೆ ಮಾತುಕತೆ ನಡೆಯುತ್ತಿದೆ ಎನ್ನುವ ವರ್ತಮಾನ ಹರಡಿತ್ತು.ಈ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡುವ ಪ್ರಯತ್ನ ಮಾಡಿತ್ತು.ಮಾತುಕತೆ ನಡೆದಿದ್ದು ಸತ್ಯ..ಆ ರೀತಿಯ ವರ್ತಮಾನ ಇದ್ದಿದ್ದು ನಿಜ.ಆದರೆ ಚಾನೆಲ್ ಮಾರುವ ಆಲೋಚನೆ ಮ್ಯಾನೇಜ್ಮೆಂಟ್ ಗಿಲ್ಲ..ಹಾಗಾಗಿ ಡೀಲ್ ಕ್ಯಾನ್ಸಲ್ ಆಗಿದೆ ಎನ್ನುವ ಸ್ಪಷ್ಟನೆ ಸಿಕ್ಕಿತ್ತು. ಪರ್ವಾಗಿಲ್ಲ..ನ್ಯೂಸ್ ಫಸ್ಟ್ ನಲ್ಲಿ ಎಲ್ಲವೂ ಸರಿಯಾಗಿದೆ ಎನ್ನುವ ಸಮಾಧಾನದಲ್ಲಿರುವಾಗಲೇ ವಿಚಲಿತಗೊಳ್ಳುವಂತ ಸಂಗತಿ ಹೊರಬಿದ್ದಿದೆ..ಇದರ ಸತ್ಯಾಸತ್ಯತೆ ಮ್ಯಾನೇಜ್ಮೆಂಟ್ ನಲ್ಲಿರುವವರೇ ಸ್ಪಷ್ಟಪಡಿಸಬೇಕಷ್ಟೆ..
ನ್ಯೂಸ್ ಫಸ್ಟ್ ನಲ್ಲಿ ನಡೆಯಿತೆನ್ನಲಾದ ಬೆಳವಣಿಗೆಗಳಿಂದ ಅಲ್ಲಿರುವ ಸಿಬ್ಬಂದಿ ವಿಚಲಿತರಾಗಿರು ವುದಂತೂ ಸತ್ಯವಂತೆ.. ಮುಂದೇನು ಎನ್ನುವ ಪ್ರಶ್ನೆ ಅವರ ಮುಂದೆ ಸೃಷ್ಟಿಯಾಗಿದೆಯಂತೆ.ಸಂಸ್ಥೆಯಲ್ಲಿ ಮುಂದುವರೆಯಬೇಕೆಂದರೆ, ಬದಲಾಗಲಿದೆ ಎನ್ನಲಾಗುತ್ತಿರುವ ಆ ಸ್ಟೈಲ್ ಶೀಟ್ ನಂತೆ ಕೆಲಸ ಮಾಡಬೇಕು ಎಂದರೆ ಅದು ಯಾವ ಮಾದರಿಯ ಸ್ಟೈಲ್ ಶೀಟ್ ಎನ್ನುವ ಗೊಂದಲ ಮೂಡಿದೆಯಂತೆ. ಆಗೊಲ್ಲ ಎಂದು ಕೆಲಸ ಬಿಟ್ಟರೆ ಮುಂದೇನು ಗತಿ ಎನ್ನುವ ಚಿಂತೆ ಕಾಡಲಾರಂಭಿಸಿದೆಯಂತೆ.ಇದೆಲ್ಲಾ ಪಾಪ ಸಿಬ್ಬಂದಿಯ ಕಥೆ-ವ್ಯಥೆ ಬಿಡಿ..ಅದನ್ನು ಕಟ್ಟಿಕೊಂಡು ಮಾಲಿಕರಿಗೆ ಏನಾಗಬೇಕಿದೆ ಹೇಳಿ..ಆದರೆ ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ ಎಂದೇ ಹೇಳಲಾಗುತ್ತಿದ್ದ ನ್ಯೂಸ್ ಫಸ್ಟ್ ಚಾನೆಲ್, ದಿಢೀರ್ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ..ಇದರ ಎಫೆಕ್ಟ್ ಸಹಜವಾಗಿ ಅಲ್ಲಿ ಕೆಲಸ ಮಾಡುತ್ತಿರುವ ಸಾಕಷ್ಟು ಮಾದ್ಯಮಮಿತ್ರರ ಬದುಕು-ಭವಿಷ್ಯದ ಮೇಲೆ ಉಂಟಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿರುವುದು ಆಶ್ಚರ್ಯದೊಂದಿಗೆ ಆತಂಕವನ್ನೂ ಮೂಡಿಸಿದೆ…ಇದು ಸತ್ಯನಾ..? ಸುಳ್ಳಾ..ಎನ್ನುವುದು ಗೊತ್ತಾಗ್ಲಿಕ್ಕೆ ಹೆಚ್ಚೇನು ದಿನ ಕಾಯಬೇಕಿಲ್ಲವೇನೋ..? ಗೊತ್ತಿಲ್ಲ..