advertise here

Search

“ಬಿಕ್ಲ ಶಿವು” ಮರ್ಡರ್‌-MLA ಭೈರತಿ ಬಸವರಾಜ್‌ ರಾಜಕೀಯ ಭವಿಷ್ಯ ಅತಂತ್ರ.!?


ದಿನಾಂಕ: 15-07-2025

ಸ್ಥಳ:ಕೆ.ಆರ್‌ ಪುರಂ

ಸಮಯ: ರಾತ್ರಿ 08:10

ರಾಜಧಾನಿ ಬೆಂಗಳೂರಿನ ಕೆ.ಆರ್‌ ಪುರಂ ಕ್ಷೇತ್ರದ  ವ್ಯಾಪ್ತಿಯಲ್ಲಿ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲ ಶಿವು  ಎನ್ನುವ ರೌಡಿ ಶೀಟರ್‌ ಹೆಣ ಬಿದ್ದಿತ್ತು. ಸಹಜವಾಗಿ ರೌಡಿಗಳ ಹೆಣ ಬಿದ್ರೆ ಗೊತ್ತಲ್ಲ, ಹಳೇ  ರೈವಲ್ರಿ ಯಿಂದಲೇ ಅಂತದ್ದೊಂದು ಪ್ರತೀಕಾರದ ಕೊಲೆ ಆಗಿರಬಹುದೆಂದು ಮಾತನಾಡಿ ಸುಮ್ಮನಾಗ್ತೇವೆ. ಆರಂಭದಲ್ಲಿ ನಿನ್ನೆ ರಾತ್ರಿಯ ಕೇಸ್‌ ಕೂಡ ಹಾಗೆಯೇ ಎನ್ನಿಸಿತ್ತು.ಆದರೆ ಆನಂತರದಲ್ಲಿ ಹೆಣವಾದವನ ತಾಯಿ ಕೊಟ್ಟ ಕಂಪ್ಲೆಂಟ್‌ ಇದೆಯೆಲ್ಲಾ ಅದು ಇಡೀ ಪ್ರಕರಣಕ್ಕೊಂದು ಬಿಗ್‌ ಟ್ವಿಸ್ಟ್.‌ ಇಂಪಾರ್ಟೆನ್ಸ್‌ ಕೊಟ್‌ ಬಿಡ್ತು ನೋಡಿ.

ಯೆಸ್…ಕೆ.ಆರ್‌  ಪುರಂ ಲಿಮಿಟ್ಸ್‌ ನಲ್ಲಿ ನಡೆದ ಈ ಕೊಲೆ ಅಂತದ್ದೊಂದು ಟ್ವಿಸ್ಟ್‌ ಪಡೆಯೊಕ್ಕೆ ಕಾರಣವೇ ಆ ಪೊಲಿಟಿಷಿಯನ್‌ .ರೌಡಿ ಬಿಕ್ಲ ಶಿವುನ ಕೊಲೆ ಪ್ರಕರಣ ಸಂಬಂಧ, ಆತನ ತಾಯಿ ಕೊಟ್ಟ ದೂರಿಗೆ ಸಂಬಂಧಿಸಿದಂತೆ ಪೊಲೀಸ್ರು ದಾಖಲಿಸಿದ ಎಫ್‌ ಐ ಆರ್‌ ನಲ್ಲಿ ಕೇಳಿಬಂದ ಆಪಾದಿತರ ಲೀಸ್ಟ್‌ ನಲ್ಲಿ ಇದ್ದಿದ್ದೇ ಈ ಪೊಲಿಟಿಷಿಯನ್.. ಆಶ್ಚರ್ಯ ಎಂದ್ರೆ ‌ ಪೊಲೀಸ್ರು ದಾಖಲಿಸಿದ ಎಫ್‌ ಐ ಆರ್ ನಲ್ಲಿ ಇದ್ದ ಆ  5ನೇ ಆರೋಪಿಯೇ  ಕೆ.ಆರ್‌ ಪುರಂ ಬಿಜೆಪಿ ಶಾಸಕ  ಭೈರತಿ ಬಸವರಾಜ್. ಅಂದ್ಹಾಗೆ ಈ ಭೈರತಿ ಬಸವರಾಜ್‌ ಹಾಲಿ ಎಮ್ಮೆಲ್ಲೆ, ಮಾಜಿ ಮಿನಿಸ್ಟರ್‌ ಕೂಡ.

ಕೆ.ಆರ್‌ ಪುರಂ ನಲ್ಲಿ ನಡೆದೋದ  ರೌಡಿ ಶೀಟರ್‌ ಬಿಕ್ಲ ಶಿವು ಕೊಲೆ ಪ್ರಕರಣದಲ್ಲಿ ಸಿಕ್ಕಾಕೊಂಡವರೆಲ್ಲಾ ಭೈರತಿ ಬಸವರಾಜ್‌ ಅವರ ಬಲಗೈ ಭಂಟರು. ಎಮ್ಮೆಲ್ಲೆ  ಹೇಳಿದ್ದನ್ನು ಝೀ ಹುಜೂರ್‌ ಎಂದು ಚಾಚೂ ತಪ್ಪದೇ ಪಾಲಿಸುವಂತ ನಂಬಿಗಸ್ಥರು.ಶಾಸಕರ ಆಸ್ತಿ ಗಳಿಕೆ,ಸಂಪತ್ತಿನ ಹೆಚ್ಚಳ, ರಿಯಲ್‌ ಎಸ್ಟೇಟ್‌ ಸಾಮ್ರಾಜ್ಯದ ವಿಸ್ತಾರದಲ್ಲಿ ಇವರ ಪಾತ್ರ ನಿರ್ಣಾಯಕ ಎನ್ನಲಾಗ್ತಿದೆ.ಸಿಕ್ಕಾಕೊಂಡವರೆಲ್ಲಾ ಶಾಸಕರ ಬಲಗೈ ಭಂಟರೇ ಆಗಿರುವುದರಿಂದ ಇದರ ಹಿಂದೆ ಶಾಸಕರ ಕುಮ್ಮಕ್ಕೇನಾದ್ರೂ ಇದೆಯಾ ಎನ್ನುವ ಅನುಮಾನ ಸಹಜವಾಗೇ ಕೊಲೆಯಾದವನ ತಾಯಿಗೂ ಬಂದಿರಬಹುದೇನೋ..ಅವರ ಪಾತ್ರವೂ ಇರಬಹುದೆನ್ನುವ ಅಂದಾಜಿನಲ್ಲೋ..ಲೆಕ್ಕಾಚಾರದಲ್ಲೋ..ಭೈರತಿ ಬಸವರಾಜ್‌ ಅವರ ಹೆಸರನ್ನು ಸೇರಿಸಲಿಕ್ಕೆ ಸಾಧ್ಯತೆಗಳಿವೆ ಎನ್ನಲಾಗ್ತಿದೆ.ಅವರ ಪಾತ್ರ ನಿಜಕ್ಕೂ ಇದರಲ್ಲಿದೆಯೇ..? ಅಥವಾ ಮಗನನ್ನು ಕಳೆದುಕೊಂಡ ನೋವಿಗೆ ತಾಯಿ ಶಾಸಕರ ಹೆಸರನ್ನು ಸೇರಿಸಿದ್ಲೋ ಎನ್ನೋದೆಲ್ಲಾ ಪೊಲೀಸ್‌ ಇನ್ವೆಸ್ಟಿಗೇಷನ್‌ ನಿಂದ ಬಯಲಾಗಬೇಕು..ಬಯಲಾಗ್ತದೆ ಕೂಡ..ಆದರೆ ಬಿಕ್ಲ ಶಿವುನ ಮರ್ಡರ್‌ ಕೇಸ್‌ ನಲ್ಲಿ ಶಾಸಕರ ಹೆಸ್ರು ಥಳಕು ಹಾಕ್ಕೊಂಡಿರೋದೇ ಒಂದು ಇಂಟರೆಸ್ಟಿಂಗ್‌ ಫ್ಯಾಕ್ಟ್.

ಭೈರತಿ ಬಸವರಾಜ್‌ ಹೇಳಿಕೇಳಿ ಒಬ್ಬ ರಿಯಲ್‌ ಎಸ್ಟೇಟ್‌ ಉದ್ಯಮಿ. ತಮ್ಮ ರಾಜಕೀಯ ಜೀವನದಲ್ಲಿ ಒಬ್ಬ ಸೀರಿಯಸ್‌ ಪೊಲಿಟಿಷಿಯನ್‌ ಆಗಲಿಕ್ಕೆ ಸಾಧ್ಯವಾಗದಿದ್ದರೂ ಒಬ್ಬ ಯಶಸ್ವಿ ರಿಯಲ್‌ ಎಸ್ಟೇಟ್‌ ಐಕಾನ್‌ ಆಗಿರೋದಂತೂ ಸತ್ಯ.ಆದರೆ ಏನೂ ಇಲ್ಲದಿದ್ದ ಭೈರತಿ ಇವತ್ತು ಸಾವಿರಾರು ಕೋಟಿ ರೂಗಳ ಒಡೆಯ ಆಗಿದ್ದೇಗೆ ಎನ್ನುವುದಕ್ಕೂ ಇದೇ ರಿಯಲ್‌ ಎಸ್ಟೇಟ್‌ ದುನಿಯಾದಲ್ಲಿ ಹತ್ತಾರು ಕಥೆಗಳಿವೆ. ಅದು ಅವರ ಬಗ್ಗೆ ತಿಳಿದವರಿಗಷ್ಟೇ ಗೊತ್ತು.

ಕೆ.ಆರ್‌ ಪುರಂನಿಂದ  ಗೆದ್ದು 3 ನೇ ಬಾರಿ ಬಿಜೆಪಿ ಶಾಸಕರಾಗಿರುವ ಭೈರತಿ ಬಸವರಾಜ್‌ ಗೆ ಕೈ ಹಿಡಿದಿದ್ದೇ ಈ ರಿಯಲ್‌ ಎಸ್ಟೇಟ್‌. ಚಿನ್ನದ ಬೆಲೆ ಬಾಳುವ ಜಮೀನನ್ನೇ ಅಸ್ತ್ರ ಮಾಡಿಕೊಂಡು ಸಾವಿರಾರು ಕೋಟಿ ಕುಳವಾಗಿ ಬೆಳೆದರೆನ್ನುವ ಮಾತಿದೆ.ಆದರೆ ಇದೆಲ್ಲವೂ ನೇರ ಮಾರ್ಗದ ದುಡಿಮೆಯಲ್ಲಿ ಬಂದಿದ್ದಾ ಎಂದರೆ ಅದಕ್ಕೆ ಸ್ಪಷ್ಟ ಉತ್ತರ ಸಿಗೊಲ್ಲ. ರಿಯಲ್‌ ಎಸ್ಟೇಟ್‌ ನಲ್ಲಿ ಹಣ ಗಳಿಸೊಕ್ಕೆ ಏನೆಲ್ಲಾ ಮಾಡಬೇಕಾಗುತ್ತೋ,.ಆ ಎಲ್ಲಾ ಪಟ್ಟುಗಳನ್ನೆಲ್ಲಾ ಭೈರತಿ ಕರಗತ ಮಾಡಿಕೊಂಡಿಯೇ ಯಶಸ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯಾದರೆನ್ನುವ  ಬಗ್ಗೆಯೂ ಕ್ಷೇತ್ರಾದ್ಯಂತ ಮಾತುಗಳಿವೆ.

ರಿಯಲ್‌ ಎಸ್ಟೇಟ್‌ ಉದ್ಯಮ ಮಾಡುವಾಗ ಮನಿ ಪವರ್‌ ನಷ್ಟೇ ಮಸಲ್‌ ಪವರ್‌ ಕೂಡ ಬೇಕಾಗುತ್ತದೆ. ಇದನ್ನು ಭೈರತಿ ದಶಕಗಳಿಂದಲೂ ಮೆಂಟೇನ್‌ ಮಾಡುತ್ತಲೇ ಬಂದಿದ್ದಾರೆ.ಅದೇ ಮಸಲ್‌ ಪವರ್‌ ಇಟ್ಟುಕೊಂಡೇ ಭೂಮಿಯನ್ನು ತಮ್ಮದಾಗಿಸಿಕೊಂಡಿ ರುವ ಮಾತುಗಳು ಕೆ.ಆರ್‌ ಪುರಂ ಸುತ್ತ ಇವೆ.ಮಸಲ್‌ ಪವರ್‌ ನಿಂದ ಕೆಲವೊಮ್ಮೆ ಅನಾಯಾಸವಾಗಿ ತಾವಂದುಕೊಂಡಿದ್ದು ಗಿಟ್ಟಿದ್ರೆ ಇನ್ನು ಕೆಲವೊಮ್ಮೆ ಎಷ್ಟೇ ಪ್ರಯತ್ನಗಳ ಹೊರತಾಗಿಯೂ ವಿವಾದ ಜೀವಂತವಾಗಿಯೇ ಉಳಿದುಬಿಡುತ್ತೆ.ಆ ವಿವಾದಗಳೇ ಮುಂದೊಮ್ಮೆ ದುರಂತ ಗಳಲ್ಲಿ ಪರ್ಯಾವಸನಗೊಳ್ಳೋದು ರಿಯಲ್‌ ಎಸ್ಟೇಟ್‌ ಮಾಫಿಯಾದ ಪ್ರಚಲಿತ ಪಾಠಗಳಲ್ಲೊಂದು.

ಕೈ ತಪ್ಪಿದ ಭೂಮಿ-ಬುಡಮೇಲಾದ ಲೆಕ್ಕಾಚಾರ, ಹುಸಿಯಾದ ನಂಬಿಕೆಗಳ ಕಾರಣಕ್ಕೆ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲ ಶಿವು ಮರ್ಡರ್‌ ಆಯ್ತಾ ಗೊತ್ತಿಲ್ಲ.? ಆದರೆ ಕೊಲೆ ಮಾಡಿರೋದು ಭೈರತಿ ಬಸವಾಜ್‌ ಅವರ ಬಲಗೈ ಭಂಟರೆನ್ನುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ,ಅಲ್ಲದೇ ಈ ಮರ್ಡರ್‌ ರಿಯಲ್‌ ಎಸ್ಟೇಟ್‌ ಕಾರಣಕ್ಕೆ ಆಗಿದೆ ಎನ್ನುವುದು ಕೂಡ ಸತ್ಯವಾಗಿರುವುದರಿಂದ ಭೈರತಿ ಬಸವರಾಜ್‌ ಅವರ ಹೆಸರು ಥಳಕು ಹಾಕ್ಕೊಂಡಿದೆ ಎನ್ನಿಸುತ್ತೆ… ಆದರೆ ಬಿಕ್ಲ ಶಿವು ಕೆಲ ತಿಂಗಳ ಹಿಂದೆ ಜಾಗದ ವಿಚಾರಕ್ಕೆ ಭೈರತಿ ಬಸವರಾಜ್‌ ಅವರ ಶಿಷ್ಯಂದಿರುವ ನನ್ನೊಂದಿಗೆ ಜಗಳ ಮಾಡಿಕೊಂಡಿದ್ನಂತೆ. ಆಗ ಭೈರತಿ ಬಂಟರು ಆತನಿಗೆ ಕೊಲೆ ಬೆದರಿಕೆ ಹಾಕಿದ್ರು ಅಂಥಾ ಇದೇ ಬಿಕ್ಲ ಶಿವು, ಭಾರತಿನಗರ ಪೊಲೀಸ್‌ ಠಾಣೆಗೆ ದೂರು ನೀಡಿ ರಕ್ಷಣೆ ಕೋರಿದ್ರು..ದೂರು ಕೊಟ್ಟ ಕೆಲ ತಿಂಗಳಲ್ಲೇ ಆತನ ಮರ್ಡರ್‌ ಆಗಿರುವುದು  ಭೈರತಿ ಬಸವರಾಜ್‌  ಅವರ ಪಾತ್ರದ ಬಗ್ಗೆ ಸಾಕಷ್ಟು ಗುಮಾನಿ ಮೂಡಿಸಿಬಿಟ್ಟಿದೆ.

ಮುಖ್ಯ ಕಾರಣವೇ ಭೂ ವಿವಾದ: ರೌಡಿಶೀಟರ್‌ ಬಿಕ್ಲ ಶಿವು ಮರ್ಡರ್‌ ಗೆ ಮುಖ್ಯ ಕಾರಣವೇ ಭೂ ವಿವಾದ ಎನ್ನಲಾಗ್ತಿದೆ.ಆ ಭೂ ವಿವಾದ ಇದ್ದಿದ್ದು  ಮರ್ಡರ್‌ ಆದ  ಶಿವು  ಹಾಗೂ  ಭೈರತಿ ಬಸವರಾಜ್‌ ಅವರ ಬಲಗೈ ಭಂಟರ ಮದ್ಯೆ.  ಬೀದರಹಳ್ಳಿ ಹೋಬಳಿ ಕಿತ್ತಗನೂರು ಸಿಂಗಾರೆಡ್ಡಿ ಎಂಬುವರ  ಸರ್ವೇ ನಂಬರ್ 212ರ  ಜಮೀನಿನ  ಸ್ವಾಧೀನದ ವಿಚಾರದಲ್ಲಿ ಈ ಬಿಕ್ಲ ಜಿಪಿಎ ಹೊಂದಿದ್ದ ಎನ್ನುವುದೇ  ಭೈರತಿ ಬಸವರಾಜ್‌ ಅವರ ಬಲಗೈ ಭಂಟರಾದ ಜಗದೀಶ್ @ ಜಗ್ಗ,  ಕಿರಣ್  ,ವಿಮಲ್, ಕಿರಣ್ ಗೆ ಸಹಿಸಿಕೊಳ್ಳಲು ಆಗಿಲ್ಲ.”ಅವನ್ಯಾವ ದೊಡ್ಡ ತೋಲಂಡಿ” ನಮ್ಮ ಸ್ವಾಧೀನದಲ್ಲಿ ಇರಬೇಕಾದ ಜಮೀನಿಗೆ ಜಿಪಿಎ ಮಾಡಿಸಿಕೊಳ್ಳಲು ಎಂದವರೇ ಅವನನನ್ನು ಅಡ್ಡಹಾಕಿ ಅವಾಜ್‌ ಬಿಟ್ಟಿದ್ದಾರೆ.
ಇದೆಲ್ಲದರ ಹಿಂದೆ ಭೈರತಿ ಬಸವರಾಜ್‌ ಅವರ ಕೈವಾಡ ಏನಾದ್ರೂ ಇರಬಹುದಾ..? ಯಾಕಂದ್ರೆ ತಮ್ಮ ಸುತ್ತಮುತ್ತಲಿರುವ ಭೂಮಿಯಲ್ಲೇ ತಮ್ಮ ಸ್ವಾಧೀನದಲ್ಲೇ ಇರಬೇಕೆನ್ನುವ ದುರಾಲೋಚನೆಯಿಂದ ಬಿಕ್ಲನಿಗೆ ತಮ್ಮ ಬಲಗೈಭಂಟರ ಮೂಲಕ ಭೈರತಿ ಅವರೇ ಏಕೆ ಅವಾಜ್‌ ಬಿಡ್ಸಿರಬಾರದೆನ್ನುವುದು ಕೊಲೆಯಾದ ಬಿಕ್ಲನ ಅಮ್ಮನ ಶಂಕೆ ಹಾಗೂ ಆರೋಪ.

ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲ ಶಿವು ಕೂಡ  ಕಡಿಮೆ ಅಸಾಮಿಯೇನಾಗಿರಲಿಲ್ಲ ಅನ್ಸುತ್ತೆ, ಭೈರತಿ ಬಸವರಾಜ್‌ ಅವರ ಅಭೇಧ್ಯ ಕೋಟೆಯಲ್ಲಿ ಅವರ ಹುಡುಗರಿಗೆ ಠಕ್ಕರ್‌ ಕೊಟ್ಟಿಕೊಂಡು ಇರೋದೆಂದ್ರೆ ಸಾಮಾನ್ಯವಾದ ಮಾತಾ..? ನೋ ಚಾನ್ಸ್..ಅಂತದ್ದರಲ್ಲಿ ಜಮೀನಿನ ಜಿಪಿಎ ವಿಚಾರದಲ್ಲಿ ಭೈರತಿ ಅವರ ಹುಡುಗ್ರು ಬಂದು ಅವಾಜ್‌ ಹಾಕ್ತಿದ್ರು ಅದಕ್ಕೆ ಎದೆಗುಂದದೆ ಸೈಲೆಂಟಾಗಿ ಠಕ್ಕರ್‌ ಕೊಟ್ಟಿರೋದನ್ನು ಗಮನಿಸಿದ್ರೆ ಅವನದು ಎಂಟೆದೆ ಎನ್ನಿಸುತ್ತೆ.

ALSO READ :  EXCLUSIVE... BBMP ಯಿಂದ "ಬೀದಿ ನಾಯಿ ಕಲ್ಯಾಣ" ವೋ..!! "ಲೂಟಿ"ಯೋ..?! 1 ಮೈಕ್ರೋಚಿಪ್-195 ರೂ: 1,84,671 ಬೀದಿನಾಯಿ: 3 ಕೋಟಿ 81 ಲಕ್ಷ ವೆಚ್ಚ.

ಆದ್ರೆ ಪೆಬ್ರವರಿಯಲ್ಲಿ  ಭೈರತಿ ಬಸವರಾಜ್‌ ಅವರ ಹುಡುಗ್ರು ಅಬ್ಬರಿಸಿದ ಪರಿ ಎಲ್ಲೋ ಒಂದ್ಕಡೆ ತನ್ನ ಜೀವಕ್ಕೆ ಹೆಚ್ಚಿನ ಥ್ರೆಟ್‌ ಕೊಡ್ತಿರಬಹುದೆನ್ನುವ ಶಂಕೆ ಆತನನ್ನು ಕಾಡಿದೆ.ತಕ್ಷಣಕ್ಕೆ ತನಗೆ ಥ್ರೆಟ್‌ ಮಾಡಿದ ಹುಡುಗ್ರ ಕಂಪ್ಲೀಟ್‌ ವೀಡಿಯೋ ಫುಟೇಜಸ್‌ ನ್ನು ಕಂಪ್ಲೆಂಟ್‌ ಜತೆ ಅಟೆಸ್ಟ್‌ ಮಾಡಿ ಕೊಟ್ಟು, ತನ್ನ ಜೀವಕ್ಕೇನಾದ್ರೂ ತೊಂದರೆಯಾದರೆ ಅದಕ್ಕೆ ಭೈರತಿ ಬಸವರಾಜ್‌ ಅವರ ಹುಡುಗ್ರೇ ಕಾರಣ ಎಂದು ಭಾರತಿನಗರ ಪೊಲೀಸರಿಗೆ ನೇರವಾಗಿ ಹೇಳಿ ಬಂದಿದ್ನಂತೆ. ಜಗದೀಶ್ ಅಲಿಯಾಸ್ ಜಗ್ಗ‌ನ ಗ್ಯಾಂಗ್‌  ಅವಾಜ್ ಹಾಕಿದ್ರ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿದ್ದ.ದೂರಿಗೆ ಸಂಬಂಧಿಸಿದಂತೆ ಭೈರತಿ ಹುಡುಗ್ರನ್ನು ಕರೆಸಿ ಎಚ್ಚರಿಸುವಂತೆ ಸೂಚಿಸಿದ್ರಂತೆ.

ಬಿಕ್ಲ ಶಿವು ಕೊಟ್ಟ  ಕಂಪ್ಲೆಂಟ್‌ ತಮ್ಮ ಗಮನಕ್ಕೆ ಬಂದ ದಿನವೇ ಭೈರತಿ ಬಸವರಾಜ್  ತಮ್ಮ ಹುಡುಗ್ರನ್ನು ಕರೆಸಿ ಅವರ ಕಿವಿ ಹಿಂಡಬಹದಿತ್ತು.ಆದರೆ ಅವರೇನೂ ಮಾಡಿಲ್ಲ ಎನ್ನಿಸುತ್ತೆ.ತಮ್ಮ ವಿರುದ್ಧ ಕೊಟ್ಟ‌ ಕಂಪ್ಕೆಂಟ್‌ ಬಗ್ಗೆ ನಖಶಿಖಾಂತ ಉರಿದು ಹೋಗಿದ್ದ ಜಗದೀಶ್ ಅಲಿಯಾಸ್ ಜಗ್ಗ‌ನ ಗ್ಯಾಂಗ್‌  ಶಿವುಗೆ ಮೂಟೆ ಕಟ್ಟೊಕ್ಕೆ ಸ್ಕೆಚ್‌ ರೂಪಿಸಲಾರಂಭಿಸಿತು. ಹಾಕಿದ ಸ್ಕೆಚ್‌ ಮಿಸ್‌ ಹೊಡೆಯದಂತೆ ಹೇಗೆ ಅದನ್ನು ಇಂಪ್ಲಿಮೆಂಟ್‌ ಮಾಡಬೇಕೆನ್ನುವುದರಲ್ಲಿ ತಲೆ ಕೆಡಿಸಿಕೊಳ್ತು.ಹಾಗೆ ರೂಪಿಸಲಾದ ಸ್ಕೆಚ್‌ ನ್ನು ನಿನ್ನೆ ರಾತ್ರಿ ಜಾರಿ ಮಾಡಿದ್ದಾರೆ. ಅವರು ಅಂದುಕೊಂಡಂತೆ ಬಿಕ್ಲ ಶಿವುನ ಚಾಪ್ಟರ್‌ ನ್ನು ಕೂಡ ಕ್ಲೋಸ್‌ ಮಾಡಿದ್ದಾರೆ.

ಅಮ್ಮನ ಕಣ್ಣೆದುರೇ ಕೊಚ್ಚಿ ಕೊಂದಾಕಿದ್ರು.. ಡ್ರೈವರ್‌ ಇಮ್ರಾನ್‌,ಲೋಕೇಶ್‌ ಎನ್ನುವವರ ಜತೆ ನಿಂತಿದ್ದ ಬಿಕ್ಲ ಶಿವು ನನ್ನು ನಿನ್ನೆ ರಾತ್ರಿ ೮.೧೦ ರ ಸಮಯದಲ್ಲಿ  ಸುಮಾರು 8 ರಿಂದ 10 ಜನರ ತಂಡವು ಮನಸೋ ಇಚ್ಛೆ ಮಚ್ಚು ಲಾಂಗುಗಳಿಂದ ಥಳಿಸಿ ಕೊಂದಾಕಿದೆ.ಇದೆಲ್ಲವೂ ಹೆತ್ತಮ್ಮನ ಎದುರಿನಲ್ಲೇ ನಡೆದಿದೆ.ಹೆತ್ತ ಮಗನನ್ನು ಕೊಂದಾಕುತ್ತಿರುವುದನ್ನು ತಡೆಯಲು ಓಡಿ ಹೋಗುವಷ್ಟರಲ್ಲೇ ಬಿಕ್ಲ ಶಿವುನ ಉಸಿರು ನಿಲ್ಲಿಸಿ ಎಸ್ಕೇಪ್‌ ಆಗಿದೆ ಹಂತಕರ ತಂಡ.ತನಗೆ ನೀಡಿದ್ದ ಬೆದರಿಕೆ ಸಂಬಂಧ ತನ್ನ ಮಗ ಪೊಲೀಸ್‌ ಕಮಿಷನರ್‌ ಹಾಗೂ ಭಾರತಿ ನಗರ ಪೊಲೀಸರಿಗೆ ನೀಡಿದ್ದ ದೂರಿನಿಂದ ಕ್ಷುದ್ರಗೊಂಡು ಅದೇ ಟೀಮ್‌ ಈ ಕೃತ್ಯ ನಡೆಸಿದೆ ಎಂದು ಆಪಾದಿಸಿ ಬಿಕ್ಲ ಶಿವು ತಾಯಿ ಕೊಟ್ಟ ದೂರಿನ ಹಿನ್ನಲೆಯಲ್ಲಿ  ಪೊಲೀಸರು ಎಲ್ಲರನ್ನು ಬಂಧಿಸಿದ್ದಾರೆ.

ವಿಚಿತ್ರ ಎಂದರೆ ಮೇಲ್ಕಂಡ ಪ್ರಕರಣದಲ್ಲಿ ಜಗದೀಶ್‌ ಎ-1 ,ಕಿರಣ್-ಎ-2.ವಿಮಲ್‌  ಎ-3, ಅನಿಲ್ ಎ-4 ಆದ್ರೆ ಮಾಜಿ ಸಚಿವ ಭೈರತಿ ಬಸವರಾಜ್‌ ಅವರನ್ನು ಎ-5 ಮಾಡಲಾಗಿದೆ.ಮೇಲ್ಕಂಡ ಪ್ರಕರಣದಲ್ಲಿ ಭೈರತಿ ಅವರ ಪಾತ್ರ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಪೊಲೀಸ್‌ ಇನ್ವೆಸ್ಟಿಗೇಷನ್‌ ನಿಂದ ತಿಳಿದುಬರಲಿದೆ.ಆದರೆ ಮರ್ಡರ್‌ ನಲ್ಲಿ ಎ-5 ಆಗಿ ಅವರ ಹೆಸರನ್ನು ಸೇರಿಸಿರುವುದು ತೀವ್ರ ಮುಜುಗರ  ಹಾಗೂ ಮುಖಭಂಗ ಎನಿಸಿದೆ.

ಮರ್ಡರ್‌ ಪ್ರಕರಣದಲ್ಲಿ ತನ್ನ ಹೆಸರನ್ನು ಸೇರಿಸಿರುವುದರಿಂದ ಭೈರತಿ ಬಸವರಾಜ್‌ ಅವರಿಗೆ ಸಹಜವಾಗೇ ಶಾಕ್‌ ಹಾಗೂ ಇನ್ಸಲ್ಟ್‌ ಆಗಿದೆ.ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಮಾತನಾಡಿದ್ದಾರೆ.ಕೊಲೆ ಮಾಡಿದವ್ರಿಗೂ ನನಗೂ ಲಿಂಕೇ ಇಲ್ಲ ಎನ್ನುತ್ತಿದ್ದಾರೆ.ಆದರೆ ಪ್ರಕರಣದ ಮುಖ್ಯ ಆರೋಪಿ ಜಗದೀಶ್‌ ಅವರನ್ನು ಇದೇ ಭೈರತಿ ಬಸವರಾಜ್‌ ಕುಂಭಮೇಳಕ್ಕೆ ಕರೆದು ಕೊಂಡು ಹೋಗಿದ್ದು ಸುಳ್ಳಾ..? ಅವನನ್ನು ತನ್ನ ಪಕ್ಕದಲ್ಲೇ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಂಡಿದ್ದು ಸುಳ್ಳಾ..? ಅನೇಕ ಕಾರ್ಯಕ್ರಮಗಳಲ್ಲಿ ಆತನ ಪಕ್ಕದಲ್ಲಿರುವುದು ಸುಳ್ಳಾ..? ಇವೆಲ್ಲಾ ಎ-1 ತಂತ್ರಜ್ಞಾನದ ಸೃಷ್ಟಿಯಾ..?  ಜಗದೀಶ್‌ ಗೂ ತನಗೂ ಲಿಂಕೇ ಇಲ್ಲ ಎಂದು ಹೇಳಿರುವುದರ ಬೆನ್ನಲ್ಲೇ ಮಾದ್ಯಮಗಳಲ್ಲಿ ಇದೇ ಜಗದೀಶ್‌ ಜತೆಗೆ ಭೈರತಿ ಬಸವರಾಜ್‌ ಆತ್ಮೀಯವಾಗಿ  ಇರುವ ಅನೇಕ ಫೋಟೋಗಳು ರಿಲೀಸ್‌ ಆಗಲಾರಂಭಿಸಿವೆ.ಈಗ ಅದಕ್ಕೇನಂತರೋ ಗೊತ್ತಾಗ್ತಿಲ್ಲ.

ಎಫ್‌ ಐ ಆರ್‌ ನಲ್ಲಿ ಹೆಸರು ಸೇರಿಸಿರುವುದು ಅಘಾತ ತಂದಿದೆ. ಇನ್ನು ಈ ಪ್ರಕರಣದ ಬಗ್ಗೆ ಅವರು ಮಾದ್ಯಮಗಳ ಜತೆ ಮಾತನಾಡಿದ್ದಾರೆ.ಕೊಲೆ ವಿಚಾರ ನಿಮ್ಮ ಮಾಧ್ಯಮಗಳಿಂದನೇ ತಿಳಿಯಿತು.,ತಿಳಿದು ನೋವಾಯ್ತು, ನನಗೆ  ಯಾವುದರ ಬಗ್ಗೆಯೂ ಗೊತ್ತಿಲ್ಲ. ಶಾಸಕನಾಗಿ ಕ್ಷೇತ್ರದ ಸಮಸ್ಯೆ ಗಳ ಬಗ್ಗೆ ಕೆಲಸ ಮಾಡ್ತಿದ್ದೇನೆ. ಅದು ಬಿಟ್ಟು ಜಮೀನು ವ್ಯವಹಾರ ಗಳು ಯಾವುದು ನಮಗೆ ಗೊತ್ತಿಲ್ಲ. ಯಾರೋ ಸುಳ್ಳು ಆರೋಪ ಮಾಡಿ ನನ್ನನ್ನು ತೇಜೋವದೆ ಮಾಡುವ ಕೆಲಸ ಮಾಡ್ತಿದ್ದಾರೆ.ಇದರಲ್ಲಿ ನನ್ನ ಪಾತ್ರ ಯಾವುದೂ ಇಲ್ಲ.ಅಷ್ಟಕ್ಕೂ ಮರ್ಡರ್‌ ಆಗಿದೆ ಎಂದು ಹೇಳಲಾಗ್ತಿರುವ ಆ ಜಮೀನು ಇರುವುದು  ಮಹದೇವಪುರ ಕ್ಷೇತ್ರಕ್ಕೆ .ನನಗೂ ಅದಕ್ಕೂ ಏನ್‌ ಸಂಬಂಧ ಎಂದು ಪ್ರಶ್ನಿಸಿದ್ದಾರೆ.

ಏಕೆ ಭೈರತಿ ಬಸವರಾಜ್‌ ಆಸ್ತಿ ಮಾಡಿರುವುದು ಕೇವಲ ಕೆ.ಆರ್‌ ಪುರಂ ಕ್ಷೇತ್ರದಲ್ಲಿ ಮಾತ್ರನಾ..? ಮಹಾದೇವಪುರ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಆಸ್ತಿನೇ ಮಾಡಿಲ್ವಾ..? ಅಸ್ತಿ ಸಂಪಾದಿಸಲು ಕ್ಷೇತ್ರ, ಗಡಿ ಎನ್ನೋದಿರಲ್ಲ ಎನ್ನೋದು ನೆನಪಿಲ್ವಾ..? .ಹಾಗಾದ್ರೆ  ಬೀದರಹಳ್ಳಿ ಹೋಬಳಿ ಕಿತ್ತಗನೂರು ಜಮೀನು ವಿಚಾರದಲ್ಲಿ ಬಿಕ್ಲ ಶಿವು ಜತೆ ಗಲಾಟೆ ಮಾಡಿಕೊಂಡವ್ರು.. ಕೊನೆಗೆ ಅವನಿಗೆ ಮೂಟೆ ಕಟ್ಟಿದವ್ರು ನಿಮ್ಮ ಹುಡುಗ್ರಲ್ಲವೇ..? ಎಂದು  ಕ್ಷೇತ್ರದ ಮಂದಿ ಪ್ರಶ್ನಿಸಲಾರಂಭಿಸಿದ್ದಾರೆ.

ಭೈರತಿ ಬಸವರಾಜ್‌ ಎದೆಯಲ್ಲಿ ಢವ ಢವ.. ಸಧ್ಯಕ್ಕೆ ಬಿಕ್ಲ ಶಿವು ನ ತಾಯಿ ಕೊಟ್ಟಿರುವ ದೂರಿನ ಮೇರೆಗೆ ಭೈರತಿ ಬಸವರಾಜ್‌ ಅವರನ್ನು ಬಿಟ್ಟು ಉಳಿದೆಲ್ಲರನ್ನು ಅರೆಸ್ಟ್‌ ಮಾಡಲಾಗಿ ತೀವ್ರ ವಿಚಾರಣೆ ನಡೆಸಲಾಗ್ತಿದೆ.ಭೈರತಿ ಬಸವರಾಜ್‌ ಅವರು ಜನಪ್ರತಿನಿಧಿ ಆಗಿರುವುದರಿಂದ ಅವರ ಬಂಧನ ಅಂದುಕೊಂಡಷ್ಟು ಸಲೀಸಲ್ಲ.ಅದು ತನ್ನದೇ ಆದ ಇತಿಮಿತಿ-ನೀತಿನಿಯಮಗಳನ್ನು ಒಳಗೊಂಡಿದೆ.ಹಾಗೆಂದು ವಿಚಾರಣೆ ನಡೆಸಲೇಬಾರದಂತಲ್ಲ,ಅಗತ್ಯ ಬಿದ್ದರೆ ಅವರನ್ನೂ ಪೊಲೀಸರು ಕರೆಸ್ತಾರೆ.ಆದರೆ ಇಲ್ಲಿ ಪ್ರಶ್ನೆ ಇರುವುದು ಪ್ರಕರಣದಲ್ಲಿ ಪ್ರತ್ಯಕ್ಷವಾಗೋ ಅಥವಾ ಪರೋಕ್ಷವಾಗೋ  ನಿಜಕ್ಕೂ ಭೈರತಿ ಬಸವರಾಜ್‌ ಅವರ ಕೈವಾಡ ಇದೆಯಾ,? ಇದ್ದರೆ ಹೇಗಿರಲು ಸಾಧ್ಯ..? ಆ ವಿವಾದಿತ ಜಮೀನಿನ ಮೇಲೆ ಭೈರತಿ ಏನಾದ್ರೂ ಕಣ್ಣಾಕಿದ್ರಾ..? ಅದರ  ಸ್ವಾಧೀನ ತನ್ನದಾಗಬೇಕೆನ್ನುವ ವಿಚಾರದಲ್ಲಿ ಹಠಕ್ಕೆ ಬಿದ್ದಿದ್ದರಾ..? ಇದಕ್ಕಾಗಿ ನಾನಾ ಪ್ರಯತ್ನವನ್ನೇನಾದ್ರೂ ಮಾಡಿದ್ರಾ..? ಏನೂ ಆಗದಾಗ  ತಮ್ಮ ಬಲಗೈ ಭಂಟರನ್ನು  ಬಿಟ್ಟು ಬಿಕ್ಲ ಶಿವುನ ಎಚ್ಚರಿಸೊಕ್ಕೆ ಬಿಟ್ಟಿದ್ರಾ..? ಗೊತ್ತಿಲ್ಲ..ಸಧ್ಯಕ್ಕೆ ಯಾವುದರ ಬಗ್ಗೆಯೂ ಸ್ಪಷ್ಟತೆ  ಸಿಗ್ತಿಲ್ಲ.

ಭೈರತಿ ಬಸವರಾಜ್‌ ರಾಜಕೀಯ ಅಸ್ಥಿತ್ವ- ಭವಿಷ್ಯಕ್ಕೆ ಕಂಟಕ: ಆದರೆ ಒಂದಂತೂ ಸತ್ಯ, ಪೊಲೀಸ್‌ ಇನ್ವೆಸ್ಟಿಗೇಷನ್‌ ನಲ್ಲೇನಾದ್ರೂ ಭೈರತಿ ಬಸವರಾಜ್‌ ಅವರ ಇನ್ವಾಲ್ಮೆಂಟ್‌ ಇದೆ ಎನ್ನುವುದೇನಾದ್ರೂ  ಸಾಬೀತಾದ್ರೆ ಭೈರತಿ ಬಸವರಾಜ್‌ ಅವರ ಮಾನ ಹೋಗೋದಷ್ಟೇ ಅಲ್ಲ ಅವರ ಪೊಲಿಟಿಕಲ್‌ ಕರಿಯರ್‌ ಕಂಪ್ಲೀಟ್‌ ಕೊಲಾಪ್ಸ್‌ ಆಗುವುದರಲ್ಲಿಅನುಮಾನವೇ ಇಲ್ಲ.ಆ ಭಯ ಭೈರತಿ ಅವರಿಗೂ ಇದೆ ಎನ್ನಿಸುತ್ತೆ. ಹಾಗಾಗಿನೇ ಇದರಲ್ಲಿ ನನ್ನ ಪಾತ್ರವೇನಿಲ್ಲ ಎಂದು ಪುನರುಚ್ಚರಿಸುತ್ತಲೇ ಇದ್ದಾರೆ..ಆದ್ರೆ ಅವರ ಪಾತ್ರ ಇದೆಯಾ…? ತನಿಖೆಯಿಂದ ಗೊತ್ತಾಗಬೇಕಷ್ಟೇ,.. ಈ ಎಲ್ಲಾ ಸಂಗತಿಗಳ ಕಾರಣದಿಂದಲೇ ಮೇಲ್ಕಂಡ  ಪ್ರಕರಣ ಭೈರತಿ ಬಸವರಾಜ್‌ ಎನ್ನುವ ರಿಯಲ್‌ ಎಸ್ಟೇಟ್‌ ಉದ್ಯಮಿ ಆಸ್‌ ವೆಲ್‌ ಆಸ್‌ ಒಬ್ಬ ಪೊಲಿಟಿಷಿಯನ್‌ ಲೈಫ್-ಫ್ಯೂಚರ್‌ ವಿಚಾರದಲ್ಲಿ ನಿರ್ಣಾಯಕ ಪಾತ್ರ ವಹಿಸ್ತದೆ ಎನ್ನೋದು ಮಾತ್ರ ನೋ‌ ಡೌಟ್.


Political News

“ಅಧಿಕಾರಿ”ಗಳು ಕೆಲಸ ಬಿಟ್ಟು ರಸ್ತೆಗಿಳಿದ್ರೆ ಮಾತ್ರ “ಇವ್ರು” ಬಸ್ ಓಡಿಸೊಲ್ಲವಂತೆ!

“ವರ್ಗಾವಣೆ” ಲೀಸ್ಟ್ ನಿಂದಲೇ ಹೆಸ್ರು ಡಿಲೀಟ್ ಮಾಡಿಸಿಕೊಂಡ್ ಬಿಟ್ರಾ ddpu ಮನೋಹರ್ ಕೊಳ್ಳಾ..?!

“ಬಿಕ್ಲ ಶಿವು” ಮರ್ಡರ್‌-MLA ಭೈರತಿ ಬಸವರಾಜ್‌ ರಾಜಕೀಯ ಭವಿಷ್ಯ ಅತಂತ್ರ.!?

ರಾಷ್ಟ್ರವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಕ್ಯಾನ್ಸರ್..!?

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

Scroll to Top