ಬೆಂಗಳೂರು: ಇದು ಕನ್ನಡ ಫ್ಲ್ಯಾಶ್ ನ್ಯೂಸ್ ವರದಿಯ ಫಲಶ್ರತಿ.. ಕೆಎಸ್ ಆರ್ ಟಿಸಿಯ ನಿಕಟಪೂರ್ವ ಎಂಡಿ ಅನ್ಬುಕುಮಾರ್ ಅವರ ಸಹಿಯನ್ನು ನಕಲು ಮಾಡಿ ಸಾರಿಗೆ ಸಿಬ್ಬಂದಿಯೋರ್ವರಿಗೆ 1,35,000 ರೂ ವಂಚಿಸಿದ್ದ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯ ಸಿಬ್ಬಂದಿ ರಿಚರ್ಡ್ ಎಂಬಾತನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.


ಇಲಾಖೆಯಿಂದ ಕೆಲಸ ಕಳೆದುಕೊಂಡು 7 ವರ್ಷ ವಾಗಿದ್ದ ಶಿವಮೊಗ್ಗ ವಿಭಾಗದ ಸಾಗರ ಡಿಪೋದ ನಾಗರಾಜ್ ಕುಗ್ವೆ ಎನ್ನುವವರಿಗೆ ಮರುನಿಯೋಜನೆ ಮಾಡಿಸಿಕೊಡುತ್ತೇನೆ.ಎಂಡಿ ಅನ್ಬುಕುಮಾರ್ ನನಗೆ ತುಂಬಾ ಕ್ಲೋಸ್..ಅವರಿಂದ ಹೇಳಿಸಿ ಕೆಲಸ ಮಾಡಿಸಿಕೊಡುತ್ತೇನೆ ಎಂದು ರಿಚರ್ಡ್ ವಿವಿಧ ಹಂತಗಳಲ್ಲಿ 1,35,00 ಹಣ ಪಡೆದಿದ್ದ .ಮರುನೇಮಕಾತಿ ಆದೇಶವನ್ನು ಪೋಸ್ಟ್ ನಲ್ಲಿ ಕಳುಹಿಸದೆ ವಾಟ್ಸಪ್ ನಲ್ಲಿ ರವಾನೆ ಮಾಡಿದ್ದ.
ಆದರೆ ಇದು ನಕಲಿ ಪತ್ರ ಎಂಬುದನ್ನು ಸ್ನೇಹಿತರು ಹಾಗೂ ಸಹದ್ಯೋಗಿಗಳಿಂದ ದೃಢೀಕರಿಸಿಕೊಂಡ ನಂತರ ಮಾದ್ಯಮಗಳ ನೆರವಿನೊಂದಿಗೆ ಎಂಡಿ ಅಕ್ರಂ ಪಾಷಾ ಅವರನ್ನು ಸಂಪರ್ಕಿಸಿ ನ್ಯಾಯ ಕೇಳಿದ್ದ,ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಂಡ ಅಕ್ರಂ ಪಾಷಾ ಅವರು ಭದ್ರತಾ ಜಾಗೃತಾಧಿಕಾರಿ ಲಿಂಗರಾಜ್ ಅವರನ್ನು ಕರೆದು ತನಿಖೆ ನಡೆಸುವಂತೆ ಸೂಚಿಸಿದ್ದರು.


ಇದರ ನಡುವೆ ಪ್ರಕರಣದ ಬಗ್ಗೆ ಮಾಹಿತಿ ತರಿಸಿಕೊಂಡ ಸಾರಿಗೆ ಸಚಿವ ರಾಮಲಿಂಗಾರೆ್ಡ್ಡಿ ಅವರು ವರದಿ ಕೇಳಿದ್ದರು.ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾದ ಕೆಎಂ ಅಶ್ರಫ್ ತನಿಖೆ ನಡೆಸಿದಾಗ ರಿಚರ್ಡ್ ನಡೆಸಿರುವ ಅಕ್ರಮ ಸಾಬೀತಾಗಿತ್ತು.ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ (ನಡತೆ ಮತ್ತು ಶಿಸ್ತು) ನಿಯಾಮವಳಿ 1971ರ ನಿಯಮ 19(2) ಅನ್ವಯ ಅಮಾನತು ಆದೇಶ ಹೊರಡಿಸಿದ್ದಾರೆ.

ರಿಚರ್ಡ್ ಅಮಾನತ್ತುಗೊಳಿಸಿರುವುದು ಸ್ವಾಗತಾರ್ಹ ಬೆಳವಣಿಗೆ.ಆದರೆ ಈ ಅಕ್ರಮದಲ್ಲಿ ಕೇವಲ ರಿಚರ್ಡ್ ಮಾತ್ರ ಭಾಗಿಯಾಗಿರೋದಾ..? ಬೇರೆಯವರು ಇದರಲ್ಲಿ ಭಾಗಿಯಾಗಿಲ್ಲವೇ..? ಎನ್ನುವ ಶಂಕೆ ಕಾಡುತ್ತಿದೆ. ಕೇಂದ್ರ ಕಚೇರಿಯಲ್ಲೇ ದೊಡ್ಡ ಜಾಲ ಇರುವ ಅನುಮಾನ ವ್ಯಕ್ತವಾಗುತ್ತಿದ್ದು ರಿಚರ್ಡ್ ನನ್ನು ತೀವ್ರ ವಿಚಾರಣೆಗೊಳಪಡಿಸಿದರೆ ಸತ್ಯಾಸತ್ಯತೆ ಬಯಲಾಗಬಹುದೇನೋ..?