ಚನ್ನಪಟ್ಟಣ: ಬೊಂಬೆಗಳ ನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೂಡಿಸಿರುವಷ್ಟು ಕುತೂಹಲವನ್ನು ಬಹುಷಃ ಇನ್ನ್ಯಾವ ಕ್ಷೇತ್ರಗಳ ಉಪ ಚುನಾವಣೆ ಹಿಡಿದಿಟ್ಟುಕೊಂಡಿಲ್ಲ ಎಂದೆನಿಸುತ್ತದೆ. ಎರಡು ಕ್ಷೇತ್ರಗಳಲ್ಲಿನ ಪ್ರತ್ಯೇಕ ಪಕ್ಷಗಳ ಅಭ್ಯರ್ಥಿಗಳು ಯಾರೆನ್ನುವುದು ಬಹುತೇಕ ನಿಕ್ಕಿಯಾಗಿದ್ರೂ ಚನ್ನಪಟ್ಟಣ ವಿಚಾರದಲ್ಲಿ ಎದುರಾಳಿ ಪಕ್ಷಗಳು ತಮ್ಮ ಅಭ್ಯರ್ಥಿಗಳು ಯಾರೆನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ..
ಮೊದಲು ನೀವು ಘೋಷಣೆ ಮಾಡಿ ಎಂದು ಕಾಂಗ್ರೆಸ್ ಕುಳಿತಿದ್ರೆ ಜೆಡಿಎಸ್-ಬಿಜೆಪಿ ಮೈತ್ರಿ ಮೊದಲು ನೀವು ಮಾಡಿ ಎಂದು ಸವಾಲಾಕಿ ಕೂತಂತಿದೆ.ಇದೆಲ್ಲದರ ನಡುವೆ ಜೆಡಿಎಸ್ ತನ್ನ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಸಂಸದ ಹಾಗು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಸುಪುತ್ರಿ ಅನುಸೂಯ ಅವರನ್ನು ಕಣಕ್ಕಿಳಿಸುವ ಅಚ್ಚರಿಯ ನಿರ್ದಾರ ಮಾಡಿದೆ ಎಂದು ತಿಳಿದುಬಂದಿದೆ.
ಸಿ.ಪಿ ಯೋಗೇಶ್ವರ್ ಎಮ್ಮೆಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷೇತರರಾಗಿ ಸ್ಪರ್ಧಿಸುವ ಸುಳಿವು ಕೊಟ್ಟಿರುವ ಬೆನ್ನಲ್ಲೇ ಬಹುತೇಕ ಕಾಂಗ್ರೆಸ್ ಸೇರಿ ಕೈ ಅಭ್ಯರ್ಥಿಯಾಗುತ್ತಾರೆನ್ನುವುದು ಫಿಕ್ಸ್ ಆದಂತಿದೆ.ಇದು ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಕ್ಕೆ ದೊಡ್ಡ ತಲೆನೋವಾಗಿಸಿದೆ.
ಚನ್ನಪಟ್ಟಣದಲ್ಲಿ ದೊಡ್ಡ ಪ್ರಮಾಣದ ಮತ ಬ್ಯಾಂಕ್ ಹೊಂದಿರುವ ಸಿ.ಪಿ ಯೋಗೇಶ್ವರ್ ಟಿಕೆಟ್ ಸಿಗದಿದ್ರೂ ನಮ್ಮೊಂದಿಗೇ ಇದ್ದು ಮೈತ್ರಿ ಅಭ್ಯರ್ತಿಯನ್ನು ಗೆಲ್ಲಿಸಿಕೊಂಡು ಬರುತ್ತಾರೆನ್ನುವ ಆತ್ಮವಿಶ್ವಾಸಕ್ಕೆ ತಣ್ಣೀರೆರಚಿದಂತಾಗಿದೆ.ಈ ಚಿಂತೆಯಲ್ಲಿರುವಾಗಲೇ ಕೈ ಅಭ್ಯರ್ಥಿಯಾಗಲಿರುವ ಕ್ಯಾಂಡಿಡೇಟ್ ಗೆ ಠಕ್ಕರ್ ನೀಡಬಲ್ಲ ಅಭ್ಯರ್ಥಿಯ ಆಯ್ಕೆ ಈಗ ಮೈತ್ರಿ ಪಕ್ಷಕ್ಕೆ ಸವಾಲಾಗಿ ಬಿಟ್ಟಿದೆ.
“ಡಾ.ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವರೇ ಸಿ.ಪಿ ಯೋಗೇಶ್ವರ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಂಸತ್ ಚುನಾವಣೆ ಉದ್ದಕ್ಕೂ ಮಂಜುನಾಥ್ ಅವರ ಬೆನ್ನಿಗೆ ನಿಂತು ಕೆಲಸ ಮಾಡಿದ್ದು ಕೂಡ ಇದೇ ಸೈನಿಕ.ಪರಿಸ್ತಿತಿ ಹೀಗಿರುವಲ್ಲಿ ಒಂದ್ವೇಳೆ ಕೈ ಅಭ್ಯರ್ಥಿಯಾಗಿ ಯೋಗೇಶ್ವರ್ ಅವರು ಕಣಕ್ಕಿಳಿದಲ್ಲಿ ಅವರ ಎದುರು ಅನಸೂಯ ಎದುರಾಳಿಯಾದ್ರೆ ಅದೊಂದು ಅಚ್ಚರಿಯ ಬೆಳವಣಿಗೆ ಆದ್ರೂ ಆಶ್ಚರ್ಯವಿಲ್ಲ.ಮೊನ್ನೆ ಮೊನ್ನೆಯವರೆಗು ಡಿ,ಕೆ ಬ್ರದರ್ಸ್ ನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾ, ಅವರಿಗೆ ರಾಜಕೀಯವಾಗಿ ಸಮಾಧಿ ತೋಡೋನು ನಾನೇ ಎಂದ್ಹೇಳುತ್ತಿದ್ದುದು ಇದೇ ಯೋಗೇಶ್ವರ್ ಅಲ್ಲವೇ..? ಈಗ ಅದೇ ಯೋಗೇಶ್ವರ್ ಅವರು ಕೈ ಸೇರುತ್ತಿಲ್ಲವೇ..? ಅವರನ್ನು ಸೆಳೆಯೊಕ್ಕೆ ಡಿಕೆ ಬ್ರದರ್ಸ್ ಕಾಂಗ್ರೆಸ್ ನ ಶಾಸಕರ ಮೂಲಕ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿಲ್ವೇ..? ಇದು ರಾಜಕೀಯ..ಇಲ್ಲಿ ಯಾವ್ ಕ್ಷಣದಲ್ಲಿ ಏನ್ ಬೇಕಾದ್ರೂ ಆಗಬಹುದು..ಅಲ್ವಾ..?!”
ಈ ಸವಾಲನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಸಮರ್ಥವಾಗಿ ಎದುರಿಸ್ಲಿಕ್ಕೆ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಜಯಮುತ್ತು ಅವರಿಗಿಂತ ದೊಡ್ಡ ಶಕ್ತಿ ಇರುವುದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ್ರ ಅವರ ಸುಪುತ್ರಿ ಅನುಸೂಯ ಅವರಿಗೆ ಮಾತ್ರ ಎನ್ನುವುದು ಅದ್ಹೇಗೋ ಜೆಡಿಎಸ್ ವರಿಷ್ಟರಿಗೆ ಗೊತ್ತಾಗಿದೆ ಎನ್ನಿಸುತ್ತೆ.ಹಾಗಾಗಿನೇ ಅನುಸೂಯ ಅವರನ್ನೇ ಫೈನಲ್ ಮಾಡುವ ನಿರ್ದಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
ಅನುಸೂಯ ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದ ಕುಡಿ ಎಲ್ಲಕ್ಕಿಂತ ಹೆಚ್ಚಾಗಿ ಹೃದಯವಂತ ಸಂಸದ ಡಾ.ಮಂಜುನಾಥ್ ಅವರ ಪತ್ನಿ ಎನ್ನುವುದೇ ದೊಡ್ಡ ಪ್ಲಸ್ ಎನ್ನಲಾಗ್ತಿದೆ.ಇವರಿಬ್ಬರ ನಾಮಬಲದ ಜತೆಗೆ ಅನುಸೂಯ ಸಂಭಾವಿತ ಹೆಣ್ಣುಮಗಳು, ಪತಿ ಜತೆ ಸೇರಿ ಸಮಾಜಸೇವೆ, ಜನಸೇವೆ ಬಗ್ಗೆ ಸಾಕಷ್ಟು ಅನುಭವ ಇರುವಂತವರು.ಕುಟುಂಬದ ರಾಜಕಾರಣದಲ್ಲಿ ಯಾವತ್ತು ತಲೆ ಹಾಕದವರು ಎನ್ನುವುದು ಅನುಸೂಯ ಅವರನ್ನು ಅಭ್ಯರ್ಥಿಯನ್ನಾಗಿಸಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.ಚನ್ನಪಟ್ಟಣದ ಅಭ್ಯರ್ಥಿ ವಿಚಾರದಲ್ಲಿ ಈ ಹಿಂದೆಯೂ ಅನುಸೂಯ ಅವರ ಹೆಸರನ್ನು ತೇಲಿಬಿಡಲಾಗಿತ್ತು.
ಚನ್ನಪಟ್ಟಣದ ಮಂದಿ ಹೇಳಿ ಕೇಳಿ ಭಾವುಕ ಮಂದಿ, ಡಾ.ಮಂಜುನಾಥ್ ಅವರಿಗೆ ಈ ಕ್ಷೇತ್ರದಲ್ಲಿ ಹೆಚ್ಚು ಮತ ದೊರಕಿಸಿಕೊಟ್ಟಿದ್ದರು. ಪತಿಯನ್ನು ಬೆಂಬಲಿಸಿದವರು ಅವರ ಪತ್ನಿಯನ್ನು ಬೆಂಬಲಿಸೊಲ್ವಾ..? ಅಲ್ಲದೇ ಭಾವನಾತ್ಮಕವಾಗಿಯು ಮತ ಗಳಿಕೆಯ ವಾತಾವರಣ ಕ್ಷೇತ್ರದಲ್ಲಿದೆ. ಕೈ ಅಭ್ಯರ್ಥಿ ಎದುರು ಸಾಕಷ್ಟು ಕಾರಣಗಳನ್ನು ಮುಂದಿಟ್ಟು ಮಹಿಳಾ ಅಭ್ಯರ್ಥಿ ಅನುಸೂಯ ಅವರ ಪರ ಮತಯಾಚನೆ ಮಾಡುವುದು ಕೂಡ ಕಷ್ಟಸಾಧ್ಯವೇನಲ್ಲ.
ಹಾಗಾಗಿ ಈ ಎಲ್ಲಾ ಅಂಶಗಳನ್ನು ಮನಗಂಡು ಅಂತಿಮವಾಗಿ ಅನುಸೂಯ ಅವರ ಹೆಸರನ್ನು ದಳಪತಿಗಳು ಅಖೈರುಗೊಳಿಸಿದ್ದಾರೆನ್ನುವ ಮಾತು ಬಲವಾಗಿ ಕೇಳಿಬಂದಿದೆ.ರಾಜಕೀಯದಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಕೊನೇ ಕ್ಷಣದಲ್ಲಿ ಅನುಸೂಯ ಅವರ ಹೆಸರನ್ನು ಬದಲಿಸಿದ್ರೂ ಆಶ್ಚರ್ಯವಿಲ್ಲ.ಆದ್ರೆ ಸಧ್ಯದ ಮಟ್ಟಿಗೆ ಅನುಸೂಯ ಅವರನ್ನೇ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಬಹುತೇಕ ಹೆ್ಚ್ಚಾಗಿದೆ ಎನ್ನಲಾಗುತ್ತಿದೆ.