
ಬೆಂಗಳೂರು: ಬಿಡಿಎ ನಲ್ಲಿ ಭಾರೀ ಸದ್ದು ಮಾಡಿದ್ದ 524 ಕೋಟಿ ಅಕ್ರಮದ ತನಿಖೆಗೆ ಕೊನೆಗೂ ಸಮಿತಿ ರಚನೆಯಾಗಿದೆ. ಎಂಜಿನಿಯರಿಂಗ್ ಮೆಂಬರ್ ಶಾಂತರಾಜಣ್ಣ,ಅಭಿಯಂತರರರಾದ ಅಶೋಕ್,ಅಶೋಕ್ ಭಾಗಿ ಹಾಗೂ ಪರಶುರಾಮಪ್ಪ ಅವರ ವಿರುದ್ಧ ಕೇಳಿಬಂದಿದ್ದ ಆಪಾದನೆಗೆ ಸಂಬಂಧಿಸಿದಂತೆ ಕಮಿಷನರ್ ಕ್ಯಾಪ್ಟನ್ ಮಣಿವಣ್ಣನ್ ತನಿಖಾ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದ್ದಾರೆ. ನಿವೃತ್ತ ನ್ಯಾಯಾಧೀಶರಾದ ನಿಯಾಜ್ ಅಹಮದ್ ಅವರನ್ನೊಳಗೊಂಡ ಸಮಿತಿ 8 ವಾರದೊಳಗೆ ತನಿಖಾ ವರದಿಯನ್ನು ತಮಗೆ ಸಲ್ಲಿಸುವಂತೆ ಉಪಕಾರ್ಯದರ್ಶಿಗಳು ಸೂಚಿಸಿದ್ದಾರೆ.ಸಾಮಾಜಿಕ ಕಾರ್ಯಕರ್ತ ಶರತ್ ಬಾಬು ಅವರ ಹೋರಾಟಕ್ಕೆ ಈ ಮೂಲಕ ಆರಂಭಿಕ ಮುನ್ನಡೆ ದೊರೆತಂತಾಗಿದೆ.

ಬಿಡಿಎ ನಿಂದ ಬಿಬಿಎಂಪಿಗೆ ಹಸ್ತಾಂತರವಾದ ಬಡಾವಣೆಗಳಲ್ಲಿಯೂ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲಾಗಿದೆ ಎಂದು ಬಿಲ್ ಸೃಷ್ಟಿಸುವುದರಿಂದ ಹಿಡಿದು ಪರಿಚಯವಿರುವ ಗುತ್ತಿಗೆದಾರರಿಗೆ ನಿಯಮಗಳನ್ನು ಮೀರಿ ಗುತ್ತಿಗೆ ನೀಡಿದವರೆಗಿನ ಆಪಾದನೆಗೆ ಸಂಬಂಧಿಸಿದಂತೆ ಬಿಡಿಎ ನಲ್ಲಿ ನಡೆದಿದೆ ಎನ್ನಲಾದ ಸುಮಾರು 524 ಕೋಟಿಗೂ ಹೆಚ್ಚು ಅಕ್ರಮದ ಬಗ್ಗೆ ತನಿಖೆಗೆ ಆದೇಶ ಹೊರಬಿದ್ದಿದೆ. ಇಷ್ಟೊಂದು ಬೃಹತ್ ಪ್ರಮಾಣದ ಅಕ್ರಮ ನಡೆದಿರುವುದರ ಹಿಂದೆ ಎಂಜಿನಿಯರಿಂಗ್ ಮೆಂಬರ್ ಆದ ಶಾಂತರಾಜಣ್ಣ, ಅಭಿಯಂತರರಾದ ಎನ್ ಅಶೋಕ್, ಅಶೋಕ್ ಬಾಗಿ ಮತ್ತು ಪರಶುರಾಮಪ್ಪ ಅವರ ಪಾತ್ರವಿದೆ ಎಂದು ಆಪಾದಿಸಿ ಸಾಮಾಜಿಕ ಕಾರ್ಯಕರ್ಯ ಶರತ್ ಬಾಬು ಅವರು ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಬೆಂಗಳೂರು ಜಿಲ್ಲೆ ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ 2ರ ಭೀಮನಕುಪ್ಪೆ ಸರ್ವೇ ನಂಬರ್ 73 ಹಾಗೂ ಜೆಪಿ ನಗರ 8 ಮತ್ತು 9ನೇ ಫೇಸ್ ಅಂಜನಾಪುರ ಬಡಾವಣೆಗಳಲ್ಲಿ ಒಂದಲ್ಲಾ ಎರಡಲ್ಲ ಬರೊಬ್ಬರಿ 524 ಕೋಟಿ ಅಕ್ರಮ ನಡೆದಿದೆ ಎಂದು ಶರತ್ ದಾಖಲೆ ಸಮೇತ ದೂರು ನೀಡಿದ್ದರು.ಅವರು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಕ್ಯಾಪ್ಟನ್ ಮಣಿವಣ್ಣನ್ ತಕ್ಷಣವೇ ಮೂವರ ನ್ನು ಒಳಗೊಂಡ ಸಮಿತಿ ರಚಿಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.
ಉಪಕಾರ್ಯದರ್ಶಿಗಳ ಕಚೇರಿ ಮೂಲಕ ಮಣಿವಣ್ಣನ್ ಆದೇಶ ಹೊರಬೀಳುತ್ತಿದ್ದಂತೆ ಆಪಾದಿತರ ಎದೆಯಲ್ಲಿ ಢವ ಢವ ಶುರುವಾಗಿದೆ. 8 ವಾರದೊಳಗೆ ಸಮಿತಿ ವರದಿ ನೀಡಬೇಕೆಂದು ಸೂಚನೆ ನೀಡಿರುವುದರ ಬೆನ್ನಲ್ಲೇ ತನಿಖೆ ಕೂಡ ಭರ್ಜರಿಯಾಗಿ ಶುರುವಾಗಿದೆ.ಸಮಿತಿ ಸ್ಪೋಟಕ ಎನ್ನುವಂತ ಮಾಹಿತಿ ಮತ್ತು ದಾಖಲೆ ಸಂಗ್ರಹಿಸಿದ್ದು ಯಾರ್ಯಾರ ಮೇಲೆ ಆಪಾದನೆ ಕೇಳಿಬಂದಿದೆಯೋ ಅವರೆಲ್ಲಾ ಇದರಲ್ಲಿ ಫಿಟ್ ಆಗುವ ಸಾಧ್ಯತೆಗಳು ದಟ್ಟವಾಗಿದೆ ಎನ್ನಲಾಗ್ತಿದೆ.

ಬಿಡಿಎ ನಿಂದ ಅಪ್ರೂವ್ ಆದ ಸಾಕಷ್ಟು ಲೇ ಔಟ್ ಗಳನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಿ ಸಾಕಷ್ಟು ವರ್ಷಗಳೇ ಕಳೆದಿದೆ.ಆದರೆ ಅಧಿಕಾರಿಗಳಾದ ಅಶೋಕ್ ಮತ್ತು ಅಶೋಕ್ ಭಾಗಿ ಹಾಗು ಪರಶುರಾಮಪ್ಪ ಅವರು ತಮ್ಮ ಆಪ್ತೇಷ್ಟ ಗುತ್ತಿಗೆದಾರರಿಗೆ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಅನುಕೂಲ ಮಾಡಿಕೊಟ್ಟಿರುತ್ತಾರೆ. 10 ಪ್ಯಾಕೇಜ್ ಗಳನ್ನು ಇಬ್ಬರು ಗುತ್ತಿಗೆದಾರರಿಗೇನೇ ಹಂಚಿಕೆ ಮಾಡಿದ್ದಾರೆ. ಟೆಂಡರ್ ನಲ್ಲಿ ಭಾಗಿಯಾಗಲು ಬೇಕಾದ ಪ್ರಾಥಮಿಕ ಅರ್ಹತೆಗಳೇ ಇಲ್ಲದಿದ್ದರೂ ಅವರಿಗೆ ಟೆಂಡರ್ ನೀಡಲಾಗಿದೆ. ಅವರಿಗೇನೆ ತಾವು ವರ್ಗವಾದ ಕಡೆಗಳಲ್ಲೇ ಮತ್ತಷ್ಟು ಗುತ್ತಿಗೆ ನೀಡಲಾಗಿದೆ.ಇದೆಲ್ಲವೂ ಸಂಪೂರ್ಣವಾಗಿ ಅಕ್ರಮವಾಗಿದೆ ಎಂದು ಆಪಾದಿಸಿ ದಾಖಲೆ ಸಮೇತ ಶರತ್ ಬಾಬು ಅವರು ದೂರು ನೀಡಿದ್ದರು.

ಮಾಜಿ ವಿಧಾನಪರಿಷತ್ ಸದಸ್ಯರಾದ ಲಕ್ಷ್ಮಿನಾರಾಯಣ್ ಅವರ ಅಳಿಯನಾದ ಅಶೋಕ್ ಅವರು ಅದೇ ರಾಜಕೀಯ ಪ್ರಭಾವ ಮತ್ತು ಶಿಫಾರಸ್ಸು ಬಳಸಿ ಪ್ರಕರಣದಿಂದ ಬಚಾವ್ ಆಗೊಕ್ಕೆ ಯತ್ನಿಸಿದ್ದರೆನ್ನುವುದು ಶರತ್ ಅವರ ಆಪಾದನೆ.ಇದರಲ್ಲಿ ಶಾಮೀಲಾಗಿದ್ದಾರೆನ್ನಲಾಗಿರುವ ಮತ್ತೋರ್ವ ಅಧಿಕಾರಿ ಅಶೋಕ್ ಭಾಗಿ ಅವರು ಸೇರಿಕೊಂಡು ತಮ್ಮ ಮೇಲೆ ಇಲ್ಲಸಲ್ಲದ ಆಪಾದನೆ ಹೊರಿಸಿ ತಮ್ಮನ್ನು ಕಾನೂನು ಕಟಕಟೆಯಲ್ಲಿ ನಿಲ್ಲುವಂತೆ ಕೂಡ ಮಾಡಿದ್ದರು.ಆದರೆ ಅದನ್ನೆಲ್ಲಾ ಧೈರ್ಯವಾಗಿ ಎದುರಿಸಿ ಅಂತಿಮವಾಗಿ ಪ್ರಕರಣದಲ್ಲಿ ಶಾಮೀಲಾಗಿದ್ದಾರೆನ್ನಲಾಗಿರುವವರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲೇ ಪ್ರತೀಕಾರ ತೀರಿಸಿಕೊಂಡಿದ್ದಾರಂತೆ ಶರತ್.ಅವರ ಹೋರಾಟಕ್ಕೆ ಅಂತಿಮವಾಗಿ ಫಲ ದೊರೆತಿದೆ ಎನ್ನುವುದು ಶರತ್ ಬಾಬು ಅವರ ಅಭಿಪ್ರಾಯ.

ಟೆಂಡರ್ ನ ಎಲ್ಲಾ ನಿಯಮಗಳನ್ನು ಧಿಕ್ಕರಿಸಿ ಅಧಿಕಾರಿಗಳಾದ ಎನ್ ಅಶೋಕ್, ಅಶೋಕ್ ಬಾಗಿ ಮತ್ತು ಪರಶುರಾಮಪ್ಪ ಅವರು ತಮ್ಮ ಆಪ್ತೇಷ್ಟ ಗುತ್ತಿಗೆದಾರರಿಗೆ ಗುತ್ತಿಗೆ ಕೊಡಿಸಿದ್ದಾರೆ.ಅರ್ಹತೆನೇ ಇಲ್ಲದಿದ್ದರೂ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.ಬಿಡಿಎ ಹಸ್ತಾಂತರಿತ ಬಡಾವಣೆಗಳಲ್ಲಿ ಕೆಲಸ ಮಾಡದಿದ್ದರೂ ಅಲ್ಲಿ ಕೆಲಸ ಮಾಡಲಾಗಿದೆ ಎಂದು ಸುಳ್ಳು ಬಿಲ್ ಸೃಷ್ಟಿಸಿದ್ದಾರೆ.ಈ ಅಕ್ರಮದ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡದೆ ಅಭಿಯಂತರ ಸದಸ್ಯರಾದ ಶಾಂತರಾಜಣ್ಣ ಕಣ್ಮುಚ್ಚಿಕೊಂಡು ಅನುಮೋದನೆ ನೀಡಿದ್ದಾರೆ ಎಂದು ಶರತ್ ಆಪಾದಿಸಿದ್ದಾರೆ. ಈ ಅಕ್ರಮದಲ್ಲಿ ಎಲ್ಲರಿಗೂ ಅಪಾರ ಪ್ರಮಾಣದ ಪ್ರಸಾದ ಸಂದಾಯವಾಗಿರಬಹುದೆನ್ನುವುದು ಅವರ ಮುಂದುವರೆದ ಆಪಾದನೆ.

ಶರತ್ ಬಾಬು ಅವರ ನ್ಯಾಯಯುತ ಹೋರಾಟ ಕಮಿಷನರ್ ಕ್ಯಾಪ್ಟನ್ ಮಣಿವಣ್ಣನ್ ಅವರ ಕಣ್ಣು ಕೂಡ

ತೆರೆಸಿದೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 524 ಕೋಟಿ ಹಗರಣ ಎಂದು ಹೇಳಿರುವುದರಿಂದ ಇದನ್ನು ಹಗುರವಾಗಿ ಪರಿಗಣಿಸದೆ ತಕ್ಷಣಕ್ಕೆ ತನಿಖಾ ಸಮಿತಿ ರಚಿಸಲು ಆದೇಶಿಸಿದ್ದಾರೆ.ಅವರ ಆದೇಶದ ಮೇರೆಗೆ ನಿವೃತ್ತ ನ್ಯಾಯಾಧೀಶ ನಿಯಾಜ್ ಅಹಮದ್ ಎಸ್ ದಫೇದಾರ್, ನಿವೃತ್ತ ಎಂಜಿನಿಯರ್ ಕೃಷ್ಣಾರೆಡ್ಡಿ ಮತ್ತು ಕಾರ್ಯಪಾಲಕ ಅಭಿಯಂತರ ಯಶವಂತ ಕುಮಾರ್ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ.ಅಲ್ಲದೇ 8 ವಾರದೊಳಗೆ ಸಮಿತಿ ವರದಿ ಸಲ್ಲಿಸಬೇಕೆಂದು ಕೂಡ ಸೂಚಿಸಿದ್ದಾರೆ.
ಬಿಡಿಎಗೆ ಬಂದ ಮೇಲೆ ಇರುವ ಅವ್ಯವಸ್ಥೆಯನ್ನು ಸರಿಪಡಿಸಲು ಸಾಕಷ್ಟು ಶ್ರಮಿಸುತ್ತಿರುವ ಕಮಿಷನರ್ ಕ್ಯಾಪ್ಟನ್ ಮಣಿವಣ್ಣನ್ ಅವರ ಖಡಕ್ ಆದೇಶ ಹೊರಬೀಳ್ತಿದ್ದಂತೆ ಯಾರ ಮೇಲೆಲ್ಲಾ ಆಪಾದನೆಗಳಿವೆಯೋ ಅವರೆಲ್ಲಾ ಪತರುಗುಟ್ಟಿ ಹೋಗಿದ್ದಾರಂತೆ. ಅಭಿಯಂತರ ಸದಸ್ಯರಾದ ಶಾಂತರಾಜಣ್ಣ ಅವರು ದೊಡ್ಡವರ ಮೊರೆ ಹೋಗಿದ್ದಾರಂತೆ.ಇನ್ನು ಅಭಿಯಂತರರಾದ ಅಶೋಕ್ ಅವರು ತಮ್ಮ ಎಕ್ಸ್ ಎಮ್ ಎಲ್ ಸಿ ಮಾವ ಲಕ್ಷ್ಮಿನಾರಾಯಣ್(ಅಣ್ಣಯ್ಯ) ಅವರ ಮೂಲಕ ತಮ್ಮನ್ನು ಬಚಾವು ಮಾಡಿಸುವಂತೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗ್ತಿದೆ.ಅವರಷ್ಟೇ ಪ್ರಭಾವಿ ಆಗಿರುವ ಅಶೋಕ್ ಭಾಗಿ ಕೂಡ ತಮ್ಮ ವ್ಯಾಪ್ತಿಯಲ್ಲಿ ಪ್ರಯತ್ನ ಮಾಡ್ತಿದಾರೆ.ಅದೇನೇ ಆಗಿರಲಿ ದಾಖಲೆ ಸಮೇತ ಶರತ್ ಕುಮಾರ್ ಅವರು ನೀಡಿರುವ ದೂರು ಕಳಂಕಿತರ ನಿದ್ದೆ ಕೆಡಿಸಿರುವುದಂತೂ ಸತ್ಯ.










