ಹೇಳಿ ಸಚಿವ ಕೃಷ್ಣಭೈರೇಗೌಡ ಅವರೇ, ದೊಡ್ಡಬಳ್ಳಾಪುರ AC ದುರ್ಗಶ್ರೀ, ತಹಸಿಲ್ದಾರ್ ವಿಭಾ ವಿದ್ಯಾ ರಾಥೋಡ್ ವಿರುದ್ಧ ಕ್ರಮ ಕೈಗೊಳ್ಳಲು ಇದಕ್ಕಿಂತ ಸಾಕ್ಷ್ಯಬೇಕಾ?!
ದೊಡ್ಡಬಳ್ಳಾಪುರ: ಯಾರೇ ಅಧಿಕಾರಿಗೆ ಆಗಲಿ,ಯಾವುದೇ ಹೊಸ ಸ್ಥಳಕ್ಕೆ ಬಂದು,ಹೊಸ ಜವಾಬ್ದಾರಿ ವಹಿಸಿಕೊಂಡರೂ ಅಲ್ಲಿನ ವಾತಾವರಣಕ್ಕೆ ಒಗ್ಗಿ ಹೋಗಲು,ಕೆಲಸ ಅರ್ಥ ಮಾಡಿಕೊಳ್ಳಲು ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ.ಆದರೆ ದೊಡ್ಡಬಳ್ಳಾಪುರ ಉಪವಿಭಾಗಕ್ಕೆ ಎಸಿ ಆಗಿ ಬಂದ ದುರ್ಗಶ್ರೀ ಅವರ ವಿಷಯದಲ್ಲಿ ಆಗಿದ್ದೇ ಸಂಪೂರ್ಣ ಉಲ್ಟಾ.ತಾಲುಕು ಕಚೇರಿ ಮೂಲಗಳ ಪ್ರಕಾರವೆ ಕಚೇರಿಗೆ ಬಂದು ತುಂಬಾ ಸಮಯವೇನು ಆಗದಿದ್ದರೂ ದುರ್ಗಶ್ರೀ ಮೇಡಮ್ ಅವರು ಮಾಡಿದ ಕೆಲಸ ಇದೀಗ ದೊಡ್ಡ ವಿವಾದಕ್ಕೆ ಗ್ರಾಸವಾಗಿದೆ.ಅವರ ನೈತಿಕತೆ-ಪ್ರಾಮಾಣಿಕತೆ-ದಕ್ಷತೆ-ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಿದೆ.ಅಷ್ಟಕ್ಕೂ ಅವರು ಮಾಡಿದ ಮಹಾಪ್ರಮಾದ ಏನು ಎನ್ನುವುದರ ಸ್ಟೋರಿ ಕೇಳುದ್ರೆ ಕ್ಷಣ ಬೆಚ್ಚಿಬೀಳದೆ ಇರೊಲ್ಲ.ಅದರ EXCLUSIVE ಸ್ಟೋರಿ ಇಲ್ಲಿದೆ.
ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ ಎನ್ ಹಾಗೂ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರು ಸುದ್ದಿಯಲ್ಲಿದ್ದಾರೆ.ಒಳ್ಳೆಯ ಕಾರಣಕ್ಕೆ ಅವರಿಬ್ಬರು ಸುದ್ದಿಯಲ್ಲಿದಿದ್ದರೆ ವೆಲ್ ಅಂಡ್ ಫೈನ್.ಆದರೆ ಬೇಡದ ವಿಷಯಕ್ಕೆ ಚರ್ಚೆಗೆ ಗ್ರಾಸವಾಗಿರೋದೇ ವಿಶೇಷ.ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ,ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ 150 ರಲ್ಲಿನ ಅಪಾರ ಪ್ರಮಾಣದ ಜಮೀನನ್ನು (ಇದು ಅರಣ್ಯ ಪ್ರದೇಶ ಎಂತಲೂ ಹೇಳಲಾಗುತ್ತಿದೆ) ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಬಿಲ್ಡರ್ಸ್ ಗಳಿಗೆ ಖಾತೆ ವರ್ಗಾವಣೆ ಮಾಡಿಕೊಟ್ಟಿದ್ದಾರೆನ್ನುವುದು ಇವರಿಬ್ಬರ ವಿರುದ್ಧದ ದೂರು.ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದ್ದು ಇದರ ಪ್ರತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗು ಲಭ್ಯವಾಗಿದೆ.
ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯ ದಾಖಲೆಗಳ ಪ್ರಕಾರ ಸರ್ವೆ ನಂಬರ್ 150 ರಲ್ಲಿಯೇ 9 ಮಾಲೀಕರಿಗೆ ಸೇರಿದ 21 ಎಕ್ರೆ ಜಮೀನು ಹಾಗೂ 6 ರೈತರಿಗೆ ಸೇರಿದ್ದೆನ್ನಲಾದ 10 ಎಕ್ರೆ ಜಮೀನನ್ನು ಪ್ರತ್ಯೇಕ ಪೋಡಿ, ಪ್ರತ್ಯೇಕ ಸರ್ವೆ ನಂಬರ್, ಸರ್ವೆ ಸ್ಕೆಚ್ ತಯಾರಿಸದೆ ಬೇರುಮಲ್ ಜೈನ್ ಎನ್ನುವ ಮಾರ್ವಾಡಿ ಮಾಲೀಕತ್ವದ ಪಲ್ವಿತ್ ಡೆವಲಪರ್ಸ್ ಗೆ ಖಾತೆ ವರ್ಗಾವಣೆ ಮಾಡಿದ್ದಾರೆನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.ಅಷ್ಟೇ ಅಲ್ಲ ಇದೇ ಸರ್ವೆ ನಂಬರ್ ನಲ್ಲಿರುವ 24 ಎಕ್ರೆ ಜಮೀನನ್ನು ಭರತ್ ಬಂಡಾರಿ ಎನ್ನುವವರ ಪ್ರಣೋವಾ ರಿಯಾಲ್ಟಿ ಗೆ ಖಾತೆ ವರ್ಗಾವಣೆ ಮಾಡಿಕೊಡಲಾಗಿದೆಯಂತೆ.ಇದೆಲ್ಲವೂ ಖಾಸಗಿ ಬಿಲ್ಡರ್ ಗಳ ಹೆಸರಿಗೆ ಜಿಪಿಎ ಸೃಷ್ಟಿಸಿ ಮಾಡಲಾಗಿದೆ ಎನ್ನುವುದು ಸಹಿ ಹಾಕದೆ ಮುಖ್ಯಮಂತ್ರಿಗಳಿಗೆ ಬರೆದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೇಲ್ಕಂಡ ಜಮೀನುಗಳಲ್ಲಿ ರೈತರು ಹಾಲಿ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆನ್ನಲಾಗಿದೆ.ಅವರ ಹೆಸರಲ್ಲಿ ಸಾಗುವಳಿ ಮತ್ತು ಹಂಗಾಮಿ ಸಾಗುವಳಿ ಚೀಟಿಯಿದೆ.ಪರಿಸ್ಥಿತಿ ಹೀಗಿರುವಾಗ ಪೋಡಿ ಅಥವಾ ಪ್ರತ್ಯೇಕ ಸರ್ವೆ ನಕ್ಷೆ ಸಿದ್ದ ಮಾಡದೆ ಅನಧೀಕೃತ ಕ್ರಯ ಪತ್ರದ ಆಧಾರದಲ್ಲಿ ಖಾಸಗಿ ಡೆವಲಪರ್ಸ್ ಗಳ ಹೆಸರನ್ನು ಅಕ್ರಮವಾಗಿ ಪಹಣಿಯಲ್ಲಿ ಸೇರಿಸಿರುವುದು ಎಷ್ಟರ ಮಟ್ಟಿಗೆ ಸರಿ.ಇದು ಕಂದಾಯ ಇಲಾಖೆಯ ನಿಯಾಮವಳಿಗಳ ಸ್ಪಷ್ಟ ಉಲ್ಲಂಘನೆ ಎನ್ನಲಾಗಿದೆ.ಹಲವಾರು ವರ್ಷಗಳಿಂದ ಅಲ್ಲೇ ಇದ್ದಾರೆ ಎನ್ನಲಾಗಿರುವ ತಹಸೀಲ್ದಾರ್ ವಿಭಾ ರಾಠೋಡ್ ಅವರಿಗೆ ಇದು ಗೊತ್ತಿದೆ.ಆದರೂ ಯಾಕೆ ನಿಯಮಗಳನ್ನು ಗಾಳಿಗೆ ತೂರಿದ್ರೋ ಗೊತ್ತಾಗುತ್ತಿಲ್ಲ. ತಹಸೀಲ್ದಾ್ರ್ ಕೊಟ್ಟ ವರದಿ ಮೇಲೆ ಉಪವಿಭಾಗಾದಿಕಾರಿ ಆಗಿರುವ ದುರ್ಗಶ್ರೀ ಅವರು ಏಕಾಏಕಿ ಆದೇಶ ಮಾಡಿರುತ್ತಾರೆ ಎನ್ನುವ ಆಪಾದನೆಯಿದೆ. ಕೆಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತಮ RANK ಪಡೆದ ಕೀರ್ತಿ ಹೊಂದಿರುವ ದುರ್ಗಶ್ರೀ ಅವರು ಈ ರೀತಿ ಮಾಡಿದ್ದು ಸಾರ್ವಜನಿಕವಾಗಿ ಟೀಕೆಗೆ ಪಾತ್ರವಾಗ್ತಿದೆ.
ಆದರೆ ನೈಜವಾಗಿ ಮಾಡಬೇಕಿದ್ದೇನು,..ಆದರೆ ಆಗಿದ್ದೇನು..?! ಕಂದಾಯ ಇಲಾಖೆ ನಿಯಮಗಳ ಪ್ರಕಾರ ಸರ್ವೆ ನಂಬರ್ 150 ರಲ್ಲಿ ರೈತರಿಗೆ ಕೃಷಿ ಭೂಮಿ ಮಂಜೂರಾದ ಮೇಲೆ ಸಾಗುವಳಿ ಚೀಟಿ ನೀಡಲಾಗಿರುವುದರಿಂದ ಆ ಭೂಮಿಯನ್ನು ಮೊದಲು ಪೋಡಿ ಮಾಡಿಸಿಕೊಳ್ಲಬೇಕಿತ್ತು. ಅದಕ್ಕೆಂದೇ ಪ್ರತ್ಯೇಕ ಸರ್ವೆ ಸ್ಕೆಚ್ ಮಾಡಿಸಿಕೊಳ್ಳಬೇಕಿತ್ತು.ಪೋಡಿ ಮಾಡಿ ಸರ್ವೆ ಸ್ಕೆಚ್ ಮಾಡಿಸಿಕೊಂಡ ನಂತರ ಬೇರೆ ಸರ್ವೆ ನಂಬರ್ ಬರುತ್ತೆ..ಇದೆಲ್ಲಾ ಆದ ಮೇಲೆಯೇ ಭೂಮಿ ಮೇಲೆ ಪ್ರತ್ಯೇಕ ಹಕ್ಕು ರೈತನಿಗೆ ಸಿಗುತ್ತೆ. ಇದಾದ ಮೇಲೆಯೆ ರೈತ ಆ ಭೂಮಿಯನ್ನು ಯಾರಿಗೆ ಬೇಕಾದರೂ ಮಾರಿಕೊಳ್ಳಬಹುದಾಗಿರುತ್ತದೆ. ಆದರೆ ಮೇಲ್ಕಂಡ ಪ್ರಕರಣದಲ್ಲಿ ಪೋಡಿ ಆಗಿಲ್ಲ.,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ.ಪ್ರತ್ಯೇಕ ಸರ್ವೆ ನಂಬರ್ ಕೊಟ್ಟಿರುವುದಿಲ್ಲ.ಆದರೂ ಡೆವಲಪರ್ ಗಳಿಗೆ ಜಿಪಿಎ ಕೊಡಲಾಗಿದ್ದು,ಅದರ ಆಧಾರದ ಮೇಲೆ ಇಬ್ಬರು ಸೇರಿಕೊಂಡು ಖಾತಾ ವರ್ಗಾವಣೆ ಮಾಡಿಕೊಟ್ಟು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆನ್ನಲಾಗುತ್ತಿದೆ.
ಹೀಗೆ ಮಾಡುವುದರ ಹಿಂದಿನ ಮಸಲತ್ತು ಏನಿರಬಹುದು..? ಕಣ್ಣಿಗೆ ರಾಚುವಂತ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದರ ಹಿಂದೆ ಸಾಕಷ್ಟು ರೀತಿಯ ವಿಶ್ಲೇಷಣೆ ಕೇಳಿಬರುತ್ತಿವೆ.ಮೇಲ್ಕಂಡ ಭೂಮಿ ಈಗಾಗಲೇ KIADB ಗೆ ಸ್ವಾಧೀನವಾಗಿದೆ. ಈ ಭೂಮಿಗೆ ಖಾತಾ ಕೂರಿಸಿಕೊಟ್ಟರೆ ಡೆವಲಪರ್ ಗೆ ಪರಿಹಾರದ ರೂಪದಲ್ಲಿ ಅಪಾರ ಮೊತ್ತದ ಹಣ ಸಿಗಲಿದೆ.ಆ ಹಣವನ್ನು ಡೆವಲಪರ್ ಹಾಗೂ ಅಧಿಕಾರಿಗಳು ಹಂಚಿಕೊಳ್ಳಬೇಕೆನ್ನುವ ಹುನ್ನಾರ ಅಡಗಿದೆ. ಚಿನ್ನದ ಬೆಲೆಯ ಭೂಮಿಯ ಒಡೆಯರಾದ ಡೆವಲಪರ್ಸ್ ಗಳಿಗೆ ಹತ್ತಾರು ಕೋಟಿಗಳಲ್ಲಿ ಪರಿಹಾರ ದೊರೆಯುತ್ತದೆ.ಆ ಪರಿಹಾರದ ಹಣವನ್ನು ಬಿಲ್ಡರ್ ಗಳ ಜತೆ ಪರ್ಸಂಟೇಜ್ ಲೆಕ್ಕದಲ್ಲಿ ಹಂಚಿಕೊಳ್ಳಬಹುದೆನ್ನುವ ಲೆಕ್ಕಾಚಾರ ಅಧಿಕಾರಿಗಳಿಗೆ ಇರಬಹುದೆನ್ನುವ ವಿಶ್ಲೇಷಣೆ ಕೇಳಿಬರಲಾರಂಭಿಸಿದೆ.
ಈ ಅಕ್ರಮ ಸ್ಪೋಟಗೊಳ್ಳುವ ಕೆಲ ದಿನಗಳ ಹಿಂದಷ್ಟೇ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ದೊಡ್ಡಬಳ್ಳಾಪರದ ತಾಲೂಕು ಕಚೇರಿಗೆ ಭೇಟಿ ಕೊಟ್ಟಿದ್ದರು. ಎಸಿ ಮತ್ತು ತಹಸೀಲ್ದಾರ್ ವಿರುದ್ಧ ಕೇಳಿಬರುತ್ತಿತ್ತೆನ್ನಲಾದ ಲಂಚಗುಳಿತನ, ಕರ್ತವ್ಯಲೋಪ,ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಹೋದಾಗ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು.ಇಬ್ಬರೂ ಮಹಿಳೆಯರಾಗಿರುವುದರಿಂದ ಹೆಚ್ಚೇನು ಹೇಳಲಾಗದೆ ನೋಡ್ರಮ್ಮ ನಿಮಗನ್ನಿಸಿದ ರೀತಿಯಲ್ಲಿ ಕೆಲಸ ಮಾಡ್ಕಂಡು ಹೋಗಿ ಎಂದು ಬೇಸರದಿಂದ ಮಾತನಾಡಿ ಬಂದಿದ್ದರು.ಅವರ ಭೇಟಿ ಬೆನ್ನಲ್ಲೇ ಈ ಹಗರಣ ಬಯಲಾಗಿರುವುದು ಇವರಿಬ್ಬರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸಾಕ್ಷ್ಯದಂತಿದೆ.ಸಚಿವರು ಈ ಬಗ್ಗೆ ವರದಿ ತರಿಸಿಕೊಂಡು ಪರಿಶೀಲಿಸಿ ಕ್ರಮ ಕೈಗೊಳ್ತಾರೋ,ಅಥವಾ ಮಾಮುಲು ಪ್ರಕರಣ ಎಂದು ಸುಮ್ಮನಾಗುತ್ತಾರೋ ಕಾದುನೋಡಬೇಕಿದೆಯಷ್ಟೆ.