ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಇತಿಹಾಸದಲ್ಲಿ ಇದೊಂದು ಹೊಸ ಅಧ್ಯಾಯ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇತಿಹಾಸದ ಪುಟ ಸೇರಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ಅಸ್ತಿತ್ವಕ್ಕೆ ಬಂದ ಮೇಲೆ, ಅದರ ವ್ಯಾಪ್ತಿಯ ಐದು ನೂತನ ನಗರಪಾಲಿಕೆಗಳು ತಮ್ಮ ಚೊಚ್ಚಲ ಬಜೆಟ್ ಮಂಡನೆಗೆ ಸಜ್ಜಾಗಿವೆ. ಮೂಲಗಳ ಪ್ರಕಾರ, ಇದೇ ಮಾರ್ಚ್ 30ರಂದು ಐದೂ ಪಾಲಿಕೆಗಳ ಆಯುಕ್ತರು 2026-27ನೇ ಸಾಲಿನ ಆಯವ್ಯಯವನ್ನು ಜನರ ಮುಂದಿಡಲಿದ್ದಾರೆ.
ಬಿಬಿಎಂಪಿ ವಿಸರ್ಜನೆಯಾದ ನಂತರ ಬೆಂಗಳೂರು ಸತತ ಆರನೇ ಬಾರಿಗೆ ಚುನಾಯಿತ ಪ್ರತಿನಿಧಿಗಳಿಲ್ಲದ ಬಜೆಟ್‌ಗೆ ಸಾಕ್ಷಿಯಾಗುತ್ತಿದೆ. ಈ ಬಾರಿಯೂ ಕಾರ್ಪೊರೇಟರ್‌ಗಳ ಅನುಪಸ್ಥಿತಿಯಲ್ಲಿ ಅಧಿಕಾರಿಗಳೇ ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಹಾಕಿದ್ದಾರೆ. ಆದರೆ, ಈ ಬಾರಿಯ ವಿಶೇಷವೆಂದರೆ 19 ಸಾವಿರ ಕೋಟಿಯ ಒಂದೇ ಬಜೆಟ್ ಬದಲಿಗೆ, ಐದು ಪಾಲಿಕೆಗಳು ತಮ್ಮ ತಮ್ಮ ಭೌಗೋಳಿಕ ವ್ಯಾಪ್ತಿ ಮತ್ತು ಆದಾಯಕ್ಕೆ ಅನುಗುಣವಾಗಿ ಪ್ರತ್ಯೇಕ ಬಜೆಟ್ ಮಂಡಿಸಲಿವೆ.
ಯಾರ ಪಾಲು ಎಷ್ಟು? ಪಾಲಿಕೆವಾರು ಅಂದಾಜು ಪಟ್ಟಿ:
ಐದೂ ಪಾಲಿಕೆಗಳ ಒಟ್ಟು ಮೊತ್ತ ಸುಮಾರು 15,000 ಕೋಟಿಯಿಂದ 16,000 ಕೋಟಿ ರೂ. ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.
ಪೂರ್ವ ನಗರಪಾಲಿಕೆ: ₹3500–3600 ಕೋಟಿ (ಅತಿ ಹೆಚ್ಚು ಆದಾಯದ ನಿರೀಕ್ಷೆ)
ಉತ್ತರ ನಗರಪಾಲಿಕೆ: ₹2800–2900 ಕೋಟಿ
ಕೇಂದ್ರ ನಗರಪಾಲಿಕೆ: ₹2750–2850 ಕೋಟಿ
ದಕ್ಷಿಣ ನಗರಪಾಲಿಕೆ: ₹2700–2800 ಕೋಟಿ
ಪಶ್ಚಿಮ ನಗರಪಾಲಿಕೆ: ₹2300–2400 ಕೋಟಿ
ಹೊಸ ಪಾಲಿಕೆಗಳಿಗೆ ಆರ್ಥಿಕ ಶಕ್ತಿ ತುಂಬಲು ಹೊಸ ಆದಾಯ ಮೂಲಗಳತ್ತ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಡಿಜಿಟಲ್ ಇ-ಖಾತಾ ಕಡ್ಡಾಯಗೊಳಿಸುವ ಮೂಲಕ ಆಸ್ತಿ ತೆರಿಗೆ ಸೋರಿಕೆ ತಡೆಗಟ್ಟುವುದು, ಹೊಸ ಪಾರ್ಕಿಂಗ್ ನೀತಿ ಜಾರಿ, ಜಾಹೀರಾತು ತೆರಿಗೆ ಮತ್ತು ಪ್ರೀಮಿಯಂ FAR (Floor Area Ratio) ಶುಲ್ಕಗಳ ಮೇಲೆ ಬಜೆಟ್ ಹೆಚ್ಚು ಅವಲಂಬಿತವಾಗಿದೆ. ಮೊದಲ ಬಾರಿಗೆ ಮ್ಯೂನಿಸಿಪಲ್ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸುವ ಸಾಹಸಕ್ಕೂ ಪಾಲಿಕೆಗಳು ಮುಂದಾಗುವ ಸಾಧ್ಯತೆಯಿದೆ.

ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ “ದಾರಿ ಯಾವುದಾದರೇನು..? ಗುರಿ ತಲುಪುಬೆಂಗಳೂರು ಪ್ರಾಧಿಕಾರ (GBA) ಚುವುದು ಮುಖ್ಯ” ಎಂಬ ಕವಿವಾಣಿಯ ಸಂಕಲ್ಪದೊಂದಿಗೆ ಈ ಬಜೆಟ್ ರೂಪುಗೊಂಡಿದೆ. ಮುಂದಿನ ಗ್ರೇಟರ್ ನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಜನಸಾಮಾನ್ಯರನ್ನು ಸೆಳೆಯುವ ‘ಜನಪರ’ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಮಣೆ ಹಾಕಲಾಗಿದೆ.
ಬಜೆಟ್‌ನ ಪ್ರಮುಖ ಆಕರ್ಷಣೆಗಳು ಮತ್ತು ನಿರೀಕ್ಷಿತ ಯೋಜನೆಗಳು:
1. ಸಾಮಾಜಿಕ ಕಲ್ಯಾಣದ ‘ಗರಿ’:
ಒಂಟಿಮನೆ ಸಹಾಯಧನ: ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ ನೀಡುವ ಸಹಾಯಧನವನ್ನು 5 ಲಕ್ಷದಿಂದ 6 ಲಕ್ಷಕ್ಕೆ ಏರಿಸುವ ಸಾಧ್ಯತೆ.
ಮಹಿಳಾ ಸಬಲೀಕರಣ: ಉಚಿತ ಹೊಲಿಗೆ ಯಂತ್ರ ವಿತರಣೆ ಮತ್ತು ಮಹಿಳಾ ಚಾಲಕರಿಗೆ ಉಚಿತ ಎಲೆಕ್ಟ್ರಿಕ್ ಆಟೋ ವಿತರಣೆ.
ಗೃಹಭಾಗ್ಯ ವಿಸ್ತರಣೆ: ಬಡ ಕುಟುಂಬಗಳಿಗೆ ನೀಡುವ ಸೌಲಭ್ಯಗಳ ವ್ಯಾಪ್ತಿ ಹೆಚ್ಚಳ.
2. ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ:
ಸೇವ್ ಮಾಮ್ (Save Mom): ಗರ್ಭಿಣಿಯರು ಮತ್ತು ಬಾಣಂತಿಯರ ರಕ್ಷಣೆಗಾಗಿ ವಿಶೇಷ ಯೋಜನೆ.
ಹೈಟೆಕ್ ನಮ್ಮ ಕ್ಲಿನಿಕ್: ಪ್ರತಿ ವಾರ್ಡ್‌ನಲ್ಲಿರುವ ನಮ್ಮ ಕ್ಲಿನಿಕ್‌ಗಳಿಗೆ ಡಯಗ್ನಸ್ಟಿಕ್ ಲ್ಯಾಬ್, ಡೆಂಟಲ್ ಮತ್ತು ಫಿಜಿಯೋಥೆರಪಿ ಸೇವೆಗಳ ಸೇರ್ಪಡೆ.
3. ಮೂಲಸೌಕರ್ಯ ಮತ್ತು ಸುಸ್ಥಿರತೆ:
ಗುಂಡಿ ಮುಕ್ತ ರಸ್ತೆ: ವೈಟ್‌ಟಾಪಿಂಗ್ ರಸ್ತೆಗಳಿಗೆ ಆದ್ಯತೆ ಮತ್ತು ಸುರಂಗ ರಸ್ತೆ (Tunnel Road) ಯೋಜನೆಗೆ ಆರಂಭಿಕ ಅನುದಾನ.
ಹಸಿರು ಬೆಂಗಳೂರು: ಕೆರೆಗಳ ಅಭಿವೃದ್ಧಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇವಿ ಬೈಕ್‌ಗಳ ವಿತರಣೆ.
ಕಸಮುಕ್ತ ನಗರ: ತ್ಯಾಜ್ಯ ವಿಲೇವಾರಿಗೆ ಐದೂ ಪಾಲಿಕೆಗಳಲ್ಲಿ ಪ್ರತ್ಯೇಕ ಮತ್ತು ಆಧುನಿಕ ಘಟಕಗಳ ಸ್ಥಾಪನೆ.
ಇದನ್ನೂ ಓದಿ | ಬೆಂಗಳೂರು ಹೋಟೆಲ್ ಉದ್ಯಮಕ್ಕೆ ಎಲ್‌ಪಿಜಿ ಬಿಸಿ: ಮಧ್ಯ ಏಷ್ಯಾ ಯುದ್ಧದಿಂದ 150 ಕೋಟಿ ರೂ. ನಷ್ಟ!
ಹೊಸ ದೊಡ್ಡ ಯೋಜನೆಗಳ ಘೋಷಣೆಗಿಂತಲೂ, ಅರ್ಧಕ್ಕೆ ನಿಂತಿರುವ ಫ್ಲೈಓವರ್, ಅಂಡರ್‌ಪಾಸ್ ಮತ್ತು ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಅಧಿಕಾರಿಗಳ ಮುಂದಿರುವ ದೊಡ್ಡ ಸವಾಲು. ಬೆಂಗಳೂರನ್ನು ಜಾಗತಿಕ ಮಟ್ಟದ ಆಧುನಿಕ ನಗರವನ್ನಾಗಿ ಪರಿವರ್ತಿಸುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ‘ಗ್ರೇಟರ್’ ಕನಸಿಗೆ ಈ ಐದು ಬಜೆಟ್‌ಗಳು ಅಡಿಪಾಯ ಹಾಕಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.










