
ಬೆಂಗಳೂರು: ಬಹುಷಃ ಬೆಂಗಳೂರು ಮಹಾನಗರ ಸಾರಿಗೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತದ್ದೊಂದು ಘಟನೆ ನಡೆದಿದೆ ಎನ್ನಿಸುತ್ತದೆ.ಏಕೆಂದರೆ ನಿಗಮದ ವ್ಯಾಪ್ತಿಯಲ್ಲಿನ ಬೆಳವಣಿಗೆಗಳ ಇತಿಹಾಸದ ಬಗ್ಗೆ ನಮಗಿರುವ ಮಾಹಿತಿ ಪ್ರಕಾರ ಈವರೆಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕರೆನಿಸಿಕೊಂಡ ಯಾರ ಬಗ್ಗೆಯೂ ಮುಖ್ಯಮಂತ್ರಿಗಳ ಮಟ್ಟದಲ್ಲಿ ದೂರು ನೀಡಿದ್ದ ನಿದರ್ಶನಗಳೇ ಇಲ್ಲ.ಆದರೆ ಇದೇ ಮೊದಲ ಬಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ವಿರುದ್ಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ದೂರನ್ನು ಕೊಟ್ಟಿದೆ.ಅಷ್ಟೇ ಅಲ್ಲ. ಬಿಎಂಟಿಸಿ ಎಂಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನವದೆಹಲಿಯಲ್ಲಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ಪತ್ರ ಬರೆಯಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪತ್ರ ಬರೆದಿದ್ದು ಪತ್ರದ ಪ್ರತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ. ಅಂದ್ಹಾಗೆ ಯಾವ ಕಾರಣಕ್ಕೆ ಎಂಡಿ ವಿರುದ್ದ ದೂರನ್ನು ಬರೆಯಲಾಗಿದೆ ಎನ್ನುವುದಕ್ಕು ಪತ್ರದ ಪ್ರತಿಯಲ್ಲಿ ಉತ್ತರವಿದೆ.ಇತ್ತೀಚೆಗೆ ಅಂದ್ರೆ ಕಳೆದ 20 ತಿಂಗಳ ಅವಧಿಯಲ್ಲಿ ಬಿಎಂಟಿಸಿ ವ್ಯಾಪ್ತಿಯಲ್ಲಿ 80 ಅಪಘಾತಗಳು ಸಂಭವಿಸಿದೆ.ಇದೆಲ್ಲಕ್ಕೂ ಸಂಸ್ಥೆಯ ಮಾಲೀಕರಾಗಿರುವ ಕಾರಣಕ್ಕೆ ಎಂಡಿ ಅವರೆ ನೈತಿಕ ಹೊಣೆಯಾಗ ಬೇಕಾಗುತ್ತದೆ ಎಂದು ಆಪಾದಿಸಲಾಗಿದೆ. ಗುಣಮಟ್ಟದ ಬಸ್ ಗಳನ್ನು ರಸ್ತೆಗಿಳಿಸದೆ ಇರುವುದರಿಂದಲೇ, ನುರಿತ ಹಾಗೂ ಅನುಭವಿ ಚಾಲಕರ ಸೇವೆಗೆ ಮನ್ನಣೆ ನೀಡದಿರುವುದರಿಂದಲೇ ಇಷ್ಟೆಲ್ಲಾ ಅಪಘಾತಗಳಾಗುತ್ತಿವೆ. ಬಿಎಂಟಿಸಿಗೆ ತಟ್ಟಿರುವ ಕಿಲ್ಲರ್ ಎನ್ನುವ ಕಳಂಕ ಹೆಚ್ಚಾಗಲು ಇವರೇ ಕಾರಣ ಎಂದು ಆಪಾದಿಸಲಾಗಿದೆ.

ಬಸ್ ಗಳ ಗುಣಮಟ್ಟಕ್ಕೆ ಆಧ್ಯತೆ ನೀಡಲಾಗುತ್ತಿಲ್ಲ.ಕಳಪೆ ಬಿಡಿಭಾಗಗಳನ್ನು ನೀಡಲಾಗುತ್ತಿದೆ.ಬಿಡಿಭಾಗಗಳ ಪರೀಕ್ಷಾವರದಿಯನ್ನೇ ಪಡೆಯಲಾಗುತ್ತಿಲ್ಲ.ವಾಹನಗಳು ಅಪಘಾತಗಳಿಂದ ಮುಕ್ತವಾಗೊಕ್ಕೆ ಬೇಕಾದ ಅತ್ಯಗತ್ಯ ಪರಿಕರಗಳನ್ನೇ ಅಳವಡಿಸಲಾಗುತ್ತಿಲ್ಲ. ಚಾಲಕರು ತಮ್ಮ ಅನುಭವದ ಮೇಲೆ ಬಸ್ ಗಳನ್ನು ಅವರ ರಿಸ್ಕ್ ಮೇಲೆ ಚಾಲನೆ ಮಾಡಬೇಕಾದ ಸ್ತಿತಿಯಿದೆ.ಬಸ್ ಡಿಪೋದಿಂದ ಹೊರಬಿದ್ದರೆ ಸುರಕ್ಷಿತವಾಗಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತವೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲವಾಗಿದೆ.ಇದೆಲ್ಲಕ್ಕೂ ತಲೆಕೆಡಿಸಿಕೊಳ್ಳಬೇಕಾದವರೇ ಸಂಸ್ಥೆಯ ಎಂಡಿ,ಆದರೆ ಅವರು ಈ ಬಗ್ಗೆ ಲಕ್ಷ್ಯ ಇಟ್ಟಂತೆ ಕಾಣುತ್ತಿಲ್ಲ.ಸಾವಿರಾರು ಸಿಬ್ಬಂದಿ ಕೆಲಸ ಮಾಡುತ್ತಿರುವ ಸಂಸ್ಥೆಗೆ ಕೆಟ್ಟ ಹೆಸರು ಬರೊಕ್ಕೆ ಎಂಡಿ ಅವರೇ ಕಾರಣವಾಗಿರುತ್ತಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.ಸಂಸ್ಥೆಗೆ ತಟ್ಟಿರುವ ಕಳಂಕ ಹೋಗಲಾಡಿಸುವುದಕ್ಕೆ ಕಾರಣವಾಗಬೇಕಿದ್ದ ಎಂಡಿ ಅವರೇ ಇವತ್ತು ಈ ಎಲ್ಲಾ ದುರಂತಗಳಿಗೆ ನೇರ ಹೊಣೆ ಹೊರಬೇಕೆನ್ನು್ತ್ತಾರೆ ಸಂಘದ ರಾಜ್ಯಾಧ್ಯಕ್ಷ ಜಗದೀಶ್.

ಬಸ್ ಗಳನ್ನು ಚಾಲನೆ ಮಾಡುವ ಚಾಲಕರು ದೇವರ ಸಮಾನ ಎನ್ನುವ ಮಾತಿದೆ.ಆದರೆ ಇವತ್ತು ಚಾಲಕರ ಬಗ್ಗೆ ಯಮಸ್ವರೂಪಿ ಭಾವನೆ ವ್ಯಕ್ತವಾಗುತ್ತಿದೆ.ಬಸ್ ಗಳನ್ನು ಚಾಲನೆ ಮಾಡಲು ಯೋಗ್ಯವಾದ ವ್ಯವಸ್ಥೆಗಳೇ ಇಲ್ಲವಾಗಿದೆ.ರಸ್ತೆ ಪಥವನ್ನು ಗಮನಿಸಲು ಮಿರರ್ ಗಳು ಇಲ್ಲವಾಗಿದೆ.ಸರಿಯಾಗಿ ಕೂತುಕೊಂಡು ಚಾಲನೆ ಮಾಡೊಕ್ಕೆ ಗುಣಮಟ್ಟದ ಸೀಟುಗಳಿಲ್ಲ.ವೈಪರ್ ,ಹಾರನ್ ಗಳ ಕಥೆಯಂತೂ ಕೇಳಲೇಬಾರ ದಂತಾಗಿದೆ.ಸಂಸ್ಥೆಯ ಮಾಲೀಕರಾಗಿ ಎಂಡಿ ಅವರು ಸಮಸ್ಯೆಗಳ ನಿವಾರಣೆಗೆ ಆಧ್ಯತೆ ಕೊಡಬೇಕಿದ್ದರೂ ಏಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ.ಮಾದ್ಯಮಗಳಲ್ಲಿ ಬಿಎಂಟಿಸಿಯಲ್ಲಿ ಕಳೆದ 20 ತಿಂಗಳಲ್ಲಿ 80 ಅಪಘಾತಗಳಾಗಿ ಸಾವನ್ನಪ್ಪಿರುವ ಬಗ್ಗೆ ವರದಿಗಳನ್ನು ಬಿತ್ತರಿಸಿ ದಯನೀಯ ಸ್ತಿತಿಯನ್ನು ಸಾರ್ವಜನಿಕಗೊಳಿಸಲಾಗುತ್ತಿದೆ.ಇದರಿಂದ ಎಂಡಿ ಆದವರಿಗೆ ಮುಜುಗರವಾಗಲಿ,ಕಸಿವಿಸಿಯಾಗಲಿ ಆಗುತ್ತಿಲ್ಲ ಎನ್ನುವುದೇ ಅಚ್ಚರಿ ಎಂದು ಪ್ರಜಾವಾಣಿ ಮತ್ತು ವಿಜಯವಾಣಿ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಉಲ್ಲೇಖಿಸಲಾ್ಗಿದೆ.



ಚಾಲಕರಿಂದ ಅಪಘಾತಗಳಾಗಲು ಕಾರಣವಾದ ಸಂಗತಿಗಳು ಗಂಭೀರವಾಗಿದೆ.ಪ್ರತಿ ಘಟಕಗಳಲ್ಲಿ ಕೆಲಸ ಮಾಡುವ ಚಾಲಕರು ಅವಿಶ್ರಾಂತವಾಗಿ ದುಡಿಯುತ್ತಿದ್ದಾರೆ. ಪ್ರತಿ ಚಾಲಕರು 10-11 ತಾಸು ಕೆಲಸ ಮಾಡಬೇಕಾದ ಸ್ಥಿತಿಯಿದೆ.ಸಂಚಾರ ದಟ್ಟಣೆಯಲ್ಲಿ ಇಷ್ಟೊಂದು ಸಮಯ ಅವಿಶ್ರಾಂತವಾಗಿ ಕೆಲಸ ಮಾಡುವುದು ಅಸಾಧ್ಯ.ಆದರೂ ಅವರನ್ನು ಅಷ್ಟೊಂದು ಅವಧಿಗೆ ದುಡಿಸಿಕೊಳ್ಳುತ್ತಿರುವುದು ಕ್ರೌರ್ಯವಲ್ಲದೇ ಇನ್ನೇನು..? ಬಿಎಂಟಿಸಿಯ ಬೆನ್ನಲುಬೇ ಚಾಲಕರು ಎಂದು ಎಂಡಿ ಹೇಳೋದು ಕೇವಲ ಕಾಟಾಚಾರಕ್ಕಾ..? ಅವರಿಗೆ ಚಾಲಕರ ಆರೋಗ್ಯ- ಜೀವನದ ಬಗ್ಗೆ ಕಾಳಜಿ ಇರಬೇಕೆಂದು ನಿರೀಕ್ಷಿಸುವುದು ನಮ್ಮ ತಪ್ಪಾ..? ಚಾಲಕರನ್ನು ಹೀಗೆ ಗುಲಾಮರನ್ನಾಗಿ ದುಡಿಸಿಕೊಳ್ಳುತ್ತಿರುವುದು ಯಾವ ನ್ಯಾಯ..? ಚಾಲಕರನ್ನು ಕೂಡ ಎಲ್ಲರಂತೆ ನಡೆಸಿಕೊಂಡು,ಅವರಿಂದ ಕೆಲಸ ತೆಗೆದುಕೊಂಡರೆ ಅಪಘಾತಗಳಾಗೋದು..ಅದರಿಂದ ಸಾವುಗಳಾಗೋದು ನಿಂತುಹೋಗಬಹುದು..ಇದನ್ನು ಮಾಡದೆ ಸುಮ್ಮನಿರುವುದೇ ವಿಪರ್ಯಾಸ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ವಾಹನ ದಟ್ಟಣೆ ವ್ಯಾಪಕವಾಗಿರುವ ಸನ್ನಿವೇಶದಲ್ಲಿ ಚಾಲಕರು ಬಸ್ ಗಳನ್ನು ಚಾಲನೆ ಮಾಡುವುದೇ ದುಸ್ತರವಾಗಿರುತ್ತದೆ. ವಾಹನಗಳಿಗೆ ನೀಡಲಾಗಿರುವ ಟಾರ್ಗೆಟ್ ವ್ಯವಸ್ಥೆಯನ್ನು ಇಂದಿಗೂ ಮುಂದುವರೆಸಲಾಗಿದೆ.ಆದರೆ ಸೂಕ್ತವಾದ ವಾತಾವರಣ ಮಾತ್ರ ಕಲ್ಪಿಸಲಾಗಿಲ್ಲ. ಚಾಲಕರೇ ಬಸ್ ಗಳನ್ನು ಓಡಿಸಲು ನಾವೆಷ್ಟು ಯೋಗ್ಯರು..ನಾವೆಷ್ಟು ಸುರಕ್ಷಿತರು ಎಂದು ಆತಂಕದಲ್ಲಿ ಕೆಲಸ ಮಾಡಬೇಕಾದ ಸ್ತಿತಿಯಿದೆ.
ಬೆಂಗಳೂರಿನ ನಾಗರಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ದೊರೆಯಬೇಕೆಂದು ನಿರೀಕ್ಷೆ ಮಾಡುವ ಬಸ್ ಗಳ ಮಾಲೀಕರೂ ಆಗಿರುವ ಎಂಡಿ ಅವರಿಗೆ ಅಂತದ್ದೊಂದು ವಾತಾವರಣವನ್ನು, ಸೌಲಭ್ಯವನ್ನು ಕಲ್ಪಿಸಬೇಕೆನ್ನುವ ವಿವೇಚನೆಯೂ ಇರಬೇಕಾಗುತ್ತದೆಯಲ್ಲವೇ..? ಅದು ಮನೆಯ ಮಾಲಿಕನ ಬಾಧ್ಯಸ್ಥಿಕೆಯೂ ಆಗಿರುತ್ತದೆ.ಆದರೆ ಎಂಡಿ ಅವರಿಂದ ಅಂಥದ್ದ್ಯಾವುದೇ ವ್ಯವಸ್ಥೆಗಳು ಆಗುತ್ತಿಲ್ಲ.ಹಾಗಾಗಿನೇ ಅಪಘಾತಗಳು ಹೆಚ್ಚಾಗುತ್ತಿವೆ.ಸಾವು ನೋವುಗಳು ವ್ಯಾಪಕವಾಗುತ್ತಿವೆ.ಇದೆಲ್ಲಕ್ಕೂ ಬಸ್ ಗಳ ಮಾಲೀಕರಾಗಿರುವ ಎಂಡಿ ಅವರೇ ಹೊಣೆ ಎಂದು ನೇರವಾಗಿ ಆಪಾದಿಸಿರುವ ಸಂಘದ ಪದಾಧಿಕಾರಿಗಳು ಮಾದ್ಯಮಗಳು ವರದಿ ಮಾಡಿರುವಂತೆ ಕಳೆದ 20 ತಿಂಗಳಲ್ಲಿ ಸಂಭವಿಸಿದ 80 ಸಾವುಗಳಿಗೂ ಇವರೇ ಹೊಣೆಯಾಗಿರುವುದರಿಂದ ಅವರ ವಿರುದ್ದ ನಿದ್ಯಾಕ್ಷಿಣ್ಯ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.