ವಿಕ್ಟೋರಿಯಾ ಆಸ್ಪತ್ರೆ ನೆಫ್ರೋ ಯುರಾಲಜಿ ಸಂಸ್ಥೆ ನಿರ್ದೇಶಕ ಡಾ.ಶಿವಲಿಂಗಯ್ಯಗೆ ಶಾಕ್- ಹಿನ್ನಡೆ- ಅರ್ಹರಲ್ಲದ ಅಧಿಕಾರಿಯನ್ನು ವಾಪಸ್ ಕಳುಹಿಸಿ..

ಬೆಂಗಳೂರು: ಇದು ಸತ್ಯಕ್ಕೆ ಸಂದ ಆರಂಭಿಕ ಗೆಲುವು..ಖಡಕ್ ಕೆಎಎಎಸ್ ಅಧಿಕಾರಿ ಆಶಾ ಪರ್ವಿನ್ ಅವರ ವರ್ಗಾವಣೆ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿದ್ದ ಆಪಾದನೆ ಹೊತ್ತಿರುವ ವಿಕ್ಟೋರಿಯಾ ಆಸ್ಪತ್ರೆ ನೆಫ್ರೋ ಯುರಾಲಜಿ ಸಂಸ್ಥೆ ನಿರ್ದೇಶಕ ಡಾ.ಶಿವಲಿಂಗಯ್ಯಗೆ ಮರ್ಮಾಘಾತ ಉಂಟು ಮಾಡುವ ಸಂಗತಿ. ಏಕೆಂದರೆ ಇದೀಗ ಕೆಎಎಸ್ ಅಧಿಕಾರಿಗಳ ಸಂಘವೇ ಆಶಾ ಪರ್ವಿನ್ ಅವರ ನ್ಯಾಯ ಸಮ್ಮತವಲ್ಲದ ವರ್ಗಾವಣೆ ವಿರುದ್ಧ ದ್ವನಿ ಎತ್ತಿದೆ.ನಿಯಮಗಳಿಗೆ ವಿರುದ್ಧವಾಗಿ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮಂಜುಳಾ ಬಿ ಅವರ ನೇಮಕವನ್ನು ತಕ್ಷಣಕ್ಕೆ ವರ್ಗಾವಣೆ ಮಾಡಬೇಕೆಂದು ಮುಖ್ಯಮಂತ್ರಿಗಳಾದಿಯಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ವಿಕ್ಟೋರಿಯಾ ಆಸ್ಪತ್ರೆಯ ನೆಫ್ರೋ ಯುರಾಲಜಿ ಸಂಸ್ಥೆಯ ಆಡಳಿತಾಧಿಕಾರಿ ಆಶಾ ಪರ್ವಿನ್ ಅವರ ವರ್ಗಾವಣೆಗೆ ಕೆಎಎಸ್ ಅಧಿಕಾರಿಗಳ ಸಂಘ ಕೆಂಡಾಮಂಡಲವಾಗಿದೆ.ಇದನ್ನು ಅನ್ಯಾಯ ಎಂದು ವಿಶ್ಲೇಷಿಸಿದೆ. ಯಾರದೋ ಹಿತಾಸಕ್ತಿಗೆ ಮಣಿದು ವರ್ಗಾವಣೆ ಮಾಡಿದಂತಿದೆ.ಅದೆಲ್ಲಕ್ಕಿಂತ ಹೆಚ್ಚಾಗಿ ನೆಫ್ರೋ ಯುರಾಲಜಿ ಸಂಸ್ಥೆಯ ಆಡಳಿತಾಧಿಕಾರಿ ಹುದ್ದೆಗೆ ನಿಗಧಿಯಾಗಿರುವ ಮಾನದಂಡಗಳನ್ನು ಉಲ್ಲಂಘಿಸಿ ಮಂಜುಳಾ ಅವರನ್ನು ನಿಯೋಜನೆ ಮಾಡಲಾಗಿದೆ.ಇದನ್ನು ತಕ್ಷಣಕ್ಕೆ ರದ್ದು ಮಾಡಬೇಕೆಂದು ಮನವಿ ಮಾಡಿದೆ.

ಮಾನದಂಡಗಳ ಉಲ್ಲಂಘನೆ ಎಲ್ಲಿ..ಹೇಗೆ..?:ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ( ಕೆಎಎಸ್) ಮುಖ್ಯಮಂತ್ರಿ ಸಿದ್ದರಾಮಯ್ಯ,ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಆಡಳಿತ-ಸುಧಾರಣಾ ಇಲಾಖೆ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿರುವ ಸಂಗತಿಗಳ ಪ್ರಕಾರ,ಕೆಎಎಸ್ ಅಧಿಕಾರಿಗಳಿಗೆ ಮೀಸಲಾಗಿರುವ ಹುದ್ದೆಗಳಿಗೆ ಬೇರೆಯವರನ್ನು ನಿಯೋಜನೆ ಮಾಡುವುದು ಸರಿಯಲ್ಲ. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 138ಆಸೇವ 2025 ದಿನಾಂಕ:08-10-2025 ಅನ್ವಯವೇ ಕೆಎಎಸ್ ಅಧಿಕಾರಿಗಳನ್ನೇ ನಿಯೋಜನೆ ಮಾಡಬೇಕು.ಆದರೆ ಪೌರಾಡಳಿತ ನಿರ್ದೇಶನಾಲಯದಲ್ಲಿ ಗ್ರೇಡ್-2 ನ ಕೆಎಂಎಎಸ್ ಅಧಿಕಾರಿಯಾಗಿರುವ ಮಂಜುಳಾ ಅವರನ್ನು ದಿಢೀರ್ ನೇಮಕ ಮಾಡಲಾಗಿದೆ.ಇದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಕೆಎಎಸ್ ಅಧಿಕಾರಿಗಳ ಸಂಘದ ಪ್ರಶ್ನೆ.
ನೆಫ್ರೋ ಯುರಾಲಜಿ ಸಂಸ್ಥೆಯ ಆಡಳಿತಾಧಿಕಾರಿಯ ಹುದ್ದೆಯು ವೃಂದ ಮತ್ತು ನೇಮಕಾತಿ ನಿಯಮದಂತೆ ಕೆಎಎಸ್ ವೃಂದದ ಅಧಿಕಾರಿಗಳಿಗೆ ಮಾತ್ರ ಮೀಸಲಾಗಿರುತ್ತದೆ.ಇದಕ್ಕಿಂತ ಕೆಳ ಹಂತದ ಅಧಿಕಾರಿಗಳನ್ನು ನಿಯೋಜಿಸಲೇಬಾರದು.ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಆಶಾ ಪರ್ವಿನ್ ಅವರನ್ನು ವರ್ಗ ಮಾಡಿ ಮಂಜುಳಾ ಅವರನ್ನು ನಿಯೋಜನೆ ಮಾಡಲಾಗಿದೆ. ಸರ್ಕಾರ ಮಾಡಿರುವ ಆದೇಶವನ್ನು ಸರ್ಕಾರದ ಅಧಿಕಾರಿಗಳೇ ಉಲ್ಲಂಘನೆ ಮಾಡುವುದು ಎಷ್ಟು ಸರಿ..ಎಂದು ಪ್ರಶ್ನಿಸಿರುವ ಸಂಘದ ಪದಾಧಿಕಾರಿಗಳು ಸರ್ಕಾರದ ನಿಯಮದ ಅನ್ವಯವೇ ಮಂಜುಳಾ ಅವರ ನೇಮಕಾತಿ ರದ್ದು ಮಾಡಿ ಅವರ ಸ್ಥಳಕ್ಕೆ ಕೆಎಎಸ್ ಅಧಿಕಾರಿಯನ್ನೇ ನಿಯುಕ್ತಿ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಪೌರಾಡಳಿತ ನಿರ್ದೇಶನಾಲಯದಲ್ಲಿ ಗ್ರೇಡ್-2 ನ ಕೆಎಂಎಎಸ್ ಅಧಿಕಾರಿಯಾಗಿರುವ ಮಂಜುಳಾ ಅವರನ್ನು ದಿಢೀರ್ ನೇಮಕ ಮಾಡಿ ಹೊರಡಿಸಿರುವ ಆದೇಶವನ್ನು ಈ ಕೂಡಲೇ ರದ್ದು ಮಾಡಬೇಕೆಂದು ಸಂಘ ಸರ್ಕಾರವನ್ನು ಒತ್ತಾಯಿಸಿರುವುದು ಈಗ ದೊಡ್ಡ ಸಂಕಟ-ಸಂಕಷ್ಟ ಸೃಷ್ಟಿಸಿದೆ. ಮಂಜುಳಾ ಅವರ ನಿಯೋಜನೆ ರದ್ದು ಮಾಡಿ ಎಲ್ಲಿಗೆ ಅವರನ್ನು ನಿಯೋಜಿಸಬೇಕು.ಇಲ್ಲಿಗೆ ಯಾರನ್ನು ನಿಯೋಜನೆ ಮಾಡ ಬೇಕೆನ್ನುವ ದೊಡ್ಡ ಗೊಂದಲ ಸೃಷ್ಟಿಯಾಗಿದೆ.

ಡಾ.ಶಿವಲಿಂಗಯ್ಯಗೆ ಮರ್ಮಾಘಾತ: ಆಶಾ ಪರ್ವಿನ್ ಅವರಂಥ ದಕ್ಷ-ಪ್ರಾಮಾಣಿಕ ಅಧಿಕಾರಿಯ ದಿಢೀರ್ ವರ್ಗಾವಣೆ ಹಿಂದೆ ಇರೋ ಕೈವಾಡವೇ ಆಸ್ಪತ್ರೆಯ ನಿರ್ದೇಶಕ ಡಾ.ಶಿವಲಿಂಗಯ್ಯ ಎನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ.ಅವರ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ-ಅವ್ಯವಹಾರ-ಭ್ರಷ್ಟಾಚಾರವನ್ನು ಆಶಾ ಪರ್ವಿನ್ ಅವರು ಎಳೆ ಎಳೆಯಾಗಿ ಸರ್ಕಾರಕ್ಕೆ ವರದಿ ಮೂಲಕ ಸಲ್ಲಿಸಿದರೆನ್ನುವ ಸಿಟ್ಟಿಗೆ ಸರ್ಕಾರದ ಮಟ್ಟದಲ್ಲಿ ಲಾಭಿ ನಡೆಸಿದರೆನ್ನುವ ಮಾತುಗಳಿವೆ. ಆಶಾ ಪರ್ವಿನ್ ಅವರನ್ನು ಆಡಳಿತಾಧಿಕಾರಿಯಾಗಿ ಇಟ್ಟುಕೊಂಡರೆ ತನ್ನ ಬುಡವನ್ನೇ ಕಾಯಿಸೋದು ಪಕ್ಕಾ ಎನ್ನುವ ಕಾರಣಕ್ಕೇನೆ ಅವರನ್ನು ಎತ್ತಂಗಡಿ ಮಾಡಿಸಿದರೆನ್ನುವ ಆಪಾದನೆ ಅವರ ಮೇಲಿದೆ.ಹಾಗೆ ಮಾಡುವಾಗ ಸರ್ಕಾರದ ನಿಯಮಗಳನ್ನು ಗಮನಿಸಿ ಮಾನದಂಡಗಳಿಗೆ ಹೋಲುವಂತ ಅಧಿಕಾರಿಯನ್ನು ನಿಯೋಜನೆ ಮಾಡಿಸುವುದನ್ನೇ ಮರೆತರೆನ್ನಿಸುತ್ತದೆ.ಈ ಕಾರಣಕ್ಕೆ ಇವತ್ತು ಅವರ ಆಪ್ತ ಅಧಿಕಾರಿ ಮಂಜುಳಾ ಅವರ ನಿಯೋಜನೆಯೇ ರದ್ದಾಗುವ ಸ್ಥಿತಿ ತಂದುಕೊಂಡಿದ್ದಾರಂತೆ.

ಆಶಾ ಪರ್ವಿನ್ ಬೆನ್ನಿಗೆ ಕೆಎಎಸ್ ಅಧಿಕಾರಿಗಳ ಸಂಘ:ಕೆಎಎಸ್ ಅಧಿಕಾರಿಗಳ ಸಂಘದ ಕೆಲವು ಮೂಲಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಕೊಟ್ಟ ಹೇಳಿಕೆ ಪ್ರಕಾರ ಆಶಾ ಪರ್ವಿನ್ ಅವರಂಥ ಪ್ರಾಮಾಣಿಕ-ದಕ್ಷ ಅಧಿಕಾರಿಗೆ ಕೆಲಸ ಮಾಡಲಿಕ್ಕಾಗದಂತ ವಾತಾವರಣ ಸೃಷ್ಟಿಸಿದ್ದರ ಬಗ್ಗೆ ನಮಗೆ ಮಾಹಿತಿ ಇದೆ.ಆಶಾ ಪರ್ವಿನ್ ಅವರಿಗೆ ಇಲಾಖೆಯಲ್ಲಿ ಒಳ್ಳೆಯ ಹೆಸರಿದೆ. ಅಂಥಾ ಅಧಿಕಾರಿ ಸರ್ಕಾರ ಕೊಟ್ಟ ಅಧಿಕಾರದ ವ್ಯಾಪ್ತಿಯಲ್ಲಿ ಆಸ್ಪತ್ರೆಯ ಕಾಳಜಿ-ಹಿತದೃಷ್ಟಿಯಿಂದ ನಿರ್ದೇಶಕರ ಅಕ್ರಮ-ಕರ್ಮಕಾಂಡವನ್ನು ಪತ್ತೆ ಮಾಡಿ ವರದಿ ಸಲ್ಲಿಸಿದರು.ಇದಕ್ಕೆ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಬೇಕಿತ್ತು.ಆದರೆ ವರ್ಗಾವಣೆ ಮಾಡಿದ್ದೇಕೆ ಎನ್ನುವುದು ನಮಗೆ ಅಚ್ಚರಿ ಮತ್ತು ಆತಂಕ ಸೃಷ್ಟಿಸಿದೆ.ಸರ್ಕಾರದ ಮಟ್ಟದಲ್ಲಿ ಲಾಭಿ ನಡೆಸದ ಹೊರತು ಹೀಗೆಲ್ಲಾ ಆಗಲಿಕ್ಕೆ ಸಾಧ್ಯವಿಲ್ಲ.ಹಾಗಾಗಿ ಆಶಾ ಪರ್ವಿನ್ ಅವರಿಗೆ ಆದಂಥ ಅನ್ಯಾಯವನ್ನು ಸರ್ಕಾರದ ಮಟ್ಟದಲ್ಲಿ ಪ್ರಶ್ನಿಸಲು ನಿರ್ದರಿಸಿ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಅಕ್ರಮ ಮುಚ್ಚಾಕಲು ಇಂತಹದೊಂದು ಪ್ರಯತ್ನ ನಡೆದಿದೆ ಎನ್ನುವುದು ಸಾಬೀತಾದ್ರೆ ಡಾ.ಶಿವಲಿಂಗಯ್ಯ ವಿರುದ್ಧವೂ ಕ್ರಮ ಜಾರಿಯಾಗಬೇಕೆನ್ನುವುದು ನಮ್ಮ ಬೇಡಿಕೆ ಎಂದಿದ್ದಾರೆ.
ಅದೇನೇ ಆಗಲಿ,ಆಶಾ ಪರ್ವಿನ್ ಅವರಂಥ ದಕ್ಷ ಅಧಿಕಾರಿಯ ಎತ್ತಂಗಡಿ ವಿಚಾರ ಇದೀಗ ವಿವಾದ ಸೃಷ್ಟಿಸಿರುವುದಲ್ಲದೇ ಡಾ.ಶಿವಲಿಂಗಯ್ಯ ಅವರ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಮಂಜುಳಾ ಅವರ ಸ್ಥಾನಕ್ಕೂ ಕುತ್ತು ತಂದಿದೆ.ಎಲ್ಲವೂ ನಿರೀಕ್ಷೆಯಂತಾದ್ರೆ ಮಂಜುಳಾ ಅವರ ನಿಯೋಜನೆ ರದ್ದಾದ್ರೂ ಅಶ್ವರ್ಯವಿಲ್ಲ.ಇದು ಡಾ.ಶಿವಲಿಂಗಯ್ಯ ಅವರಿಗೆ ಮರ್ಮಾಘಾತ ಉಂಟುಮಾಡಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.