ಬೆಂಗಳೂರು:ರಾಜ್ಯದ ನಂಬರ್ ಒನ್ ನ್ಯೂಸ್ ಚಾನೆಲ್ ಟಿವಿ 9 ಸೇರಿದಂತೆ ಹಲವು ಮಾದ್ಯಮಗಳಲ್ಲಿ ಕೆಲಸ ಮಾಡಿದ್ದ ಅತ್ಯಂತ ಸೌಮ್ಯ ಹಾಗೂ ಸಂಭಾವಿತ ಪತ್ರಕರ್ತ ಮಿತ್ರ ಶಿವಪ್ರಸಾದ್ ಅನುಮಾನಸ್ಪದ ರೀತಿಯಲ್ಲಿ ದೂರದ ಕೋಲಾರದಲ್ಲಿರುವ ತಮ್ಮ ಅತ್ತೆಯ ಮನೆಯಲ್ಲಿ ನಿಗೂಢವಾಗಿ ನೇಣಿಗೆ ಶರಣಾಗಿದ್ದಾರೆ.


47 ವರ್ಷದ ಶಿವಪ್ರಸಾದ್ ಸಾವಿಗೆ ಕಾರಣವೇನೆನ್ನುವುದು ತಿಳಿದುಬಂದಿಲ್ಲ.ಕೆಲಸದ ನಿಮಿತ್ತ ಕೋಲಾರಕ್ಕೆ ತೆರಳಿದ್ದ ಶಿವಪ್ರಸಾದ್,ಅಪರೂಪಕ್ಕೆ ಅತ್ತೆ ಮನೆಗೆ ತೆರಳಿದ್ದರು.ತೆರಳುವಾಗ ಸ್ವೀಟ್ಸ್, ಹಣ್ಣುಗಳನ್ನು ತೆಗೆದುಕೊಂಡು ಹೋಗಿ ನಿನ್ನೆ ರಾತ್ರಿವರೆಗೂ ಎಲ್ಲರೊಂದಿಗೆ ಚೆನ್ನಾಗಿಯೇ ಮಾತನಾಡಿದ್ದಾರೆ.ಮನೆಯ ಹೊರಗೊಂದು ಸಣ್ಣ ವಾಕ್ ಮಾಡಿ,ಎಲ್ಲರಿಗೂ ಗುಡ್ ನೈಟ್ ಎಂದ್ಹೇಳಿ ರೂಮಿಗೆ ತೆರಳಿ ಬೀಗ ಹಾಕಿಕೊಂಡಿದ್ದೇ ಕೊನೆ..ಶಿವಪ್ರಸಾದ್ ಬೆಳಗ್ಗೆದ್ದು ಗುಡ್ ಮಾರ್ನಿಂಗ್ ಎನ್ನಲೇ ಇಲ್ಲ. ರೂಮಿನಲ್ಲಿ ಹಗ್ಗ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಅವರ ಸಾವು ಅಚ್ಚರಿ,ಅಘಾತದೊಂದಿಗೆ ಅನುಮಾನವನ್ನೂ ಮೂಡಿಸಿದೆ.
ಶಿವಪ್ರಸಾದ್ ಬೆಂಗಳೂರಿನ ಕೋಗಿಲು ಕ್ರಾಸ್ ನ ಬಳಿ ತಮ್ಮ ಹೆಂಡತಿ ಹಾಗೂ ಮಗಳೊಂದಿಗೆ ವಾಸವಾಗಿದ್ದರು.ಸಧ್ಯ ಅವರು ಕೋಲಾರ ಮೂಲದ ನೇಚರ್ ಕೇರ್ ಎನ್ನುವ ಆಯುರ್ವೇದಿಕ್ ಸಂಸ್ಥೆಯ ಕಂಟೆಂಟ್ ಬರಹಗಾರ ಮತ್ತು ಸೋಷಿಯಲ್ ಮೀಡಿಯಾದ ಉಸ್ತುವಾರಿ ಹೊತ್ತಿದ್ದರು.ಬಹುತೇಕ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ ಏನಾದ್ರೂ ಶೂಟಿಂಗ್ ಇದ್ದಾಗ ಮಾತ್ರ ಕೋಲಾರಕ್ಕೆ ತೆರಳುತಿದ್ದರು.ಮೊನ್ನೆ ಕೂಡ ಹಾಗೆಯೇ ತೆರಳಿದ್ದರು.ಹಾಗೆ ಹೋದಾಗಲೆಲ್ಲಾ ತಮ್ಮ ವೈದ್ಯಮಿತ್ರರೊಬ್ಬರ ರೂಮಿನಲ್ಲಿ ಉಳಿದುಕೊಳ್ಳುತ್ತಿದ್ದರು.
ಆದರೆ ಮೊನ್ನೆ ಹೋದ ಕಾರ್ಯಕ್ರಮ ಕ್ಯಾನ್ಸ್ ಆಯಿತೋ..ಅಥವಾ ಇವರೇ ಕ್ಯಾನ್ಸಲ್ ಮಾಡಿದ್ರೋ ಗೊತ್ತಿಲ್ಲ.ಸಹಜವಾಗಿ ವೈದ್ಯಮಿತ್ರರ ರೂಮಿನಲ್ಲೂ ಉಳಿದುಕೊಳ್ಳದೆ ನೇರವಾಗಿ ಅತ್ತೆ ಮನೆಗೆ ತೆರಳಿದ್ದಾರಂತೆ.ಯಾವ ಖುಷಿಯ ವಿಚಾರವಿತ್ತೋ ಗೊತ್ತಿಲ್ಲ.ಹಾಗೆ ಹೋಗುವಾಗ ಎರಡು ಕೆಜಿ ಸ್ವೀಟ್ ಹಾಗೂ ಹಣ್ಣನ್ನು ಕೊಂಡೊಯ್ದಿದ್ದಾರೆ.ರಾತ್ರಿಯೆಲ್ಲಾ ಮಾತನಾಡಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆನ್ನುವುದು ಅವರ ಆತ್ಮೀಯ ವಲಯದ ಅಭಿಪ್ರಾಯ.

ಬೆಳಗ್ಗೆಯಾದರೂ ಬಾಗಿಲು ತೆರೆದಿರುವುದಕ್ಕೆ ಅನುಮಾನಗೊಂಡ ಅತ್ತೆ ಮನೆಯವರು ಬಾಗಿಲು ಒಡೆದು ನೋಡಿದಾಗ ಕಣ್ಣೆದುರೇ ಅಳಿಯ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.ಎದೆ ಬಡಿದುಕೊಂಡು ಗೋಳಾಡಿದ್ದಾರೆ.ಶಿವಪ್ರಸಾದ್ ಶವದ ಬಳಿ ಒಂದು ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ಬರೆದಿರುವ ಸಾಕಷ್ಟು ವಿವರಗಳನ್ನು ಪೊಲೀಸರು ತನಿಖೆಯ ಕಾರಣಕ್ಕೆ ಬಹಿರಂಗಪಡಿಸಿಲ್ಲ.ಆದರೆ ಅದರಲ್ಲಿ ತನಗೆ ಸಾಲ ಯಾರಿಂದ ಬರಬೇಕು..ತಾನು ಯಾರಿಗೆಲ್ಲಾ ಸಾಲ ಕೊಡಬೇಕೆನ್ನುವುದನ್ನು ವಿವರಿಸಿದ್ದಾರೆ ಎನ್ನುವುದನ್ನುಆತ್ಮೀಯರು ಬಹಿರಂಗಪಡಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಲೇಬೇಕೆಂದು ನಿರ್ದರಿಸಿ ಅತ್ತೆ ಮನೆಗೆ ತೆರಳಿದ್ದರಾ..? ಅನುಮಾನ ಕಾಡುತ್ತಿರುವುದೇ ಅಲ್ಲಿ.ಕೋಲಾರಕ್ಕೆ ತೆರಳಿದರೂ ಬಹುತೇಕ ಅತ್ತೆ ಮನೆಗೆ ತೆರಳದ ಶಿವಪ್ರಸಾದ್ ಮೊನ್ನೆ ಮಾತ್ರ ನಿರ್ದಿಷ್ಟವಾಗಿ ಅಲ್ಲಿಗೆ ಹೋದರು ಎನ್ನುವುದು ಗೊತ್ತಾಗುತ್ತಿಲ್ಲ.ಸ್ವೀಟ್-ಹಣ್ಣುಗಳ ಜತೆಗೆ ತೆರಳಿದ್ದರೆನ್ನುವುದು ಮತ್ತಷ್ಟು ಆಶ್ವರ್ಯ ಮೂಡಿಸಿದೆ.ಆದರೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ದಾರ ಮಾಡಿಕೊಂಡು ಹೋಗುವವರು ಯಾರಾದ್ರೂ ಸಿಹಿ-ಹಣ್ಣನ್ನು ಕೊಂಡೊಯ್ಯುತ್ತಾರಾ..? ಹೀಗೆ ಹಲವಾರು ಪ್ರಶ್ನೆಗಳು ಕಾಡುತ್ತವೆ.ಅತ್ತೆ ಮನೆಗೆ ಶಿವಪ್ರಸಾದ್ ತೆರಳಿದಾಗ ಬೇರೆ ಏನಾದ್ರೂ ವಿಚಾರಗಳ ಬಗ್ಗೆ ಚರ್ಚೆ ನಡೆಯಿತಾ.? ಅಲ್ಲಿ ಏನಾದ್ರೂ ಮನಸು ಕೆಡಿಸಿಕೊಳ್ಳುವಂಥ ಘಟನೆಗಳು ನಡೆದವಾ..? ಆ ವಿಚಾರಗಳಿಂದಲೇನಾದ್ರೂ ಶಿವಪ್ರಸಾದ್ ಬೇಸರ ಮಾಡಿಕೊಂಡ್ರಾ..? ಆದರೆ ಪ್ರಶ್ನೆಇರೋದು ಅತ್ತೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತದ್ದೇನು ನಡೆಯಿತೆನ್ನುವುದು..?
ಬಹುಷಃ ಈ ಸತ್ಯ ಅವರ ಅತ್ತೆ ಮನೆಯವರು ಹಾಗೂ ಇಹಲೋಕ ತ್ಯಜಿಸಿದ ಶಿವಪ್ರಸಾದ್ ಗೆ ಮಾತ್ರ ಗೊತ್ತಿರಲು ಸಾಧ್ಯ..? ಆದರೆ ಇಂತದೊಂದಿಷ್ಟು ಪ್ರಶ್ನೆ-ಅನುಮಾನಗಳನ್ನಿಟ್ಟುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ..ಸತ್ಯಾಂಶವು ಬಯಲಾಗಲಿದೆ..ಮೇಲ್ನೋಟಕ್ಕೆ ಇದನ್ನುಅಸಹಜ ಸಾವು ಎಂದು ಪೊಲೀಸರು ತೀರ್ಮಾನಿಸಿದ್ದಾರೆ.ಅವರ ಕೌಟುಂಬಿಕ ಹಿನ್ನಲೆಯ ಬಗ್ಗೆ ಕೂಲಂಕುಷಾಗಿ ತನಿಖೆ ಮಾಡುತ್ತಿದ್ದಾರೆ.ಈ ನಿಟ್ಟಿನಲ್ಲಿ ಹಲವರ ವಿಚಾರಣೆ ಕೂಡ ನಡೆಯಲಿದೆ.ಅವರ ಮೊಬೈಲ್ ನಲ್ಲಿರುವ ದತ್ತಾಂಶಗಳು ಕೂಡ ಅಸಹಜ ಸಾವಿನ ಕಾರಣ ಅರಿಯಲು ಸಹಕಾರಿ ಆಗಬಲ್ಲವೇನೋ..?
ವೃತ್ತಿನಿಷ್ಟ ಪತ್ರಕರ್ತ ಶಿವಪ್ರಸಾದ್: ಪತ್ರಿಕೋದ್ಯಮದಲ್ಲಿ ಒಳ್ಳೆಯವರು, ಸಂಭಾವಿತರು,ಅಜಾತಶತೃ ಎನಿಸಿಕೊಳ್ಳುವುದು ತುಂಬಾ ಕಷ್ಟ.ಆದರೆ ಶಿವಪ್ರಸಾದ್ ಅಂತದ್ದೊಂದು ವ್ಯಕ್ತಿತ್ವ ಬೆಳೆಸಿಕೊಂಡಿದ್ದರು.ಯಾರಿಗೂ ನೋವಾಗದಂತೆ ನಡೆದುಕೊಂಡಿದ್ದೇ ಇಲ್ಲ.ಡೆಸ್ಕ್ ನಲ್ಲಿ “ಬ್ರೇಕಿಂಗ್ ನ್ಯೂಸ್ ನ ಬಾಸ್ –ಮಾಂತ್ರಿಕ”ಎಂದೇ ಕರೆಯಿಸಿಕೊಂಡಿದ್ದ ಶಿವಪ್ರಸಾದ್ ಎಂತದ್ದೇ ಒತ್ತಡದ ಸನ್ನಿವೇಶ ಸೃಷ್ಟಿಯಾದ್ರೂ ತಮ್ಮ ಸಿಬ್ಬಂದಿ-ಸಹದ್ಯೋಗಿ ಮೇಲೆ ಎಂದೂ ರೇಗಿದವರಲ್ಲ.ಅವರ ತಪ್ಪುಗಳನ್ನು ತಮ್ಮ ಮೇಲೆ ಹಾಕಿಕೊಂಡು ಬೈಯ್ಯಿಸಿಕೊಂಡಿದ್ದಿದೆ.ಅಂತದ್ದೊಂದು ಲೀಡರ್ ಶಿಪ್ ಗುಣ ಶಿವಪ್ರಸಾದ್ ಅವರಲ್ಲಿತ್ತು. ಹಾಗಾಗಿ ಶಿವಪ್ರಸಾದ್ ಎಂದರೆ ಅವರು ಎಲ್ಲೇ ಕೆಲಸ ಮಾಡಲಿ ಅಲ್ಲೊಂದು ಕೆಲಸ ಮಾಡುವ ಉತ್ತಮ ವಾತಾವರಣವಿರುತ್ತಿತ್ತು.ನಗುಮೊಗದ ವಾತಾವರಣವಿರುತ್ತಿತ್ತು.ಅವರೊಂದಿಗೆ ಕೆಲಸ ಮಾಡಲು ಎಂಥವರೂ ಇಷ್ಟಪಡುತ್ತಿದ್ದರು.ಅವರ ಅಗಲಿಕೆಗೆ ಅವರ ನೂರಾರು ಮಾಜಿ ಸಹದ್ಯೋಗಿಗಳು ಕಂಬನಿ ಮಿಡಿದಿರುವುದೇ ಇದಕ್ಕೆ ಸಾಕ್ಷಿ.
ಅಂದ್ಹಾಗೆ ಶಿವಪ್ರಸಾದ್ ಅವರದು ಮೂಲತಃ ಕೋಲಾರ ಎನ್ನಲಾಗ್ತಿದೆ.ಆದರೆ ಪತ್ರಿಕೋದ್ಯಮದಲ್ಲಿ ನೆಲೆ ಕಂಡುಕೊಳ್ಳಲು ಬೆಂಗಳೂರಿಗೆ ಬಂದು ಸ್ವಂತ ಪರಿಶ್ರಮ-ಸಾಧನೆಯಿಂದ ಒಳ್ಳೆಯ ಚಾನೆಲ್ ಗಳಲ್ಲಿ ಕೆಲಸ ಮಾಡಿದರು.ಮೊದಲು ಟಿವಿ-9 ನಲ್ಲಿ ಕೆಲಸ ಮಾಡಿ,ನಂತರ ಬಿಟಿವಿಯಲ್ಲಿ ದುಡಿದಿದ್ದರು.ವಿಶ್ವವಾಣಿ ಪತ್ರಿಕೆಯಲ್ಲೂ ಕೆಲಸ ಮಾಡಿದ್ದರೆನ್ನುವುದನ್ನು ಅವರ ಸಹದ್ಯೋಗಿಗಳು ಸ್ಮರಿಸಿಕೊಳ್ಳುತ್ತಾರೆ.ಮಾದ್ಯಮಗಳಿಂದ ದೂರ ಉಳಿಯಲು ನಿರ್ದರಸಿ ಬೆಂಗಳೂರಿನಲ್ಲಿರುವ ಮೈಕ್ರೋ ಬಿ ಟೆಕ್ನಾಲಜಿಸ್ ನಲ್ಲಿ ಸೋಷಿಯಲ್ ಮೀಡಿಯಾ ಇನ್ ಚಾರ್ಜ್ ಆಗಿ ಕೆಲಸ ಮಾಡಿದೃಂತೆ.ಅಲ್ಲಿಯೂ ಕೆಲಸ ಬಿಟ್ಟ ಮೇಲೆ ಜೀವನ ನಿರ್ವಹಣೆಗೆ ಫ್ರೀ ಲ್ಯಾನ್ಸ್ ಮಾಡುತ್ತಿದ್ದರು,ನಂತರ ಅವರಿಗೆ ಬದುಕು ಕೊಟ್ಟಿದ್ದು ಕೋಲಾರದಲ್ಲಿರುವ ಜೀವ ಸಂಜೀವಿನಿ ನೇಚರ್ ಕೇರ್ ಕ್ಲಿನಿಕ್.ಅಲ್ಲಿಯೂ ಸೋಷಿಯಲ್ ಮೀಡಿಯಾ ಮಾಡುತ್ತಿದ್ದರು.ಕೆಲಸದ ಮೂಲಕ ಒಳ್ಳೆಯ ಹೆಸರನ್ನು ಪಡೆದು ಜನಾನುರಾಗಿ ಎನಿಸಿಕೊಂಡಿದ್ದರು.
ಬದುಕಿನ ಬಗ್ಗೆ ಸದಾ ಆಶಾವಾದಿಯಾಗಿ, ಜೀವನ್ಮುಖಿಯಾಗಿದ್ದ,ಬದುಕಿನ ಬಗ್ಗೆ ಇತರರಿಗೆ ಬೋಧನೆ ಮಾಡುತ್ತಿದ್ದ ಶಿವಪ್ರಸಾದ್ ಅವರೇ ಆತ್ಮಹತ್ಯೆಗೆ ಶರಣಾಗಿರುವುದು ಅವರ ಆತ್ಮೀಯರು,ಅವರ ಅಗಾಧ ಪ್ರತಿಭೆಯನ್ನು ಕಂಡವರು, ಅವರೊಳಗಿದ್ದ ವರ್ಕಾಲಿಕ್ ರಕ್ಕಸನ ಬಗ್ಗೆ ಮನಗಂಡವರಿಗೆ ಅತ್ಯಂತ ಅಘಾತ ಮೂಡಿಸಿದೆ.ಒಬ್ಬ ಅಸಾಧಾರಣ,ಪ್ರತಿಭಾನ್ವಿತ ಪತ್ರಕರ್ತ ಮಿತ್ರನ ಅಗಲಿಕೆ ನಿಜಕ್ಕೂ ದೊಡ್ಡ ನಷ್ಟ. ಶಿವಪ್ರಸಾದ್ ಸಾವಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಕಂಬನಿ ಮಿಡಿಯುತ್ತದೆ.