ಉತ್ಸಾಹಿ ಅಧ್ಯಕ್ಷ ನಿಕೇತ್ ಮೌರ್ಯ, ಹತ್ತರ ಸಾಲಿನಲ್ಲಿ ಹನ್ನೊಂದನೆಯ ಅಧ್ಯಕ್ಷ ರಾಗುಳಿಯದಿದ್ರೆ ಸಾಕು..!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಕಾಂಗ್ರೆಸ್ ನ ಯುವ ನಾಯಕ,ಪ್ರಖರ ವಾಗ್ಮಿ,ಅತ್ಯುತ್ತಮ ಸಂಘಟನೆಕಾರ ನಿಕೇತ್ ರಾಜ್ ಮೌರ್ಯ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.ಬಿಎಂಟಿಸಿ ಅತ್ಯಂತ ಸಂಕಷ್ಟದಲ್ಲಿರುವ ಸನ್ನಿವೇಶದಲ್ಲೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಅವರಿಗೆ ಶುಭಾಷಯ ಕೋರುತ್ತಾ ನೂತನ ಅಧ್ಯಕ್ಷ ನಿಕೇತ್ ಅವರ ಮುಂದೆ ಇರುವ ದಂಡಿ ಸವಾಲುಗಳ ಮೇಲೆ ಕನ್ನಡ ಫ್ಲ್ಯಾಶ್ ನ್ಯೂಸ್ ಬೆಳಕು ಚೆಲ್ಲುತ್ತದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿಯೋಜನೆಯಿಂದ ನಿಗಮಕ್ಕೆ ಆಗಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಿಕೊಂಡು ಹೋಗುವ ಮಹತ್ವದ ಜವಾಬ್ದಾರಿ ಅವರ ಮೇಲಿದೆ. ಸರ್ಕಾರದಿಂದ ನಿಗಮಕ್ಕೆ ಬರಬೇಕಿರುವ ಸಾವಿರಾರು ಕೋಟಿ ಅನುದಾನ ಮತ್ತು ಬಾಕಿಯನ್ನು ತರುವ ಜವಾಬ್ದಾರಿಯಿದೆ. ಬೇರೆ ನಿಗಮಗಳಿಗೆ ಹೋಲಿಸಿದ್ರೆ ಸಾಕಷ್ಟು ಅನ್ಯಾಯಕ್ಕೊಳ ಗಾಗಿರುವ ಬಿಎಂಟಿಸಿಯ ವ್ಯವಸ್ಥೆಯನ್ನು ಹಳಿಗೆ ತರುವ ಕೆಲಸ ನಡೆಯಬೇಕಿದೆ. ಸಾರಿಗೆ ಸಿಬ್ಬಂದಿ ಅನೇಕ ವರ್ಷಗಳಿಂದ ವೇತನ ಪರಿಷ್ಕರಣೆ್ಗೆ ತುಳಿದಿರುವ ಹೋರಾಟದ ಹಾದಿಯ ಹಿನ್ನಲೆ ಅರ್ಥ ಮಾಡಿಕೊಂಡು ವೇತನ ಪರಿಷ್ಕರಣೆ ಮಾಡಿ ಅದನ್ನು ತಲುಪಿಸುವ ಹೊಣೆ ಅವರ ಹೆಗಲ ಮೇಲಿದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಸಾರಿಗೆ ಸಿಬ್ಬಂದಿ ಕಲ್ಯಾಣ-ಅಭ್ಯುದಯ-ಕ್ಷೇಮಾಭಿವೃದ್ದಿಯಂಥ ಅನೇಕ ವಿಷಯಗಳ ಬಗ್ಗೆ ಸರ್ಕಾರದ ಜತೆ ನಡೆಸುತ್ತಿರುವ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ನೀಡಬೇಕಾದ ಜವಾಬ್ದಾರಿ ಇದೆ.ತಮ್ಮನ್ನು ಯಂತ್ರಗಳಂತೆ ನೋಡದೆ ಮನುಷ್ಯರಂತೆ ನೋಡಿ ಎನ್ನುವ ಅವರ ಅನೇಕ ದಶಕಗಳ ಮಾನವೀಯ ನೆಲೆಗಟ್ಟಿನ ಬೇಡಿಕೆಗೆ ಬೆಲೆ ಕೊಡಿಸಬೇಕಾದ ಹೊಣೆ ಅವರ ಮೇಲಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಸಮಾನತೆಗಾಗಿ-ಸಮಾನ ಗೌರವಕ್ಕಾಗಿ-ಗೌರವಯುತವಾಗಿ ಬದುಕುವ ಅವಕಾಶಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ನ್ಯಾಯ ಕೊಡಿಸಬೇಕಾದ ಗುರುತರ ಹೊಣೆಗಾರಿಕೆಯಿದೆ.


ಸಾರಿಗೆ ನಿಗಮ ಸಾಕಷ್ಟು ಸಮಸ್ಯೆಗಳಲ್ಲಿ ಮುಳುಗಿ ಹೋಗಿದೆ.ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಫುಲ್ ಸ್ಟಾಪ್ ಹಾಕಬೇಕಿದೆ.ಟೆಂಡರ್ ಗಳಲ್ಲಿ ನಡೆಯುತ್ತಿರುವ ಅಕ್ರಮ-ಭ್ರಷ್ಟಾಚಾರಕ್ಕೆ ಕೊನೆ ಹಾಡಬೇಕಿದೆ. ಅವೈಜ್ನಾನಿಕ ಮತ್ತು ಅಮಾನವೀಯವಾದ ಸುತ್ತೋಲೆ-ಆದೇಶಗಳನ್ನು ಹಿಂಪಡೆಯಬೇಕಾಗಿದೆ.ಮಹಿಳಾ ಸಿಬ್ಬಂದಿಯನ್ನು ಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿಲ್ಲ ಎನ್ನುವ ಆರೋಪಕ್ಕೆ ಕೊನೆ ಹಾಡಬೇಕಿದೆ.ಗುಣಮಟ್ಡದ ಬಸ್ ಗಳ ಜತೆಗೆ ಪ್ರಯಾಣಿಕಸ್ನೇಹಿ ಸೇವೆ ಕೊಡಬೇಕಾದ ವಿಷಯದಲ್ಲಿ ಬಿಎಂಟಿಸಿ ಇವತ್ತಿಗೂ ಎದುರಿಸುತ್ತಿರುವ ಸಾಕಷ್ಟು ಸಮಸ್ಯೆ-ಸವಾಲುಗಳಿಗೆ ನೂತನ ಅಧ್ಯಕ್ಷ ನಿಕೇತ್ ಅವರು ಗಮನ ಹರಿಸಬೇಕಿದೆ.
ನೂತನ ಅಧ್ಯಕ್ಷರು ಉತ್ಸಾಹಿಗಳು,ಯುವಕರು ಆಗಿದ್ದಾರೆ.ಅವರ ಪ್ರಖರ ಭಾಷಣವನ್ನು ಮಾದ್ಯಮಗಳಲ್ಲಿ ಕೇಳಿದ್ದೇವೆ.ಮನುಷ್ಯ ಸಂವೇದನೆ ಇರುವ ಲಕ್ಷಣಗಳಿವೆ.ಸಾರಿಗೆ ಸಿಬ್ಬಂದಿಗೆ ನಿಜಕ್ಕೂಮ ಇಂಥಾ ಒಬ್ಬ ಅಧ್ಯಕ್ಷನ ಅವಶ್ಯಕತೆ ಇತ್ತು ಎನ್ನಿಸುತ್ತೆ ಎಂದು ಎಐಟಿಯುಸಿ ಮುಖಂಡ ಅನಂತ ಸುಬ್ಬರಾವ್, ವಿಜಯ ಸಾರಥಿ ನುಡಿದಿದ್ರೆ, ಸಾರಿಗೆ ಮುಖಂಡ ಆನಂದ್, ನಿಕೇತ್ ಮೌರ್ಯ ಅವರು ಸಾರಿಗೆ ಸಿಬ್ಬಂದಿಯ ಸಮಸ್ಯೆ ಆಲಿಸಲು ಅವರ ಬಳಿ ಹೋಗುವಂತ ಅವಶ್ಯಕತೆ ಇದೆ ಎಂದಿದ್ದಾರೆ.ಕೂಟದ ಮುಖಂಡರು ಕೂಡ ನಿಕೇತ್ ಮೌರ್ಯ ಅವರ ನೇಮಕವನ್ನು ಸ್ವಾಗತಿಸಿದ್ದಾರೆ. ಇನ್ನು ಸಾರಿಗೆ ಮುಖಂಡರಾದ ನಾಗರಾಜ್ ಅವರು ನಿಕೇತ್ ಮೌರ್ಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವತ್ತ ಕೆಲಸ ಮಾಡಲಿ ಅವರಿಗೆ ಬೇಕಾದ ಎಲ್ಲಾ ಸಹಕಾರ ಕೊಡಲು ನಾವು ಸಿದ್ದವಿದ್ದೇವೆ ಎಂದಿದ್ದಾರೆ.ಇನ್ನು ಸಾರಿಗೆ ಸಿಬ್ಬಂದಿ ನಿಕೇತ್ ಮೌರ್ಯ ಅವರಂಥ ಯುವ ಹಾಗೂ ಉತ್ಸಾಹಿ ನಮಗೆ ಅಧ್ಯಕ್ಷರಾಗಿ ಸಿಕ್ಕಿರುವುದರಿಂದ ಮುದುಡಿ ಹೋಗಿರುವ ನಿರೀಕ್ಷೆಗಳು ಗರಿಗೆದರಿವೆ ಎಂದಿದ್ದಾರೆ.ಇದೆಲ್ಲವನ್ನು ನಿಕೇತ್ ಮೌರ್ಯ ಅವರು ಗಮನಿಸಬೇಕಿದೆ.
ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಬಹುತೇಕರು ಬಿಎಂಟಿಸಿಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಮಾತನ್ನೇ ಆಡುತ್ತಾರೆ.ಆದರೆ ಅಧಿಕಾರ ವಹಿಸಿಕೊಂಡ ಮೇಲೆ ತಾವಾಡಿದ್ದ ಮಾತಿಗೂ ತಮ್ಮ ನಡುವಳಿಕೆಗೂ ಸಂಬಂಧವೇ ಇಲ್ಲದಂತೆ ಇದ್ದುಬಿಡುತ್ತಿದ್ದರು.ಸಾರಿಗೆ ನಿಗಮದ ಉದ್ದಾರದ ಮಾತು ಹಾಳಾಗಿ ಹೋಗ್ಲಿ ನಿಗಮದಲ್ಲಿ ಏನಾಗ್ತಿದೆ ಎನ್ನುವುದನ್ನು ವಿಚಾರಿಸುವುದನ್ನೇ ಮರೆತುಬಿಡ್ತಿದ್ರು.ಟೆಂಡರ್ ಗಳಲ್ಲಿ ಕೈ ಹಾಕುವುದು, ಗುತ್ತಿಗೆದಾರರ ಜತೆ ಮೀಟಿಂಗ್-ಪರ್ಸಂಟೇಜ್ ವ್ಯವಹಾರಗಳಲ್ಲೇ ಮುಳುಗಿ ಹೋಗ್ತಿದ್ರು,ಸಾರಿಗೆ ಸಿಬ್ಬಂದಿಯ ಕಲ್ಯಾಣವನ್ನೇ ಮರೆತುಬಿಡ್ತಿದ್ರು.ಹಾಗಾಗಿನೇ ಯಾವ ಅಧ್ಯಕ್ಷರು ಬಂದ್ರೂ ಸಾರಿಗೆ ಸಿಬ್ಬಂದಿಯಲ್ಲಿ ನ್ಯಾಯದ ಭರವಸೆಯೇ ಸತ್ತು ಹೋಗ್ತಿತ್ತು.ಅದನ್ನು ಚಿಗುರಿಸಿದವರೇ ಇಲ್ಲವಾಗಿದ್ರು.
ನಿಕೇತ್ ಮೌರ್ಯ ಆ ಕೆಟಗರಿಗೆ ಸೇರೊಲ್ಲ ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ನ ನಂಬಿಕೆ ಹಾಗೂ ವಿಶ್ವಾಸ. ಜನಸಾಮಾನ್ಯರು ಅದ್ರಲ್ಲೂ ಶ್ರಮಿಕ ವರ್ಗದವರ ಬದುಕು-ಬವಣೆಗಳನ್ನು ತೀರಾ ಹತ್ತಿರದಿಂದ ನೋಡಿರುವ, ಅದನ್ನು ಬಲ್ಲಂತ ಸೂಕ್ಷ್ಮ ಸಂವೇದನೆ ಅವರಲ್ಲಿರುವುದರಿಂದ ಬಿಎಂಟಿಸಿ ಸಿಬ್ಬಂದಿ ಬದುಕು-ಜೀವನಶೈಲಿ ಹಾಗೂ ಕಾರ್ಯಶೈಲಿಯಲ್ಲಿ ಸುಧಾರಣೆ ಬರಬಹುದೆನ್ನುವ ನಂಬಿಕೆ ನಮ್ಮಲ್ಲಿದೆ. ಇರುವಷ್ಟು ದಿನಗಳಲ್ಲಾದ್ರೂ ಬಿಎಂಟಿಸಿ ಪುನಶ್ಚೇತನಕ್ಕೆ ಕಾರಣವಾಗುವ ನಿಟ್ಟಿನಲ್ಲಿ ಅವರು ಕೆಲಸ ಮಾಡಲಿ,ಅವರಲ್ಲಿರುವ ಮನುಷ್ಯತ್ವ ಇದಕ್ಕೆ ಪೂರಕವಾಗಿ ಸಹಕರಿಸಲಿ.. ನಲಿವು-ಭರವಸೆ-ಆತ್ಮವಿಶ್ವಾಸವನ್ನೇ ಕಳೆದುಕೊಂಡಿರುವ ಸಾರಿಗೆ ಬಂಧುಗಳ ಬದುಕುಗಳು ಹಸನಾಗಿ ಅವರ ಮುಖದಲ್ಲಿ ಮಂದಹಾಸ ಮೂಡುವಂತ ನಿಟ್ಟಿನಲ್ಲಿ ನಿಕೇತ್ ಮೌರ್ಯ ಕಾರ್ಯಪ್ರವೃತ್ತರಾಗಲಿ ಎನ್ನುವುದೇ ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯ.