
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು ಹೈಕಮಾಂಡ್ ಗೆ ಪಕ್ಷದ ಇತಿಹಾಸದಲ್ಲೇ ಹಿಂದೆಂದು ಇಷ್ಟೊಂದು ಕಷ್ಟಕರವಾಗಿರಲಿಲ್ಲವೇನೋ ಅನ್ನಿಸುತ್ತೆ.ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲಕ್ಕೆ ಸಿಲುಕಿಕೊಂಡಿದೆ.ಯತ್ನಾಳ್ ಬಣದ ಬೇಡಿಕೆಯಂತೆ ಬಸವರಾಜ್ ಬೊಮ್ಮಾಯಿ ಅವರನ್ನು ನೇಮಿಸಬೇಕೋ, ಬಿವೈ ವಿಜಯೇಂದ್ರ ಅವರನ್ನೇ ಮುಂದುವರೆಸಬೇಕೋ ಎನ್ನುವ ಪ್ರಶ್ನೆ ತೀವ್ರವಾಗಿ ಕಾಡಲಾರಂಭಿಸಿದೆ.ಇದೆಲ್ಲದರ ನಡುವೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಎಲ್ಲವನ್ನು ಸರಿದೂಗಿಸಬಲ್ಲ ಕೆಪಾಸಿಟಿ ಇರುವ ಲೀಡರ್ಸ್ ಗಳು ಯಾರೆನ್ನುವ ಪ್ರಶ್ನೆಗೆ ಹೈಕಮಾಂಡ್ ಬಳಿ ಇರುವ ಕೆಲವೇ ಕೆಲವು ಹೆಸರುಗಳಲ್ಲಿ ಸಿ.ಟಿ ರವಿ,ಅರವಿಂದ ಬೆಲ್ಲದ್ ಮುಂಚೂಣಿಯಲ್ಲಿವೆ ಎನ್ನಲಾಗುತ್ತಿದೆ. ಇದರ ಜತೆಗೇನೆ ಶೋಭಾ ಕರಂದ್ಲಾಜೆ, ಸುನೀಲ್ ಕುಮಾರ್ ಹೆಸರುಗಳನ್ನು ಪ್ರಚಲಿತಕ್ಕೆ ತರಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ದಿನೇ ದಿನೇ ಕಗ್ಗಂಟಾಗುತ್ತಿದೆ.ಹೈಕಮಾಂಡ್ ಭಯವಿಲ್ಲದ ರೀತಿಯಲ್ಲಿ ಭಿನ್ನ ಬಣಗಳ ನಾಯಕರು ಲಂಗು ಲಗಾಮಿಲ್ಲದಂತಾಗಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಕಾಲಕಸಕ್ಕಿಂತ ಕಡೆ ಮಾಡಿಬಿಟ್ಟಿದ್ದಾರೆ .ಯಾಕಾದ್ರೂ ರಾಜ್ಯಾಧ್ಯಕ್ಷನಾದೆನೊ ಎಂದು ಸ್ವತಃ ವಿಜಯೇಂದ್ರ ಕೊರಗುವಂತಾಗಿದೆ.ಮಾಜಿ ಸಿಎಂ ಯಡಿಯೂರಪ್ಪ ಅವರ ಮಗನೆನ್ನುವ ದೃಷ್ಟಿಯಲ್ಲಾದ್ರು ಗೌರವ ಕೊಡಿ ಎಂದು ಅಂಗಲಾಚುವಂತಾಗಿದೆ.ಜತೆಗಿದ್ದವರೆಲ್ಲಾ ಒಂದೊಂದು ದಿಕ್ಕಿಗೆ ಹೋಗುತ್ತಿರುವುದನ್ನು ನೋಡಿದ್ರೆ ಖುದ್ದು ಮೋದಿ ಅಥವಾ ಅಮಿತ್ ಶಾ ಅಖಾಡಕ್ಕಿಳಿಯಬೇಕಾಗ್ತದೇನೋ ಎನ್ನಿಸುತ್ತಿದೆ.
ಕೆಲವೊಂದಷ್ಟು ವರ್ಷಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಕೇಳುವವರೇ ಇಲ್ಲವಾಗಿತ್ತು.ಆದರೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸನ್ನಿವೇಶ ಸೃಷ್ಟಿಯಾಯಿತೋ ಎಲ್ಲಿಲ್ಲದ ಡಿಮ್ಯಾಂಡ್ ಸೃಷ್ಟಿಯಾಯ್ತು.ಡಜನ್ ಗಟ್ಟಲೇ ಆಕಾಂಕ್ಷಿ ಗಳು ಕ್ಯೂನಲ್ಲಿ ನಿಲ್ಲಲಾರಂಭಿಸಿದ್ರು.ಯಾರೇ ಆಕಾಂಕ್ಷಿಗಳಿದ್ರು ಹೈಕಮಾಂಡ್ ಡಿಸಿಷನ್ನೇ ಫೈನಲ್ ಎನ್ನುವಂತಿತ್ತು.ಆದರೆ ಅನೇಕರ ವಿರೋಧದ ನಡುವೆ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೇನೆ ನೇರವಾಗಿ ಆಯ್ಕೆ ಮಾನದಂಡಗಳೇ ಪ್ರಶ್ನೆಗೀ ಡಾಗುವಂತಾದ್ವು. ಯತ್ನಾಳ್, ರಮೇಶ್ ಜಾರಕಿಹೊಳಿ,ಕುಮಾರ ಬಂಗಾರಪ್ಪ ಅವರಂಥವರು ನೇರವಾಗಿಯೇ ಹರಿಹಾಯಲಾರಂಭಿಸಿದ್ರು,ಆ ಟೀಕೆಗಳು ವಿಜಯೇಂದ್ರ ಮಟ್ಟಕ್ಕೆ ನಿಲ್ಲದೇ ಬಿಜೆಪಿಯ ಪಕ್ಷಾತೀತ ನಾಯಕ ಬಿ.ಎಸ್ ಯಡಿಯೂರಪ್ಪ ಅವರನ್ನು ತೇಜೋವಧೆ ಮಾಡುವ ಮಟ್ಟಕ್ಕೆ ಹೋಗಿದ್ದು ಎಲ್ಲವೂ ಅತಿರೇಕವೆನಿಸಿದ್ದು ಸತ್ಯ.



ಇದೆಲ್ಲದರ ನಡುವೆಯೇ ಯತ್ನಾಳ್ ಬಣ ತೇಲಿಬಿಟ್ಟಿರುವ ಬಸವರಾಜ ಬೊಮ್ಮಾಯಿ ಅವರ ಹೆಸರು ಸಧ್ಯ ಮುನ್ನಲೆಗೆ ಬಂದಿದೆ.ಇದಕ್ಕೆ ಕೌಂಟರ್ ಕೊಡಲು ವಿಜಯೇಂದ್ರ ಬಣ ಕೂಡ ಸರ್ವರೀತಿಯಲ್ಲೂ ಸಿದ್ದವಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಎಲೆಕ್ಷನ್ ಆದ್ರೆ ಗೆಲವು ತನ್ನದೆ ಆಗಬೇಕೆನ್ನುವ ದೃಷ್ಟಿಯಲ್ಲಿ ತನ್ನ ಬೆಂಬಲಿಗರನ್ನು ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನಾಗಿ ಮಾಡಿರುವುದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಒಂದ್ವೇಳೆ ಎಲೆಕ್ಷನ್ನೇ ಆಗಿದ್ದಾದ್ರೆ ವಿಜಯೇಂದ್ರ ಗೆಲ್ಲೋದು ನಿಕ್ಕಿ ಎನ್ನೋದು ಗೊತ್ತಾಗುತ್ತಿದ್ದಂತೆಯೇ ವಿರೋಧಿ ಬಣ ಅಷ್ಟೇ ಅಲ್ಲ ಆರ್.ಅಶೋಕ್ ,ಡಾ ಸುಧಾಕರ್ ಅವರಂಥವ್ರು ಕೂಡ ತಗಾದೆ ತೆಗೆದು ವಿಜಯೇಂದ್ರರನ್ನು ಬದಲಿಸಿ ಎನ್ನುವ ಸಂದೇಶ ತಮ್ಮದೇ ಆದ ವಿರೋಧದ ನೆಲೆಯಲ್ಲಿ ರವಾನಿಸಿದ್ದು ಸುಳ್ಳಲ್ಲ.ಇದರ ಸಣ್ಣ ಅಂದಾಜು ಇರದ ವಿಜಯೇಂದ್ರ ಇದರಿಂದ ಕನಲಿ ಹೋದರೂ ಬಹಿರಂಗಪಡಿಸದೆ ತಮ್ಮ ಬೆಂಬಲಿಗರ ಮೂಲಕ ಪ್ರತಿತಂತ್ರ ರೂಪಿಸುತ್ತಿರುವುದು ಸುಳ್ಳಲ್ಲ.
ಇದರಿಂದೆಲ್ಲಾ ಬೇಸತ್ತಿರುವ ಹೈಕಮಾಂಡ್ ವಿಜಯೆಂದ್ರನೂ ಬೇಡ,..ಬೊಮ್ಮಾಯಿನೂ ಬೇಡ ಎನ್ನುವುದಾದ್ರೆ ಇನ್ನ್ಯಾರು ಎನ್ನುವ ಅಲೋಚನೆಯಲ್ಲಿ ಪರ್ಯಾಯವೊಂದನ್ನು ಹುಡುಕುತ್ತಿರುವಾಗಲೇ ಒಂದಷ್ಟು ಹೆಸರುಗಳು ಮುನ್ನಲೆಗೆ ಬಂದಿದೆ.ಅದರಲ್ಲಿ ಮುಂಚೂಣಿಯಲ್ಲಿರುವ ಮೊದಲ ಹೆಸರು ಸಿ.ಟಿ ರವಿ ಅವರದು.ಅದರ ಜತೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡಿರುವ ಅರವಿಂದ ಬೆಲ್ಲದ್ ಅವರ ಹೆಸರು ಕೇಳಿಬರುತ್ತಿದೆ.ಅದನ್ನು ಬಿಟ್ಟರೆ ಕುಮಾರಿ ಶೋಭಾ ಕರಂದ್ಲಾಜೆ,ಸುನೀಲ್ ಕುಮಾರ್ ಅವರ ಹೆಸರುಗಳು ಕೇಳಿಬರಲಾರಂಭಿಸಿವೆ.ಸಿ.ಟಿ ರವಿ ಅವರ ಹೆಸರೇ ಪ್ರಬಲವಾಗಿ ಕೇಳಿಬರಲು ಕಾರಣ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬಲ್ಲ ಕೆಪಾಸಿಟಿ ಇರುವ ಲೀಡರ್ ಎನ್ನುವುದು.ಒಂದ್ವೇಳೆ ಬಂಡಾಯ ಬಣದ ನಾಯಕ ಯತ್ನಾಳ್ ಅವರನ್ನಾಗಲಿ, ವಿಜಯೇಂದ್ರ ಅವರನ್ನಾಗಲಿ ಕೇಳಿದ್ರೂ ಸಿ.ಟಿ ರವಿ ಆಯ್ಕೆಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳು ಕಡಿಮೆ.


ಅಂದರೆ ಎಲ್ಲಾ ಬಣಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಹೊಗುವ ಕೆಪಾಸಿಟಿ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದೆ.ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆ ಮಾತುಗಾರ,ಸಂಘಟನಾ ಚತುರ, ಕಟ್ಟರ್ ಹಿಂದುತ್ವವಾದಿ, ಅರ್ ಎಸ್ ಎಸ್ ಹಿನ್ನಲೆ,ತಳಮಟ್ಟದಿಂದ ಬೆಳೆದುಬಂದಿರುವ ನಾಯಕ…ಅಂದ್ರೆ ಒಬ್ಬ ರಾಜ್ಯಾಧ್ಯಕ್ಷನಾಗಿ ಆಯ್ಕೆ ಆಗುವುದಕ್ಕೆ ಬೇಕಾದ ಎಲ್ಲಾ ಅರ್ಹತೆಗಳು ಸಿ.ಟಿ ರವಿಗೆ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಒಕ್ಕಲಿಗ ಸಮುದಾಯದ ಲೀಡರ್ ಆಗಿಯೂ ಗುರುತಿಸಿಕೊಂಡಿದ್ದಾರೆ.ಒಕ್ಕಲಿಗ ಮತಗಳನ್ನು ವೋಟ್ ಬ್ಯಾಂಕ್ ಆಗಿ ರೂಪಿಸಲು ಸಿ.ಟಿ ರವಿ ಅವರನ್ನು ರಾಜ್ಯಾದ್ಯಕ್ಷರಾಗಿಸುವುದು ಸೂಕ್ತ ಎನ್ನುವುದು ವರಿಷ್ಟರ ಅಭಿಪ್ರಾಯವಾಗಿರುವ ಚಾನ್ಸ್ ಇದೆ.
ಸಿ.ಟಿ ರವಿ ಬಿಟ್ಟರೆ ಬೇರಿನ್ನ್ಯಾರು ಅರ್ಹರು ಎನ್ನುವ ಪ್ರಶ್ನೆಗೆ ಉತ್ತರ ಕರ್ನಾಟಕ ಮೂಲದ ಬಿಜೆಪಿ ನಾಯಕ, ಕಟ್ಟರ್ ಹಿಂದೂವಾದಿ,ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಎನಿಸಿಕೊಂಡಿರುವ ಅರವಿಂದ ಬೆಲ್ಲದ್ ಅವರ ಹೆಸರೂ ಕೇಳಿಬರುತ್ತಿದೆ.ಹಾಗೆಯೇ ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡೆ ಸಂಸದೆ ಶೋಭಾ ಕರಂದ್ಲಾಜೆ ಹೆಸರು ಕೇಳಿಬರುತ್ತಿದೆ.ಕರಂದ್ಲಾಜೆಗೆ ಕೊಟ್ಟರೆ ಬಿಜೆಪಿ ಕಂಡ ಮೊದಲ ಮಹಿಳಾ ರಾಜ್ಯಾಧ್ಯಕ್ಷೆ ಎನ್ನುವ ಹೆಗ್ಗಳಿಕೆ ದೊರೆಯುತ್ತದೆ.ಆದರೆ ಯಡಿಯೂರಪ್ಪ ಅವರನ್ನು ವಿರೋಧಿಸುವ ಒಂದಷ್ಟು ಲೀಡರ್ಸ್ ಶೋಭಾ ಆಯ್ಕೆಯನ್ನು ಖಂಡಾತುಂಡವಾಗಿ ವಿರೋಧಿಸುವ ಸಾಧ್ಯತೆಗಳಿವೆ.ಇವರ ನಂತರ ಬಿಜೆಪಿಯ ಸುನೀಲ್ ಕುಮಾರ್ ಹೆಸರು ಕೂಡ ಕೇಳಿಬರುತ್ತಿದೆ.
ಬಿಜೆಪಿಯ ವರಿಷ್ಠರು ಸಧ್ಯದ ರಾಜಕೀಯ ಬೆಳವಣಿಗೆಯಲ್ಲಿ ಸಿ.ಟಿ ರವಿ ಅವರ ಹೆಸರನ್ನೇ ಬಲವಾಗಿ ಪ್ರತಿಪಾದಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.ಯತ್ನಾಳ್ ಬಣ ಸಿ.ಟಿ ರವಿ ಬಗ್ಗೆ ಹೇಳಿಕೊಳ್ಳುವಂತ ವಿರೋಧವನ್ನೇನು ವ್ಯಕ್ತಪಡಿಸುತ್ತಿಲ್ಲ. ಬಿಜೆಪಿ ಮಟ್ಟದಲ್ಲಿಯೂ ಅವರನ್ನು ವಿರೋಧಿಸುವವರ ಸಂಖ್ಯೆ ಕಡಿಮೆ.ಸಧ್ಯಕ್ಕೆ ಬಿಜೆಪಿಗೆ ಬೇಕಿರುವುದು ಕೂಡ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವ ಮುಖಂಡನೊಬ್ಬನ ಆಯ್ಕೆ..ಹಾಗಾಗಿ ಅಂತಿಮವಾಗಿ ಸಿ.ಟಿ ರವಿ ಅವರ ಹೆಸರನ್ನೇ ಅಂತಿಮಗೊಳಿಸಿದ್ರೂ ಆಶ್ಚರ್ಯವಿಲ್ಲ ಎನ್ನುವ ಮಾತುಗಳಿವೆ.ಇದರ ಬಗ್ಗೆ ಅಂತಿಮವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ದಾರದ ಬಗ್ಗೆ ಕುತೂಹಲ ಮೂಡಿರುವುದಂತು ಸತ್ಯ.