advertise here

Search

ಅಬಕಾರಿ ನೀತಿಯಲ್ಲಿ ಬದಲಾವಣೆ: ಮದ್ಯಪ್ರಿಯರಿಗೆ ಹೊಸ ನಿಯಮ, ಸರ್ಕಾರದ ಬೊಕ್ಕಸಕ್ಕೆ ₹45,000 ಕೋಟಿ ಗುರಿ!

karnataka budget 2026 excise

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಮಹತ್ವದ ನೀತಿಗಳನ್ನು ಪ್ರಕಟಿಸಿದ್ದಾರೆ. ಮದ್ಯದ ಮೇಲಿನ ತೆರಿಗೆಯನ್ನು ಇನ್ನು ಮುಂದೆ ಮದ್ಯದಲ್ಲಿರುವ ‘ಆಲ್ಕೋಹಾಲ್ ಅಂಶ’ದ (Alcohol Content) ಆಧಾರದ ಮೇಲೆ ವಿಧಿಸಲಾಗುವುದು. ಇದು ಜಾಗತಿಕವಾಗಿ ಮದ್ಯದ ತೆರಿಗೆಯನ್ನು ನಿರ್ಧರಿಸುವ ಅತ್ಯುತ್ತಮ ಮಾದರಿಯಾಗಿದ್ದು, ರಾಜ್ಯ ಸರ್ಕಾರ ಇದೀಗ ಕರ್ನಾಟಕದಲ್ಲೂ ಜಾರಿಗೆ ತರಲು ಮುಂದಾಗಿದೆ.

ಪ್ರಮುಖ ಬದಲಾವಣೆಗಳು:

ಆಲ್ಕೋಹಾಲ್ ಅಂಶ ಆಧಾರಿತ ತೆರಿಗೆ: ಏಪ್ರಿಲ್ 2026ರಿಂದ ಮದ್ಯದ ಬಾಟಲಿಯ ಒಟ್ಟು ಪ್ರಮಾಣಕ್ಕಿಂತ, ಅದರಲ್ಲಿರುವ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ಅಬಕಾರಿ ಸುಂಕ ವಿಧಿಸಲಾಗುತ್ತದೆ. ಈ ಪರಿವರ್ತನೆಯನ್ನು ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲಾಗುವುದು.

ದರ ನಿಗದಿಯ ಸ್ವಾತಂತ್ರ್ಯ: ಇದುವರೆಗೆ ಸರ್ಕಾರವೇ ಮದ್ಯದ ದರವನ್ನು ನಿಗದಿಪಡಿಸುತ್ತಿತ್ತು. ಆದರೆ ಇನ್ನು ಮುಂದೆ ಮದ್ಯದ ಬೆಲೆ ನಿಗದಿಯನ್ನು ಮುಕ್ತಗೊಳಿಸಲಾಗಿದ್ದು (Deregulation), ಮಾರುಕಟ್ಟೆಯ ಪೈಪೋಟಿಗೆ ಅನುಗುಣವಾಗಿ ಉತ್ಪಾದಕರು ದರ ನಿಗದಿಪಡಿಸಲು ಅವಕಾಶ ನೀಡಲಾಗಿದೆ.

ಪ್ರಸ್ತುತ ಮದ್ಯದ ಬೆಲೆ ನಿಗದಿಗಾಗಿ ಇರುವ 16 ಸ್ಲ್ಯಾಬ್‌ಗಳನ್ನು (Pricing slabs) ಕೇವಲ 8 ಸ್ಲ್ಯಾಬ್‌ಗಳಿಗೆ ಇಳಿಕೆ ಮಾಡಲಾಗುವುದು. ಇದರಿಂದ ಅಬಕಾರಿ ವ್ಯವಸ್ಥೆ ಸರಳೀಕರಣಗೊಳ್ಳಲಿದೆ.

ALSO READ :  KANNADA VETERAN ACTRESS DR.LEELAVATHI NOMORE...ಕನ್ನಡದ ಹಿರಿಯ ಪೋಷಕ ಕಲಾವಿದೆ ಡಾ.ಲೀಲಾವತಿ ಇನ್ನಿಲ್ಲ..

ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ: ಅಬಕಾರಿ ಇಲಾಖೆಯಲ್ಲಿ ಪಾರದರ್ಶಕತೆ ತರಲು ಭೌತಿಕ ಎಸ್ಕೋರ್ಟ್ ಬದಲು ಜಿಯೋ-ಫೆನ್ಸಿಂಗ್ ಮತ್ತು ಇ-ಲಾಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಜೊತೆಗೆ, ‘ಆಲ್ಕೋ-ಬಿಯರ್ ಪ್ರವಾಸೋದ್ಯಮ’ವನ್ನು ಉತ್ತೇಜಿಸಲು ಡಿಸ್ಟಿಲರಿ ಮತ್ತು ಬ್ರೂವರಿಗಳಲ್ಲಿ ಪ್ರವಾಸಿಗರಿಗೆ ಮದ್ಯದ ರುಚಿ ನೋಡುವ (Tasting sessions) ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ | ಬಜೆಟ್ 2026: ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ!

ಈ ಎಲ್ಲ ಸುಧಾರಣೆಗಳ ಮೂಲಕ, 2026-27ನೇ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರವು ಅಬಕಾರಿ ಇಲಾಖೆಯಿಂದ ₹45,000 ಕೋಟಿ ರಾಜಸ್ವ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಈ ಬದಲಾವಣೆಗಳು ಮದ್ಯದ ಉದ್ಯಮದಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶ ಹೊಂದಿದ್ದರೂ, ಮದ್ಯಪ್ರಿಯರಿಗೆ ದರದ ವಿಚಾರದಲ್ಲಿ ಇದು ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.


Scroll to Top