ಖ್ಯಾತ ಉದ್ಯಮಿ ರತನ್ ಟಾಟಾ ಪಾರ್ಸಿ ಸಂಪ್ರದಾಯದಂತೆ ವಿಧಿ ವಿಧಾನದೊಂದಿಗೆ ಮುಂಬೈನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಹಾರಾಷ್ಟ್ರ ಸರ್ಕಾರ ಸರ್ಕಾರಿ ಗೌರವದೊಂದಿಗೆ ಉದ್ಯಮ ಲೋಕದ ದಿಗ್ಗಜನ್ನು ಬೀಳ್ಕೊಟ್ಟಿತು.
ಕೆಲವು ದಿನಗಳ ಹಿಂದೆಯಷ್ಟೇ ರಕ್ತದೊತ್ತಡದ ಏರಿಳಿತದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರತನ್ ಟಾಟಾ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದ ಕಾರಣ ಬುಧವಾರ ರಾತ್ರಿ ರತನ್ ಟಾಟಾ ನಿಧನರಾಗಿದ್ದರು.
ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ 1991ರಲ್ಲಿ 100 ಶತಕೋಟಿ ರೂ. ಮೌಲ್ಯದ ಸ್ಟೀಲ್ ಆಫ್ ಸಾಫ್ಟ್ ವೇರ್ ಕಂಪನಿಯ ಮುಖ್ಯಸ್ಥ ಹುದ್ದೆ ಅಲಂಕರಿಸಿದರು. ನಂತರ ಟಾಟಾ ಉದ್ಯಮವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದು ಅಲ್ಲದೇ ನ್ಯಾನೋ ಕಾರು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಮಧ್ಯಮ ವರ್ಗದವರ ಸ್ವಂತ ಕಾರಿನ ಆಸೆ ಪೂರೈಸುವತ್ತ ದೊಡ್ಡ ಹೆಜ್ಜೆ ಇಟ್ಟಿದ್ದರು.
1996ರಲ್ಲಿ ಟೆಲಿ ಸರ್ವಿಸಸ್ ಕಂಪನಿ ಆರಂಭಿಸಿದ ರತನ್ ಟಾಟಾ, 2004ರಲ್ಲಿ ಟಾಟಾ ಕನ್ಸಲ್ಟೇನ್ಸಿ ಸರ್ವಿಸ್ ಪಬ್ಲೀಕ್ ಎಂಬ ಐಟಿ ಕಂಪನಿ ಸ್ಥಾಪಿಸಿದರು. ನಂತರ ಬ್ರಿಟಿಷ್ ಕಂಪನಿಗಳಾದ ಜಾಗ್ವರ್, ಲ್ಯಾಂಡ್ ರೋವರ್ ಕಾರು ಕಂಪನಿಗಳ ಒಡೆಯರಾದರು.
2009ರಲ್ಲಿ 1 ಲಕ್ಷ ರೂ.ಗೆ ನ್ಯಾನೊ ಕಾರು ಮಾರುಕಟ್ಟೆಗೆ ಪರಿಚಯಿಸಿ ವಿಶ್ವದ ಅತ್ಯಂತ ಕಡಿಮೆ ದರ ಕಾರು ಮಾರುಕಟ್ಟೆಗೆ ಬಿಟ್ಟು ಹೊಸ ಕ್ರಾಂತಿ ಸೃಷ್ಟಿಸಿದರು.