ಚನ್ನಪಟ್ಟಣ: ಬೊಂಬೆಗಳ ನಗರಿ ಚನ್ನಪಟ್ಟಣದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಿಗದಿಯಾಗಿರುವ ಡೆಡ್ ಲೈನ್ ಮುಗಿಯೊಕ್ಕೆ ಕೆಲ ಗಂಟೆಗಳಷ್ಟೇ ಬಾಕಿ ಇದೆ.ಆದ್ರೂ ಅಖಾಡದಲ್ಲಿ ಏನಾಗಲಿದೆ ಎನ್ನೋದು ಗೊತ್ತಾಗುತ್ತಲೇ ಇಲ್ಲ.ಎಲ್ಲವೂ ಅಚ್ಚರಿ-ನಿಗೂಢದಂತೆ ಕಾಣಿಸುತ್ತದೆ.ನಿನ್ನೆಯವರೆಗೂ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದ ಸಿ.ಪಿ ಯೋಗೇಶ್ವರ್ ನಿನ್ನೆ ರಾತ್ರಿ ಕೈ ಸೇರುವ ಮುನ್ಸೂಚನೆ ನೀಡಿ ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮುಖಂಡರ ನೇತೃತ್ವದಲ್ಲಿ ಕೈ ಸೇರಿದ್ದಾಗಿದೆ.ಕಾಂಗ್ರೆಸ್ ನಿಂದಲೇ ಸ್ಪರ್ದಿಸ್ತಾರೆನ್ನುವ ಮಾತುಗಳು ಬಲವಾಗಿವೆ.ಆದರೆ ಕಡೇ ಕ್ಷಣದಲ್ಲಿ ಏನಾಗುತ್ತದೋ ಗೊತ್ತಾಗುತ್ತಿಲ್ಲ.
ಸ್ಪರ್ದೆ ಮಾಡೋದಿದ್ರೆ ಅದು ಕೇವಲ ಬಿಜೆಪಿಯಿಂದ ಮಾತ್ರ ಎಂದು ರಚ್ಚೆ ಹಿಡಿದಿದ್ದ ಸಿ.ಪಿ ಯೋಗೇಶ್ವರ್ ಹಠಕ್ಕೆ ಸೋತು ಕುಮಾರಸ್ವಾಮಿಯನ್ನು ಮನವೊಲಿಸಿ ಬಿಜೆಪಿಯಿಂದಲೇ ಬಿ ಫಾರ್ಮ್ ಕೊಡುವ ಭರವಸೆ ಹೈಕಮಾಂಡ್ ನಿಂದ ವ್ಯಕ್ತವಾಗಿತ್ತು.ಕುಮಾರಸ್ವಾಮಿ ಒಂದು ಹೆಜ್ಜೆ ಮುಂದ್ಹೋಗಿ ಕ್ಷೇತ್ರ ತ್ಯಾಗಕ್ಕೂ ಸಿದ್ದರಾಗಿದ್ದರು.ಆದ್ರೆ ಅದ್ಹೇಕೋ ಯೋಗೇಶ್ವರ್ ಮೈತ್ರಿ ಸಹಜವಾಸವೇ ಬೇಡವೆಂದು ಕೈ ಸೇರ್ಪಡೆಯಾಗಿದ್ದಾರೆ. ಸಿ.ಪಿ ಯೋಗೇಶ್ವರ್ ಗೆ ಬಿಜೆಪಿಯಿಂದ ಟಿಕೆಟ್ ನಿಕ್ಕಿಯಾಗಿದ್ರೂ ಅದ್ಹೇಕೆ ಕೈ ಅಭ್ಯರ್ಥಿಯಾಗೊಕ್ಕೆ ಒಪ್ಪಿ ಪಕ್ಷ ಸೇರ್ಪಡೆಯಾದರೋ ಗೊತ್ತಾಗುತ್ತಿಲ್ಲ.
ಸಿ.ಪಿ ಯೋಗೇಶ್ವರ್ ಕೈ ನಿಂದಲೇ ಸ್ಪರ್ದಿಸುವುದು ಬಹುತೇಕ ಪಕ್ಕ ಆದ ಮೇಲೆ ಇದೀಗ ಬಿಜೆಪಿ-ಜೆಡಿಎಸ್ ಮೈತ್ರಿಗೆ ದೊಡ್ಡ ಸಂಕಷ್ಟ ಎದುರಾಗಿದೆ.ಸಿ.ಪಿ ಯೋಗೇಶ್ವರ್ ಗೆ ತಮ್ಮದೇ ವರ್ಚಸ್ಸಿನ ಮತ ಬ್ಯಾಂಕ್ ಇದೆ.ಅದರ ಜತೆಗೆ ಕಾಂಗ್ರೆಸ್ ಗೂ ಸಾಂಪ್ರದಾಯಿಕ ಮತಗಳಿವೆ.ಈ ಲೆಕ್ಕಾಚಾರದಲ್ಲಿ ಗೆಲ್ಲಬಹುದೆನ್ನುವುದು ಯೋಗೇಶ್ವರ್ ಹಾಗೂ ಕಾಂಗ್ರೆಸ್ ಮತ್ತು ಡಿ.ಕೆ ಬ್ರದರ್ಸ್ ಲೆಕ್ಕಾಚಾರ.ನಿಜಕ್ಕೂ ಪರಿಸ್ಥಿತಿ ಹಾಗಿದೆಯೇ.? ಮೈತ್ರಿ ಪಕ್ಷಗಳು ಅಷ್ಟು ಸಲೀಸಾಗಿ ಸೋಲು ಒಪ್ಪಿಕೊಳ್ಳುತ್ತವಾ..? ಖಂಡಿತಾ ಇಲ್ಲ..ಚನ್ನಪಟ್ಟಣವನ್ನು ಶತಾಯಗತಾಯ ಗೆಲ್ಲಲೇಬೇಕು.ಅಲ್ಲಿ ಹತೋಟಿ ಕಳೆದುಕೊಂಡ್ರೆ ಎದುರಾಗಬಹುದಾದ ದೊಡ್ಡ ಸಂಕಷ್ಟದ ಅಂದಾಜು ಬಿಜೆಪಿಗಿಂತ ಜೆಡಿಎಸ್ ಗಿದೆ.ಹಾಗಾಗಿನೇ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಚನೆಯಲ್ಲಿದೆ.
ಅದೆಲ್ಲಾ ಸರಿ..ಯಾರು ಆ ಪ್ರಬಲ ಅಭ್ಯರ್ಥಿ ಎನ್ನುವ ಪ್ರಶ್ನೆಗೆ ಸಧ್ಯಕ್ಕೆ ಇರೋ ಉತ್ತರ ನಿಖಿಲ್ ಕುಮಾರಸ್ವಾಮಿ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್ ಅವರ ಪತ್ನಿ ಅನುಸೂಯ. ಆ ಪೈಕಿ ಅನುಸೂಯ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಮುಕ್ತವಾಗಿದ್ರೂ ಅವರ ಪತಿ ನಿರಾಕರಿಸುತ್ತಿದ್ದಾರೆನ್ನುವ ಮಾತಿದೆ.ಒಂದ್ವೇಳೆ ಅವರಿಲ್ಲವಾದ್ರೆ ಉಳಿಯೋ ಏಕೈಕ ಹೆಸರು ನಿಖಿಲ್ ಕುಮಾರಸ್ವಾಮಿ.2029 ರವರೆಗೆ ನಿಖಿಲ್ ಗೆ ರಾಜಕೀಯವಾಗಿ ಬೆಳೆಯಲು ಗುರುಬಲ ಇಲ್ಲವೆನ್ನುವ ಮಾತಿದ್ರೂ ಪರ್ಯಾಯ ಇಲ್ಲದೆ ಹೋದ್ರೆ ಸ್ಪರ್ದೆ ಮಾಡುವುದು ಅನಿವಾರ್ಯವಾಗಬಹುದೇನೋ..?
ಹಾಗೆ ನೋಡಿದ್ರೆ ನಿಖಿಲ್ ಕಣಕ್ಕಿಳಿಸಲು ಕುಮಾರಸ್ವಾಮಿಗೆ ಇಚ್ಛೆ ಇದ್ದರೂ ನಿಖಿಲ್ ಅವರೇ ಹಿಂದೇಟು ಹಾಕ್ತಿದ್ದಾರೆನ್ನುವ ಮಾತಿದೆ.ಎರಡು ಚುನಾವಣೆಗಳಲ್ಲಿ ಸೋತಿರುವುದರಿಂದ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಲು ಹಿಂದೇಟು ಹಾಕುತ್ತಿದ್ದಾರೆನ್ನಲಾಗಿದೆ.ಗೆದ್ದರೆ ಓ.ಕೆ ಆದ್ರೆ ಸೋತ್ರೆ ಐರನ್ ಲೆಗ್ ಎನ್ನುವ ಕಳಂಕ ಶಾಶ್ವತವಾಗಿ ಹಣೆಗಂಟಿ ಬಿಡುತ್ತದೆ.ಇದು ತನ್ನ ರಾಜಕೀಯ ಭವಿಷ್ಯ-ಬೆಳವಣಿಗೆ ಮೇಲೆ ಮಾರಕ ಪರಿಣಾಮ ಬೀರಬಹುದೆನ್ನುವುದೇ ಆತಂಕಕ್ಕೆ ಕಾರಣ.ಇಷ್ಟಾದ್ರೂ ಸಿ.ಪಿ ಯೋಗೇಶ್ವರ್ ಗೆ ಠಕ್ಕರ್ ಕೊಡಬಲ್ಲ ಸಮರ್ಥ ಅಭ್ಯರ್ಥಿ ಯಾರು ಇಲ್ಲದ ಸ್ತಿತಿಯಲ್ಲಿ ತನ್ನ ಸ್ಪರ್ದೆ ಅನಿವಾರ್ಯ ಎಂದು ಪಕ್ಷ ತೀರ್ಮಾನಿಸಿದ್ರೆ ಒಂದು ಸೋತರೂ ಪರ್ವಾಗಿಲ್ಲ, ಮತ್ತೊಂದು ಚಾನ್ಸ್ ತೆಗೆದುಕೊಳ್ಳೊದು ನಿಖಿಲ್ ಗೆ ಅನಿವಾರ್ಯವಾಗಬಹುದು.ಏಕೆಂದ್ರೆ ಚನ್ನಪಟ್ಟಣದ ಗೆಲುವು ಜೆಡಿಎಸ್ ಗಷ್ಟೇ ಅಲ್ಲ ಕುಮಾರಸ್ವಾಮಿ, ದೇವೇಗೌಡ,ನಿಖಿಲ್ ಹಾಗೂ ಅವರ ಕುಟುಂಬಕ್ಕೆ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದೇ ಹೇಳಲಾಗ್ತಿದೆ.
ಈ ಎಲ್ಲಾ ಬೆಳವಣಿಗೆಗಳ ಕಾರಣಕ್ಕೆ ಸಿ.ಪಿ ಯೋಗೇಶ್ವರ್ ಎದುರು ಅನುಸೂಯ ಇಲ್ಲವಾಗದೆ ಹೋದಲ್ಲಿ ನಿಖಿಲ್ ಅವರನ್ನು ಕಣಕ್ಕಿಳಿಸೋದೇ ಅಂತಿಮವಾಗಬಹುದು.ಯಾರೇ ಅಭ್ಯರ್ಥಿಯಾದ್ರೂ ಕೈ ಅಭ್ಯರ್ಥಿ ಬಿಜೆಪಿ ಹಾಗೂ ಜೆಡಿಎಸ್ ಗೆ ಸಮಾನ ರಾಜಕೀಯ ಶತೃ.ಅವರನ್ನು ಸೋಲಿಸಲೇಬೇಕಾದ ಅನಿವಾರ್ಯತೆ ಎರಡೂ ಪಕ್ಷಕ್ಕಿದೆ.ಸೋಲಿಸಲು ಸಾಧ್ಯವಾಗದೆ ಹೋದ್ರೆ ಅದು ಮೈತ್ರಿಗೆ ಆದ ಅವಮಾನವಾಗಬಹುದು.ಇದು ಭವಿಷ್ಯದಲ್ಲಿ ಮೈತ್ರಿ ಮೇಲೂ ಮಾರಕ ಪರಿಣಾಮ ಬೀರುವ ಸಾಧ್ಯತೆಗಳಿವೆ.ಹಾಗಾಗಿ ಯಾರೇ ಅಭ್ಯರ್ಥಿಯಾದ್ರೂ ಮೈತ್ರಿ ಪಕ್ಷಗಳು ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಂಕಣ ಕಟ್ಟಿ ಕೆಲಸ ಮಾಡಲೇಬೇಕಾದ ಸ್ತಿತಿಯಿದೆ.