ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ (Middle East) ನಡೆಯುತ್ತಿರುವ ಭೀಕರ ಸಂಘರ್ಷದ ನಡುವೆಯೂ ಕರ್ನಾಟಕದ ಇಂಧನ ಭದ್ರತೆಗೆ ಹೊಸ ಬಲ ಸಿಕ್ಕಿದೆ. ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಪೂರೈಕೆ ಅಸ್ತವ್ಯಸ್ತಗೊಂಡಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ, ನವಮಂಗಳೂರು ಬಂದರಿಗೆ (New Mangalore Port) ಬೃಹತ್ ಪ್ರಮಾಣದ ಎಲ್‌ಪಿಜಿ (LPG) ಹೊತ್ತ ಹಡಗು ಯಶಸ್ವಿಯಾಗಿ ಆಗಮಿಸಿದೆ. ಇದು ರಾಜ್ಯದಲ್ಲಿ ಉಂಟಾಗಿದ್ದ ಅಡುಗೆ ಅನಿಲದ ತೀವ್ರ ಅಭಾವಕ್ಕೆ ಕೊಂಚ ಮಟ್ಟಿನ ಮದ್ದು ನೀಡುವ ನಿರೀಕ್ಷೆಯಿದೆ.
ಮಂಗಳೂರು ತಲುಪಿದ ‘ಅಪೋಲೋ ಓಷನ್’:
ಅಂದಾಜು 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತಿರುವ ‘ಅಪೋಲೋ ಓಷನ್’ (Apollo Ocean) ಹೆಸರಿನ ಬೃಹತ್ ಸರಕು ಹಡಗು ನವಮಂಗಳೂರು ಬಂದರಿಗೆ ಲಂಗರು ಹಾಕಿದೆ. ಬಂದರಿಗೆ ಆಗಮಿಸಿದ ಕೂಡಲೇ ಅನಿಲವನ್ನು ಇಳಿಸುವ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ಆರಂಭವಾಗಿವೆ. ಹಾರ್ಮುಜ್ ಜಲಸಂಧಿಯಲ್ಲಿನ ಬಿಕ್ಕಟ್ಟಿನ ಕಾರಣದಿಂದಾಗಿ ಹಡಗುಗಳ ಸಂಚಾರ ಕಠಿಣವಾಗಿದ್ದರೂ, ಪರ್ಯಾಯ ವ್ಯವಸ್ಥೆಗಳ ಮೂಲಕ ಈ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲಾಗಿದೆ.
ಈ ಅನಿಲ ಪೂರೈಕೆಯ ಹಿಂದೆ ಒಂದು ರೋಚಕವಾದ ರಣತಂತ್ರ ಅಡಗಿದೆ. ಮೂಲತಃ ಕತಾರ್‌ನ ರಾಸ್ ಲಫಾನ್‌ನಿಂದ ಸುಮಾರು 46 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ‘ಶಿವಾಲಿಕ್’ ಎಂಬ ಹಡಗು ಮಾರ್ಚ್ 16ರಂದು ಗುಜರಾತ್‌ನ ಮುದ್ರಾ ಬಂದರಿಗೆ ಬಂದಿಳಿದಿತ್ತು. ಈ ಹಡಗು ಮಂಗಳೂರಿಗೆ ಬರಬೇಕಿತ್ತಾದರೂ, ಹಾರ್ಮುಜ್ ಜಲಸಂಧಿಯ ಭದ್ರತಾ ದೃಷ್ಟಿಯಿಂದ ಶಿವಾಲಿಕ್ ಹಡಗಿನಲ್ಲಿದ್ದ ಎಲ್ಲಾ ಸರಕನ್ನು ಮುದ್ರಾ ಬಂದರಿನಲ್ಲೇ ಇಳಿಸಲಾಯಿತು. ಅಲ್ಲಿಂದ ಅಲ್ಪ ಪ್ರಮಾಣದ ಸರಕನ್ನು ಅಂದರೆ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಸಣ್ಣ ಹಡಗಾದ ‘ಅಪೋಲೋ ಓಷನ್’ಗೆ ತುಂಬಿಸಿ, ಈಗ ಮಂಗಳೂರಿಗೆ ರವಾನಿಸಲಾಗಿದೆ.
ರಾಜ್ಯದ ಹೋಟೆಲ್ ಮತ್ತು ಮನೆಗಳಿಗೆ ರಿಲೀಫ್:
ಇತ್ತೀಚೆಗಷ್ಟೇ ಎಲ್‌ಪಿಜಿ ಕೊರತೆಯಿಂದಾಗಿ ಬೆಂಗಳೂರಿನ ಹೋಟೆಲ್ ಉದ್ಯಮವು ಪ್ರತಿ ವಾರ 50 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸುತ್ತಿದೆ ಎಂಬ ವರದಿಗಳು ಬಂದಿದ್ದವು. ಇಂಡಕ್ಷನ್ ಸ್ಟೌವ್ ಮತ್ತು ಕಟ್ಟಿಗೆ ಒಲೆಗಳ ಮೇಲೆ ಅಡುಗೆ ಮಾಡುವಂತಹ ದುಸ್ಥಿತಿ ನಿರ್ಮಾಣವಾಗಿತ್ತು. ಈಗ ಬಂದಿರುವ ಈ 16 ಸಾವಿರ ಮೆಟ್ರಿಕ್ ಟನ್ ಅನಿಲವು ಗೃಹ ಬಳಕೆದಾರರಿಗೆ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪೂರೈಕೆಗೆ ಹೆಚ್ಚಿನ ಶಕ್ತಿ ತುಂಬಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಭರವಸೆ ನೀಡಿದಂತೆ, ಯುದ್ಧದ ನಡುವೆಯೂ ಭಾರತದ ಇಂಧನ ದಾಸ್ತಾನು ಕುಂಠಿತವಾಗದಂತೆ ಸರ್ಕಾರ ಎಚ್ಚರಿಕೆ ವಹಿಸುತ್ತಿದೆ. ರಷ್ಯಾದಿಂದ ತೈಲ ಖರೀದಿ ಹೆಚ್ಚಿಸುವುದರ ಜೊತೆಗೆ, ಪಶ್ಚಿಮ ಏಷ್ಯಾದಿಂದ ಪೂರೈಕೆಯಾಗುವ ಅನಿಲವನ್ನು ಸುರಕ್ಷಿತ ಮಾರ್ಗಗಳ ಮೂಲಕ ದೇಶದ ವಿವಿಧ ಬಂದರುಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಮಂಗಳೂರು ಬಂದರಿಗೆ ಬಂದಿರುವ ಈ ಹಡಗು ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ಇಡೀ ಕರ್ನಾಟಕದ ಇಂಧನ ಮಾರುಕಟ್ಟೆಗೆ ಚೈತನ್ಯ ನೀಡಲಿದೆ.










