ಬೆಂಗಳೂರು: ಇದು ಕನ್ನಡದ ನಂಬರ್ 1 ನ್ಯೂಸ್ ಚಾನೆಲ್ ಡಿಜಿಟಲ್ ವಿಭಾಗದ ಆಡಳಿತ ಅಮಾಯಕ ಹಾಗು ಪ್ರಾಮಾಣಿ ಕ ಸಿಬ್ಬಂದಿಯನ್ನು ಅಮಾನವೀಯವಾಗಿ ನಡೆಸಿಕೊಂಡಿದೆ ಎನ್ನಲಾದ ನೋವಿನ ಕಥೆ.? ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದವರನ್ನು ಏಕಾಏಕಿ, ನಾಳೆಯಿಂದ ನಿಮ್ಮ ಸೇವೆ ನಮಗೆ ಅಗತ್ಯವಿಲ್ಲ,ಕೆಲಸಕ್ಕೆ ಬರಬೇಡಿ ಎಂದ್ಹೇಳಿಬಿಟ್ಟರೆ ತಮ್ಮ ಕಸುವನ್ನೆಲ್ಲಾ ಒಗ್ಗೂಡಿಸಿ ಕೆಲಸ ಮಾಡಿದ ಸಿಬ್ಬಂದಿಯ ಸ್ಥಿತಿ ಹೇಗಾಗಬೇಡ. ಅವರ ವೃತ್ತಿಜೀವನ-ಸಮಾಜದಲ್ಲಿ ಕಾಯ್ದುಕೊಂಡ ಘನತೆ-ಪ್ರತಿಷ್ಠೆ, ವೈಯುಕ್ತಿಕ ಜೀವನ, ಹೆಂಡತಿ ಮಕ್ಕಳು… ಸಾಲ,ಇನ್ ಸ್ಟಾಲ್ಮೆಂಟ್.. ಹೀಗೆ ಕೆಲಸ ನಂಬಿಕೊಂಡು ಮೈ ತುಂಬಾ ಮಾಡಿಕೊಂಡ ಹಲವು ಕಮಿಟ್ಮೆಂಟ್ ಗಳ ಗತಿ ಏನಾಗಬೇಡ..? ಟಿವಿ-9 ಕನ್ನಡ ಡಿಜಿಟಲ್ ನಲ್ಲು ಅಂತದ್ದೇ ಘಟನೆ ನಡೆದೋಗಿದೆ.8 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ ಎನ್ನಲಾಗಿರುವ ಅಘಾತಕಾರಿ ಸುದ್ದಿ ಹೊರಬಿದ್ದಿದೆ.
ಟಿವಿ-9 ಉತ್ತಮ ಸಮಾಜಕ್ಕಾಗಿ ಎನ್ನುವ ಶೀರ್ಷಿಕೆಯಲ್ಲಿ ಸುಮಾರು ಒಂದೂವರೆ ದಶಕದಿಂದಲೂ ನಿರಂತರವಾಗಿ ಕೆಲಸ ಮಾಡುತ್ತಿರುವ ನ್ಯೂಸ್ ಚಾನೆಲ್.. ಆರಂಭದಿಂದ ಈಗಲೂ ನಂಬರ್ 1 ಸ್ಥಾನವನ್ನು ಅಬಾಧಿತವಾಗುಳಿಸಿಕೊಂಡಿರುವ ಜನಪ್ರಿಯ ಸುದ್ದಿವಾಹಿನಿ.. ಟಿವಿ-9 ನ್ನು ಮುಳುಗಿಸಿಬಿಡ್ತಿವಿ… ಇನ್ನಿಲ್ಲದಂತೆ ಮಾಡಿಬಿಡ್ತೇವೆ ಎಂದು ಸವಾಲಾಕಿ ಎಷ್ಟೇ ಚಾನೆಲ್ ಬಂದ್ರೂ ಅದು ಉಳಿಸಿಕೊಂಡಿರುವ ಜನಪ್ರಿಯತೆ-ವಿಶ್ವಾಸಾರ್ಹತೆಯತ್ತ ಸುಳಿಯಲಿಕ್ಕೂ ಸಾಧ್ಯವಾಗಲಿಲ್ಲ ಎನ್ನುವುದು ಉತ್ಪ್ರೇಕ್ಷೆ ಅಲ್ಲವೇ ಅಲ್ಲ. ಟಿಆರ್ ಪಿಯಲ್ಲಿ ಇವತ್ತಿಗೂ ಏಕಮೇವಾದ್ವಿತೀಯವಾಗಿ ರಾರಾಜಿಸುತ್ತಿರುವ ಚಾನೆಲ್ ನ ವೃತ್ತಿಪರತೆ-ಬದ್ಧತೆ-ಸುದ್ದಿ ಪ್ರಸಾರದ ವೈಶಿಷ್ಟ್ಯತೆ ಬಗ್ಗೆ ಯಾರದೇ ತಕರಾರಿಲ್ಲ. ಅದರ ಬಗ್ಗೆ ದೂರು-ಆಕ್ಷೇಪ-ಅಸಮಾಧಾನ ಯಾವುದೂ ನಮಗಿಲ್ಲ.
ಆದರೆ.. ಆದರೆ.. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಚಾನೆಲ್ ಹಾಗೂ ಅದರ ಅಂಗಸಂಸ್ಥೆಗಳಲ್ಲಿನ ಕೆಲಸವನ್ನೇ ನಂಬಿಕೊಂಡಿರುವ ಕಾರ್ಮಿಕ ಸಿಬ್ಬಂದಿಗೆ ಗೇಟ್ ಪಾಸ್ ಕೊಡಲಾಗಿದೆ ಎನ್ನಲಾಗಿರುವ ಬೆಳವಣಿಗೆ ಇದೆಯೆಲ್ಲಾ ಅದು ನಿಜಕ್ಕೂ ಚಾನೆಲ್ ಗೆ ಶೋಭೆ ತರುವ ಬೆಳವಣಿಗೆ ಅಲ್ಲವೇ ಅಲ್ಲ ಎನ್ನುವುದಷ್ಟೇ ನಮ್ಮ ಬಲವಾದ ವಾದ ಹಾಗೂ ಆಕ್ಷೇಪ. ನಂಬರ್ 1 ಚಾನೆಲ್ ಆಗಿರುವುದರ ಜತೆಜತೆಗೇನೆ ಆರ್ಥಿಕವಾಗಿಯೂ ಸಾಕಷ್ಟು ಲಾಭದಲ್ಲಿದೆ ಎನ್ನಲಾಗುತ್ತಿರುವ ಟಿವಿ-9 ಕನ್ನಡ ಸುದ್ದಿಸಂಸ್ಥೆ ತನ್ನ ಸಿಬ್ಬಂದಿಯನ್ನು ಸಣ್ಣ ಸೂಚನೆಯನ್ನೂ ನೀಡದೆ ಕೆಲಸದಿಂದ ತೆಗೆದು ಹಾಕುವುದು ಮಾಧ್ಯಮ ಕ್ಷೇತ್ರಕ್ಕಷ್ಟೇ ಅಲ್ಲ ಸಮಾಜಕ್ಕೂ ಉತ್ತಮ ಸಂದೇಶ ರವಾನಿಸುತ್ತದಾ..? ಸಾಧ್ಯವೇ ಇಲ್ಲ..
ಮಾಧ್ಯಮ ಕ್ಷೇತ್ರದಲ್ಲಿ ಏನೇ ಒಳ್ಳೆಯ-ಕೆಟ್ಟ ಬೆಳವಣಿಗೆ ನಡೆದಾಗಲೂ ಉತ್ತಮವಾಗಿದ್ದರೆ ಅದನ್ನು ಶ್ಲಾಘಿಸುವ, ಮಾರಕವಾಗಿದ್ದರೆ ಅದನ್ನು ಖಂಡಿಸುತ್ತಾ ಬಂದಿರುವ ನಿಷ್ಪಕ್ಷಪಾತವಾಗಿ ಸುದ್ದಿಯನ್ನು ಹೇಳುವ ಕನ್ನಡ ಫ್ಲ್ಯಾಶ್ ನ್ಯೂಸ್ ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ. ಟಿವಿ-9 ಸುದ್ದಿಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 8 ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ತೆಗೆಯಲಾಗಿದೆಯಂತೆ. ಡಿಜಿಟಲ್ ವಿಭಾಗ ಆರಂಭವಾದಾಗಿ ನಿಂದಲೂ ಸಂಸ್ಥೆಯ ಜತೆಗಿದ್ದು, ನಂಬರ್ 1 ಮಟ್ಟಕ್ಕೆ ಅದನ್ನು ಎತ್ತರಕ್ಕೇರಿಸಿದವರು ಇದ್ದಾರೆ. ಆದರೆ ಅನುಭವಿಗಳು ಮತ್ತು ಹೊಸಬರು ಎಂಬದನ್ನು ನೋಡದೆ ಕೆಲಸದಿಂದ ತೆಗೆಯಲಾಗಿದೆಯಂತೆ. ಇದಕ್ಕೆ ಅವರಿಗೆಲ್ಲಾ ಕೊಟ್ಟಿರುವ ಕಾರಣ ಆರ್ಥಿಕ ನಷ್ಟವಂತೆ.. ಟಿವಿ-9 ಡಿಜಿಟಲ್ ಎಂಬುದು ಅವರ ದೇ ನ್ಯೂಸ್ ಚಾನೆಲ್ ಗಿಂತಲೂ ಹೆಚ್ಚಿನ ಲಾಭದಲ್ಲಿದೆ ಎಂಬ ಮಾಹಿತಿಯಿರುವಾಗ ಆರ್ಥಿಕ ನಷ್ಟದ ಕಾರಣವೊಡ್ಡಿರುವುದು ಆಶ್ಚರ್ಯ ಹಾಗೂ ಅಘಾತ ಉಂಟುಮಾಡಿದೆ.
ಅಸಲಿಗೆ ನಡೆದಿದ್ದೇನು..? ಅನೇಕ ವರ್ಷಗಳವರೆಗೆ ಡಿಜಿಟಲ್ ಟೀಮ್ ನ ಭಾಗವಾಗಿ, ರಕ್ತ ಬೆವರನ್ನು ಒಂದಾಗಿಸಿಕೊಂಡು ದುಡಿಯುತ್ತಾ ಕೊನೆಗೆ ದಿಢೀರನೇ ಕೆಲಸ ಕಳೆದುಕೊಂಡವ ಬಗ್ಗೆ ಸಂಸ್ಥೆಯಲ್ಲಿ ಇನ್ನೂ ದುಡಿಯುತ್ತಿರುವವರೇ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ನೀಡಿದ ಮಾಹಿತಿ ಅನ್ವಯ ಅಕ್ಟೋಬರ್ 16 ರಂದು ಟಿವಿ-9 ಡಿಜಿಟಲ್ ನ ವೆಬ್ ಸೈಟ್ ಹಾಗೂ ಯೂಟ್ಯೂಬ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿ ಪೈಕಿ 8 ಸಿಬ್ಬಂದಿಯನ್ನು ನಿರ್ದಯವಾಗಿ ಕೆಲಸದಿಂದ ತೆಗೆದು ಹಾಕಲಾಗಿದೆಯಂತೆ. ತಲಾ 4 ರಂತೆ ಎರಡೂ ವಿಭಾಗಗಳಿಂದ 8 ಸಿಬ್ಬಂದಿಯನ್ನು ತೆಗೆದು ಹಾಕಲಾಗಿದೆ. ಅವರಲ್ಲಿ 3 ರನ್ನು ಕರೆದು ಪ್ರಿಮಿಯಮ್ ನ್ಯೂಸ್ ಆಪ್ ಅನ್ನು ಸ್ಥಗಿತಗೊಳಿಸುತ್ತಿದ್ದೇವೆ. ಹಾಗಾಗಿ ನಿಮ್ಮ ಅವಶ್ಯಕತೆ ಸಂಸ್ಥೆಗಿಲ್ಲ. ನಾಳೆಯಿಂದ ಕೆಲಸಕ್ಕೆ ಬರುವ ಅವಶ್ಯಕತೆಯಿಲ್ಲ ಎಂದು ಹೇಳಿ ಮನೆಗೆ ಕಳುಹಿಸಲಾಗಿದೆಯಂತೆ. ಆದರೆ ಇದ್ಯಾವುದರ ಸಣ್ಣ ಸುಳಿವೂ ಇರದೆ ಎಂದಿನಂತೆ ಕೆಲಸಕ್ಕೆ ಅತ್ಯುತ್ಸಾಹದಲ್ಲಿ ಬಂದಿದ್ದ ಸಿಬ್ಬಂದಿಗೆ ಈ ಮಾತು ಕೇಳಿ ಶಾಕ್ ಆಗಿದೆ.
ನೋಯಿಡಾದ ಎಸಿ ಚೇಂಬರಿನಲ್ಲಿ ಕುಳಿತ ಟಿವಿ-9 ಆಡಳಿತ ಮಂಡಳಿ(ನಿಜವಾಗಿಯೂ ಇದು ನೋಯಿಡಾ ಕಚೇರಿಯಲ್ಲಿರುವವರು ತೆಗೆದುಕೊಂಡ ನಿರ್ದಾರವೋ ಅಥವಾ ಬೆಂಗಳೂರು ಕಚೇರಿಯಲ್ಲಿರುವ ಕೆಲವರು ತೆಗೆದುಕೊಂಡ ನಿರ್ದಾರವೋ ಗೊತ್ತಾಗುತ್ತಿಲ್ಲ..?! ) ವರು ತೆಗೆದುಕೊಂಡ ನಿರ್ಣಯವನ್ನು ಬೆಂಗಳೂರಿನ ಎಚ್.ಆರ್. ಮೂಲಕ ಸದರಿ ಉದ್ಯೋಗಿಗಳಿಗೆ ತಿಳಿಸಿದಾಗ ಅವರಿಗೆ ಆಕಾಶವೇ ಕಳಚಿಬಿದ್ದ ಅನುಭವ… ನಿಂತಲ್ಲೇ ಕುಸಿದು ಹೋದ ಅಘಾತವಾಗಿದೆ. ಉದ್ಯೋಗಿಗಳೆಲ್ಲಾ ಸೇರಿ ಹಲವು ರೀತಿಯಲ್ಲಿ ಕೆಲಸ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ದಿಢೀರ್ ಕೆಲಸ ಹೋದರೆ ನಮ್ಮ ಗತಿಯೇನು..ನಮ್ಮ ಕುಟುಂಬಗಳ ಕಥೆಯೇನು..? ನಮ್ಮ ಕಮಿಟ್ಮೆಂಟ್ ಗಳ ಕಥೆಯೇನು..? ದಯವಿಟ್ಟು ನಿರ್ಣಯವನ್ನು ಮರುಪರಿಶೀಲಿಸಿ ಎಂದು ಪರಿಪರಿಯಾಗಿ ವಿನಂತಿಸಿಕೊಂಡಿದ್ದಾರೆ. ಆದರೆ ಶತಾಯಗತಾಯ, ಸಿಬ್ಬಂದಿಯನ್ನು ತೆಗೆಯಲೇಬೇಕೆನ್ನುವ ನಿರ್ಧಾರ ಮಾಡಿಕೊಂಡಂತಿದ್ದ ಆಡಳಿತ ಮಂಡಳಿ ಅದು ಯಾವುದನ್ನೂ ಕೇಳಿಸಿಕೊಳ್ಳುವ ವ್ಯವಧಾನ ತೋರಿಸದೆ ಸ್ಸಾರಿ.. ನೋ.. ಎಂದುಬಿಟ್ಟಿದೆ. ಪಾಪ, ಎಲ್ಲ 8 ಸಿಬ್ಬಂದಿ ಕಣ್ಣೀರಿಡುತ್ತಾ.. ಹಿಡಿ ಶಾಪ ಹಾಕುತ್ತಾ ಹೊರಬಿದ್ದಿದ್ದಾರಂತೆ
ಟಿವಿ-9 ನ ಕೆಲವು ಆಂತರಿಕ ಮೂಲಗಳ ಪ್ರಕಾರ ಡಿಜಿಟಲ್ ವಿಭಾಗ ಆರ್ಥಿಕವಾಗಿ ಸುಸ್ಥಿರವಾಗಿದೆ ಎನ್ನುವ ಮಾತಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಟಿವಿ-9 ನ್ಯೂಸ್ ಚಾನೆಲ್ ಗೇ ಅದು ಪೈಪೋಟಿ ನೀಡುವ ಮಟ್ಟದಲ್ಲಿದೆ. ಡಿಜಿಟಲ್ ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಪ್ರಕಾರ ಯುಟ್ಯೂಬ್, ವೆಬ್ ಸೈಟ್ ಗಳಿಂದಲೇ ತಿಂಗಳ ಗಳಿಕೆ 1 ಕೋಟಿಯಷ್ಟಿದೆಯಂತೆ. ಸೀಮಿತ ಸಂಖ್ಯೆಯ ಸಿಬ್ಬಂದಿಯನ್ನೊಳಗೊಂಡ ಟೀಮ್, ನಂಬರ್ 1 ಡಿಜಿಟಲ್ ಫ್ಲಾಟ್ ಫಾರ್ಮ್ ಆಗಿ ಬೆಳೆಯೊಕ್ಕೆ ಎಲ್ಲ ಸಿಬ್ಬಂದಿ ಹಾಕಿರುವ ಶ್ರಮ ಅಷ್ಟಿಷ್ಟಲ್ಲ. ಆದರೆ ಅದಕ್ಕೆ ಕಾರಣವಾದ ಸಿಬ್ಬಂದಿಯಲ್ಲೇ ಕೆಲವರನ್ನು ಕೆಲಸದಿಂದ ತೆಗೆದಾಕುವಂತದ್ದು ಎಷ್ಟರ ಮಟ್ಟಿಗೆ ಸರಿ? ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡೋರಿಗಿಂತ ಹೆಚ್ಚು ಶ್ರಮ ಹಾಕಿ ಕೆಲಸ ಮಾಡುತ್ತಿದ್ದ 8 ಸಿಬ್ಬಂದಿಗೆ ಸೋಡಾಚೀಟಿ ನೀಡಿರುವುದನ್ನು ಮಾಧ್ಯಮ ಲೋಕದ ವಿಪರ್ಯಾಸ, ದುರಂತ ಹಾಗೂ ಟಿವಿ-9 ಸುದ್ದಿಸಂಸ್ಥೆಯ ಅಮಾನವೀಯತೆ ಎನ್ನದೆ ವಿಧಿಯಿಲ್ಲ.
ನೊಟೀಸ್ ಪಿರಿಯಡ್ಡೂ ಇಲ್ಲ.. ನಷ್ಟ ಭರ್ತಿಯನ್ನೂ ಕೊಟ್ಟಿಲ್ಲ..?! ಕಾರ್ಪೊರೇಟ್ ಲೆವಲ್ನಲ್ಲಿ ಕೆಲಸ ಮಾಡುತ್ತಿರುವ ಟಿವಿ-9 ಸುದ್ದಿ ಸಂಸ್ಥೆ ಉದ್ಯೋಗ ಕಡಿತ ಮಾಡುವ ವೇಳೆ ಸಿಬ್ಬಂದಿಗೆ ಸಿಗಬೇಕಿರುವ ಸೌಲಭ್ಯಗಳನ್ನಾದರೂ ನೀಡಿದೆಯಾ..? ಕೆಲಸದಿಂದ ತೆಗೆಯುವ ವೇಳೆ ಅವರಿಗೆ 3 ತಿಂಗಳ ಅಥವಾ 1-2 ತಿಂಗಳ ಸಂಬಳವಾದ್ರೂ ಮುಂಗಡವಾಗಿ ಕೊಟ್ಟಿದೆಯಾ..? 8 ಸಿಬ್ಬಂದಿಯ ಪೈಕಿ ಕೆಲವರಿಗೆ ಮಾತ್ರ 2 ತಿಂಗಳ ವೇತನವನ್ನು “ನಷ್ಟ ಭರ್ತಿ”ಯಾಗಿ ನೀಡಲಾಗಿದೆಯಂತೆ.ಉಳಿದ ಸಿಬ್ಬಂದಿಗೆ ಯಾವುದೇ ನಷ್ಟ ಭರ್ತಿಯನ್ನು ಸಹ ನೀಡಿಲ್ಲವಂತೆ. ಕೆಲಸವನ್ನು ಬಿಡುವ ಸಿಬ್ಬಂದಿಗೆ ನೊಟೀಸ್ ಪಿರಿಯಡ್ ಕಡ್ಡಾಯವಾಗಿ ಮಾಡು ವಂತೆ ಫರ್ಮಾನ್ ಹೊರಡಿಸುವ ಇಂತಹ ಸಂಸ್ಥೆಗಳು ಕೆಲಸದಿಂದ ಸಿಬ್ಬಂದಿಯನ್ನು ತೆಗೆಯುವಾಗ ನೊಟೀಸ್ ಪಿರಿಯಡ್ ಗೆ ಅವಕಾಶ ಕೊಡೋದಿಲ್ಲ ಎಂದ್ರೆ ಹೇಗೆ..? ಇದು ಯಾವ ನ್ಯಾಯ..? ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ಏಕಾಏಕಿ ಹೇಳುವ ಮ್ಯಾನೇಜ್ಮೆಂಟ್ ಗೆ ಆ ಕ್ಷಣದಿಂದಲೇ ಬೀದಿಗೆ ಬೀಳುವ ಸಿಬ್ಬಂದಿಯ ಬದುಕು-ಎದುರಾಗುವ ಅಸ್ಥಿರತೆ- ಅನುಭವಿಸುವ ನೋವು-ಭರಿಸಲಾಗದ ಸಂಕಷ್ಟ-ನಾಲ್ಕಾರು ಕಡೆಗಳಿಂದ ಎದುರಿಸಬೇಕಾದ ಅಪಮಾನ-ಕ್ಷಣ ಕ್ಷಣಕ್ಕೂ ಪಡಬೇಕಾದ ಹಿಂಸೆಗಳ ಅರಿವಿದೆಯಾ..? ಖಂಡಿತಾ ಇಲ್ಲ.
ಕೆಲಸಕ್ಕೆ ಕುತ್ತು ತಂತಾ “ಪ್ರಿಮಿಯಮ್” ಆಪ್..!?: ಅಸಲಿಗೆ ಆಗಿದ್ದೇನು ಎನ್ನುವ ಹಿನ್ನೆಲೆ ಕೆದಕುತ್ತಾ ಹೋದರೆ ಕಾರಣವಾಗಿಯೋ.. ನೆಪವಾಗಿಯೋ ಕಾಣಿಸೋದು ಪ್ರಿಮಿಯಮ್ ಎನ್ನುವ ನ್ಯೂಸ್ ಆಪ್ ಅಂತೆ. ಎಲ್ಲವೂ ಅಂದುಕೊಂಡಂತೆಯೇ, ಸರಿಯಾಗಿಯೇ ನಡೆಯುತ್ತಿದ್ದಾಗಲೇ ಡಿಜಿಟಲ್ ಗೆ ಮತ್ತೊಂದು ಸೇರ್ಪಡೆಯಾಗಿದ್ದೇ ಈ ಪ್ರೀಮಿಯಮ್ ಆಪ್ ಅಂತೆ… ನೋಯಿಡಾದ ಪ್ರಭೃತಿಗಳು ಕನಿಷ್ಟ ಈ ಆಪ್ ಬಿಡುಗಡೆ ಮಾಡುವ ಮುನ್ನ ಡಿಜಿಟಲ್ ಟೀಮ್ ಗೆ ಇದರ ಬಗ್ಗೆ ಮಾಹಿತಿಯನ್ನಾದ್ರೂ ಕೊಡಬಹುದಿತ್ತೇನೋ..? ಆದರೆ ಆಪ್ ಬಿಡುಗಡೆಯಾಗೋವರೆಗೂ ಅದರ ಮಾಹಿತಿನೇ ಟೀಮ್ ಗೆ ಇರಲಿಲ್ಲವಂತೆ. ಡಿಜಿಟಲ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವವಿರುವ ಹಿರಿಯ ಸಿಬ್ಬಂದಿಯ ಸಲಹೆಯನ್ನಾದ್ರೂ ಪಡೆಯಬಹುದಿತ್ತು. ಆದರೆ ಅದ್ಯಾವುದನ್ನು ಮಾಡದೆ ಸಾಕಷ್ಟು ತಾಂತ್ರಿಕ ದೋಷಗಳನ್ನು ಒಳಗೊಂಡಿದ್ದ ಪ್ರಿಮಿಯಮ್ ( ಪುಕ್ಕಟೆ ಓದುವುದಕ್ಕೇ ಹಿಂದೆಮುಂದೆ ನೋಡುವ ಇವತ್ತಿನ ಓದುಗರು ತಿಂಗಳಿಗೆ ಇಂತಿಷ್ಟು ಎಂದು ಹಣ ಪಾವತಿಸಿ ನ್ಯೂಸ್ ಆಪ್ ನೋಡುತ್ತಾರಾ.. ಪ್ರಿಮಿಯಮ್ ಆಪ್ ನ ಕಥೆಯೂ ಹಾಗೆಯೇ ಆಗಿತ್ತೆನ್ನುವ ಮಾತಿದೆ) ನ್ಯೂಸ್ ಆಪ್ ನ್ನು ಏಪ್ರಿಲ್ ನಲ್ಲಿಯೇ ಲಾಂಚ್ ಮಾಡಲಾಗಿತ್ತಂತೆ. ಆದರೆ ಸಾಕಷ್ಟು ಕಾರಣಗಳಿಂದ ಆಪ್ ಓದುಗರ ವಿಶ್ವಾಸ ಗೆಲ್ಲಲಾಗಲಿಲ್ಲ. ಹಾಗಾಗಿ ಏಕಾಏಕಿ ಅಕ್ಟೋಬರ್ 16 ರ ಸಂಜೆ 5ಕ್ಕೆ ಕರೆದು ಆಪ್ ರದ್ದು ಮಾಡುತ್ತಿದ್ದೇವೆ ಎಂದ್ಹೇಳಿ 8 ಸಿಬ್ಬಂದಿಗೆ ಗೇಟ್ ಪಾಸ್ ಕೊಡಲಾಗಿದೆಯಂತೆ. ಇದಕ್ಕೆ ಏನನ್ನಬೇಕೋ ಗೊತ್ತಾಗುತ್ತಿಲ್ಲ.
ಕೆಲಸದಿಂದ ತೆಗೆಯೋದರ ಬದಲು ಏನ್ ಮಾಡಬಹುದಿತ್ತು..? ನಾನಾ ದೋಷಗಳಿಂದ ಕೂಡಿತ್ತೆನ್ನಲಾದ ಆಪ್ ನ ಕಾರಣಕ್ಕೆ 8 ಸಿಬ್ಬಂದಿಗೆ ಗೇಟ್ ಪಾಸ್ ಕೊಟ್ಟ ಟಿವಿ-9 ಆಡಳಿತ, ಮಾನವೀಯತೆಯಿಂದ ವರ್ತಿಸಿದ್ದರೆ ಗ್ರೇಟ್ ಎನಿಸಿಬಿಡುತ್ತಿತ್ತೇನೋ..? 8 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದರ ಬದಲು ಡಿಜಿಟಲ್ ಕೆಲಸದಲ್ಲಿಯೇ ಉಳಿಸಿಕೊಂಡು ವೆಬ್ ಸೈಟ್- ಯುಟ್ಯೂಬ್ ಜವಾಬ್ದಾರಿ ನೀಡಬಹುದಿತ್ತೇನೊ.. ಹೇಗಿದ್ದರೂ ಡಿಜಿಟಲ್ ನಲ್ಲಿ ಕೆಲಸ ಮಾಡಲು ಇನ್ನೂ ಸಾಕಷ್ಟು ಉದ್ಯೋಗಿಗಳ ಅವಶ್ಯಕತೆ ಇತ್ತು. ಆ ಅವಶ್ಯಕತೆಯೂ ಭರ್ತಿಯಾಗುತ್ತಿತ್ತು. ಕೆಲಸ ಕಳೆದುಕೊಳ್ಳುವ ಸ್ಥಿತಿಯೂ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಅದ್ಯಾವುದರ ಬಗ್ಗೆಯೂ ತಲೆಕೆಡಿಸಿ ಕೊಳ್ಳದ ಆಡಳಿತ 8 ಸಿಬ್ಬಂದಿಯ ಉದ್ಯೋಗದ ಜತೆಗೆ ಅವರ ಸುಖ ಸಂತೋಷ ನೆಮ್ಮದಿಯನ್ನೂ ಕಸಿದುಕೊಂಡಿದೆ. ಸಧ್ಯದಲ್ಲೇ ಇನ್ನೂ ನಾಲ್ಕಾರು ಸಿಬ್ಬಂದಿಗೂ ಗೇಟ್ ಪಾಸ್ ಕೊಡಲಿದೆಯಂತೆ ದಿಲ್ಲಿ ದರ್ಭಾರು.
“ಮನಿ9” ನಲ್ಲೂ ಹೀಗೆಯೇ ಆಗಿತ್ತಂತೆ..!? ವಾಣಿಜ್ಯ ಸುದ್ದಿಗಳಿಗೆ ಸಂಬಂಧಿಸಿದಂತೆ ಟಿವಿ9 ಡಿಜಿಟಲ್ ನ ಹೊಸ ಪ್ರಯೋಗದ ರೂಪದಲ್ಲಿ ಆರಂಭವಾಗಿದ್ದ ಮನಿ-9 ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಇದಕ್ಕೆಂದೇ ಒಂದಷ್ಟು ಉದ್ಯೋಗಿಗಳನ್ನು ಹೆಚ್ಚಿನ ಸಂಬಳಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿತ್ತು. ಆದರೆ ದಿಢೀರನೇ ಆರಂಭವಾಗಿದ್ದ ಮನಿ-9 ನಡೆದಿದ್ದು ಕೆಲ ತಿಂಗಳು ಅಷ್ಟೆ. ದೋಷಪೂರಿತವಾದ ಸುದ್ದಿಗಳ ಕಾರಣಕ್ಕೆ ಮನಿ-9 ಓದುಗರನ್ನು ತಲುಪಲು ಸಾಧ್ಯವಾಗಲಿಲ್ಲ. ಆಗಲೂ ಕೂಡ ಆರು ತಿಂಗಳ ಹಿಂದೆ ಟಿವಿ-9 ಡಿಜಿಟಲ್ ಆಡಳಿತವು 5 ಸಿಬ್ಬಂದಿಯನ್ನು ಅಮಾನವೀಯವಾಗಿ ಕೆಲಸದಿಂದ ತೆಗೆದು ಹಾಕಿತ್ತಂತೆ. ಆಗಲೂ ಕೊಟ್ಟ ಕಾರಣ ಆರ್ಥಿಕ ನಷ್ಟ. ಆದರೆ ಆರ್ಥಿಕ ನಷ್ಟಕ್ಕೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಾಕುವುದೇ ಪರಿಹಾರ ಎಂದುಕೊಂಡಂತಿದೆಯೇನೋ ಟಿವಿ9 ಆಡಳಿತ ಎನ್ನಿಸುತ್ತದೆ.
ಟಿವಿ-9 ಡಿಜಿಟಲ್ ನಂತರ ಚಾನೆಲ್ ನಲ್ಲಿಯೂ ಇನ್ನೊಂದಷ್ಟು ಜನಕ್ಕೆ ಕಾದಿದೆಯಂತೆ ಉದ್ಯೋಗಕಡಿತದ ಭೀತಿ..?! : ಟಿವಿ-9 ಚಾನೆಲ್ ಸಿಬ್ಬಂದಿ ಸಹ ಇಂತದ್ದೊಂದು ಸ್ಪೋಟಕ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ ಉದ್ಯೋಗ ಕಳೆದುಕೊಳ್ಳುವ ಭೀತಿಗೆ ಚಾನೆಲ್ ಸಿಬ್ಬಂದಿ ಸಿಲುಕಿದ್ದಾರಂತೆ. ಕೆಲವೇ ದಿನಗಳಲ್ಲಿ ಚಾನೆಲ್ ಸಿಬ್ಬಂದಿಗೂ ಸೋಡಾ ಚೀಟಿ ಸಿಗುವ ಆತಂಕವಿದ್ದು ತೆರೆಮರೆಯಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿವೆಯಂತೆ. ಯಾರು ಮುಂದಿನ ಆ ಟಾರ್ಗೆಟ್ ಎನ್ನುವುದು ಸ್ಪಷ್ಟವಾಗದಿದ್ದರೂ ಎಲ್ಲರೂ ತಾವಿರಬಹುದಾ ಎನ್ನುವ ಭಯದಲ್ಲೇ ಕೆಲಸ ಮಾಡುತ್ತಿ ದ್ದಾರಂತೆ. ಡಿಜಿಟಲ್ ಗೆ ಕೈ ಹಾಕಿ ಮುಗಿಸಿದ ಮೇಲೆ ನ್ಯೂಸ್ ಚಾನೆಲ್ ಉದ್ಯೋಗಿಗಳ ಕೆಲಸಕ್ಕೂ ಕುತ್ತು ತರುವ ಪ್ರಕ್ರಿಯೆ ಶುರುವಾದರೂ ಆಶ್ವರ್ಯವಿಲ್ಲ ಎನ್ನಲಾಗ್ತಿದೆ. ಅದಕ್ಕಾಗಿ ಕೆಲವು ಸೀನಿಯರ್ಸ್-ಚೀಫ್ ಗಳ ನೇತೃತ್ವದಲ್ಲಿ ಚರ್ಚೆಗಳು ನಡೆಯುತ್ತಿವೆಯಂತೆ. ಯಾರನ್ನು ಬಲಿ ಹಾಕಬೇಕು.. ಅದಕ್ಕೆ ಯಾವ್ ರೀಸನ್ ಕೊಡ್ಬೇಕು ಎನ್ನುವ ಚಿಂತನ ಮಂಥನ ಕೂಡ ನಡೆಯುತ್ತಿದೆ ಎನ್ನುವುದು ಟಿವಿ-9 ಒಳಗಿನಿಂದಲೇ ಕೇಳಿಬಂದಿರುವ ವರ್ತಮಾನ.
ವಿಶ್ವಾಸಾರ್ಹ ಸುದ್ದಿಗೆ ಹೆಸರಾಗಿರುವಷ್ಟೇ ಉದ್ಯೋಗಭದ್ರತೆ ಹೆಗ್ಗಳಿಕೆಗೂ ಪಾತ್ರವಾಗಿರುವ ಟಿವಿ9ನಲ್ಲಿ ಏಕೆ ಇಂಥಾ ಬೆಳವಣಿಗೆ..? ಅಂದ್ಹಾಗೆ ಬೇರೆ ಚಾನೆಲ್ ಗಳು ಎದುರಿಸುತ್ತಿರುವಂಥ ಯಾವುದೇ ಸಮಸ್ಯೆಗಳೂ ಟಿವಿ-9ಗೆ ಎದುರಾಗಿಲ್ಲ. ಇಲ್ಲಿ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ. ಬೇರೆ ಚಾನೆಲ್ ಗಳ ಹೋಲಿಕೆಯಲ್ಲಿ TRP ಯಷ್ಟೇ ,ಕಮರ್ಷಿಯಲ್ಲಾಗಿಯೂ ಟಿವಿ-9 ಆ ಕಾಲದಿಂದಲೂ ನಂಬರ್ ಒನ್ ಸ್ಥಾನದ ಲ್ಲಿಯೇ ಇದೆ. ಪರಿಸ್ತಿತಿ ಹೀಗೆಲ್ಲಾ ಇರುವಾಗ “ಆರ್ಥಿಕ ನಷ್ಟದ ಕಾರಣಕ್ಕೆ ಉದ್ಯೋಗ ಕಡಿತ” ಮಾಡಲಾಗುತ್ತಿದೆಯೊ ಗೊತ್ತಾಗುತ್ತಿಲ್ಲ. ಇದು ಅಚ್ಚರಿಯ ಜತೆಗೆ ಆತಂಕಕಾರಿ ಕೂಡ. ಆದರೆ ಇಲ್ಲಿ ಕಾಡೋ ಪ್ರಶ್ನೆ ಹಾಗೂ ಅನುಮಾನ ಏನೆಂದರೆ ಇದೆಲ್ಲವೂ ಟಿವಿ-9 ಪ್ರಧಾನ ಆಡಳಿತ ಮಂಡಳಿಯ ನಿರ್ದೇಶನದ ಮೇಲೆ ನಡೆಯುತ್ತಿದೆಯೋ ಅಥವಾ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಕುಳಿತುಕೊಂಡು ಅಂದಾದರ್ಬಾರ್ ಮಾಡುತ್ತಿದ್ದಾರೆ ಎನ್ನಲಾಗುತ್ತಿರುವ ಒಂದಿಬ್ಬರ ಏಕಪಕ್ಷೀಯ ನಿರ್ಧಾರವೋ ಗೊತ್ತಾಗುತ್ತಿಲ್ಲ. ಅಲ್ಲಿರುವ ಉದ್ಯೋಗಿಗಳ ಪ್ರಕಾರವೇ ಟಿವಿ-9 ಕನ್ನಡದಲ್ಲಿ ಮೊದಲಿದ್ದಂಥ ಸ್ಥಿತಿ ಇಲ್ಲವಂತೆ. ಎಲ್ಲವೂ ಬಹುತೇಕ ಬದಲಾಗಿದೆಯಂತೆ. ಸಂಬಂಧವೇ ಪಡದ (ಉದಾಹರಣೆಗೆ ಸುದ್ದಿ ಸಂಪಾದಕೀಯದವರ ವಿಚಾರಗಳಿಗೆ ಅನಗತ್ಯವಾಗಿ ತಲೆ ಹಾಕೋದು…ಲಾಭಿ ಮಾಡೋದು..ಕೆಲವರನ್ನು ಟಾರ್ಗೆಟ್ ಮಾಡೋದು…ಹೀಗೆ) ಕೆಲವರು ಟಿವಿ-9 ಆಡಳಿತದೊಳಗೆ ತಲೆ ತೂರಿಸುತ್ತಿರುವುದರಿಂದಲೇ ಇಂತದೊಂದಿಷ್ಟು ಕೆಟ್ಟ ಬೆಳವಣಿಗೆಗಳು ನಡೆಯುತ್ತಿವೆಯಂತೆ.
ಕೆಲವು ಪಟ್ಟಭದ್ರರ ಹಿತಾಸಕ್ತಿಗೆ ಟಿವಿ-9 ಕನ್ನಡ ನಲುಗಬಾರದು…?! ಖಚಿತ-ನಿಖರ-ಕರಾರುವಕ್ಕಾದ ಸುದ್ದಿ ಕೊಡುವಷ್ಟೇ ವಿಶ್ವಾಸಾರ್ಹತೆಯನ್ನು ಉದ್ಯೋಗಿಗಳನ್ನು ನಡೆಸಿಕೊಳ್ಳುವ ವಿಚಾರದಲ್ಲು ಹೊಂದಿದೆ ಎನ್ನುವ ವಾತಾವರಣವನ್ನು ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಟಿವಿ-9 ನೋಯಿಡಾ ಆಡಳಿತ ಮಂಡಳಿಯು ಪ್ರಾದೇಶಿಕವಾಗಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆಯೂ ಗಮನ ಹರಿಸಬೇಕಿದೆ ಎನ್ನುವುದೇ ಕನ್ನಡ ಫ್ಲ್ಯಾಶ್ ನ್ಯೂಸ್ ನ ಕಾಳಜಿ ಮತ್ತು ಕಳಕಳಿ.