ಬೆಂಗಳೂರು: ರಕ್ಷಕನೇ ಭಕ್ಷಕನಾದ ಎಂಬ ಮಾತನ್ನು ನಾವು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಪೊಲೀಸ್ ಅಧಿಕಾರಿ ತಾನು ರಕ್ಷಣೆ ನೀಡಬೇಕಾದ ಮತ್ತು ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಜವಾಬ್ದಾರಿಯನ್ನು ಮರೆತು, ಲೇಡಿ ರೌಡಿಶೀಟರ್ ಒಬ್ಬಳ ಹಿಂದೆ ಬಿದ್ದು ಆಕೆಗೆ ‘ರೊಮ್ಯಾಂಟಿಕ್’ ಕಿರುಕುಳ ನೀಡಿರುವ ಹೇಯ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ಅವರ ಈ ವರ್ತನೆ ಈಗ ಇಡೀ ಪೊಲೀಸ್ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ.
ಏನಿದು ‘ಪಾಪಣ್ಣ-ಯಶಸ್ವಿನಿ’ ಪ್ರೇಮ ಪುರಾಣ?
ಕೋಣನಕುಂಟೆ ವ್ಯಾಪ್ತಿಯ ಲೇಡಿ ರೌಡಿಶೀಟರ್ ಆಗಿರುವ ಯಶಸ್ವಿನಿ ಅಲಿಯಾಸ್ ಯಶು ಎಂಬಾಕೆಗೆ ಕಳೆದ ಮೂರು ತಿಂಗಳಿನಿಂದ ಇನ್ಸ್‌ಪೆಕ್ಟರ್ ಪಾಪಣ್ಣ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕೇವಲ ಕೆಲಸದ ವಿಚಾರವಾಗಿ ಮಾತಾಡಬೇಕಿದ್ದ ಇನ್ಸ್‌ಪೆಕ್ಟರ್, ಯಶಸ್ವಿನಿಗೆ ವಾಟ್ಸಾಪ್ ಮೂಲಕ ಅತಿರೇಕದ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದರು ಎಂಬುದು ದೂರಿನ ಸಾರಾಂಶ.
ವಾಟ್ಸಾಪ್ ಚಾಟ್‌ನಲ್ಲಿ ಬಯಲಾದ ಇನ್ಸ್‌ಪೆಕ್ಟರ್ ಮುಖವಾಡ:
ಯಶಸ್ವಿನಿ ಬಿಡುಗಡೆ ಮಾಡಿರುವ ಆಡಿಯೋ ಮತ್ತು ಚಾಟ್ ಸ್ಕ್ರೀನ್‌ಶಾಟ್‌ಗಳು ಇನ್ಸ್‌ಪೆಕ್ಟರ್‌ನ ಕರಾಳ ಮುಖವನ್ನು ಬಯಲು ಮಾಡಿವೆ. ಆ ಚಾಟ್‌ಗಳಲ್ಲಿ ಪಾಪಣ್ಣ ಏನೆಲ್ಲಾ ಬರೆದಿದ್ದಾರೆ ಎನ್ನುವುದನ್ನು ಕೇಳಿದ್ರೆ ಯಾರಿಗಾದರೂ ಅಸಹ್ಯ ಹುಟ್ಟುತ್ತದೆ:
“ಯಶು ಮುದ್ದು, ಯಶು ಮುದ್ದು ಏನಾಗಿದೆ ಚಿನ್ನು ನಿನಗೆ? ನಾನು ಮನೆಗೆ ಹೋಗಿಲ್ಲ, ನಿಮ್ ಮನೆಗೆ ಬರ್ತೀನಿ.”
“ನಾನು ನಿನ್ನ ಯಶು ಬೇಬಿ ಅಂತೀನಿ, ನೀನು ನನ್ನ ಇನ್ಸ್‌ಪೆಕ್ಟರ್ ಅನ್ನಬಾರದು, ‘ಪಾಪು’ ಅಂತ ಕರೀಬೇಕು. ಇನ್ಸ್‌ಪೆಕ್ಟರ್ ಅಂದ್ರೆ ಅಲ್ಲೇ ಬಂದು ಹೊಡಿತೀನಿ ನೋಡು.”
“ಯಶು ಮುದ್ದು ಬಂಗಾರು ಒಂದ್ ಮುತ್ತು ಬೇಕು… ಹಗ್ ಮಿ, ಕಿಸ್ ಮಿ…” ಎಂಬಂತಹ ಲಜ್ಜೆಗೆಟ್ಟ ಮೆಸೇಜ್‌ಗಳನ್ನು ಪಾಪಣ್ಣ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಸಿಎಂ ಹೆಸರಲ್ಲಿ ಬೆದರಿಕೆ?
ಯಶಸ್ವಿನಿ ತನ್ನ ಕಿರುಕುಳದ ಬಗ್ಗೆ ಪ್ರತಿಭಟಿಸಿದಾಗ, ಪಾಪಣ್ಣ “ನನ್ನ ಪತ್ನಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿ. ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ” ಎಂದು ಅವಾಜ್ ಹಾಕಿದ್ದಾರಂತೆ. ಸಿಎಂ ಹೆಸರನ್ನು ಬಳಸಿಕೊಂಡು ತನ್ನ ಅಕ್ರಮ ಮತ್ತು ಅಸಭ್ಯ ವರ್ತನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಆರೋಪವೂ ಈಗ ಗಂಭೀರವಾಗಿ ಕೇಳಿಬಂದಿದೆ.
ಇದನ್ನೂ ಓದಿ | ಆರ್‌ಸಿಬಿ ಈಗ ಬಿರ್ಲಾ ಪಾಲು! 16,706 ಕೋಟಿಗೆ ಮಾರಾಟವಾದ ತಂಡ: ‘ರಾಯಲ್’ ಹೆಸರು ಬದಲಾಗುವುದು ಪಕ್ಕಾ?
ಕಮಿಷನರ್‌ಗೆ ದೂರು – ತನಿಖೆಗೆ ಆದೇಶ:
ಸಹನೆ ಕಳೆದುಕೊಂಡ ಯಶಸ್ವಿನಿ, ಇನ್ಸ್‌ಪೆಕ್ಟರ್ ಪಾಪಣ್ಣ ಮಾತಾಡಿರುವ ಆಡಿಯೋ ರೆಕಾರ್ಡಿಂಗ್ ಮತ್ತು ವಾಟ್ಸಾಪ್ ಚಾಟ್ ಸಮೇತ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ದೂರಿನ ಗಂಭೀರತೆಯನ್ನು ಗಮನಿಸಿರುವ ಕಮಿಷನರ್ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಠಾಣೆಯ ಜವಾಬ್ದಾರಿ ಹೊರಬೇಕಾದ ಅಧಿಕಾರಿಗಳು ರೌಡಿಶೀಟರ್‌ಗಳ ಜೊತೆ ಇಂತಹ ಸಂಬಂಧ ಇಟ್ಟುಕೊಂಡರೆ ಜನಸಾಮಾನ್ಯರ ಸ್ಥಿತಿ ಏನು? ರೌಡಿಶೀಟರ್‌ಗಳ ಮೇಲೆ ನಿಗಾ ಇಡಬೇಕಾದ ಇನ್ಸ್‌ಪೆಕ್ಟರ್ ಅವರನ್ನೇ ‘ಬೇಬಿ’, ‘ಚಿನ್ನು’ ಎಂದು ಕರೆದರೆ ಕಾನೂನು ಸುವ್ಯವಸ್ಥೆ ಹೇಗೆ ಕಾಪಾಡಲು ಸಾಧ್ಯ? ಎಂಬ ಪ್ರಶ್ನೆಗಳು ಎದ್ದಿವೆ.










