ರಾಜ್ಯದಲ್ಲಿ ಪಿಎಫ್ಐ, ಎಸ್ ಡಿಪಿಐ, ಭಜರಂಗದಳ, ಶ್ರೀರಾಮಸೇನೆ ಮತ್ತು ಇತರೆ ಸಂಘಟನೆಗಳ ಕಾರ್ಯಕರ್ತರ ಮೇಲೆ 949 ಕೋಮುಗಲಭೆ ಸಂಬಂಧಿ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ 619 ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಿಪ್ಪ ಆಡಳಿತದಲ್ಲಿ ಅತೀ ಹೆಚ್ಚು 385 ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ಸರ್ಕಾರ ನೀಡಿದ ಲಿಖಿತ ಉತ್ತರ ಆಧರಿಸಿ ಆರೋಪ ಪಟ್ಟಿ ಬಿಡುಗಡೆ ಮಾಡಿದರು.
ಕಾಂಗ್ರೆಸ್ ಬಿಡುಗಡೆ ಮಾಡಿದ ಆರೋಪಗಳ ಪಟ್ಟಿ ಹೀಗಿದೆ.
- ಕ್ರಿಮಿನಲ್ ಪಕ್ರಿಯ ಸಂಹಿತೆ ಕಲಂ 321ರ ಅಡಿಯಲ್ಲಿ ಸಂಪುಟ ಸಭೆಯ ಅನುಮೋದನೆಯೊಂದಿಗೆ ಪ್ರಾಸಿಕ್ಯೂಷನ್ ಅನುಮತಿಯನ್ನು ವಾಪಸ್ಸು ಪಡೆಯಲು ರಾಜ್ಯ ಸರ್ಕಾರಕ್ಕೆ ಅವಕಾಶವಿರುತ್ತದೆ. ಸಾಮಾನ್ಯವಾಗಿ ಗೃಹ ಇಲಾಖೆಯ ಪ್ರಸ್ತಾವನೆಯೊಂದಿಗೆ, ಸಂಪುಟ ಸಭೆಯ ಉಪಸಮಿತಿಯು ನೀಡಿದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಅಂಗೀಕರಿಸುವ ಅಥವಾ ತಿರಸ್ಕರಿಸುವ ಅವಕಾಶವಿರುತ್ತದೆ. ಇದೊಂದು ನಿರಂತರ ಪ್ರಕ್ರಿಯೆ ಆಗಿದ್ದು, ಬಿಜೆಪಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ 62 ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದ್ದರು.
- ಯಡಿಯೂರಪ್ಪನವರ ನೇತೃತ್ವದ ಸರ್ಕಾರದಲ್ಲಿ ಒಟ್ಟು 385 ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುತ್ತದೆ. ಅದರಲ್ಲಿ 182 ಪ್ರಕರಣಗಳು ಕೋಮು ಸಂಘರ್ಷ, ದ್ವೇಷ ಭಾಷಣ ಮತ್ತು ಗೋವಧೆ ಸಂಬಂಧಪಟ್ಟ ಪ್ರಕರಣಗಳಾಗಿರುತ್ತವೆ. ಸುಮಾರು 2000 ಆರೋಪಿಗಳು ಕ್ರಿಮಿನಲ್ ಪ್ರಕರಣಗಳಿಂದ ಪಾರು ಮಾಡಲಾಗಿದ್ದು, 1000 ಆರೋಪಿಗಳು ಕೋಮು ಸಂಘರ್ಷದ ಆರೋಪಿಗಳಾಗಿರುತ್ತಾರೆ. ಬಿಜೆಪಿ ಶಾಸಕರು ಮತ್ತು ಪಾರ್ಲಿಮೆಂಟ್ ಸದಸ್ಯರು ವಾಪಸ್ಸು ಪಡೆದ ಪ್ರಕರಣಗಳ ಫಲಾನುಭವಿಗಳಾಗಿರುತ್ತಾರೆ. ಈ ಸರ್ಕಾರದಲ್ಲಿ ಬಸವರಾಜ್ ಬೊಮ್ಮಾಯಿ ಗೃಹ ಸಚಿವರಾಗಿದ್ದರು.
- ಬಿಜೆಪಿ ಸರ್ಕಾರ 2020ರಲ್ಲಿ 62 ಪ್ರಕರಣಗಳನ್ನು ವಾಪಸ್ಸು ಪಡೆದಿದ್ದು, ಇದರಲ್ಲಿ ಅಂದಿನ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಆನಂದ್ ಸಿಂಗ್, ರಮೇಶ್ ಜಾರಕಿಹೋಳಿ, ಬಿ.ಸಿ.ಪಾಟೀಲ್, ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಆಲಪ್ಪ ಆಚಾರ್, ರೇಣುಕಾಚಾರ್ಯ ಮತ್ತು ಇತರೆ ಬಿಜೆಪಿ ನಾಯಕರ ಪ್ರಕರಣಗಳು ಸೇರಿರುತ್ತದೆ. ಸಾರ್ವಜನಿಕ ಹಿತಾಸಕ್ತಿಯಿಂದ ಕೋಮು ಸಂಘರ್ಷದ, ಗೋ ವಿವಾದದ ಹಾಗೂ ದ್ವೇಷ ಭಾಷಣದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದಾಗಿ ಅಂದಿನ ಕಾನೂನು ಸಚಿವರು ಹೇಳಿರುತ್ತಾರೆ.
- ಬಿಜೆಪಿ ಸರ್ಕಾರಗಳು ಹಿಂದಕ್ಕೆ ಪಡೆದಿರುವ ಪ್ರಕಾರಣಗಳಲ್ಲಿ ಬಲಪಂತೀಯ ಸಂಘಟನೆಗಳ, ಹಿಂದೂ ಸಂಘಟನೆಗಳ ಹಾಗೂ ಕೋಮುಗಲಭೆ ಆರೋಪಿಗಳ ಪ್ರಕರಣಗಳು ಸೇರಿರುತ್ತವೆ. ಇವುಗಳಲ್ಲಿ ಟಿಪ್ಪು ಜಯಂತಿ ಹೆಸರಿನಲ್ಲಿ, ಅಂತರ್ಜಾತೀಯ ವಿವಾಹದ ಹೆಸರಿನಲ್ಲಿ, ಮತಾಂತರದ ಹೆಸರಿನಲ್ಲಿ, ಕೋಮು ಗಲಭೆಗೆ ಪ್ರಚೋದನೆ ನೀಡಿದ ಗಂಭೀರ ಸ್ವರೂಪದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಹಿಂದೂ ಜಾಗರಣಾ ವೇದಿಕೆ, ಶ್ರೀರಾಮ ಸೇನೆ ಹಾಗೂ ನೈತಿಕ ಪೊಲೀಸ್‌ಗಿರಿ ಹೆದಸರಿನಲ್ಲಿ ದಾಂದಲೆ ಮಾಡಿದ ಪ್ರಕರಣಗಳನ್ನೂ ಹಿಂದಕ್ಕೆ ಪಡೆದಿರುತ್ತದೆ.
- ರಾಜ್ಯದಲ್ಲಿ ಪಿಎಫ್‌ಐ, ಎಸ್‌ಡಿಪಿಐ, ಭಜರಂಗದಳ, ಶ್ರೀರಾಮಸೇನೆ ಹಾಗೂ ಇತರ ಸಂಘಟನೆಗಳ ಮೇಲೆ ದಾಖಾಲಾಗಿದ್ದ ವಿವಿಧ ಜಿಲ್ಲೆಗಳ 2018 ರಿಂದ 2020ರ ಸುಮಾರು 127 ಪ್ರಕರಣಗಳನ್ನು ಹಿಂದಿನ ಬಿಜೆಪಿ ಸರ್ಕಾರವೇ ವಾಪಸ್ಸು ಪಡೆದಿದೆ. ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಸುಮಾರು 45 ಕೋಮುದಳ್ಳುರಿಯ ಪ್ರಕರಣಗಳನ್ನು ಮಡಿಕೇರಿ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೋಮುಸಂಘರ್ಷಗಳ ಪ್ರಕರಣಗಳನ್ನು ಬಿಜೆಪಿಸರ್ಕಾರವೇ ಹಿಂದಕ್ಕೆ ಪಡೆದಿರುತ್ತದೆ
- ಸರ್ಕಾರಿ ಆಸ್ತಿಗೆ ನಷ್ಟ ಉಂಟುಮಾಡಿದ ಅನೇಕ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ನೂರಾರು ಪ್ರಕರಣಗಳನ್ನು ಹಿಂದಿನ ಬಿಜೆಪಿ ಸರ್ಕಾರ ವಾಪಸ್ಸು ಪಡೆದಿದ್ದು, ರಾಜಕೀಯ ಕಾರಣಗಳಿಗಾಗಿ, ಜನರನ್ನು ಪ್ರಚೋಧನೆ ಮಾಡುವ ಉದ್ದೇಶದಿಂದ ಬಿಜೆಪಿ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೇಲೆ ನಿರಂತರವಾದ ಸುಳ್ಳು ಆರೋಪಗಳನ್ನು ಮಾಡುತ್ತಿದೆ.
- ಉತ್ತರ ಕನ್ನಡ ಜಿಲ್ಲೆಯ ಪರೇಶ್ ಮೆಸ್ತಾ ಪ್ರಕರಣದಲ್ಲಿ ರಾಜಕೀಯ ಲಾಭಕ್ಕಾಗಿ ಹವಣಿಸಿದ್ದ ಬಿಜೆಪಿ, ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸಿ, ಆತ್ಮಹತ್ಯೆಯನ್ನು ಕೊಲೆ ಎಂದು ಬಿಂಬಿಸುವ ಪ್ರಯತ್ನವನ್ನು ಮಾಡಿತ್ತು. ಅಂದಿನ ಕಾಂಗ್ರೆಸ್ ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿತ್ತು. ಸಿಬಿಐ ಈ ಪ್ರಕರಣದಲ್ಲಿ ಕೊಲೆ ಅಲ್ಲವೆಂದು ತನ್ನ ಅಂತಿಮ ವರದಿಯನ್ನು ನೀಡಿರುತ್ತದೆ. ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿದ ಬಿಜೆಪಿ ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳಿರುವುದಿಲ್ಲ. ರಾಜಕೀಯವಾಗಿ ಜನರಿಗೆ ಪ್ರಚೋಧನೆ ನೀಡಿದ ಬಿಜೆಪಿ ನಾಯಕರ ಕೇಸುಗಳನ್ನು ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆದಿರುತ್ತದೆ.
- ಕಲಂ 321ರ ಅಡಿಯಲ್ಲಿ ರಾಜ್ಯ ಸರ್ಕಾರಗಳು ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ಯಾವ ಯಾವ ಸಂದರ್ಭಗಳಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಹಿಂಪಡೆಯಬಹುದೆಂದು ಹಲವಾರು ತೀರ್ಪುಗಳಲ್ಲಿ ನ್ಯಾಯಾಲಯಗಳು ತಮ್ಮ ವ್ಯಾಖ್ಯಾನ ನೀಡಿರುತ್ತವೆ. ಆದರೆ ಪ್ರಾಸಿಕ್ಯೂಷನ್ ಜನರಿಗೆ ತಪ್ಪು ಮಾಹಿತಿ ನೀಡಿ ಪ್ರಚೋಧನೆ ಮಾಡಲು ಬಿಜೆಪಿ ಹವಣಿಸುತ್ತಿದೆ.
- ಹಿಂದಿನ ರಾಜ್ಯ ಬಿಜೆಪಿಯ ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿರವರ ಸರ್ಕಾರ ಹಲವರು ಕ್ರಿಮಿನಲ್ ಪ್ರಕರಣಗಳನ್ನು ಸಂಪುಟಸಭೆಯ ತೀರ್ಮಾನದ ಮೂಲಕ ಹಿಂದಕ್ಕೆ ಪಡೆದಿರುತ್ತವೆ. ಆ ಪ್ರಕರಣಗಳಲ್ಲಿ ಪಿಎಫ್‌ಐ, ಎಸ್‌ಡಿಪಿಐ, ಭಜರಂಗದಳ, ಶ್ರೀರಾಮಸೇನೆ ಹಾಗೂ ಇತರ ಸಂಘಟನೆಗಳ ಪ್ರಕರಣಗಳು ಸೇರಿದ್ದು, ಪ್ರಮುಖವಾಗಿ ಕೋಮುವಾದಿ ಬಲಪಂತೀಯ ಸಂಘಟನೆಗಳ ಕೇಸುಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಇದು ಒಂದು ರಾಜ್ಯ ಸರ್ಕಾರದ ನಿರಂತರ ಕಾನೂನು ಪ್ರಕ್ರಿಯೆ ಎಂದು ಅಂದಿನ ಬಿಜೆಪಿ ಸರ್ಕಾರದ ಕಾನೂನು ಸಚಿವರಾದ ಮಾಧುಸ್ವಾಮಿರವರ ಹೇಳಿಕೆಯು ಸಾರ್ವಜನಿಕವಾಗಿ ದಾಖಲಾಗಿರುತ್ತದೆ. ತನ್ನ ಆಂತರಿಕ ಗುಂಪುಗಾರಿಕೆಯಿಂದ ಕಂಗೆಟ್ಟಿರುವ ರಾಜ್ಯ ಬಿಜೆಪಿ, ರಾಜ್ಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ವಿಫಲವಾಗಿ ಇಂತಹ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ತನ್ನ ದಿವಾಳಿತನವನ್ನು ಬಹಿರಂಗಗೊಳಿಸಿದೆ ಎಂಬುದಾಗಿ ತಿಳಿಸಿದ್ದಾರೆ.